Dairy farming has helped to double the income of farmers

ಗಂಗಾವತಿ :ಕೃಷಿಯ ಮೇಲೆ ಅವಲಂಬನೆಯಾಗಿರುವ ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ಅವರ ಆದಾರ ಹೆಚ್ಚಳವಾಗಬೇಕು. ಕೇವಲ ಕೃಷಿಯಿಂದ ಮಾತ್ರ ಆದಾಯ ಹೆಚ್ಚಳ ಸಾಧ್ಯವಿಲ್ಲ. ಕೃಷಿಯ ಜೊತೆಗೆ ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆಗಳಂತ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೆರಿಟೇಜ್ ಪುಡ್ಸ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಸಾಂಶಿವ ರಾವ್ ಹೇಳಿದರು.
ತಾಲೂಕಿಮ ಮರಳಿ ಗ್ರಾಮದಲ್ಲಿ ಪಶು ಇಲಾಖೆ ಹಾಗೂ ಹೆರಿಟೇಜ್ ಪುಡ್ಸ್ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಹೈನುಗಾರಿಕೆಯ ಕುರಿತು ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಹೈನುಗಾರಿಕೆಯಲ್ಲಿ ರೈತರು ವೈಜ್ಞಾನಿಕವಾಗಿ ತೊಡಗಿಕೊಳ್ಳಬೇಕು. ಕೇವಲ ಹಾಲು ಉತ್ಪಾದನೆಯ ಉದ್ದೇಶದಿಂದ ಹೈನುಗಾರಿಕೆ ನಡೆಸಿದರೆ ಪ್ರಯೋಜನವಿಲ್ಲ. ಹಾಲು ಉತ್ಪಾದನೆಯ ಜೊತೆಗೆ ಕರು ಸಾಕಾಣಿಕೆ, ಸಾವಯವ ಗೊಬ್ಬರ ತಯಾರಿಕೆ, ಗೋಬರ ಗ್ಯಾಸ್ ಉತ್ಪಾದನೆಗಳ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಸದ್ಯದ ಮಾರುಕಟ್ಟೆಯಲ್ಲಿ ರೈತರ ಹಾಲಿಗೆ ಉತ್ತಮ ಬೆಲೆ ಇದ್ದರೂ ಸಹ ಹೇಳಿಕೊಳ್ಳುವ ಮಟ್ಟದಲ್ಲಿ ಆದಾಯ ರೈತರಿಗೆ ದೊರೆಯುತ್ತಿಲ್ಲ. ಹಾಗಾಗಿ ರೈತರು ಹೈನುಗಾರಿಕೆಯನ್ನು ವೈಜ್ಞಾನಿಕವಾಗಿ ಮಾಡಬೇಕು. ಇನ್ನೂ ಹಸುಗಳಿಗೆ ಕಾಲಮಾನಗಳಿಗೆ ತಕ್ಕಂತೆ ಕಾಣಿಸಿಕೊಳ್ಳುವ ರೋಗಗಳ ಕುರಿತು ಮಾಹಿತಿ ತುಂಬಾ ಅವಶ್ಯಕವಾಗಿದೆ. ಕಾಲು ಬಾಹು, ಕೆಚ್ಚಲ ಬಾಹು, ದೇಹದ ಮೇಲೆ ಗುಳ್ಳೆ ಕಾಣಿಸಿಕೊಳ್ಳುವುದು, ಬಾಯಿ ನೋವು ಹೀಗೆ ವಿವಿಧ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಕುರಿತು ಪಶು ವೈದ್ಯರ ಜೊತೆಗೆ ಸಮಾಲೋಚನೆಯನ್ನು ನಡೆಸಿ, ಹಸುಗಳಿಗೆ ಚಿಕಿತ್ಸೆಯನ್ನು ನೀಡಬೇಕು ಎಂದು ಹೇಳಿದರು. ನಂತರ ಹಾಲು ಉತ್ಪಾದನೆಯಲ್ಲಿ ತೊಡಗಿದ ಪ್ರಗತಿ ಪರ ಉತ್ಪಾದಕ ರೈತ ನಾಗರಾಜ ಅವರಿಗೆ ಸನ್ಮಾನ ಮಾಡಿ, ಗೌರವಿಸಲಾಯಿತು.
ಹೆರಿಟೇಜ್ ಪುಡ್ಸ್ ಲಿಮಿಟೆಡ್ ಸಂಸ್ಥೆಯ ವಲಯ ವ್ಯವಸ್ಥಾಪಕ ಸತ್ಯನಾರಾಯಣ, ಪಶು ವೈದ್ಯ ಮಣಿಕಂಠ, ಮರಳಿ ಹಾಲಿನ ಘಟಕದ ವ್ಯವಸ್ಥಾಪಕ ಮಂಜುನಾಥ, ಪ್ರಮುಖರಾದ ನಾಗರಾಜ ಹಿರೇಮಠ, ಪ್ರಶಾಂತ್ ಹಾಗೂ ಇತರರಿದ್ದರು.
ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ಪಶು ಇಲಾಖೆ ಹಾಗೂ ಹೆರಿಟೇಜ್ ಪುಡ್ಸ್ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ಹೈನುಗಾರಿಕೆಯ ಕುರಿತು ಜಾಗೃತಿ ಶಿಬಿರದಲ್ಲಿ ಪ್ರಗತಿ ಪರ ಹಾಲು ಉತ್ಪಾದಕ ರೈತನಿಗೆ ಸನ್ಮಾನ ಮಾಡಿ, ಗೌರವಿಸಲಾಯಿತು.