All India protest day by AIDYO to demand necessary action for comprehensive strengthening and development of railway facilities
.
ಕೊಪ್ಪಳ: ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಎ ಐ ಡಿ ವೈ ಓ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯನ್ನು ಉದ್ದೇಶಿಸಿ ಎ ಐ ಡಿ ವೈ ಓ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡುತ್ತ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮವಾಗಿರುವ ಭಾರತೀಯ ರೈಲ್ವೆ (1R)ಯು ಕ್ರಮೇಣವಾಗಿ ದುರ್ಬಲಗೊಳ್ಳುತ್ತಿದೆ. ದಶಕಗಳಿಂದ ಭಾರತೀಯ ರೈಲ್ವೆಯನ್ನು ಜನಸಾಮಾನ್ಯರ ಬೃಹತ್ ಪ್ರಮಾಣದ ತೆರಿಗೆ ಹಣದಿಂದ ಕಟ್ಟಿ ಬೆಳೆಸಿ, ಪ್ರತೀ ಬಜೆಟ್‌ನಲ್ಲಿಯೂ ವಿಸ್ತರಿಸುತ್ತಾ ಬರಲಾಗಿತ್ತು. ಆದರೀಗ ಕ್ರಮೇಣವಾಗಿ ದುರ್ಬಲಗೊಳಿಸಲಾಗುತ್ತಿದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣದ ಕ್ರಮಗಳು ರೈಲ್ವೆ ಪ್ರಯಾಣಿಕರನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿವೆ. ದೂರ ಯಾನದ ರೈಲುಗಳಲ್ಲಿನ ಪ್ರಯಾಣವು ದುಸ್ಸಾಧ್ಯವಾಗಿದೆ ಮತ್ತು ಸಾಮಾನ್ಯ ಜನರು ಅಸಹನೀಯ ಪರಿಸ್ಥಿತಿಗಳಲ್ಲಿ ಪ್ರಯಾಣಿಸುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ರೈಲ್ವೆ ಪ್ರಯಾಣದಲ್ಲಿ ಸುರಕ್ಷತೆ ಎಂಬುದು ತೀವ್ರ ಆತಂಕಕಾರಿಯಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಖಾತರಿ ಇಲ್ಲದಂತಾಗಿದೆ.
ರೈಲ್ವೆಯಲ್ಲಿ 3.5 ಲಕ್ಷ ಸಿಬ್ಬಂದಿ ಕೊರತೆ ಇದೆ. ಗ್ರೂಪ್ ಸಿ ಮತ್ತು ಲೆವೆಲ್ 1 ವರ್ಗಗಳಲ್ಲಿ ಸುಮಾರು 2.74 ಲಕ್ಷ ಹುದ್ದೆಗಳು ಖಾಲಿ ಇವೆ. ಜೂನ್ 2023ರ ಅಂಕಿಅಂಶಗಳ ಪ್ರಕಾರ ಸುರಕ್ಷತಾ ವಿಭಾಗಗಳಲ್ಲೇ 1.7 ಲಕ್ಷ ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 1.57 ಲಕ್ಷ ಹುದ್ದೆಗಳು ಖಾಲಿ ಇವೆ. ಶುಚಿತ್ವ, ನಿರ್ವಹಣೆ ಮತ್ತು ಕೆಲವು ಭದ್ರತೆಗೆ ಸಂಬಂಧಿಸಿದ ವಿಭಾಗಗಳನ್ನು ಈಗಾಗಲೇ ಖಾಸಗಿ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಲಾಗಿದೆ. ಇನ್ನೂ ಲೋಕೋ ಪೈಲಟ್‌ಗಳ ಕೊರತೆಯೂ ಇದೆ. 2019ರಿಂದ 2023 ರವರೆಗೆ ಒಟ್ಟು 162 ರೈಲು ಅಪಘಾತಗಳು ಸಂಭವಿಸಿವೆ. ಇವುಗಳಲ್ಲಿ 118 ಹಳಿತಪ್ಪುವಿಕೆಗಳು ಮತ್ತು ಹದಿನಾರು ಒಂದಕ್ಕೊಂದು ಡಿಕ್ಕಿ ಅಪಘಾತಗಳು ಸೇರಿವೆ. ಖಾಲಿ ಹುದ್ದೆಗಳು ಭರ್ತಿಯಾಗದಿರುವುದರಿಂದಲೇ 2ನೇ ಜೂನ್ 2023ರ ಬಾಲಸೋರ್, ಒರಿಸ್ಸಾದಲ್ಲಿ ಆದಂತಹ ಅಪಘಾತಗಳು ಸಂಭವಿಸಿವೆ. ಇದು ಈ ಶತಮಾನದಲ್ಲೇ ನಡೆದ ಅತ್ಯಂತ ಭೀಕರ ದುರಂತವಾಗಿದೆ. ಈ ತೀವ್ರವಾದ ಸಿಬ್ಬಂದಿ ಕೊರತೆ ಕುರಿತು ಅಖಿಲ ಭಾರತ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಷನ್ ಹಲವು ಬಾರಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ದೂರು ನೀಡಿದೆ. ದೇಶದಲ್ಲಿ ಕೋಟ್ಯಂತರ ವಿದ್ಯಾವಂತ ನಿರುದ್ಯೋಗಿ ಯುವಕರಿದ್ದಾರೆ. ಕೇಂದ್ರ ಸರ್ಕಾರವು ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಮತ್ತು ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಎ ಐ ಡಿ ವೈ ಓ ನ ರಾಜ್ಯ ಮುಖಂಡರಾದ ಶರಣು ಗಡ್ಡಿ ಮಾತನಾಡಿ ಉಲ್ಬಣಗೊಳ್ಳುತ್ತಿರುವ ನಿರುದ್ಯೋಗದಿಂದಾಗಿ, ದೇಶದ ಮೂಲೆ ಮೂಲೆಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ವಲಸೆ ಕಾರ್ಮಿಕರೇ ಇಂದು ದೂರ ಪ್ರಯಾಣದ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಲ್ಲಿ ಪ್ರಯಾಣಿಸತ್ತಿದ್ದಾರೆ. ಇದು ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ತತ್ಪರಿಣಾಮವಾಗಿ, ಪ್ರತಿ ರೈಲುಗಳೂ ಜನದಟ್ಟಣೆಯಿಂದ ಓಡುತ್ತಿವೆ. ಇದರ ನಿವಾರಣೆಗೆ ಯಾವುದೇ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಕಾಯ್ದಿರಿಸದ (UR) ಮತ್ತು ಸ್ವೀಪರ್ (SL) ರೈಲುಗಳು ಕೂಡ ಜನದಟ್ಟಣೆಯಿಂದ ಕೂಡಿದ್ದು, ಶೌಚಾಲಯಗಳ ಒಳಗೂ ಸಹ 8 ರಿಂದ 10 ಜನರು ತಮ್ಮ ಸ್ಥಳಗಳನ್ನು ತಲುಪಲು ಹೇಗಾದರೂ ಜಾಗ ಮಾಡಿಕೊಂಡು ಉಸಿರುಗಟ್ಟುವ ಪರಿಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ರೈಲ್ವೆ ಅಧಿಕಾರಿಗಳು ಕಾಯ್ದಿರಿಸದ (UR) ಬೋಗಿಗಳು ಮತ್ತು ಸ್ವೀಪರ್ ಕ್ಲಾಸ್ (SL) ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಬದಲು ಅವುಗಳ ಸಂಖ್ಯೆಯನ್ನು ಮೊಟಕುಗೊಳಿಸಿ ಬದಲಿಗೆ ಎಸಿ ಬೋಗಿಗಳನ್ನು ಹೆಚ್ಚಿಸುತ್ತಿದ್ದಾರೆ.
ಇಂತಹ ಸನ್ನಿವೇಶದಲ್ಲಿ ನಾಗರಿಕ ಪ್ರಯಾಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜರೂರು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಲ್ಲದೆ, ಕೋವಿಡ್ 19ರ ಸಾಂಕ್ರಾಮಿಕದ ಕಾಲದಲ್ಲಿ ರದ್ದುಗೊಳಿಸಲಾದ ವಿವಿಧ ವರ್ಗದ ಪ್ರಯಾಣಿಕರಿಗೆ ನೀಡಲಾಗಿದ್ದ ರಿಯಾಯಿತಿಗಳು, ರದ್ದತಿ ಶುಲ್ಕಗಳಲ್ಲಿ ವಿನಾಯಿತಿ, ರಿಯಾಯಿತಿ ದರ ಮೊದಲಾದ ಅನೇಕ ಕಲ್ಯಾಣ ಕ್ರಮಗಳನ್ನು ತಕ್ಷಣವೇ ಮರು ಜಾರಿಗೊಳಿಸಬೇಕಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತೀಯ ರೈಲ್ವೆಯ ಸಾರ್ವಜನಿಕ ಸೇವೆಗಳನ್ನು ಒಂದೊಂದಾಗಿ ಖಾಸಗೀಕರಣ ಮತ್ತು ವ್ಯಾಪಾರೀಕರಣಗೊಳಿಸಲಾಗುತ್ತಿದೆ. ಕಲ್ಯಾಣ ರಾಜ್ಯದ ಪರಿಕಲ್ಪನೆಯಲ್ಲಿ ಕಟ್ಟಲಾದ ರೈಲ್ವೆ ವ್ಯವಸ್ಥೆಯನ್ನು ಕೇವಲ ಲಾಭಕ್ಕಾಗಿ ಹಪಹಪಿಸುವ ಉದ್ಯಮವನ್ನಾಗಿಸಲಾಗುತ್ತಿದೆ. ಆದ್ದರಿಂದ, ರೈಲ್ವೆಯನ್ನು ಜನಸ್ನೇಹಿಯನ್ನಾಗಿಸಲು ರೈಲ್ವೆ ಸೌಲಭ್ಯಗಳ ಸಮಗ್ರ ಬಲವರ್ಧನೆ ಮತ್ತು ಅಭಿವೃದ್ಧಿಗಾಗಿ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು. ಗಿಣಿಗೇರಿಯಿಂದ ಮೆಹಬೂಬ ನಗರ ರೈಲ್ವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು. ಗಿಣಿಗೇರಿಯಿಂದ ಸಿಂಧನೂರವರೆಗೆ ಬರುವ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು.
ಈ ಪ್ರತಿಭಟನೆಯಲ್ಲಿ ಮುಖಂಡರಾದ, ಸುಭಾನ್, ಪ್ರದೀಪ್,ರಮೇಶ್, ಪ್ರಶಾಂತ್,ಮಾಬು ಸಾಬ್,ಹರ್ಷ ವರ್ದನ್, ರವಿ,ಪ್ರೇಮನಾಥ್ ಮುಂತಾದ ಯುವಕರು ಸ್ಥಳೀಯರು ಭಾಗವಹಿಸಿದ್ದರು.
ಹಕ್ಕೊತ್ತಾಯಗಳು:
• ಎಲ್ಲಾ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ ಮತ್ತು ರೈಲ್ವೆ ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಗಳನ್ನು
• ರೈಲುಗಳಲ್ಲಿ ಕಾಯ್ದಿರಿಸದ (UR) ಮತ್ತು ಸೆಕೆಂಡ್ ಕ್ಲಾಸ್ ಸ್ವೀಪರ್ (SL) ಕೋಚ್ಗಳನ್ನು ಹೆಚ್ಚಿಸಿ.
• ವಲಸೆ ಕಾರ್ಮಿಕರಿಗಾಗಿ ಸಂಪೂರ್ಣ ಕಾಯ್ದಿರಿಸದ ರೈಲುಗಳನ್ನು ಓಡಿಸಿ.
• ಹಿರಿಯ ನಾಗರಿಕರ ರಿಯಾಯಿತಿಗಳನ್ನು ಮರುಸ್ಥಾಪಿಸಿ. ತತ್ಕಾಲ್ ಪ್ರೀಮಿಯಂ ಸುಲಿಗೆಯನ್ನು ಕೊನೆಗೊಳಿಸಿ.
• ಬುಕ್ ಮಾಡಿದ ಟಿಕೆಟ್ಗಳ ಮೇಲಿನ ರದ್ದತಿ ಶುಲ್ಕಗಳನ್ನು ತೆಗೆದುಹಾಕಿ.
• ಭಾರತೀಯ ರೈಲ್ವೆಯ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ನಿಲ್ಲಿಸಿ.
• ಬಹುಕಾಲದಿಂದ ರಾಜ್ಯದಾದ್ಯಂತ ನೆನಗುದಿಗೆ ಬಿದ್ದಿರುವ ಬಹು ನಿರೀಕ್ಷಿತ ಮಾರ್ಗಗಳಾದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ಮಾರ್ಗ (200ಕಿ.ಮೀ), ಕಡೂರು-ಚಿಕ್ಕಮಗಳೂರು-ಸಕಲೇಶಪುರ ಮಾರ್ಗ(93 ಕಿ.ಮೀ.), ರಾಯದುರ್ಗ-ತುಮಕೂರು ಮಾರ್ಗ (213 ಕಿ.ಮೀ), ಬಾಗಲಕೋಟೆ-ಕುಡಚಿ ಮಾರ್ಗ (142 ಕಿ.ಮೀ), ಮೈಸೂರು-ಕುಶಾಲನಗರ ಮಾರ್ಗ (85 ಕಿ.ಮೀ), ಮುನಿರಾಬಾದ್- ಮಹಬೂಬ್ ನಗರ ಮಾರ್ಗ (246 ಕಿ.ಮೀ), ಕಡಪ-ಬೆಂಗಳೂರು ಮಾರ್ಗ (255 ಕಿ.ಮೀ), ಶಿವಮೊಗ್ಗ- ಹರಿಹರ ಮಾರ್ಗ (79ಕಿ.ಮೀ) , ವೈಟ್ ಫೀಲ್ಡ್-ಕೋಲಾರ್ ಮಾರ್ಗ (53 ಕಿ.ಮೀ), ಮಾರಿಕುಪ್ಪಂ-ಕುಪ್ಪಂ ಮಾರ್ಗ (24 ಕಿ.ಮೀ), ಗದಗ-ವಾಡಿ ಮಾರ್ಗ (252 ಕಿ.ಮೀ), ಚಿಕ್ಕಬಳ್ಳಾಪುರ-ಪುಟ್ಟಪರ್ತಿ- ಶ್ರೀ ಸತ್ಯ ಸಾಯಿ ನಿಲಯಂ ಮಾರ್ಗ (103 ಕಿ.ಮೀ) , ಶ್ರೀನಿವಾಸಪುರ-ಮದನಪಲ್ಲಿ ಮಾರ್ಗ (75 ಕಿ.ಮೀ), ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗ (44 ಕಿ.ಮೀ) ಈ ಎಲ್ಲಾ 14 ಮಾರ್ಗಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ