Breaking News

ಹಠವಾದಿ ಅಂಡಗಿ ಎಂಬ ಮೇಷ್ಟ್ರು ಮತ್ತು ಪತ್ರಿಕೆಗಳ ತುಂಡುಗಳು

A master named Hathwadi Andagi and pieces of newspapers

ಜಾಹೀರಾತು
Andagi Hanumantappa 300x300


{ಮೇಷ್ಟ್ರು ಜನಪದ ಗಾಯಕ, ಸಂಘಟಕ, ಸಾಹಿತಿ ಡಾ. ಹನುಮಂತಪ್ಪ ಅಂಡಗಿ ಅಕಾಲಿಕ ನಿಧನದ ನೆನಪಲ್ಲಿ)


ಇದನ್ನು ಈಗ ಹೇಗೆ ಬರೆಯಬೇಕು ಎಂದು ನನಗೆ ನಿಜವಾಗಲೂ ಗೊತ್ತಾಗುತ್ತಿಲ್ಲ. ಡಾ. ಹನುಮಂತಪ್ಪ ಅಂಡಗಿ, ಜೀವನೋತ್ಸಾಹದ ಸಂಘ ಜೀವಿ, ಪತ್ರಿಕೆಗಳಲ್ಲಿ ಅದೆಷ್ಟು ಸಾವಿರ ಸಲ ಈತನ ಹೆಸರು ಪ್ರಕಟಗೊಂಡಿದೆ ಗೊತ್ತಿಲ್ಲ. ತನ್ನ ಹೆಸರ ಜೊತೆಗೆ ಕೊಪ್ಪಳ ತಾಲೂಕಿನ ತಮ್ಮ ಗ್ರಾಮ ಚಿಲವಾಡಗಿ ಸಹ ಫೇಮಸ್ಸಾಯಿತು.

Andagi Hanumantappa 3 579x1024


ಡಾ. ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರಿಗೆ ಮೊನ್ನೆ ಜೂನ್ ಗೆ ೫೩ ವರ್ಷ. ಅದೇನು ಸಾಯುವ ವಯಸ್ಸಲ್ಲ ಸಾಯೋದಕ್ಕೆ ಕಾರಣ ಮಾತ್ರ ಅರ್ಥವೇ ಆಗುತ್ತಿಲ್ಲ. ಅದ್ಯಾವದೋ ಕರುಳು ಕ್ಯಾನ್ಸರ್ ಅಂತೆ. ಈಗ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಕರುಳನ್ನು ಹಿಂಡುತ್ತಿದೆ. ಎಲ್ಲವೂ ಒಂದೇ ವರ್ಷದಲ್ಲಿ ಮುಗಿದುಹೋಯಿತು ಅಂದರೆ ಈ ಜೀವಕ್ಕೆ ಅದೆಷ್ಟು ಬೆಲೆ ಎಂದು ಯಾರಾದರೂ ಹೇಳಲು ಆಗುತ್ತಾ. ಸಾದಾ ಸೀದಾ ಮನುಷ್ಯ ಸದಾ ಹಸನ್ಮುಖಿ. ಹಾಗೆ ನೋಡಿದರೆ ನನಗೆ ಮತ್ತು ಹನುಮಂತಪ್ಪಗೆ ಆರಂಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅವಕಾಶದ ಬಗ್ಗೆ ತಕರಾರುಗಳಿದ್ದವು, ಡಾ. ಮಹಾಂತೇಶ್ ಮಲ್ಲನಗೌಡರ್ ಕಡೆ ಇದ್ದ ಈ ಅವಕಾಶವನ್ನು ಅವರು ಅಂಡಗಿ ಅವರಿಗೆ ಕೊಟ್ಟಿದ್ದರು. ಮತ್ತೆ ಅವರು ಇವತ್ತಿನವರೆಗೆ ಅದರ ಅಧ್ಯಕ್ಷರಾಗಿದ್ದರು. ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.

Andagi Hanumantappa 2


ನನ್ನ ಮದುವೆ ಸಮಾರಂಭ ೨೦೦೭ರ ಮೇ ೧೨ ರಂದು ಬಸವ ಧರ್ಮದ ಅನುಸಾರ ಅತ್ಯಂತ ಸರಳವಾಗಿ ನಡೆಯುತ್ತಿತ್ತು, ಆಗ ನನ್ನ ಬಳಿ ನಮಸ್ತೆ ಕರ್ನಾಟಕ ಎಂಬ ದಿನಪತ್ರಿಕೆಯ ಟೈಟಲ್ ಇತ್ತು. ನನಗೋ ಏನನ್ನೋ ಸಾಧಿಸುವ ಹಂಬಲ, ಆದರೆ ಯಾವುದೇ ತೆರನಾದ ಗಾಡ್‌ಫಾದರ್ ಆಗಲಿ, ಸಹಕಾರವಾಗಲಿ ಸಿಗದ ಸಂದರ್ಭ ನನಗೆ ೨೭ ವರ್ಷ. ಆದರೂ ಮನಸ್ಸಲ್ಲಿ ಇದ್ದ ಛಲಕ್ಕೆ ಮದುವೆಯಲ್ಲಿ ಅನೇಕ ಮಹನಿಯರಿಗೆ ಪ್ರಶಸ್ತಿ ಕೊಡುವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ನಾನು ಪತ್ರಿಕೆ ಬಿಡುಗಡೆಯನ್ನು ಸಹ ಅದರಲ್ಲಿ ಮಾಡಲು ನಿರ್ಧರಿಸಿದೆ. ಇವೆಲ್ಲವೂ ಒಟ್ಟಿಗೆ ಬಂದು ಒತ್ತಡ ಜಾಸ್ತಿಯಾಯಿತು. ನನ್ನ ಮದುವೆಯಲ್ಲಿ ದಿ. ಪಿ.ಬಿ. ಧುತ್ತರಗಿ ಅವರಿಗೆ ೧೦ ಸಾವಿರ ರುಪಾಯಿ ನಗದು ಪುರಸ್ಕಾರದ ಜೊತೆಗೆ ಅವರ ಕಲಾರಾಧಕ ಕೃತಿ ಮಾಡಿದೆ. ಆಗ ಆತ್ಮೀಯರಾಗಿದ್ದ ಹನುಮಂತಪ್ಪ ಅವರಿಗೆ ಪ್ರಶಸ್ತಿ ಪುರಸ್ಕೃತರ ಸಾಧನಾ ಸಂಚಿಕೆ ಮಾಡಲು ಅದನ್ನು ತಿದ್ದಲು ಹಚ್ಚಿದೆ, ಅದಕ್ಕಾಗಿ ಅವರು ಮರ‍್ನಾಲ್ಕು ಸಲ ಗದುಗಿಗೆ ಹೋಗಿ ಬಂದಿದ್ದರು. ಅದೇ ಸಮಯದಲ್ಲಿ ಅವರಿಗೆ ಪುಸ್ತಕ ಮಾಡುವ ಒಂದು ಪೂರ್ವ ತಯಾರಿ ತರಬೇತಿ ನೀಡಿದ್ದೆ. ನಾನು ಮೂಲತಃ ಮುದ್ರಣ ಕುಟುಂಬದ ಕುಡಿ ತಂದೆ ಗವಿಸಿದ್ದಪ್ಪನವರು ಮತ್ತು ಅವರ ಸಹೋದರರು ಪ್ರಿಂಟಿAಗ್ ಕೆಲಸದಲ್ಲಿ ಜೀವ ಸವೆದವರು.
ಇಲ್ಲಿ ಅವರಿಗೆ ಸಿಕ್ಕ ಸಣ್ಣ ತರಬೇತಿ ಮುಂದೆ ಹನುಮಂತಪ್ಪನವರಿಗೆ ೩೫ ಪರಿಚಯಾತ್ಮಕ ಅಭಿನಂದನಾ ಕೃತಿಗಳನ್ನು ತರುವಂತೆ ಮಾಡಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರರಿAದ ಹಿಡಿದು ಮಾಜಿ ಶಾಸಕ ಎಂ. ಬಿ. ದಿವಟರ್ ವರೆಗೆ ಅನೇಕ ಅಭಿನಂದನಾ ಕೃತಿ ತಂದು ಖ್ಯಾತಿ ಪಡೆದರು. ಆದರೂ ಅವರು ಹೆಚ್ಚು ಜನಪ್ರಿಯರಾಗಲಿಲ್ಲ. ಅದೆಷ್ಟು ಹಠಮಾರಿ ಅಂದರೆ ದಿವಟರ್ ಮತ್ತು ಹೆಚ್. ಎಸ್. ಪಾಟೀಲ್ ಅವರ ಕೃತಿಗಳನ್ನು ಮಾಡುವಾಗ ತೀವ್ರ ವಿರೋಧ ಎದುರಿಸಿದರೂ ಅವುಗಳನ್ನು ಮಾಡಿಯೇ ಸಿದ್ದ ಎಂದು ಹಠ ಹಿಡಿದು ಮಾಡಿದರು. ಯಾರೂ ಏನೇ ಅಂದರೂ ಸದಾ ಸುದ್ದಿಯಲ್ಲಿ ಇರುತ್ತಿದ್ದರು. ಅನೇಕರನ್ನು ಸನ್ಮಾನಿಸುವದು ಅವರಿಗೆ ಒಂದು ರೀತಿಯ ನಿತ್ಯದ ಕಾಯಕದಂತೆ ಆಗಿಹೋಗಿತ್ತು. ಕಾರ್ಯಕ್ರಮ ಮಾಡಿ, ಸುದ್ದಿ ಮಾಡಿ ಮೇಲ್ ಮಾಡಿ ಮತ್ತೆ ಮರುದಿನ ಅವುಗಳನ್ನು ಖರೀದಿಸಿ ಸಂಗ್ರಹಿಸುತ್ತಿದ್ದರು, ಅದಕ್ಕೆ ಅವರಿಗೆ ಪತ್ರಿಕೆಗಳ ತುಂಡುಗಳು ಅಂದರೆ ಬಹಳ ಇಷ್ಟವಾಗಿದ್ದವು.
೫೨ನೇ ವಯಸ್ಸಿನಲ್ಲಿ ಅವರಿಗೆ ಪಿಹೆಚ್‌ಡಿ ದೊರೆಯಿತು, ಅವರು ಸಾಕಷ್ಟು ಪದವಿಗಳನ್ನು ಮುಗಿಸಿದರು, ಸಾಲಿ ಮಾಸ್ತರ ಕೊನೆಗೆ ಪಿಯು ಪ್ರಾಂಶುಪಾಲರಾಗುವ ತನಕ ಓದಿದರು. ಮಕ್ಕಳು ಓದು ಮತ್ತು ಸಂಘಟನೆ ಯಾವುದರಲ್ಲೂ ಸಾಥ್ ಕೊಡಲಿಲ್ಲ, ಅದಕ್ಕೆ ಮಕ್ಕಳು ಓದಬೇಕಿದ್ದ ಎಲ್ಲವನ್ನೂ ತಾವೇ ಓದಿಬಿಟ್ಟರು. ಇದರ ಜೊತೆಗೆ ಪುಸ್ತಗಳ ಸಂಗ್ರಹದ ದೊಡ್ಡ ಹುಚ್ಚು ಇತ್ತು. ಸಿಕ್ಕ ಸಿಕ್ಕ ಪುಸ್ತಕಗಳನ್ನು ಕೊಡುಕೊಂಡರು ಸಾಕಷ್ಟು ಪುಸ್ತಕಗಳನ್ನು ಪಡೆದುಕೊಂಡು ಅನೇಕರಿಗೆ ಮರಳಿ ಕೊಡಲಿಲ್ಲ, ಅದೊಂತರ ಹುಚ್ಚು ಎಂದು ಎಲ್ಲರೂ ಸುಮ್ಮನಾದರು. ಇದನ್ನು ಬಿಟ್ಟರೆ ಅವರಿಂದ ಯಾರಿಗೂ ತೊಂದರೆ ಆಗಿಲ್ಲ. ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಪ್ರತಿ ವರ್ಷ ಮಾಡಿದರು. ಇವರು ಸಮ್ಮೇಳನಕ್ಕೆ ಮಾಡುತ್ತಿದ್ದ ಕಾರ್ಡಿನಲ್ಲಿ ಜಿಲ್ಲೆಯ ಯಾರ ಹೆಸರು ಇಲ್ಲ ಎಂದು ಹುಡುಕಬೇಕು ಅಷ್ಟು ಹೆಸರು ಇರುತ್ತಿದ್ದವು.
ನೋವು ಹೇಗೆ ಹುಟ್ಟಿಕೊಂಡಿತು ಗೊತ್ತೇ ಆಗಲಿಲ್ಲ. ಈಗ್ಗೆ ಒಂದೂವರೆ ವರ್ಷದ ಹಿಂದಷ್ಟೇ ಬಹಳವಾಗಿ ಪ್ರೀತಿಸುತ್ತಿದ್ದ ಪತ್ನಿಯ ಅಗಲಿಕೆಯ ನಂತರ ಎಲ್ಲ ಚಟುವಟಿಕೆಗಳಿಂದ ಸ್ವಲ್ಪ ದೂರ ಇದ್ದಂತೆ ಕಂಡರು, ಒಂದು ರೀತಿಯಲ್ಲಿ ಅಂರ್ತಮುಖಿ ಆದಂಗೆ ಕಾಣಿಸುತ್ತಿತ್ತು, ಮೊದಲ ಮಗಳ ಮದುವೆಯನ್ನು ಪತ್ನಿಯ ಅಗಲಿಕೆಯ ನೋವಿನಲ್ಲೂ ಅದ್ಧೂರಿಯಾಗಿ ಮಾಡಿದರು. ಅದಕ್ಕಾಗಿ ಹಲವು ತಿಂಗಳು ಜಿಲ್ಲೆ ಸುತ್ತಿದರು. ಊಟ ಬಿಟ್ಟರು. ಮುಂದೆ ಕೆಲವೇ ದಿನದಲ್ಲಿ ಅನಾರೋಗ್ಯ ಹೆಚ್ಚಾಗಿ ಯಾಕೆ ಎಂದು ಪರೀಕ್ಷೆ ಮಾಡಿದಾಗ ಕರುಳಿನ ಕ್ಯಾನ್ಸರ್ ಮೂರನೇ ಸ್ಟೇಜ್ ದಾಟಿಹೋಗಿತ್ತು, ಆದರೂ ಎದೆಗುಂದದೇ ಚಿಕಿತ್ಸೆ ಪಡೆದರೂ ಸಹ ಧೈರ್ಯಕ್ಕೆ ಜವರಾಯ ಸೋಲಲಿಲ್ಲ. ಸಾವು ಹತ್ತಿರವಾದಾಗ ತಮ್ಮ ಉಪನ್ಯಾಸಕ ಬಳಗದ ಮುಂದೆ “ತಮಗೆ ರೋಗ ಬಂದಿದೆ ಸಾವೇನಲ್ಲವಲ್ಲ” ಎಂಬ ಮಾತನ್ನು ಈಗಲೂ ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ.
ಜನಪದದ ಮೂಲ ದಾಟಿಯ ಹಾಡುಗಾರ ಹನುಮಂತಪ್ಪ ಅನೇಕ ಕಾರ್ಯಕ್ರಮಗಳಲ್ಲಿ ಜಾನಪದ ಗಾಯನ ಮಾಡಿದ್ದಾರೆ, ಶಿಕ್ಷಣ ಇಲಾಖೆಯ ನೆಚ್ಚಿನ ಗುರು ಆಗಿದ್ದ ಅವರು ಅಧಿಕಾರಿ ಸ್ನೇಹಿ ವ್ಯಕ್ತಿತ್ವ. ಯಾವುದೇ ಅಧಿಕಾರಿ ಬಂದರೂ ಅವರಿಗೆ ಅಂಡಗಿ ಆಪ್ತ, ಕಾರಣ ಯಾವುದೇ ಈರ್ಶೆ ಇಲ್ಲದ ಸರಳ ವ್ಯಕ್ತಿ, ಅವರಿಂದ ಈತನಿಗೆ ಏನೂ ಬೇಕಿಲ್ಲ ಈತನೇ ಅವರಿಗೆ ಸಹಕಾರ ಕೊಡುತ್ತಿದ್ದ, ಅನೇಕ ಚುಟುಕು ಬರೆದ ಅವರು ಅಂತಹ ಕವಿ ಆಗಲಿಲ್ಲ, ಆದರೆ ಉತ್ತಮ ಸಂಘಟಕ ಆದರು. ಗದ್ಯ ಅವರಿಗೆ ಒಲಿದ ಕಾರಣ ೩೫ ಕೃತಿಗಳನ್ನು ತಂದರು. ಇನ್ನೂ ಅನೇಕ ಪುಸ್ತಕ ಮಾಡುವ ಆಸೆ ಇತ್ತು, ಒಳ್ಳೆಯ ಸಂಬಳದ ನೌಕರಿ ಇತ್ತು, ವಯಸ್ಸಿತ್ತು, ಮಾಡುವ ಇಚ್ಛೆ ಇದ್ದರಿಂದ ಅಂದುಕೊAಡಿದ್ದು ಮಾಡುವ ಸಾಧ್ಯತೆ ಇತ್ತು. ಆದರೆ ವಿಧಿಗೆ ಅದ್ಯಾವುದೂ ಬೇಕಿರಲಿಲ್ಲವಷ್ಟೇ. ಹೋಗಿ ಬಾ ಗೆಳೆಯ. ನಿನ್ನ ನೆನಪು ಸದಾ ಹಸಿರಾಗಿಯೇ ಇರುತ್ತದೆ. ಅಭಿವಂದನಾ ಕೃತಿಯನ್ನು ತಂದು ಪ್ರಿಂಟ್ ಮತ್ತು ಡಿಜಿಟಲ್ ಮಾದರಿಯಲ್ಲಿ ಇಡಲಾಗುವದು.

ಮಂಜುನಾಥ ಜಿ. ಗೊಂಡಬಾಳ
ಪತ್ರಕರ್ತ, ಕೊಪ್ಪಳ.

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.