Breaking News

ಮಳೆಯಾಶ್ರಿತಬೇಸಾಯ ನಿಜಕ್ಕೂ ಮನುಕುಲಕ್ಕೆ ವರದಾನ ಎಂದು ಸಹಜ ಕೃಷಿವಿಜ್ಞಾನಿಡಾ/ಮಂಜುನಾಥಅಭಿಪ್ರಾಯಪಟ್ಟರು.


ಹನೂರು ತಾಲೂಕಿನ ವಡಕೆಹಳ್ಳ ಗ್ರಾಮದ ಶ್ರೀ ಮಹದೇಶ್ವರ ಸಿರಿಧಾನ್ಯ ಘಟಕದ ಆವರಣದಲ್ಲಿ ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ ರೈತ ಸಂಘ ಮತ್ತು ತಾಲೂಕು ಪಂಚಾಯತಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಮಳೆಯಾಶ್ರಿತ ಬೇಸಾಯ ಮತ್ತು ಜೀವನೋಪಾಯ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಳೆಯಾಶ್ರಿತ ಬೇಸಾಯದಲ್ಲಿ ನಾವು ಅಕ್ಕಡಿಸಾಲು ಪದ್ದತಿಯನ್ನು ಅನುಸರಿಸಿ ಬಹುಬೆಳೆಗಳನ್ನು ಬೆಳೆಯುತ್ತಿದ್ದೆವು, ಇವಾಗ ರಾಸಾಯನಿಕ ಗೊಬ್ಬರ-ಕೀಟನಾಶಕಗಳು ಬಂದ ನಂತರ, ವಾಣಿಜ್ಯ ಬೆಳೆಗಳನ್ನು ಬೆಳೆಯುವುದು ಜಾಸ್ತಿಯಾಗಿ, ನಮ್ಮ ಪಾರಂಪರಿಕ ಕೃಷಿ ಪದ್ದತಿಗಳು, ಅಕ್ಕಡಿಸಾಲು ಪದ್ದತಿ ಮಾಯವಾಗುತ್ತಿದೆ. ಇದು ನಿಲ್ಲಬೇಕು. ಯಾವುದೇ ಮಳೆಯಾಶ್ರಿತ ಬೇಸಾಯದಲ್ಲಿ ವೈಜ್ಞಾನಿಕ ವಿಚಾರಗಳಿವೆ. ಯಾವ ಪ್ರದೇಶಕ್ಕೆ ಯಾವ ರೀತಿಯ ಬೆಳೆ ಸೂಕ್ತ. ಏಕೆ ಕೆಲವು ಬೆಳೆಗಳನ್ನು ನಾವು ಹೊಲದ ಬದುಗಳಲ್ಲೇ ಬೆಳೆಯಬೇಕು. ಅಕ್ಕಡಿ ಸಾಲು ಪದ್ದತಿಯಲ್ಲಿ ನಾಲ್ಕೈದು ಸಾಲುಗಳಲ್ಲಿ ರಾಗಿ ಬೆಳೆದು, ಆರನೇ ಸಾಲಿನಲ್ಲಿ ಅವರೆ ಅಥವಾ ಅಲಸಂದೆ ಅಥವಾ ಜೋಳದ ಸಾಲು ಇರಬೇಕು. ನಂತರ ಮತ್ತೆ ನಾಲ್ಕೈದು ಸಾಲು ರಾಗಿ ಹಾಕಿ, ಹರಳನ್ನು ಒಂದು ಸಾಲು ಹಾಕಬೇಕು. ಬದುಗಳಲ್ಲಿ ಸಾಸಿವೆ ಹಾಕಬೇಕು. ಮಧ್ಯ ಮಧ್ಯೆ ವಿವಿಧ ಜಾತಿಯ ಕಾಳುಗಳನ್ನು ಬೆಳೆಯಬೇಕು. ಹೀಗೆ ಬೆಳೆಯಬೇಕು ಎಂದು ನಮ್ಮ ಹಿರಿಯರು ನಮಗೆ ತಿಳಿಸಿ ಹೋಗಿದ್ದಾರೆ. ಯಾಕೆಂದರೆ, ಅದರ ಹಿಂದೆ ವಿಜ್ಞಾನ ಅಡಗಿದೆ. ಪ್ರತಿ ಗಿಡಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದರ ಬೇರು ಇನ್ನೊಂದಕ್ಕೆ ಔಷಧ, ಆಹಾರವಾಗುತ್ತದೆ. ಒಂದರ ಹೂವು ಇನ್ನೊಂದಕ್ಕೆ ಪ್ರಚೋದನೆ ನೀಡುತ್ತದೆ. ವಿವಿಧ ಚಿಟ್ಟೆಗಳು, ಹಕ್ಕಿ-ಪಕ್ಷಿಗಳನ್ನು ಆ ಹೂವುಗಳು ಆಕರ್ಷಿಸುತ್ತವೆ. ಅವು ಹೊಲದಲ್ಲಿ ಅಡಗಿರುವ ಕೀಟಗಳನ್ನು ತಿನ್ನುತ್ತವೆ, ಇಲಿಗಳನ್ನು ಹಿಡಿಯುತ್ತವೆ. ಇದರಿಂದಾಗಿ ನಮ್ಮ ಮುಖ್ಯ ಬೆಳೆಯಾದ ರಾಗಿ, ಸಜ್ಜೆ, ಜೋಳದ ಇಳುವರಿ ಹೆಚ್ಚಾಗುತ್ತದೆ. ಇಂತಹ ಪಾರಂಪರಿಕವಾಗಿ ಬಂದಂತಹ ಕೃಷಿ ಪದ್ದತಿಯನ್ನು ನಾವು ಬಿಡದೆ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದರು.
ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ ಮಾತನಾಡಿ, ಪ್ರತಿ ರೈತನೂ ಹಸು, ಎಮ್ಮೆ, ಆಡು, ಕುರಿ, ಕೋಳಿ ಸೇರಿದಂತೆ ಕನಿಷ್ಠ ನಾಲ್ಕು ಜಾನುವಾರುಗಳನ್ನು ಅವರ ಮನೆಯಲ್ಲಿ ಸಾಕಬೇಕು. ಅವರ ಜಮೀನಿನಲ್ಲೇ ಬೆಳೆಯುವ ಕಳೆ, ಹುಲ್ಲು-ಸೊಪ್ಪುಗಳನ್ನೇ ಆಹಾರವಾಗಿ ನೀಡಬೇಕು. ಮೇವಿಲ್ಲದೇ ಇರುವ ಸಮಯದಲ್ಲಿ ಊರಿನ ಬಳಿಯಿರುವ ಕಾಡು, ಹಳ್ಳ, ಕರೆ ಕಟ್ಟೆಗಳ ಹತ್ತಿರ ಮೇಯಿಸಿ ಬೆಳೆಸಬೇಕು. ಅವು ಜೀವನೋಪಾಯದ ಖರ್ಚಿಗೆ ಉಪಯೋಗವಾಗುತ್ತದೆ ಎಂದು ತಿಳಿಸಿದರು.
ರೈತ ಸಂಘದ ಹೊನ್ನೂರು ಪ್ರಕಾಶ ಮಾತನಾಡಿ, ಜೀವನೋಪಾಯಕ್ಕಾಗಿ ಒಂದಷ್ಟು ಉಪಕಸುಬುಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಅವೆಂದರೆ, ಆಹಾರ ಧಾನ್ಯಗಳ ಮೌಲ್ಯೀಕರಣ, ಮೌಲ್ಯವರ್ಧನೆ ಮಾಡಬೇಕು. ಅಂದರೆ, ಧಾನ್ಯಗಳನ್ನು ಹಾಗೇ ಮಾರುವ ಬದಲು ಅದನ್ನು ಪುಡಿ ಮಾಡಿ, ಮಾಲ್ಟ್ ಮಾಡುವುದು, ಮಿಠಾಯಿ ಮಾಡಿ ಪ್ಯಾಕ್ ಮಾಡಿ ಮಾರಿದರೆ ನಮಗೆ ಆದಾಯ ಹೆಚ್ಚಾಗುತ್ತದೆ. ಇನ್ನೂ ರೂಢಿಗತವಾಗಿ ಬಂದಿರುವ ಕೆಲವು ಕಸುಬುಗಳಾದ ಕುಲುಮೆ, ಮರಗೆಲಸ, ಕಟ್ಟಡಕೆಲಸಗಳು, ಮಹಿಳೆಯರು ಕಾರದಪುಡಿ, ಚಟ್ನಿಪುಡಿ ಇತ್ಯಾದಿ ಮಾಡಿ ಮಾರುವುದರಿಂದ ನಮಗೆ ಆದಾಯದ ಮೂಲಗಳು ಜಾಸ್ತಿಯಾಗುತ್ತವೆ.
ಹೀಗೆ ಮಾಡಿಕೊಳ್ಳುವುದರಿಂದ ನಾವು ನಮ್ಮ ಬದುಕನ್ನು ರೂಪಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ತಿಳಿಯುತ್ತದೆ. ನಾವು ನಮ್ಮ ಊರಲ್ಲೇ ಉಳಿದು, ಬದುಕಲು ಸಾಕಷ್ಟು ಮಾರ್ಗಗಳಿವೆ, ಅವನ್ನು ಕಂಡುಕೊಳ್ಳಬೇಕಿದೆ. ಹಳ್ಳಿಗಳನ್ನು ಕಟ್ಟುವ, ಬೆಳೆಸುವ ಕೆಲಸವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಕೆ ವಿ ಮಾದೇಶ, ಚಂಗಡಿ ಕರಿಯಪ್ಪ, ಬೊಮ್ಮಯ್ಯ, ಶ್ರೀಕಾಂತ, ಪ್ರವೀಣ, ಜಗದೀಶ, ಶಿವಮೂರ್ತಿ, ರಾಜು, ಶ್ರೀನಿವಾಸ, ಶಿವಪ್ಪ, ಮಣಿಗಾರ ಕುಮಾರ, ರತ್ನ, ಮಹೇಶ್ವರಿ, ಸಾವಿತ್ರಿ, ಮಹೇವಮ್ಮ, ಸುಂದ್ರಿ, ಮಾದೇವಿ, ಜಯಮ್ಮ, ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ರೈತರು, ಮಹಿಳೆಯರು ಭಾಗವಹಿಸಿದ್ದರು.

About Mallikarjun

Check Also

ಆಶಾಕಾರ್ಯಕರ್ತೆಯರ  ಪ್ರಥಮ  ಸಮ್ಮೇಳನ:

 ಗಂಗಾವತಿ: ನಗರದಲ್ಲಿ  ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.