Short watershed project solution to agricultural crisis – KVK chief Dr N Loganandan
ಚಾಮರಾಜನಗರ, ಜ.೨೨: ಕೃಷಿ ಬಿಕ್ಕಟ್ಟಿಗೆ ಕಿರು ಜಲಾನಯನ ಯೋಜನೆ ಪರಿಹಾರ ಎಂದು ತುಮಕೂರಿನ ಹಿರೇಹಳ್ಳಿ ಕೆವಿಕೆ ಮುಖ್ಯಸ್ಥ ಡಾ ಎನ್ ಲೋಗಾನಂದನ್ ತಿಳಿಸಿದರು.
ಚಾ.ನಗರದ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಭಾನುವಾರ ಕೊಳ್ಳೇಗಾಲದ ಜೆಎಸ್‌ಬಿ ಪ್ರತಿಷ್ಠಾನ, ತುಮಕೂರಿನ ಗಾಂಧಿಜೀ ಸಹಜ ಬೇಸಾಯ ಶಾಲೆ, ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ “ಕೃಷಿ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ” ಕುರಿತು ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದ ಅವರು, ಹವಮಾನ ಬದಲಾವಣೆ ಹತ್ತಿಕ್ಕುವ ಉಪಾಯಗಳ ಬಗ್ಗೆ ಜನ ಜಾಗೃತಿ ಮೂಡಿಸುವುದೊಂದೇ ಈಗಿರುವ ದಾರಿ. ಇಂದು ನಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಬಹುದೊಡ್ಡ ಒತ್ತಡ ಸೃಷ್ಟಿ ಮಾಡಿಕೊಂಡಿದ್ದು, ಇದರಿಂದ ಭೂಮಿ, ನೀರು, ಗಾಳಿ, ಅರಣ್ಯ, ಜೀವವೈವಿಧ್ಯ ಹಾಗೂ ಜೈವಿಕ ಸಂಪನ್ಮೂಲಗಳ ಗುಣಮಟ್ಟ ಹಾಳಾಗುತ್ತಿದೆ. ಆದ್ದರಿಂದ ಸರ್ಕಾರಗಳು ಈ ಬಗ್ಗೆ ಎಚ್ಚೆತ್ತು ನಮ್ಮ ನೈಸರ್ಗಿಕ ಸಂಪನ್ಮೂಲವನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಿ ಸಂರಕ್ಷಿಸುವ ಅಗತ್ಯವಿದೆ ಎಂದರು. ಇಂದು ಭೂಮಿ ತಾಪಮಾನ ಏರುತ್ತಿರುವುದು ಜ್ವಲಂತ ಸಮಸ್ಯೆಯಾಗಿದೆ. ಸರ್ಕಾರ, ಬಂಡವಾಳ ಶಾಹಿಗಳು ತಾವು ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕಲ್ಲದೆ ಅನ್ಯ ಮಾರ್ಗವಿಲ್ಲ. ಜಮೀನುಗಳಲ್ಲಿ ಮರಗಿಡಗಳನ್ನು ಹೆಚ್ಚು ಬೆಳೆಸಬೇಕು, ಸಮಗ್ರ ಕೃಷಿ ಪದ್ದತಿ, ಮಣ್ಣು ಮತ್ತು ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಪರಿಸರವಾದಿ ಸಿ ಯತಿರಾಜು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಎಂದು ಬಿಂಬಿಸುತ್ತಿರುವ ರಾಷ್ಟ್ರಗಳ ಕೃಷಿಯು ಹವಾಮಾನ ವೈಪರೀತ್ಯದಲ್ಲಿ ಸಿಲುಕಿದ್ದು, ದೊಡ್ಡ ಗಂಡಾತರಕ್ಕೆ ಎದುರಿಸುತ್ತಿವೆ, ಕೃಷಿ ಅಸ್ತಿತ್ವಕ್ಕೆ ಧಕ್ಕೆ ಬಂದು ಅಮೆರಿಕಾದಂತಹ ದೇಶದಲ್ಲೂ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಕೃಷಿಯನ್ನು ಲಾಭಕ್ಕಿಂತ ಜೀವನೋಪಾಯಕ್ಕಾಗಿ ಮಾಡಿದರೆ ಮಾತ್ರ ರೈತರು ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಗಾಂದಿಜೀ ಸಹಜ ಬೇಸಾಯಾಶ್ರಮದ ವಿಜ್ಞಾನಿ ಡಾ. ಹೆಚ್ ಮಂಜುನಾಥ ಮಾತಾನಾಡಿ, ಚಾಮರಾಜನಗರದಲ್ಲಿ ಮುಖ್ಯವಾಗಿ ವನ್ಯಜೀವಿಗಳು ಮತ್ತು ರೈತರ ನಡುವೆ ಸಂಘರ್ಷ, ಕಾಡು ಮತ್ತು ಕಾಡಂಚಿನಲ್ಲಿ ವಾಸಿಸುವ ಜನರ ಕಗ್ಗಂಟಿನ ಜೀವನೋಪಾಯದ ಸಮಸ್ಯೆಗಳು, ಅಭಿವೃದ್ಧಿ ಹೆಸರಿನಲ್ಲಿ ದೊಡ್ಡದಾದ ರಸ್ತೆಗಳಿಗೆ ಲಕ್ಷಾಂತರ ಮರಗಳ ಅಪೋಶನ, ಬಗರ್ ಹುಕುಂ ಹೆಸರಿನಲ್ಲಿ ಪ್ರಭಾವಿಗಳಿಗೆ ಗೋಮಾಳ ಹಂಚಿಕೆ, ಸಾರ್ವಜನಿಕ ಭೂಮಿಗಳ ಕಾರ್ಪೊರೇಟೀಕರಣ, ಜಲಸಂಪನ್ಮೂಲ ಪ್ರದೇಶಗಳ ಒತ್ತುವರಿ, ಇನ್ನಿತರ ಅನೇಕ ಜ್ವಲಂತ ಸಮಸ್ಯೆಗಳಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನುಷ್ಯ ಮನುಷ್ಯನ ನಡುವೆ, ಮನುಷ್ಯ ಪರಿಸರದ ನಡುವೆ ಸಹಬಾಳ್ವೆ ಗಳಿಸುವುದಾದರೂ ಹೇಗೆ ಎಂದು ಪ್ರಶ್ನೆ ಮಾಡುತ್ತಾ, ಎಲ್ಲರನ್ನೂ ಚಿಂತೆಗೀಡುಮಾಡಿ, ಚರ್ಚೆಗಳಿಗೆ ಎಡೆಮಾಡಿಕೊಟ್ಟಿರು.
ಜಿಐ ಟ್ಯಾಗ್ ಮಾಡಿಸಿ : ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಹಾಡಿಗಳಲ್ಲಿ ರೈತರು ಸಹಜ ಕೃಷಿ ಮಾಡುತ್ತಾ ದೊಡ್ಡರಾಗಿ, ಕಡ್ಡಿರಾಗಿ, ಅವರೆ ಮತ್ತು ಸಾಸಿವೆ ಬೆಳೆಯುತ್ತಿದ್ದು, ಇಂತಹ ತಳಿಗಳನ್ನು ಉಳಿಸಿ ಸಂರಕ್ಷಿಸಿ, ಅಭಿವೃದ್ಧಿ ಪಡಿಸಬೇಕು ಮತ್ತು ಅವುಗಳಗೆ ಜಿಐ ಟ್ಯಾಗ್ ಮಾಡಿಸುವ ಕೆಲಸವನ್ನು ಕೆವಿಕೆ ಮತ್ತು ಕೃಷಿ ಇಲಾಖೆ ತುರ್ತಾಗಿ ಮಾಡಬೇಕಿದೆ ಎಂದು ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್ ಶಶಿಕುಮಾರ ಒತ್ತಾಯಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ,
ರೈತರು ಕೃಷಿಯಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಗಾರಗಳು ಬಹಳ ಮುಖ್ಯ. ಇದರಲ್ಲಿ ರೈತರು ಮಾತ್ರವಲ್ಲದೆ, ಇಲಾಖೆಯ ಅಧಿಕಾರಿಗಳು ಭಾಗವಹಿಸಿ, ಸಮಸ್ಯೆಗಳಿಗೆ ತಜ್ಞರು ನೀಡುವ ಸಲಹೆಗಳನ್ನು ಸ್ವೀಕರಿಸಬೇಕು ಎಂದರು.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶಕುಮಾರ್, ಜಂಟಿ ಕೃಷಿ ನಿರ್ದೇಶಕ ಅಬೀದ್, ಉಪ ಕೃಷಿ ನಿರ್ದೇಶಕಿ ಸುಷ್ಮಾ, ಕೆವಿಕೆ ಮುಖ್ಯಸ್ಧ ಡಾ. ಜಿ ಎಸ್ ಯೋಗೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಚಿತ್ರನಟ ಕಿಶೋರ್ ಪತ್ನಿ ವಿಶಾಲಾಕ್ಷಿ, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಮೈಸೂರಿನ ಪರಿಸರವಾದಿ ಕರುಣಾಕರನ, ಬೆಂಗಳೂರು ಸುಸಿ ಸಂಸ್ಧೆಯ ಸ್ವಾಮಿ, ನಿವೃತ್ತ ಅಧಿಕಾರಿಗಳಾದ ಡಾ. ಹನುಮಯ್ಯ, ಡಾ. ಅಜ್ಮಲ್‌ಪಾಷ, ಸಹಜ ಕೃಷಿಕ ಪ್ರಶಾಂತ್ ಜಯರಾಂ, ಧೀನಬಂದು ಸಂಸ್ಥೆಯ ಪ್ರೊ. ಜಯದೇವ, ನಿಸರ್ಗ, ವಿಚಾರವಾದಿಗಳು, ಜಿಲ್ಲೆಯ ಎಲ್ಲಾ ಭಾಗಗಳಿಂದ ರೈತರು, ಪರಿಸರ ಪ್ರೇಮಿಗಳು, ಕೃಷಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.