Simple life of Saran
ಆಸೆ ಎಂಬುದು ಅರಸಂಗಲ್ಲದೆ ಶಿವ ಭಕ್ತರಿಗುಂಟೇನಯ್ಯ ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆನಯ್ಯ ಈ ಸಕ್ಕಿಯಾಸೆ ನಿಮಗೇಕಯ್ಯ ಈಶ್ವರನೊಪ್ಪ ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ
ಆಯ್ದಕ್ಕಿ ಲಕ್ಕಮ್ಮನವರು ಗಂಡನಿಗೆ ಹೇಳುತ್ತಾರೆ. ಆಸೆ ಎಂಬುದು ಅರಸರಿಗೆ ಇರಬೇಕೆ ಹೊರತು ಶಿವಭಕ್ತರಿಗಿರಬಾರದು. ಅಜಾತರಾದವರಿಗೆ ರೋಷವಿರಬಾರದು. ಒಂದು ದಿನ ಮಾರಯ್ಯ ಪ್ರತಿನಿತ್ಯ ಐದು ತರುವ ಅಕ್ಕಿಗಿಂತ ಹೆಚ್ಚಿನ ಅಕ್ಕಿಯನ್ನು ತಂದಿರುತ್ತಾನೆ. ಅದಕ್ಕಾಗಿ ಲಕ್ಕಮ್ಮ ಪತಿ ಮಾರಯ್ಯನವರಿಗೆ ಇಷ್ಟೊಂದು ಅಕ್ಕಿ ಏಕೆ ತಂದಿರುವಿರಿ ? ನಮಗೆ ಒಂದು ಹಿಡಿಯಕ್ಕಿ ಸಾಕು. “ನಾವು ಹೆಚ್ಚಿನ ಅಕ್ಕಿಯನ್ನು ಆಸೆ ಪಟ್ಟರೆ ಈಶ್ವರ ಒಪ್ಪುವುದಿಲ್ಲ” ಎಂದು ಹೇಳುತ್ತಾಳೆ. ಒಟ್ಟಾರೆಯಾಗಿ ಇದರ ತಾತ್ಪರ್ಯ ಅತಿಯಾಸೆ ಪಡಬಾರದು,
ಅತಿಯಾದ ಆಸೆ ದುಃಖಕ್ಕೆ ಮೂಲ ಕಾರಣವಾಗುತ್ತದೆ.
ಸರಳ ಜೀವನ ನಮ್ಮದಾಗಬೇಕು. ಮನುಷ್ಯನಿಗೆ ಜೀವಿಸಲು ನಿಸರ್ಗ ನಮಗೆ ಉಸಿರಾಡಲು ಗಾಳಿ, ಕುಡಿಯಲು ನೀರು, ಆರದಿರುವ ದೀಪಗಳಾದ ಸೂರ್ಯ ಚಂದ್ರ ನಕ್ಷತ್ರ ಬೆಳಕು ಫಲವತ್ತಾದ ಮಣ್ಣನ್ನು ನಾವು ಈ ಭೂಮಿಗೆ ಬರುವುದಕ್ಕಿಂತ ಮುಂಚಿತವಾಗಿಯೇ ಆ ಭಗವಂತ ಎಲ್ಲವನ್ನು ಕರುಣಿಸಿದ್ದಾನೆ. ಇಲ್ಲಿ ದೇವನೆಂದರೆ
ಜಗದಗಲ ಮುಗಿಲಗಲ ಮಿಗೆ ಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ಬ್ರಹ್ಮಾಂಡದಿಂದಲೇ ಅತ್ತತ್ತ ನಿಮ್ಮ ಶ್ರೀಮುಕುಟ ಅಗಮ್ಯ ಅಗೋಚರ ಆ ಪ್ರತಿಮ ಲಿಂಗವೇ
ಅಂಗೈಯಲ್ಲಿ ಲಿಂಗದ ಕುರುಹನ್ನು ಹಿಡಿದು ಭಕ್ತಿ ವಂತರಾಗಿ ಸತ್ಯ ಶುದ್ಧ ಕಾಯಕವ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡು ದುಶ್ಚಟಗಳಿಂದ ದೂರವಿದ್ದು ಸರಳ ಜೀವನವನ್ನು ಕಟ್ಟಿಕೊಂಡು ಬಾಳಿದರೆ ನಮ್ಮ ಜೀವನ ನಂದನಮಯವಾಗುವುದರಲ್ಲಿ ಎರಡು ಮಾತುಗಳಿಲ್ಲ.
ಆಧುನಿಕ ಬದುಕಿಗೂ ಶರಣ ಹಾಗೂ ಶರಣೀಯರ ಬದುಕಿಗೂ ಇರುವ ವ್ಯತ್ಯಾಸವೆಂದರೆ 12ನೇ ಶತಮಾನದಲ್ಲಿ ಶರಣೆ ಸತ್ಯಕ್ಕಳು ಕಲ್ಯಾಣದ ಬೀದಿಯಲ್ಲಿ ಒಂದು ದಿನ ಕಸಗುಡಿಸುವಾಗ ಚಿನ್ನ ಕಾಣಿಸಿಕೊಳ್ಳುತ್ತದೆ. ಆಗ ಆ ತಾಯಿ ಹೇಳಿದ ಮಾತು ನಿಜಕ್ಕೂ ಗಮನಾರ್ಹವಾಗಿದೆ. ಕಲ್ಯಾಣದ ಬೀದಿಯಲ್ಲಿ ಈ ಕಸವನ್ನು ಹಾಕಿದವರಾರು?
ನೋಡಿ ಆ ತಾಯಿ ಸತ್ಯಕ್ಕ ಚಿನ್ನವನ್ನು ಕಸಕ್ಕೆ ಹೋಲಿಸುತ್ತಾಳೆ. ಈ ಆಧುನಿಕ ಕಾಲದಲ್ಲಿ ಯಾರಿಗಾದರೂ ರಸ್ತೆಯ ಬದಿಯಲ್ಲಿ ಚಿನ್ನ ಸಿಕ್ಕರೆ ಅದು ನನ್ನದಲ್ಲ ಎಂದು ಮುಂದೆ ಹೋಗುವವರು ತುಂಬಾ ವಿರಳ. ಈ ಆಧುನಿಕ ಬದುಕಿನಲ್ಲಿ ಮನುಷ್ಯ ಯಾಕೆ ಹೀಗೆ ವರ್ತಿಸುತ್ತಾನೆಂದರೆ ಇದಕ್ಕೆ ಮುಖ್ಯ ಕಾರಣ ಅತಿಯಾದ ಆಸೆ ಆಡಂಬರದ ಬದುಕು, ತಾ ಮೇಲು ನಾ ಮೇಲು ಎಂಬ ಅಹಂಕಾರ.
ಈ ಅಹಂಕಾರ ಅಳಿಯಬೇಕಾದರೆ ಸುಂದರ ಬಾಳು ನಾವು ಕಟ್ಟಿಕೊಳ್ಳಬೇಕಾದರೆ ಅತಿಯಾಸೆ ಬಿಟ್ಟು ಸರಳ ಜೀವನ ಮಾಡೋಣ. ಸರಳ ಜೀವನ ಮಾಡುವುದಕ್ಕೆ ನಮ್ಮೆಲ್ಲರಿಗೆ ಮಾರ್ಗದರ್ಶಕರು ಈ ಜಗತ್ತು ಕಂಡಂತಹ ಮಹಾ ಸಂತ ಅವರ ಜೀವನದಲ್ಲಿ ಅವರು ಧರಿಸಿದ ಅಂಗಿಗಳಿಗೆ ಕಿಸೆ ಇಲ್ಲದೆ ಬದುಕಿದ ಮಹಾನ್ ತ್ಯಾಗಿ ಈ ಜಗತ್ತಿಗೆ ಜ್ಞಾನದ ದಾಸೋಹವನ್ನು ಉಣಬ ಡಿಸಿದ ನಡೆದಾಡುವ ದೇವರು. ಪ್ರತಿನಿತ್ಯ ದೈನಂದಿನ ಕೆಲಸಗಳನ್ನು ಸ್ವತಹ ಅವರೇ ಮಾಡಿಕೊಳ್ಳುವ ವ್ಯಕ್ತಿತ್ವವನ್ನು ಹೊಂದಿದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಗಳವರ ಬದುಕನ್ನೊಮ್ಮೆ ನೆನಪಿಸಿಕೊಂಡು ಅವರ ಸರಳವಾದ ಜೀವನವನ್ನು ನಮ್ಮ ಜೀವನಕ್ಕೆ ಮಾರ್ಗದರ್ಶಿಯಾಗಿಟ್ಟುಕೊಂಡು ಬದುಕನ್ನು ಕಟ್ಟಿಕೊಳ್ಳೋಣ.
12ನೇಯ ಶತಮಾನದಲ್ಲಿ ಅಪ್ಪ ಬಸವಣ್ಣನವರು ಬರೆದ ಈ ವಚನ ನಮ್ಮ ಸರಳ ಬದುಕಿಗೆ ಅನ್ವಯವಾಗುವಂತಿದೆ.
ಉಳ್ಳವರು ಶಿವಾಲಯ ಮಾಡುವರಯ್ಯ. ನಾನೇನ ಮಾಡಲಿ ಬಡವನಯ್ಯ. ಎನ್ನ ಕಾಲೇ ಕಂಬ ದೇಹವೇ ದೇಗುಲ. ಶಿರವೇ ಹೊನ್ನ ಕಳಸವಯ್ಯ. ಕೂಡಲಸಂಗಮದೇವ ಕೇಳಯ್ಯ ಸ್ಥಾವರಕಳಿ ಉಂಟು ಜಂಗಮಕ್ಕಳಿವಿಲ್ಲ.
- ರಕ್ಷಿತಾ ಅರವಿಂದ ರೆಡ್ಡಿ ಮುಡಬೂಳ.