All business in Karnataka should be done in Kannada. Teacher Ashfrunnisa Baig says that then the Rajyotsava will have its true meaning
ಚಾಮರಾಜನಗರ: ಕರ್ನಾಟಕದಲ್ಲಿ ಎಲ್ಲಾ ವ್ಯವಹಾರಗಳು ಕನ್ನಡದಲ್ಲೇ ಆಗಬೇಕು. ಆವಾಗ ರಾಜ್ಯೋತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಶಿಕ್ಷಕಿ ಅಶ್ಫ್ರುನ್ನಿಸ ಬೇಗ್ ತಿಳಿಸಿದರು.
ಚಾಮರಾಜನಗರ ತಾಲೂಕಿನ ಕಾಗಲವಾಡಿಯ ಟಿ ಎಸ್ ಸುಬ್ಬಣ್ಣ ಪ್ರೌಢಶಾಲೆಯಲ್ಲಿ, ಜೆ ಎಸ್ ಬಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ಮಾಸಾಚರಣೆ ೨೦೨೩’ ಕಾರ್ಯಕ್ರಮವನ್ನು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕನ್ನಡದಲ್ಲಿ ವ್ಯವಹರಿಸಲು ಕೀಳರಿಮೆ ಬೇಡ. ಇತ್ತೀಚೆಗೆ ಕರ್ನಾಟಕದಲ್ಲಿರುವ ಬಹುಪಾಲು ಕೇಂದ್ರದ ಕಛೇರಿಗಳಲ್ಲಿ, ಕಾರ್ಪೋರೇಟ್ ಸಂಸ್ಥೆಗಳಲ್ಲಿ, ಬ್ಯಾಂಕುಗಳಲ್ಲಿ ಕನ್ನಡ ಭಾಷೆಗಿಂತ ಬೇರೆ ಭಾಷೆ ಮಾತನಾಡುವವರೇ ಹೆಚ್ಚು ಸಿಗುತ್ತಾರೆ. ಬೇರೆ ಭಾಷೆಯಲ್ಲಿ ಮಾತನಾಡುವ ಕಛೇರಿಯ ಸಿಬ್ಬಂದಿಯೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಜತೆಗೆ ಕರ್ನಾಟಕದಲ್ಲಿದ್ದು, ರಾಜ್ಯದ ಆಡಳಿತ ಭಾಷೆಯಲ್ಲಿ ಮಾತನಾಡುವ ಸ್ವಾತಂತ್ರ್ಯ ಪ್ರತಿಯೊಬ್ಬ ಕನ್ನಡಿಗನ ಹಕ್ಕು. ಆದರೆ ಈ ಹಕ್ಕನ್ನು ಕಿತ್ತುಕೊಳ್ಳುವ ಯತ್ನಗಳು ಆಗಾಗ ನಮ್ಮ ಮುಂದೆ ಕಾಣಸಿಗುತ್ತವೆ. ನಮ್ಮ ಕನ್ನಡ ನಾಡು ವಿಭಿನ್ನ ಅಭಿಮತಗಳು, ವಿಚಾರಗಳನ್ನು ಇಟ್ಟುಕೊಂಡೇ, ಏಕತೆ ಹಾಗೂ ಅಖಂಡತೆಯನ್ನು, ಸಹಿಷ್ಣುತೆಯನ್ನು ಪ್ರತಿಪಾದಿಸುತ್ತಾ ಸಹಕಾರ, ಸಹಬಾಳ್ವೆಯೊಂದಿಗೆ ಸಾಗುವುದೇ ನಮ್ಮ ನಿಜವಾದ ಸಂಪತ್ತು ಎಂದು ನಂಬಿದೆ. ನಮ್ಮ ನಾಡು ಸರ್ವ ಧರ್ಮಗಳ, ಸರ್ವ ಜನಾಂಗದ ಶಾಂತಿಯ ತೋಟ ಎಂದು ಅನೇಕ ಮಹನೀಯರು ತಿಳಿಸಿದ್ದಾರೆ, ಅದನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗುವ ಕೆಲಸವಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಅವರು ಮಾತನಾಡಿ, ಉತ್ತರ ಭಾರತೀಯರು ದಕ್ಷಿಣ ಭಾರತೀಯರ ಮೇಲೆ ಹಿಂದಿ ಹೇರಿಕೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹಿಂದಿ ಹೇರಿಕೆ ವಿರುದ್ಧ ಒಗ್ಗೂಡಿ ಧ್ವನಿ ಎತ್ತುವ ಹೋರಾಟಗಳು ಸಹ ಅನೇಕ ಕಡೆ ನಡೆಯುತ್ತಿವೆ. ಇಷ್ಟೇ ಅಲ್ಲದೆ ಇತ್ತೀಚೆಗೆ ಪ್ರಾದೇಶಿಕ ಭಾಷಾ ನೀತಿಯನ್ನು ಗಾಳಿಗೆ ತೂರಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಮಂಜು, ರಮೇಶ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.