Breaking News

ಲಿಂಗಾಯತ ಮಠಾಧೀಶರ ಒಕ್ಕೂಟಕ್ಕೆ ಬಹಿರಂಗ ಪತ್ರ

The short URL of the present article is: https://kalyanasiri.in/vo34
Open letter to the Lingayat Muttahidas' Association

Screenshot 2025 10 09 09 45 20 28 40deb401b9ffe8e1df2f1cc5ba480b125093512108861378810

ಲಿಂಗಾಯತ ಮಠಾಧೀಶರ ಒಕ್ಕೂಟದ ಪೂಜ್ಯರಿಗೆ ಅನಂತ ಶರಣು ಶರಣಾರ್ಥಿ ವಚನ ಶಾಸ್ತ್ರದ ಆಧಾರಿತವಾಗಿ ಹನ್ನೆರಡನೇ ಶತಮಾನದಿಂದ ಈ ವರೆಗೆ ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂಬುದನ್ನು ನಮ್ಮ ಹಿಂದಿನ ಪೂಜ್ಯರು, ಸಮಾಜದ ಹಿರಿಯ ಸಾಹಿತಿಗಳು, ಧರ್ಮದ ಮುತ್ಸದ್ಧಿಗಳು ಅತ್ಯಂತ ಮುತುವರ್ಜಿಯಿಂದ ಸಾಭೀತು ಪಡಿಸುತ್ತಾ ಬಂದಿದ್ದಾರೆ. ಸ್ವಾಮಿ ಲಿಂಗಾನಂದರ ಮತ್ತು ಪೂಜ್ಯ ಮಾತೆ ಮಹಾದೇವಿಯವರ, ಇಲಕಲ್ ಶ್ರೀಗಳ, ಗದುಗಿನ ಶ್ರೀಗಳ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಯಿತು. ಆಗ ಸಿದ್ಧೇಶ್ವರ ಶ್ರೀಗಳು ಸಹಿತ "ಜಾಗತಿಕ ಧರ್ಮಗಳ ಸಾರ ಸೂಕ್ತಿಗಳು" ಎಂಬ ಪುಸ್ತಕದಲ್ಲಿ ಲಿಂಗಾಯತವೂ ಒಂದು ಸ್ವತಂತ್ರ ಧರ್ಮವೆಂಬುದನ್ನು ಒಪ್ಪಿಕೊಂಡು ಬಸವಣ್ಣನವರ ಭಾವಚಿತ್ರವನ್ನು ಮುದ್ರಿಸಿ(ಬಸವಣ್ಣನವರೇ ಲಿಂಗಾಯತ ಧರ್ಮದ ಸ್ಥಾಪಕರು ಎಂದು ಸೂಚ್ಯವಾಗಿ ಒಪ್ಪಿಕೊಂಡು) ಆರು ಧರ್ಮದ ಸೂಕ್ತಿಗಳನ್ನು ಪ್ರತ್ಯೇಕವಾಗಿ ಗುರುತಿಸಿದ್ದಾರೆ. ಎರಡು ದಶಕಗಳ ಕಾಲ ಜಗದ್ಗುರು ಮಾತೆ ಮಹಾದೇವಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಬಸವದಳವು ಏಕಾಂಗಿಯಾಗಿ ಹೋರಾಟ ಮಾಡುತ್ತಾ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಕಾಪಾಡಿಕೊಂಡು ಬಂತು. 2017 ಮತ್ತು 2018ರ ಬೃಹತ್ ಲಿಂಗಾಯತ ರ್ಯಾಲಿಗಳ ಹೋರಾಟದ ನಂತರ, ಲಿಂಗಾಯತ ಧರ್ಮದ ಹೋರಾಟಕ್ಕಾಗಿಯೇ ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ಜಾಗತಿಕ ಲಿಂಗಾಯತ ಧರ್ಮ ಮಹಾಸಭಾ ಹುಟ್ಟಿಕೊಂಡಿತು. ಈ ಸಂಘನೆಗೆ ಬಲ ತುಂಬಲು ಅನೇಕ ಬಸವಪರ ಸಂಘಟನೆಗಳು ಕೈಜೋಡಿಸಿದವು. ಕೆಲವೇ ವರ್ಷದಲ್ಲಿ ವೀರಶೈವ ಮಹಾಸಭಾಕ್ಕಿಂತಲೂ ಹೆಚ್ಚಿನ ಸದಸ್ಯತ್ವ ಹೊಂದಿ ಹೆಮ್ಮರವಾಗಿ ಬೆಳೆಯಿತು. ಲಿಂಗಾಯತ ಧರ್ಮದ ಜ್ಞಾನ ಕ್ಷಿತಿಜ ಎಸ್ ಜಾಮದಾರ ಅವರ ಧರ್ಮದ ನಿಷ್ಟೆಗೆ ಶ್ರೇಷ್ಟ ರಾಜಕೀಯ ಮುತ್ಸದ್ಧಿಯಾಗಿ ಲಿಂಗಾಯತ ಧರ್ಮದ ಆಳ ಮತ್ತು ಹರವು ಅದ್ಯಯನ ಮಾಡಿದ ಎಂ ಬಿ ಪಾಟೀಲ ಅವರು ಇದಕ್ಕೆ ರಾಜಾಶ್ರಯ ನೀಡಲು ಮುಂದೆ ಬಂದು ಈವರೆಗೂ ಗಟ್ಟಿಯಾಗಿ ನಿಂತು ತಮ್ಮ ಬದ್ಧತೆಯನ್ನು ಮೆರೆಯುತ್ತಿದ್ದಾರೆ. ಎಷ್ಟೋ ಜನ ಅವಕಾಶವಾದ ರಾಜಕಾರಣಿಗಳಿಗಿಂತ ಎಂ ಬಿ ಪಾಟೀಲರು ಭಿನ್ನವಾಗಿ ನಿಂತು ಬಸವಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಶ್ರಮಿಸುತ್ತಿರುವುದಕ್ಕೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಜಾಗತಿಕ ಲಿಂಗಾಯತ ಧರ್ಮ ಮಹಾಸಭಾದ ಕರೆಗೆ ಓಗೊಟ್ಟು ಲಿಂಗಾಯತ ಸ್ವತಂತ್ರ ಧರ್ಮವೆಂದು ಮಾನಸಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಸಾಂಸ್ಥಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಒಪ್ಪಿಕೊಂಡು ಅದರ ಪ್ರಸಾರ ಮತ್ತು ಪ್ರಚಾರ ಮಾಡುವಲ್ಲಿ ಪ್ರಾಮಾಣಿಕ ಬದ್ಧತೆಯನ್ನು ತೋರಿಸಲು ಐದುನೂರಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರ ಒಕ್ಕೂಟವೂ ಹುಟ್ಟಿಕೊಂಡು ಲಿಂಗಾಯತ ಧರ್ಮದ ಹೋರಾಟಕ್ಕೆ ಐತಿಹಾಸಿಕ ಶಕ್ತಿಯನ್ನು ತುಂಬಿದ್ದು ಅತ್ಯಂತ ಶ್ಲಾಘನೀಯ ಕಾರ್ಯ. "ಬಸವ ಸಂಸ್ಕೃತಿ ಅಭಿಯಾನ" ಕಾರ್ಯಕ್ರಮ ಹಮ್ಮಿಕೊಂಡು ಒಂದು ತಿಂಗಳು ಪರ್ಯಂತರ ರಾಜ್ಯಾದ್ಯಾಂತ ಎಲ್ಲಾ ಜಿಲ್ಲೆಗಳಿಗೆ ಹೋಗಿ ಲಿಂಗಾಯತ ಧರ್ಮ ಪ್ರಚಾರ ಮಾಡಿ ನಿಮ್ಮ ಬದ್ಧತೆಯನ್ನು ಮೆರೆದಿರುವಿರಿ ನಿಮ್ಮ ಸೇವಾ ಕೈಂಕರ್ಯಕ್ಕೆ ಧನ್ಯವಾದಗಳನ್ನು ಸಮರ್ಪಿಸಲೇಬೇಕು. ಅಭಿಯಾನವೂ ಅಭೂತಪೂರ್ವ ಯಶಸ್ವಿಯಾಗುತ್ತಲೇ ಬಿಲ ಸೇರಿಕೊಂಡಿದ್ದ ಕೆಲ ಸ್ವಾಮಿಗಳು ಹೊಟ್ಟೆಕಿಚ್ಚಿಗಾಗಿಯೋ ಅಥವಾ ನಾವು ಇದರೊಳಗೆ ಸೇರಿಲಿಲ್ಲವೆಂಬ ನಿರಾಶೆಯಿಂದಲೋ ಅಪಸ್ವರ ಎತ್ತಿ, ಗಲಾಟೆ ಗದ್ದಲ ಎಬ್ಬಿಸಿ, ಸತ್ಯ ನ್ಯಾಯ ಧರ್ಮದಿಂದ ದೂರ ಸರಿದು ಕೇವಲ ಸನಾತನ ಧರ್ಮದ ಏಜೆಂಟರೆಂಬಂತೆ ವರ್ತಿಸುವ ಕೆಲ ಮಾಧ್ಯಮಗಳ ಮೂಲಕ ದಿಂಗಾಲೇಶ್ವರ ಸ್ವಾಮಿಗಳು ಬೊಬ್ಬಿಟ್ಟರು. ಕನ್ನೇರಿ ಶ್ರೀಗಳು ತಾವೂ ಒಬ್ಬ ಕಾವಿಧಾರಿ ಸ್ವಾಮಿಗಳು ಎಂಬುದನ್ನು ಮರೆತು, ಮೈಮೇಲೆ ಪಿಶಾಚಿ ಬಂದಂತೆ ವರ್ತಿಸುತ್ತಾ, ಕೀಳು ಪದ ಬಳಸಿ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮಿಗಳನ್ನು ಸಾರಾಸಗಟಾಗಿ ಬೈದರು. ಇದರಿಂದ ಸಾರ್ವಜನಿಕವಾಗಿ ಟೀಕೆ, ಪ್ರತಿಭಟನೆಗೆ ಗುರಿಯಾಗಿ ಎರಡು ಜಿಲ್ಲೆಯಿಂದ ನಿರ್ಬಂದಕ್ಕೆ ಒಳಗಾಗಿದ್ದಲ್ಲದೆ ಹೈಕೋರ್ಟ್ದಿಂದಲೂ ಛೀ ಮಾರಿ ಹಾಕಿಸಿಕೊಂಡು ಬಾರಿ ಮುಖ ಭಂಗ ಅನುಭವಿಸಿದರು. ಇದರಿಂದ ಈಗಲೂ ಕ್ಷಮೆ ಕೇಳದೆ ಇರುವುದು ನಾಚಿಕೆಗೇಡಿನ ಸಂಗತಿ.

ಜಾಹೀರಾತು

ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆಯಾದರೂ ಲಿಂಗಾಯತ ಮಠಾಧೀಶರ ಒಕ್ಕೂಟ ಕಾಟಾಚಾರಕ್ಕೆ ಎಂಬಂತೆ ಬೆಂಗಳೂರಿನಲ್ಲಿ ಒಂದು ಸಭೆ ನಡೆಸಿ, ಒಂದಿಷ್ಟು ಪತ್ರಿಕೆ ಹೇಳಿಕೆ ನೀಡಿದ್ದಷ್ಟು ಬಿಟ್ಟರೆ ಕಾನೂನಾತ್ಮಕವಾಗಿ ಯಾವುದೇ ರೀತಿಯ ಹೋರಾಟಕ್ಕೆ ಮುಂದಾಗಲಿಲ್ಲವೆಂಬುದು ಬೇಸರದ ಸಂಗತಿ. ನಿಮ್ಮ ಈ ಮಹಾಮೌನ ಕಾರಣವಾಗಿ ಹರಕು ಬಾಯಿ ಬಸವನಗೌಡ ಪಾಟೀಲ ಯತ್ನಾಳ ಪ್ರತೀ ದಿನವೂ ಬಸವಪರ ಸಂಘಟನೆಗಳಿಗೂ ಮತ್ತು ಲಿಂಗಾಯತ ಮಠಾದೀಶರ ಒಕ್ಕೂಟಕ್ಕೆ ತಾಲಿಬಾನಿಗಳೆಂದೂ, ‘ನಕ್ಸ್ಲೈಟ್’ ಎಂದೂ, ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಿರುವನು. (ಸಾಣೆಹಳ್ಳಿ ಶ್ರೀಗೆ, ನಿಜಗುಣಾನಂದ ಸ್ವಾಮಿಗಳಿಗೆ, ಭಾಲ್ಕಿ ಶ್ರೀಗಳಿಗೆ) ಮಾಧ್ಯಮಗಳು ಪದೇ ಪದೇ ಅವನನ್ನು ಪ್ರಚೋದಿಸಿ ಅವನ ಮೂಲಕ ಬೈಯಿಸಿ ನಿಮ್ಮನ್ನು ತಪ್ಪಿತಸ್ಥರು ಎಂಬುದಾಗಿ ಬಿಂಬಿಸುತ್ತಿರುವರು. ರಾಜ್ಯಾದ್ಯಂತ ಜನಗಳು ಮೂಕ ಸಾಕ್ಷಿಯಾಗಿ ನೋಡಿ ನಿಮ್ಮನ್ನು ನಗೆಪಾಟಲಿಗೆ ಗುರಿ ಮಾಡುತ್ತಿರುವರು. ಇದನ್ನು ನೋಡಿ ರಾಜ್ಯದ ಬಸವಭಕ್ತರು ನೋವನ್ನು ತೋಡಿಕೊಳ್ಳುತ್ತಿರುವರು. ನೀವು ಮಾತ್ರ ಎಲ್ಲವನ್ನೂ ನೋಡುತ್ತಾ ಕೈಕಟ್ಟಿ ಕುಳಿತಿರುವಿರಿ.

ನನ್ನ ವೈಯುಕ್ತಿಕ ಕಳಕಳಿಯನ್ನು ನಿಮಗೆ ಈ ಬಹಿರಂಗ ಪತ್ರದ ಮೂಲಕ ತಿಳಿಸುತ್ತಿರುವೆ. ಕೇವಲ ಹೊಗಳಿಕೆಗೆ, ಸನ್ಮಾನ, ಬಿರುದು, ಹೆಗ್ಗಳಿಕೆ ಮಾತ್ರ ಬಸವತತ್ವವನ್ನು ಪ್ರಚಾರ ಮಾಡಬೇಡಿ. ನಮ್ಮ ಗುರುಗಳಾದ ಜಗದ್ಗುರು ಮಾತೆ ಮಹಾದೇವಿಯವರಂತೆ ಅಪಮಾನ, ಅವಮಾನಗಳು ಎಷ್ಟೇ ಬಂದರೂ ದಿಟ್ಟತನದಿಂದ “ಎನ್ನ ವಾಮ ಕ್ಷೇಮ ನಿಮ್ಮದಯ್ಯ ಎನ್ನ ಮಾನ ಅಪಮಾನ ನಿಮ್ಮದಯ್ಯ..” ಎಂದು ಐದು ದಶಕಗಳ ಕಾಲ ಏಕಾಂಗಿಯಾಗಿ ಮಠಾದೀಶರ ಕಿರುಕುಳ ಸಹಿಸಿಕೊಂಡು ತಮ್ಮ ಜ್ಞಾನ ಪ್ರತಿಭೆಯಿಂದ ಪಂಚಾಚಾರ್ಯರನ್ನ, ಕನ್ನೇರಿ ಮಠದ ಶ್ರೀಗಳಂತಿರುವ ನರಿ ಬುದ್ಧಿಯ ಅನೇಕ ಸ್ವಾಮಿಗಳನ್ನ ಕೈಕಟ್ಟಿ, ಬಾಯಿ ಮುಚ್ಚಿಸಿ ಮೂಲೆಗೆ ಕೂಡಿಸಿ ಲಿಂಗಾಯತ ಧರ್ಮ ಹೊರಾಟದ ರಥವನ್ನು ದೆಹಲಿಯವರೆಗೆ ಕೊಂಡೋಯ್ದು ತಮ್ಮ ಗುರಿಯನ್ನು ಮುಟ್ಟಿದರು ಮತ್ತು “ನಾರಿಯೊಬ್ಬಳು ಬಂದು ಬಾರಿ ಅಬ್ಬರ ಹೊತ್ತು ಆರೂಢ ಬಿಕ್ಷೆ ಬೇಡ್ಯಾಳ ಸುವ್ವಿ ಮತ್ತಿನ್ನು ವೀರ ಬಸವಣ್ಣ ಬರುವಾಗ ಸುವ್ವಿ” ಎಂಬ ಕಾಲಜ್ಞಾನ ವಚನಕ್ಕೆ ಸಾಕ್ಷಿಯಾದರು. ಅದರಂತೆ ನೀವು ತಪ್ಪಿತಸ್ಥರಲ್ಲ ಲಿಂಗಾಯತ ಧರ್ಮವನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿರುವ ಸತ್ಯವಾದಿಗಳು, ಬಸವ ಸಂತಾನಿಗಳು. ನಿಮ್ಮ ಜೊತೆ ಲಕ್ಷಾಂತರ ಬಸವಭಕ್ತರಿದ್ದಾರೆ ಧೈರ್ಯವಾಗಿ ಮುನ್ನೆಡೆಯಿರಿ. ಒಬ್ಬೊಬ್ಬ ಸ್ವಾಮಿಗಳನ್ನು ಟಾರ್ಗೆಟ್ ಮಾಡಿ ನಿಮ್ಮ ಮಾನಸಿಕತೆಯನ್ನು ಕುಗ್ಗಿಸಲು ಮುಂದಾಗಿದ್ದಾರೆ ಅದಕ್ಕೆ ಅವಕಾಶ ಕೊಡಬೇಡಿ. ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಆದಷ್ಟು ಬೇಗನೆ ಮತ್ತೊಂದು ಸುತ್ತಿನ ಸಭೆ ಕರೆದು ಕನ್ನೇರಿ ಶ್ರೀ ಮತ್ತು ಯತ್ನಾಳ ಅವರ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿರಿ. ನೀವೇ ಹೀಗೆ ಹಿಂದೆ ಸರಿದರೆ ಹೇಗೆ? ಹಗಲಿರುಳು ಬಸವತತ್ವ ಪ್ರಚಾರ ಮಾಡುವ ನಮ್ಮ ಗತಿ ಏನಾಗಬೇಕು?. ಒಳಗೊಳಗೆ ಆರ್ ಎಸ್ ಎಸ್ ಗೆ ಸಹಕಾರ ನೀಡುತ್ತಿದ್ದಾರೆ ಎಂಬ ಗುಮಾನಿಯೂ ಇದೆ ಆ ಮುಖವಾಡವನ್ನು ಕಳಚಿಕೊಳ್ಳಿ. ಎಷ್ಟೋ ಜನ ಕಿರಿಯ ಸ್ವಾಮಿಗಳು ದೂರವಾಣಿಯಲ್ಲಿ ಮಾತನಾಡುತ್ತಾ ನಿಮ್ಮ ನಡೆ ಕಂಡು ಬೇಸರ ವ್ಯಕ್ತ ಪಡಿಸುತ್ತಿರುವರು, ಅಸುರಕ್ಷತೆ ಅನುಭವಿಸುತ್ತಿರುವರು. ‘ನಿಮ್ಮ ಮಠಗಳ ಏಳಿಗೆಯೇ ಬಸವ ಭಕ್ತರ ಏಳಿಗೆ ಎಂಬ ಬ್ರಾಂತಿಯಿಂದ ಹೊರಬಂದು; ಬಸವಧರ್ಮದ ಏಳಿಗೆಯೇ ಬಸವ ಭಕ್ತರ ಏಳಿಗೆ’ ಎಂಬ ಭಾವನೆ ಹೊಂದಿ ಅಖಂಡ ಬಸವಭಕ್ತರ ಭದ್ರಕೋಟೆಯಾಗಿ ನಿಲ್ಲಬೇಕು ಎಂದು ಸೂಚ್ಯವಾಗಿ ಹೇಳುತ್ತಾ ನನ್ನ ಈ ಬಹಿರಂಗ ಪತ್ರದಿಂದ ಬೇಸರವಾದರೆ ಮನ್ನಿಸಬೇಕೆಂದು ಕಳಕಳಿಯಿಂದ ಪ್ರಾರ್ಥಿಸುತ್ತಾ ನನ್ನ ಪತ್ರಕ್ಕೆ ವಿರಾಮ ನೀಡುವೆ ಪೂಜ್ಯರ ಪಾದಗಳಿಗೆ ಶರಣು ಶರಣಾರ್ಥಿ.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ

The short URL of the present article is: https://kalyanasiri.in/vo34

About Mallikarjun

Check Also

ನವೆಂಬರ್ 1 ರಂದು ಜಿಲ್ಲಾ ಕೇಂದ್ರದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

70th Karnataka Rajyotsava Day celebrated at the district headquarters on November 1 ಕೊಪ್ಪಳ ಅಕ್ಟೋಬರ್ 28 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.