ಹವಾಮಾನ ಸ್ನೇಹಿ, ಸುಸ್ಥಿರ ಭತ್ತದ ಕೃಷಿಗೆ ರೈತರು ಮುಂದಾಗಬೇಕು: ಡಾ. ಪ್ರಮೋದ ಕಟ್ಟಿ

H.Mallikarjun
H.Mallikarjun - Kalyanasiri
2 Min Read

Farmers should move towards climate-friendly, sustainable rice cultivation: Dr. Pramod Katti

ಹವಾಮಾನ ಸ್ನೇಹಿ, ಸುಸ್ಥಿರ ಭತ್ತದ ಕೃಷಿಗೆ ರೈತರು ಮುಂದಾಗಬೇಕು: ಡಾ. ಪ್ರಮೋದ ಕಟ್ಟಿ
ಕೊಪ್ಪಳ ಆಗಸ್ಟ್ 28 (ಕರ್ನಾಟಕ ವಾರ್ತೆ): ಜಾಗತಿಕ ತಾಪಮಾನ ಏರಿಕೆ, ಬರ ಹಾಗೂ ಪ್ರವಾಹದಂತಹ ಹವಾಮಾನ ವೈಪರೀತ್ಯಗಳಿಂದ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ರೈತರು ಹವಾಮಾನ ಸ್ನೇಹಿ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಎಂಪ್ರಿ, ಬೆಂಗಳೂರಿನ ನಿರ್ದೇಶಕ ಡಾ. ಪ್ರಮೋದ ಕಟ್ಟಿ ಕರೆ ನೀಡಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಲ್ಲಿ ಪ್ರಾಜೆಕ್ಟ್ ಸಮೃದ್ಧಿ ಸಹಯೋಗದೊಂದಿಗೆ ಆಗಸ್ಟ್ 27ರಂದು ಆಯೋಜಿಸಿದ್ದ ‘ಹವಾಮಾನ ಸ್ನೇಹಿ ಮತ್ತು ಸುಸ್ಥಿರ ಭತ್ತದ ಕೃಷಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭತ್ತದ ಬೆಳೆಯಲ್ಲಿ ನೀರನ್ನು ಆರಿಸಿ ಬಿಡುವ ಪದ್ಧತಿ (Alternate Wetting and Drying) ಅಳವಡಿಸಿಕೊಂಡರೆ ನೀರಿನ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ರೋಗ ಮತ್ತು ಕೀಟಗಳ ಬಾಧೆಯನ್ನು ತಗ್ಗಿಸಬಹುದು. ಅಲ್ಲದೆ, ಗದ್ದೆಗಳಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಮೀಥೇನ್ ಅನಿಲದ ಪ್ರಮಾಣವನ್ನೂ ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು.
ಸ್ಟ್ರಿಂಗ್ ಬಯೋ ಕಂಪನಿಯ ಬೆಂಗಳೂರು ಪ್ರತಿನಿಧಿ ಸಂಗ್ರಾಮ್ ನಾಯಕ್ ಮಾತನಾಡಿ, ಭತ್ತದ ಬೆಳೆಯಲ್ಲಿ ‘ಕ್ಲೀನ್ ರೈಸ್’ ಜೈವಿಕ ಉತ್ಪನ್ನ ಬಳಕೆಯಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಪ್ರಾಜೆಕ್ಟ್ ಸಮೃದ್ಧಿ ಯೋಜನೆಯಡಿ ಕ್ಲೀನ್ ರೈಸ್ ಜೈವಿಕ ಉತ್ಪನ್ನವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು, ಇದರ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಗೂ ಭತ್ತದ ಇಳುವರಿ ಹೆಚ್ಚುವುದರೊಂದಿಗೆ ಮೀಥೇನ್ ಅನಿಲದ ಹೊರಸೂಸುವಿಕೆಯೂ ಕಡಿಮೆಯಾಗುತ್ತದೆ ಎಂದರು.
ನ್ಯೂರಿಜೆನ್ ಕಂಪನಿ, ದಾವಣಗೆರೆಯ ನಿರ್ದೇಶಕ ಬಿ.ಪಿ. ಗಂಗಾಧರಸ್ವಾಮಿ ಮಾತನಾಡಿ, ಪ್ರಾಜೆಕ್ಟ್ ಸಮೃದ್ಧಿ ಯೋಜನೆಯು ಕ್ಲೀನ್ ರೈಸ್ ಬಳಕೆಯ ಮೂಲಕ ಭತ್ತದ ಇಳುವರಿಯನ್ನು ಹೆಚ್ಚಿಸುವುದರ ಜೊತೆಗೆ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತಗ್ಗಿಸುವ ಉದ್ದೇಶ ಹೊಂದಿದೆ ಎಂದು ವಿವರಿಸಿದರು. ಕ್ಲೀನ್ ರೈಸ್ ಭತ್ತದ ಬೆಳವಣಿಗೆಯನ್ನು ಉತ್ತೇಜಿಸುವ ಹಾಗೂ ಗದ್ದೆಗಳಿಂದ ಬಿಡುಗಡೆಯಾಗುವ ಮೀಥೇನ್ ಅನಿಲವನ್ನು ಕಡಿಮೆಗೊಳಿಸುವ ಜೀವಾಣು ಆಧಾರಿತ ಆಧುನಿಕ ಜೈವಿಕ ಉತ್ಪನ್ನವಾಗಿದೆ ಎಂದು ತಿಳಿಸಿದರು.
ಸಮರ್ಥ ನೀರು ನಿರ್ವಹಣೆ, ಸಮತೋಲಿತ ಗೊಬ್ಬರ ಬಳಕೆ ಹಾಗೂ ಬೆಳೆ ಅವಶೇಷಗಳ ಪರಿಣಾಮಕಾರಿ ನಿರ್ವಹಣೆಗೆ ಈ ತಂತ್ರಜ್ಞಾನ ಸಹಕಾರಿಯಾಗಲಿದೆ. ನ್ಯೂರಿಜೆನ್ ಕಂಪನಿಯು ಸ್ಟ್ರಿಂಗ್ ಬಯೋ ಕಂಪನಿಯ ಸಹಯೋಗದಲ್ಲಿ ಕೊಪ್ಪಳ ಭಾಗದ ಸುಮಾರು 10 ಸಾವಿರ ಎಕರೆ ಭತ್ತದ ಪ್ರದೇಶದಲ್ಲಿ ಪ್ರಾಜೆಕ್ಟ್ ಸಮೃದ್ಧಿ ಅನುಷ್ಠಾನಗೊಳಿಸುತ್ತಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಹಪ್ರಾಧ್ಯಾಪಕರು (ಕೀಟ ವಿಜ್ಞಾನ) ಹಾಗೂ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿಪ್ರಸಾದ ಪಿ.ಆರ್. ಮಾತನಾಡಿ, ಕೊಪ್ಪಳ ಭಾಗದಲ್ಲಿ ಪರಿಸರ ಮಾಲಿನ್ಯದಿಂದ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಮಣ್ಣಿನ ಫಲವತ್ತತೆಯೂ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾಜೆಕ್ಟ್ ಸಮೃದ್ಧಿಯಂತಹ ಹವಾಮಾನ ಸ್ನೇಹಿ ಕಾರ್ಯಕ್ರಮಗಳು ಮಹತ್ವದ್ದಾಗಿವೆ. ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಅಳವಡಿಕೆಯಿಂದ ಕೃಷಿ ವೆಚ್ಚವನ್ನು ತಗ್ಗಿಸುವುದರ ಜೊತೆಗೆ ರೋಗ ಮತ್ತು ಕೀಟಗಳ ಬಾಧೆಯನ್ನು ಕಡಿಮೆ ಮಾಡಿ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತರು ಪಾಲ್ಗೊಂಡಿದ್ದರು. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಬಹುದು.
Total Views: 0
ಜಾಹೀರಾತು
Share This Article