Harikara of equality Sri Narayana Guru: H.R. Srinath
ಸಮಾನತೆಯ ಹರಿಕಾರ ಶ್ರೀ ನಾರಾಯಣ ಗುರು: ಎಚ್.ಆರ್. ಶ್ರೀನಾಥ್

ಗಂಗಾವತಿ: ಬಸವಾದಿ ಪ್ರಮಥರ ತತ್ವ-ಸಿದ್ಧಾಂತಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿನ ಮೌಢ್ಯ, ಅಜ್ಞಾನ ಮತ್ತು ಅಂಧಕಾರವನ್ನು ದೂರ ಮಾಡುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕೊಡುಗೆ ಅಪಾರವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಸಮಾಜದ ಹಿರಿಯ ನಾಯಕ ಎಚ್.ಆರ್. ಶ್ರೀನಾಥ್ ಹೇಳಿದರು.
ನಗರದ ಈಡಿಗ ಸಮಾಜದ ತಾಲೂಕು ಕಾರ್ಯಾಲಯದಲ್ಲಿ ಶುಕ್ರವಾರ ಈಡಿಗ ಸಮಾಜದ ನೇತೃತ್ವದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತೋತ್ಸವ ಸಮಾರಂಭಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕೇರಳದಲ್ಲಿ ಜನಿಸಿದ ಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಹಾಗೂ ಮಹಿಳೆಯರ ಹಕ್ಕು ಮತ್ತು ಬಾಧ್ಯತೆಗಳಿಗಾಗಿ ಶ್ರಮಿಸಿದ್ದರು. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆ ಅವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಂದು ಅವರ ತತ್ವ-ಸಿದ್ಧಾಂತಗಳು ವಿಶ್ವದಾದ್ಯಂತ ಪಸರಿಸುತ್ತಿವೆ ಎಂದು ಹೇಳಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಮಹಾಪುರುಷರ ಜನನ ಸಾವಿರ ವರ್ಷಕ್ಕೊಮ್ಮೆ ಸಂಭವಿಸುತ್ತದೆ. ಅಂತಹ ಮಹಾನ್ ಪುರುಷರಲ್ಲಿ ಶ್ರೀ ನಾರಾಯಣ ಗುರುಗಳು ಕೂಡ ಒಬ್ಬರಾಗಿದ್ದು, ತಮ್ಮ ದೈವಿಕ ಸಾಕ್ಷಾತ್ಕಾರ ಹಾಗೂ ಸಮಾಜ ಸುಧಾರಣೆಯ ಚಿಂತನೆಗಳ ಮೂಲಕ ಜನರಿಗೆ ಉತ್ತಮ ತತ್ವ-ಸಿದ್ಧಾಂತಗಳನ್ನು ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಈ. ರಮೇಶ್ ಈಡಿಗ, ಕೆ. ಶ್ರವಣಕುಮಾರ್, ವಿ. ನಾಗರಾಜ್, ತಿರುಮಲೇಶ್, ಮರಕುಂಬಿ ಮಂಜುನಾಥ್ ಈಡಿಗ, ಆನಂದರಾವ್, ಎನ್. ವೆಂಕಟೇಶ್, ವೀರಭದ್ರಪ್ಪ ನಾಯಕ್, ಶರಣೇಗೌಡ ಮಾಲಿಪಾಟೀಲ್, ಸರ್ವೇಶ್, ಮಲ್ಲಿಕಾರ್ಜುನ್, ನಾಗಪ್ಪ, ನಾಗನಗೌಡ, ವಿಶ್ವನಾಥ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.


