
Singatalur sub-canal repair work in progress: Farmers urged to make alternative arrangements for monsoon season
ಪ್ರಗತಿಯಲ್ಲಿರುವ ಸಿಂಗಟಾಲೂರು ಉಪ ಕಾಲುವೆ ದುರಸ್ತಿ ಕಾರ್ಯ:
ಮುಂಗಾರು ಹಂಗಾಮಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ರೈತರಿಗೆ ಮನವಿ

ಕೊಪ್ಪಳ ಮೇ 30 (ಕರ್ನಾಟಕ ವಾರ್ತೆ): ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಶಾಖಾ ಕಾಲುವೆ ವ್ಯಾಪ್ತಿಯಲ್ಲಿ ಬಾಕ್ಸ್ ಕಲ್ವರ್ಟ್ ಸೇತುವೆಯ ದುರಸ್ತಿ ಕಾರ್ಯ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಕಾಲುವೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಕರ್ನಾಟಕ ನೀರಾವರಿ ನಿಗಮದಿಂದ ಮನವಿ ಮಾಡಿಕೊಳ್ಳಲಾಗಿದೆ.
ಮುಂಡರಗಿ ಶಾಖಾ ಕಾಲುವೆಯ ಚೈ.10.05 ಕಿ.ಮೀ. ಪ್ರದೇಶದಲ್ಲಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಬಾಕ್ಸ್ ಕಲ್ವರ್ಟ್ ಸೇತುವೆ ಕಳೆದ ವರ್ಷದ ಭಾರಿ ಮಳೆಯಿಂದ ಹಾನಿಗೀಡಾಗಿತ್ತು. ಪ್ರಸ್ತುತ ಸೇತುವೆಯ ದುರಸ್ತಿ ಕಾಮಗಾರಿ ಭರದಿಂದ ಸಾಗುತ್ತಿದೆಯಾದರೂ, ಇನ್ನೂ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕಾಲುವೆಗೆ ನೀರು ಹರಿಸುವ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಾಗಾಗಿ ಕಾಲುವೆ ನೀರನ್ನು ಅವಲಂಬಿಸಿರುವ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕಲಕೇರಿ, ಹಾರೋಗೇರಿ, ಬಸಾಪುರ, ತಾಮ್ರಗುಂಡಿ, ಬರದೂರ, ಮೇವುಂಡಿ, ಹೈತಾಪುರ ಹಾಗೂ ಯಕ್ಲಾಸಪುರ ಗ್ರಾಮಗಳು ಸೇರಿದಂತೆ ಬಸಾಪುರ ಮತ್ತು ತಾಮ್ರಗುಂಡಿ ಕೆರೆಗಳ ವ್ಯಾಪ್ತಿಯ ರೈತರು ಮುನ್ನೆಚ್ಚರಿಕೆ ವಹಿಸಬೇಕು.
ಇದೇ ರೀತಿ ಕೊಪ್ಪಳ ತಾಲ್ಲೂಕಿನ ಕವಲೂರು, ಅಳವಂಡಿ, ಗುಡಗೇರಿ, ಮೈನಾಹಳ್ಳಿ, ಮುರ್ಲಾಪುರ, ಗಟ್ಟಿರಡ್ಡಿಹಾಳ ಹಾಗೂ ಹಂದ್ರಾಳ ಗ್ರಾಮಗಳ ರೈತರು ಸಹ ಈ ಕಾಲುವೆ ನೀರಿನ ಮೇಲೆ ಸಂಪೂರ್ಣ ಅವಲಂಬಿತರಾಗದೆ ಪರ್ಯಾಯ ನೀರಾವರಿ ವ್ಯವಸ್ಥೆ ಮಾಡಿಕೊಂಡು ಬೆಳೆ ಯೋಜನೆ ರೂಪಿಸಿಕೊಳ್ಳುವಂತೆ ಈ ಮೂಲಕ ಮನವಿ ಮಾಡಲಾಗಿದೆ. ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ನೀರಾವರಿ ಇಲಾಖೆಯೊಂದಿಗೆ ಸಹಕರಿಸುವಂತೆ ಮುಂಡರಗಿಯಲ್ಲಿನ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
