ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ2026ರ ವೇಳಾಪಟ್ಟಿ ಪ್ರಕಟ: ಡಾ. ಸುರೇಶ ಬಿ ಇಟ್ನಾಳ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು




Special Comprehensive Revision of Voter Lists 2026 Schedule Announced: Dr. Suresh B Itnal

ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

ಜಾಹೀರಾತು


ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ
2026ರ ವೇಳಾಪಟ್ಟಿ ಪ್ರಕಟ: ಡಾ. ಸುರೇಶ ಬಿ ಇಟ್ನಾಳ


ಕೊಪ್ಪಳ ಮೇ 27 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗವು 2026ರ ಮೇ 14ರಂದು ಹೊರಡಿಸಿದ ಪ್ರಕಟಣೆಯನ್ವಯ ಅರ್ಹತಾ ದಿನಾಂಕ 01.10.2026ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ 2026ರ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ. ಇಟ್ನಾಳ ಅವರು ಹೇಳಿದರು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೇ 27ರಂದು ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ 1.10.2026ನ್ನು ಅರ್ಹತಾ ದಿನಾಂಕ ಎಂದು ನಿಗದಿಪಡಿಸಲಾಗಿದೆ. 2026ರ ಜೂನ್ 20 ರಿಂದ ಜೂನ್ 29 ರವರೆಗೆ ಪರಿಷ್ಕರಣೆಯ ಸಿದ್ಧತೆ, ತರಬೇತಿ ಮತ್ತು ಮುದ್ರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೂನ್ 30 ರಿಂದ ಜುಲೈ 29ರವರೆಗೆ ಬಿ.ಎಲ್.ಓ.ಗಳಿಂದ ಮನೆ ಮನೆ ಭೇಟಿ ನಡೆಯುತ್ತದೆ. ಜುಲೈ 29ರೊಳಗೆ ಮತಗಟ್ಟೆಗಳ ರ‍್ಯಾಷನಲೈಜೆಷನ್ ನಡೆಯಲಿದೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ. ಆಗಸ್ಟ್ 5 ರಿಂದ ಸೆಪ್ಟೆಂಬರ್ 4ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಆಗಸ್ಟ್ 5 ರಿಂದ ಅಕ್ಟೋಬರ್ 3 ರವರೆಗೆ ನೊಟೀಸ್ ಅವಧಿ, ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. 2026ರ ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
*ಬಿಎಲ್‌ಎ ನೇಮಿಸಲು ಸೂಚನೆ:* ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿನ ಒಟ್ಟು 11,92,589 ಮತದಾರ ಪೈಕಿ ಈಗಾಗಲೇ ಶೇ.94.98ರಷ್ಟು ಮ್ಯಾಪಿಂಗ್ ಕಾರ್ಯ ನಡೆದಿರುತ್ತದೆ. ಉಳಿದ 59,853 ಮತದಾರರಿಗೆ ಮ್ಯಾಪಿಂಗ್ ಕಾರ್ಯ ಬಾಕಿ ಇದ್ದು, ಅರ್ಹ ಎಲ್ಲ ಮತದಾರರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕಿದೆ. ಕೊಪ್ಪಳ ಜಿಲ್ಲೆಯಲ್ಲಿನ 1315 ಮತಗಟ್ಟೆಗಳಿಗೆ ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಬಿಎಲ್‌ಎಗಳನ್ನು ನೇಮಿಸಬೇಕು. ಇದುವರೆಗೆ ಬಿಎಲ್.ಎ.ಗಳನ್ನು ನೇಮಕ ಮಾಡದೇ ಇರುವ ರಾಜಕೀಯ ಪಕ್ಷಗಳು ಕೂಡಲೇ ಬಿಎಲ್‌ಎಗಳನ್ನು ನೇಮಕ ಮಾಡಲು ಕ್ರಮ ವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಅವರು ಮಾತನಾಡಿ, ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ಜನರಿಗೆ ಏನಾದರು ಗೊಂದಲಗಳಿದ್ದಲ್ಲಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಕೊಪ್ಪಳ ಜಿಲ್ಲೆಯ 152 ಗ್ರಾಮ ಪಂಚಾಯತಗಳಲ್ಲಿ ಜೊತೆಗೆ ಪಟ್ಟಣ ಮತ್ತು ನಗರ ಪ್ರದೇಶಗಳ ಪ್ರತಿ ವಾರ್ಡನಲ್ಲಿ ವೋಟರ್ ಫೆಸಿಲಿಟೇಷನ್ ಸೆಂಟರ್ ತೆರೆದು ಅಲ್ಲಿ ಆಸನಗಳ, ಕುಡಿಯುವ ನೀರು, ಇಂಟರನೆಟ್, ಕಂಪ್ಯೂಟರ್ ವ್ಯವಸ್ಥೆ ಮಾಡಲಾಗುತ್ತದೆ. ಹೋರ್ಡಿಂಗ್ಸ್, ಪೋಸ್ಟರ್, ಕರಪತ್ರ ಮತ್ತು ಜಿಂಗಲ್ಸ್ ಮೂಲಕ ಜನತೆಗೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್ಸ್ ಅಳವಡಿಸಿ ಮತ್ತು ಸಹಕಾರಿ ಸಂಘಗಳು ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರಚಾರ ನಡೆಸಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಗೆ ಸಲಹೆ ಮಾಡಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಅಮರೇಗೌಡ ಪಾಟೀಲ್ ಬಯ್ಯಾಪೂರ, ನವೀನ್ ಗುಳಗಣ್ಣನವರ, ಕೃಷ್ಣ ಇಟ್ಟಂಗಿ, ಮಂಜುನಾಥ ಸೊರಟೂರ, ರಾಜು ಬಾಕ್ಳೆ, ಕಳಕನಗೌಡ, ಶರಣು ಶೆಟ್ಟರ್, ಸೋಮನಗೌಡ, ರಮೇಶ ಡಂಬ್ರಳ್ಳಿ, ಮೌನೇಶ್ ಕಿನ್ನಾಳ, ಶಿವಕುಮಾರ್ ಇ., ರಮೇಶ ಎಂ. ಹಾಗೂ ಮತ್ತಿತರರು ಮತ್ತು ಜಿಲ್ಲಾ ಚುನಾವಣಾ ಶಾಖೆಯ ಶಿರಸ್ತೇದಾರರಾದ ನಾಗರಾಜ್ ಸೇರಿದಂತೆ ಚುನಾವಣಾ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Total Views: 0
Share This Article