Increase income by adding value to agricultural products – MP K. Rajashekar Hitnal

ಕೊಪ್ಪಳ ಸೆಪ್ಟೆಂಬರ್ 18 (ಕರ್ನಾಟಕ ವಾರ್ತೆ): ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯಡಿ ಸೌಲಭ್ಯ ಪಡೆದು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.
ಅವರು ಗುರುವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲಾ ಪಂಚಾಯತ್ ಕೊಪ್ಪಳ, ಕೆಪೆಕ್ ಲಿಮಿಟೆಡ್, ಬೆಂಗಳೂರು. ಆತ್ಮ ಯೋಜನೆ, ಕೃಷಿ ಇಲಾಖೆ, ಕೊಪ್ಪಳ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ, ಕೊಪ್ಪಳ ಇವರ ಜಂಟಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ದೇಶದ ಬೆನ್ನೆಲು ಎಂದು ಕರೆಯುತ್ತೇವೆ. ರೈತರು ಬೆಳೆದ ಬೆಳೆಗಳಿಗೆ ಕಡಿಮೆ ಆದಾಯ ಸಿಗುತ್ತಿದೆ. ರೈತರು ಮಾರಾಟ ಮಾಡುವ ಬೆಳೆಗಳನ್ನು ಕಂಪನಿಯವರು ಬ್ರ್ಯಾಡಿಂಗ್ ಮಾಡಿ ರೈತರಿಗಿಂತ ಹೆಚ್ಚು ಲಾಭ ಪಡೆದುಕೊಳ್ಳುತ್ತಿದ್ದಾರೆ. ರೈತರು ಕಷ್ಟಪಟ್ಟು ಬೆಳೆಯುವ ಬೆಳೆಗಳನ್ನು ಬ್ರ್ಯಾಡಿಂಗ್ ಮಾಡಿ ಮಾರಾಟ ಮಾಡುವ ಮೂಲಕ ನೇರವಾಗಿ ನೀವೆ ಲಾಭ ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಪಿಎಂಎಫ್‌ಎಂಇ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತರಿಗೆ ರೂ. 30 ಲಕ್ಷದವರೆಗೆ ಸಾಲ ಸೌಲಭ್ಯದೊಂದಿಗೆ ರೂ. 15 ಲಕ್ಷದವರೆಗೆ ಸಹಾಯಧನವು ಸಿಗಲಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಬೆಳೆಗಳ ಮಾಲ್ಯವರ್ಧನೆ ಮಾಡಿ ಹೆಚ್ಚು ಲಾಭ ಪಡೆದುಕೊಳ್ಳಬೇಕು ಎಂದರು.
ಪಿಎಂಎಫ್‌ಎಂಇ ಯೋಜನೆಯಡಿ ಅರ್ಹ ರೈತರಿಗೆ ಸಾಲ ಮಂಜೂರು ಮಾಡಲು ಲೀಡ್ ಬ್ಯಾಂಕ್ ಅಧಿಕಾರಿಗಳು ತ್ವರಿತವಾಗಿ ಕ್ರಮ ವಹಿಸಬೇಕು. ಯೋಜನೆಯ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಲು ಕೃಷಿ ಮತ್ತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪಿಎಂಎಫ್‌ಎಂಇ ಯೋಜನೆಯಡಿ ರೈತರು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರಾರಂಭಿಸಿ, ಇದರಿಂದ ಇತರರಿಗೆ ಉದ್ಯೋಗ ನೀಡಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, ನಮ್ಮದು ಕೃಷಿ ಪ್ರಧಾನ ರಾಷ್ಟçವಾಗಿದೆ. ರೈತರ ಬೆಳೆಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ರೈತರು ಕಿರು ಆಹಾರ ಸಂಸ್ಕರಣೆ ಮಾಡಿ, ಅದಕ್ಕೆ ಮೌಲ್ಯವರ್ಧನೆ ಬರುವಂತೆ ಮಾರಾಟ ಮಾಡಿದರೆ ಬೆಲೆ ಹೆಚ್ಚು ಸಿಗುತ್ತದೆ. ಮಾರುಕಟ್ಟೆ ಸೌಲಭ್ಯ, ಬ್ರಾö್ಯಡಿಂಗ್ ಮಾಡಿದ ಉತ್ಪನ್ನಗಳ ಬೆಲೆ ನೈಸರ್ಗಿಕವಾಗಿ ಹೆಚ್ಚಾಗುತ್ತದೆ. ಪಿಎಂಎಫ್‌ಎಂಇ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿರುವ ಸ್ವ ಸಾಹಯ ಸಂಘಗಳನ್ನು ಈ ಯೋಜನೆಯಡಿ ತೊಡಗಿಸಿಕೊಳ್ಳಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಮತ್ತು ಕೃಷಿಗೆ ಪೂರಕವಾಗಿರುವಂತಹ ಅವಕಾಶಗಳಿವೆ. ನಮ್ಮ ಜಿಲ್ಲೆಯಲ್ಲಿ ಸುಮಾರು 4.5 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಮಹಾರಾಷ್ಟçದ ಸಾವಂತವಾಡಿ, ರತ್ನಾಗಿರಿ ಜಿಲ್ಲೆಯ ಭಾಗಗಳಲ್ಲಿ ಮಾವಿನ ಹಣ್ಣಿನಿಂದ ಹಲವಾರು ಉತ್ಪನ್ನಗಳನ್ನು ತಯಾರಿಸುತ್ತಾರೆ. ಅದೇ ರೀತಿ ಕೋಲಾರದಲ್ಲಿಯೂ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಬೆಳೆಯುವ ತೋಟಗಾರಿಕೆ ಬೆಳೆಗಳು ಹಾಗೂ ಸಿರಿಧಾನ್ಯಗಳನ್ನು ಮೌಲ್ಯವರ್ಧನೆ, ಬ್ರ್ಯಾಡಿಂಗ್ ಮಾಡಿ ಮಾರುಕಟ್ಟೆಗೆ ತರುವುದಕ್ಕೂ ಸಾಕಷ್ಟು ಅವಕಾಶಗಳಿವೆ. ಇದುವರೆಗೆ ಜಿಲ್ಲೆಯಲ್ಲಿ ಸುಮಾರು 178 ಫಲಾನುಭವಿಗಳು ಪಿಎಂಎಫ್‌ಎಂಇ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ 300 ಜನರಿಗೆ ಈ ಯೋಜನೆಯನ್ನು ವಿಸ್ತರಣೆ ಮಾಡಬೇಕು. ನಾನು ಈ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿ ಸಿಇಓ ಆಗಿದ್ದಾಗ ಒಂದು ಬ್ರ್ಯಾಡಿಂಗ್ ಎಜೆನ್ಸಿಯನ್ನು ಕರೆಸಿ ಬ್ರ್ಯಾಡಿಂಗ್ ಮತ್ತು ಮಾರ್ಕೇಟಿಂಗ್ ಬಗ್ಗೆ ತರಬೇತಿಯನ್ನು ನಡೆಸಲಾಗಿತ್ತು. ಇಂತಹ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯಲ್ಲಿ ಆಯೋಜಿಸಬೇಕು. ನಮ್ಮಲ್ಲಿ ಬೆಳೆಯುವ ಉತ್ಪನ್ನಗಳನ್ನು `ಓಕಲ್ ಫಾರ್ ಲೋಕಲ್’ ಕಾರ್ಯಕ್ರಮದಡಿ ಅಂಗನವಾಡಿ ಮತ್ತು ಹಾಸ್ಟೆಲ್‌ಗಳಿಗೆ ಹೇಗೆ ಬಳಕೆ ಮಾಡಿಕೊಳ್ಳಬೇಕೆಂಬ ವಿಚಾರವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಟಿ.ಎಸ್ ರುದ್ರೇಶಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಿಎಂಎಫ್‌ಎಂಇ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ. 35 ಮತ್ತು ರಾಜ್ಯ ಸರ್ಕಾರದಿಂದ ಶೇ. 15 ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ 178 ಫಲಾನುಭವಿಗಳು ಬೇರೆ ಬೇರೆ ಯುನಿಟ್‌ಗಳನ್ನು ಮಾಡಿ, ಯಶಸ್ವಿ ಉದ್ದಿಮೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರವು ವಿಶೇಷವಾಗಿ ಆಹಾರ ಸಂಸ್ಕರಣೆಗೆ ಹೆಚ್ಚು ಒತ್ತು ನೀಡುತ್ತಿದೆ. ರೈತರು ಬೆಳೆಯುವುದು ಅಷ್ಟೇ ಅಲ್ಲದೇ ಅವರಿಗೆ ಕಟಾವು ತಂತ್ರಜ್ಞಾನ ಮತ್ತು ಕಟಾವಿನ ನಂತರದ ತಂತ್ರಜ್ಞಾನಗಳನ್ನು ಒದಗಿಸಬೇಕು. ರೈತೋದ್ಯಮೆ ಮಾಡಬೇಕು ಎಂಬ ಸರ್ಕಾರದ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಬೇಳೆಕಾಳು, ಎಣ್ಣೆಕಾಳುಗಳಿಗೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಪಿಎಂಎಫ್‌ಎಂಇ ಯೋಜನೆಯಡಿ ಸಾಕಷ್ಟು ಅವಕಾಶಗಳಿವೆ ಎಂದರು.
ಕೆಪೆಕ್ ಸಂಸ್ಥೆಯ ಎಂಎಫ್‌ಎಂಇ ಯೋಜನೆಯ ತಂಡದ ನಾಯಕ ಅರವಿಂದ ಕೆ. ಅವರು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪಿಎಂಎಫ್‌ಎಂಇ ಯೋಜನೆಯಡಿ ಸಾಲ ಮಂಜೂರಾತಿ ಪ್ರಮಾಣ ಪತ್ರ ವಿತರಣೆಯನ್ನು ಫಲಾನುಭವಿಗಳಿಗೆ ಸಾಂಕೇತಿಕವಾವಿ ವಿತರಣೆ ಮಾಡಲಾಯಿತು. ಎಂಎಫ್‌ಎಂಇ ಯೋಜನೆಯಡಿ ಯಶಸ್ವಿ ಉದ್ದಿಮೆದಾರರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಮತ್ತು ಎಂಎಫ್‌ಎಂಇ ಯೋಜನೆಯ ಮಾಹಿತಿ ಒಳಗೊಂಡ ಕರಪತ್ರ ಹಾಗೂ ಕಿರು ಆಹಾರ ಉತ್ಪನ್ನಗಳ ಬ್ರ್ಯಾಡಿಂಗ್ ಮಾದರಿಗಳನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಶ್ರೀನಿವಾಸ ಗುಪ್ತಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರೆಡ್ಡಿ ಶ್ರೀನಿವಾಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಕೃಷಿ ಇಲಾಖೆ ಎಲ್.ಸಿದ್ದೇಶ್ವರ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿ ರಾಘವೇಂದ್ರ ಎಲಿಗಾರ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣದ ಕೇಂದ್ರದ ಮುಖ್ಯಸ್ಥರು ಮತ್ತು ವಿಜ್ಞಾನಿ ಎಂ.ವಿ ರವಿ, ಲೀಡ್ ಬ್ಯಾಂಕ್ ಮ್ಯಾನೆಜರ್ ಮಾರುತಿ, ಕೃಷಿಕ ಸಮಾಜದ ವಿರೂಪಣ್ಣ ನವೋದಯ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ರೈತರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಕೃಷಿ ಉತ್ಪನ್ನ ಪ್ರದರ್ಶನ ಮಾರಾಟ ಮಳಿಗೆಗಳಿಗೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಶ್ರೀನಿವಾಸ ಗುಪ್ತಾ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ಮಾಡಿ, ವಿವಿಧ ಸ್ಥಳೀಯ ಉತ್ಪನ್ನಗಳ ಬ್ರ್ಯಾಡಿಂಗ್ ಮಾದರಿಗಳನ್ನು ವೀಕ್ಷಣೆ ಮಾಡಿದರು.