Krishna’s body is draining into the dark summer

ಸಚೀನ ಆರ್ ಜಾಧವ ಸಾವಳಗಿ: ಮಳೆಗಾಲದಲ್ಲಿ ನೆರೆ, ಬೇಸಿಗೆಯಲ್ಲಿ ಬರ ಪರಿಸ್ಥಿತಿ ಉಂಟಾಗಿ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳ ಜನಜೀನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹ ಉಂಟಾಗಿ ಬೆಳೆಹಾನಿ, ಮನೆಹಾನಿ, ಜೀವಹಾನಿ ಸಂಭವಿಸುತ್ತವೆ. ಬೇಸಿಗೆ ಪ್ರಾರಂಭವಾದಂತೆ ಕೃಷ್ಣಾ ನದಿಯಲ್ಲಿನ ನೀರು ಬತ್ತಿ ಹೋಗಿ ಬರ ಆವರಿಸಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತಾಗುತ್ತದೆ. ಅಂತರ್ಜಲಮಟ್ಟ ಕುಸಿತದಿಂದ ನದಿ ತೀರದ ಗ್ರಾಮಗಳಲ್ಲಿ 800 ರಿಂದ 1000 ಅಡಿ ಕೊಳವೆಬಾವಿ ಕೊರೆಸಿದರೂ ಬೆಳೆಗಳಿಗೆ ಸಾಕಾಗುವಷ್ಟು ನೀರು ಸಿಗುವುದಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಲೋಡ್ ಶೆಡ್ಡಿಂಗ್‌ನಿಂದ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಬೆಳೆದು ನಿಂತ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವ ಸ್ಥಿತಿ ಎದುರಾಗುತ್ತದೆ. ಪ್ರತಿವರ್ಷ ಇಲ್ಲಿನ ರೈತರಿಗೆ ಈ ಸಮಸ್ಯೆ ತಪ್ಪಿದ್ದಲ್ಲ. ಅದಕ್ಕಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಪ್ರಯತ್ನ ಪಡಬೇಕಿದೆ.
ಚಿಕ್ಕಪಡಸಲಗಿ ಬ್ಯಾರೇಜ್ ಇದ್ದರೂ ತಪ್ಪದ ಬವಣೆ: 1989ರಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ರೈತರೇ ನಿರ್ಮಿಸಿದ ಚಿಕ್ಕಪಡಸಲಗಿ ಬ್ಯಾರೇಜ್ (ಶ್ರಮಬಿಂದು ಸಾಗರ)ಗೆ ಗೇಟ್ ಅಳವಡಿಸಿ ನೀರು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಲಾಗಿತ್ತು. 2013ರಲ್ಲಿ ದಿ.ಸಿದ್ದು ನ್ಯಾಮಗೌಡರ ಅವಧಿಯಲ್ಲಿ ಪಂಪ್‌ಸೆಟ್ ಅಳವಡಿಸಿ ಬ್ಯಾರೇಜ್‌ನ ಮುಂಭಾಗದ ನೀರನ್ನು ಎತ್ತಿ, ಬ್ಯಾರೇಜ್ ತುಂಬಿಸಿಕೊಳ್ಳಲಾಗುತ್ತಿತ್ತು. ಇದರಿಂದ ಕೆಲ ದಿನಗಳ ಕಾಲ ನೀರಿನ ಸಮಸ್ಯೆ ಆಗುತ್ತಿರಲಿಲ್ಲ. ಗಲಗಲಿ ಹತ್ತಿರ ನಿರ್ಮಿಸಲಾದ ಬ್ಯಾರೇಜ್ ಚಿಕ್ಕಪಡಸಲಗಿ ಬ್ಯಾರೇಜ್‌ಗಿಂತಲೂ ಎತ್ತರವಾಗಿರುವುದರಿಂದ ಅಲ್ಲಿಯ ನೀರು ಚಿಕ್ಕಪಡಸಲಗಿ ಬ್ಯಾರೇಜ್‌ವರೆಗೆ ಹಿಮ್ಮುಖವಾಗಿ ಹರಿದು ಬರುತ್ತದೆ. ಆದರೆ ಹಿರೇಪಡಸಲಗಿ, ಟಕ್ಕಳಕಿ, ಟಕ್ಕೊಡ, ಜಂಬಗಿ, ತುಬಚಿ, ಶೂರ್ಪಾಲಿಯಿಂದ ಹಿಪ್ಪರಗಿವರೆಗಿನ ಗ್ರಾಮಗಳ ರೈತರಿಗೆ ತಲುಪುವುದಿಲ್ಲ. ಇದರಿಂದ ರೈತರ ಪರದಾಟ ತಪ್ಪಿಲ್ಲ. ಸರ್ಕಾರ ತಜ್ಞರಿಂದ ವೈಜ್ಞಾನಿಕ ವರದಿ ಪಡೆದು ಯೋಜನೆ ಅನುಷ್ಠಾನಗೊಳಿಸಬೇಕು. ಬೇಸಿಗೆಯಲ್ಲೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.
ಪೂರ್ಣವಾಗದ ಕೃಷ್ಣಾ ಮೇಲ್ದಂಡೆ ಯೋಜನೆ: ಈ ಭಾಗದ ರೈತರಿಗೆ ವರದಾನವಾಗಬೇಕಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ ಸರ್ಕಾರದ ಇಚ್ಛಾಶಕ್ತಿ, ಅನುದಾನ ಕೊರತೆಯಿಂದ ದಶಕಗಳು ಕಳೆದರೂ ತನ್ನ ಪಾಲಿನ ನೀರು ಬಳಸಿಕೊಳ್ಳಲಾಗದೇ ರೈತರ ಸ್ಥಿತಿ ಅತಂತ್ರವಾಗಿದೆ. ಆಲಮಟ್ಟಿ ಜಲಾಶಯದಲ್ಲಿ 524 ಮೀ.ನೀರು ಸಂಗ್ರಹಿಸಿದರೆ ರಬಕವಿ, ಬನಹಟ್ಟಿ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳಿಗೆ ಪರಿಹಾರ ಜೊತೆಗೆ ಮುಳುಗಡೆ ಪ್ರದೇಶಗಳಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಇದಕ್ಕೆ ಸಾವಿರಾರು ಕೋಟಿ ಅನುದಾನ ಬೇಕು. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ ಯುಕೆಪಿಗೆ ಇಷ್ಟೊಂದು ಪ್ರಮಾಣದ ಅನುದಾನ ನೀಡುವುದು ಕನಸಿನ ಮಾತು ಎನ್ನುತ್ತಾರೆ ಪರಿಣತರು.
ಬಜೆಟ್‌ನತ್ತ ರೈತರ ಚಿತ್ತ: ಕೃಷ್ಣಾ ಮೇಲ್ದಂಡೆ ಯೋಜನೆಯ ಹೋರಾಟಕ್ಕೆ ಸೂಕ್ತವಾಗಿದೆ. ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಮಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಹೋರಾಟ ನಡೆದಿತ್ತು. ಪಕ್ಷಾತೀತವಾಗಿ ನಡೆದ ಹೋರಾಟದಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದ್ದರು. ಆದರೆ, ಫಲಿತಾಂಶ ಮಾತ್ರ ಶೂನ್ಯ. ಕೇವಲ ಭರವಸೆಗಳಿಗೆ ಸಾಕ್ಷಿಯಾದ ಹೋರಾಟ ತನ್ನ ನಿರೀಕ್ಷೆ ತಲುಪುವಲ್ಲಿ ವಿಫಲವಾಯಿತು. ಮುಖ್ಯಮಂತ್ರಿಗಳು ಹೋರಾಟದ ಸ್ಥಳಕ್ಕೆ ಬರುತ್ತಾರೆಂಬ ನಿರೀಕ್ಷೆ ಹುಸಿಯಾಯಿತು. ಹೋರಾಟಗಾರರನ್ನು ಬೆಳಗಾವಿಗೆ ಕರೆಯಿಸಿ ಭರವಸೆ ನೀಡಿ ಕಳಿಸಲಾಯಿತು. ಮಾರ್ಚ್ ತಿಂಗಳಲ್ಲಿ ನಡೆಯುವ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಆಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ. \Bಬೇಸಿಗೆಯಲ್ಲಿ ನದಿ ತೀರದ ಗ್ರಾಮಗಳಲ್ಲಿ ಬರಗಾಲ ಪರಿಸ್ಥಿತಿ ಎದುರಾಗದಂತೆ ಸರ್ಕಾರ ಗಮನ ಹರಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನವಾದ ಬಳಿಕ ನದಿಯಲ್ಲಿ ನೀರು ಹರಿಯುವ ಸಮಯದಲ್ಲಿ ಮಾತ್ರ ಕೆರೆಗೆ ನೀರನ್ನು ಸಂಗ್ರಹಿಸಿಕೊಳ್ಳಬೇಕು.
1) ಏತ ನೀರಾವರಿ ಯೋಜನೆಗಳನ್ನು ನಿಗದಿಪಡಿಸಿದ ಸಮಯದವರೆಗೆ ಮಾತ್ರ ಚಾಲ್ತಿಯಲ್ಲಿಟ್ಟು ಬೇಸಿಗೆಯಲ್ಲಿ ನದಿನೀರು ಬರಿದಾಗದಂತೆ ಸೂಕ್ತ ಕ್ರಮ ಜರುಗಿಸಬೇಕು.
ಸಿದ್ದುಗೌಡ ಪಾಟೀಲ,
ರೈತ ಹೋರಾಟಗಾರರು ಹಿರೇಪಡಸಲಗಿ
2): ಕೃಷ್ಣಾ ನದಿಯಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮಾರ್ಚ್‌ವರೆಗೆ ನೀರಿನ ಸಮಸ್ಯೆ ಆಗುವುದಿಲ್ಲ. ಬೇಸಿಗೆಯಲ್ಲಿ ನದಿಯಲ್ಲಿನ ನೀರು ಜನ, ಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಕ್ರಮ ಜರುಗಿಸಲಾಗುವುದು. ಬೇಸಿಗೆಯಲ್ಲಿ ಬೆಳೆಗಳಿಗೆ ಸಾಧ್ಯವಾದಷ್ಟು ಮಾತ್ರ ನೀರನ್ನು ಬಳಸಲು ವಿದ್ಯುತ್ ಪೂರೈಸಲಾಗುತ್ತದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನದಿಯಲ್ಲಿ ನೀರು ಉಳಿಸಿಕೊಳ್ಳಲು ಕ್ರಮ ಜರುಗಿಸಲಾಗುವುದು. ಬರನಿರ್ವಹಣೆ ಸಭೆಯ ನಂತರವಷ್ಟೇ ಮುಂದೆ ಕೈಗೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ದೊರೆಯಲಿದೆ.
ಸದಾಶಿವ ಮಕ್ಕೊಜಿ, ತಹಸೀಲ್ದಾರ್ ಜಮಖಂಡಿ