Breaking News

ಕನ್ನಡ ಭಾಷೆಯು ನಿಂತ ನೀರಾಗದೆ, ಹರಿಯುವ ನದಿಯಾಗಬೇಕು- ಫಾದರ್ ಎಂ ರಾಯಪ್ಪ

Kannada language should not be a stagnant water but a flowing river – Father M Rayappa

ಜಾಹೀರಾತು
ಜಾಹೀರಾತು

ಕೊಳ್ಳೇಗಾಲ, ನ.೬:ಕನ್ನಡ ಭಾಷೆಯು ನಿಂತ ನೀರಾಗದೆ, ಹರಿಯುವ ನದಿಯಾಗಬೇಕು ಎಂದು ಸಂತ ಅಸ್ಸಿಸ್ಸಿ ಚರ್ಚಿನ ಫಾದರ್ ಎಂ ರಾಯಪ್ಪ ತಿಳಿಸಿದರು.
ಅವರು ಕೊಳ್ಳೇಗಾಲ ಪಟ್ಟಣದ ಸಂತ ಅಸ್ಸಿಸ್ಸಿ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಸಮಾರಂಭವನ್ನು ಕನ್ನಡತಾಯಿಯ ಭಾವಚಿತ್ರಕ್ಕೆ ಮಾಲಾರ್ಪನೆ ಮಾಡಿ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಯು ಹರಿಯುವ ನದಿಯಂತಾಗಬೇಕು. ನದಿ ಹರಿದಂತೆಲ್ಲಾ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿಸುತ್ತದೆ. ಹಾಗೆಯೇ ಕನ್ನಡ ಭಾಷೆಯು ಸಹ. ಅದು ಹರಿದಂತೆಲ್ಲಾ ಕನ್ನಡದ ಕಂಪನ್ನು ಬೀರುತ್ತದೆ ಮತ್ತು ಹರಡುತ್ತದೆ. ಕನ್ನಡ ನಾಡು, ನುಡಿ, ಭೂಮಿ, ಹೊನ್ನು, ಸಂಸ್ಕೃತಿ ಎಲ್ಲವನ್ನೂ ಅನುಭವಿಸುವ ನಾವು ನಿಜವಾದ ಕನ್ನಡಿಗರು. ಕನ್ನಡದ ಮಕ್ಕಳು. ನಾವೆಲ್ಲರೂ ಅದಕ್ಕೆ ಚಿರ ಋಣಿಯಾಗಿರಬೇಕು. ನಮಗೆ ಮಾತನಾಡಲು ಹಲವಾರು ಭಾಷೆ ಇರಬಹುದು. ಆಚರಿಸಲು ಹಲವಾರು ಸಂಸ್ಕೃತಿಗಳಿಬಹುದು. ನಡೆ-ನುಡಿಗಳು, ಆಚಾರ-ವಿಚಾರಗಳೇನೇ ಇದ್ದರೂ, ನಮ್ಮೆಲ್ಲರ ಮನದ ನುಡಿ ಕನ್ನಡ ಮಾತ್ರವಾಗಿರಬೇಕು. ಆ ಕನ್ನಡ ನುಡಿ ನಮ್ಮನ್ನೆಲ್ಲಾ ಇಷ್ಟೊಂದು ಸಂವೃದ್ದಿಯಾಗಿ ಬೆಳೆಸುತ್ತಾ ಇದೆ. ಇದನ್ನು ಮರೆಯಬಾರದು. ನಮ್ಮ ಕನ್ನಡ ನುಡಿ ಸುಮಧುರ. ನಮ್ಮ ಕನ್ನಡ ನಾಡಿನಲ್ಲಿರುವ ಸಂಪತ್ತುಗಳು, ನದಿ-ವನ-ಗಿರಿಗಳೆಲ್ಲವೂ ಸುಂದರ. ಒಟ್ಟಾರೆ ಕನ್ನಡ ನಾಡೇ ಬಲು ಸುಂದರ ತಾಣ. ಈ ಸಂದರ್ಭದಲ್ಲಿ ನಾವು ಕನ್ನಡ ನಾಡನ್ನು ಕಟ್ಟಿ ಬೆಳೆಸಿದಂತಹವರನ್ನು ಬಗ್ಗೆ ಮತ್ತು ನಾಡನ್ನು ಉಳಿಸಿ, ಬೆಳೆಸಲು ನಮ್ಮ ಪ್ರಯತ್ನಗಳೇನು ಎಂಬುದರ ಬಗ್ಗೆ ಕೂಡ ಅರಿತುಕೊಳ್ಳಬೇಕಾಗುತ್ತದೆ. ಅನೇಕ ಮಹನೀಯರು, ಕವಿ-ಸಾಹಿತಿಗಳು, ಬರಹಗಾರರಿರಬಹುದು ಎಲ್ಲರೂ ಕೂಡ ಕನ್ನಡದ ಉಳಿವಿಗಾಗಿಯೇ ವಿವಿಧ ರೀತಿಯಲ್ಲಿ ಕನ್ನಡವನ್ನು, ಕನ್ನಡ ನಾಡನ್ನು ಹಾಡಿ ಹೊಗಳಿದ್ದಾರೆ. ಎಷ್ಟು ಹೊಗಳಿದರೂ ಕೂಡ ಕನ್ನಡಕ್ಕೆ ಅದು ಸಾಕಾಗುವುದಿಲ್ಲ. ಇನ್ನೂ ಬೇಕು, ಮತ್ತಷ್ಟು ಕೇಳಬೇಕೆಂಬ ಆಸೆ ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಅನಿಸುತ್ತಿರುತ್ತದೆ. ಹಾಗಾಗಿ, ನಾವು ಚಿಕ್ಕ ವಯಸ್ಸಿನಲ್ಲಿರುವಾಗಲೇ ಕನ್ನಡದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ನಾಡು-ನುಡಿಯನ್ನು ಉಳಿಸುವ, ಬೆಳೆಸುವ ಜವಾಬ್ದಾರಿಯನ್ನು ಹೊರಬೇಕು. ಇಂದು ಪ್ರಪಂಚದಾದ್ಯಂತ ಕನ್ನಡ ಭಾಷೆಯು ಹರಡಿದೆ. ಆದರೆ, ಅದು ನಮ್ಮ ಹೃದಯದಲ್ಲಿ ಬೆಳೆಯಬೇಕಿದೆ ಅಷ್ಟೇ ಎಂದು ತಿಳಿಸಿದರು.
ಕನ್ನಡವನ್ನು ಬಳಸಬೇಕು : ಕನ್ನಡವನ್ನು ಹೆಚ್ಚು, ಹೆಚ್ಚಾಗಿ ಬಳಸಬೇಕಾದ ತುರ್ತು ಪರಿಸ್ಥಿತಿ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಅದನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬುದು ಸಹ ಬಹುಮುಖ್ಯವಾಗಿದೆ. ಕನ್ನಡ ಬೆಳೆಯಬೇಕು ಎಂದು ಸುಮ್ಮನೆ ಕುಳಿತರೆ ಅದು ಬೆಳೆಯೋಲ್ಲ, ಬದಲಿಗೆ ನಾವು ಅದನ್ನು ಪೋಷಣೆ ಮಾಡುವ ಮೂಲಕ ಬೆಳೆಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡು ಓದಬೇಕು. ಓದುವುದರಿಂದ ನಮ್ಮ ಶಬ್ದ ಭಂಡಾರ ಹೆಚ್ಚಾಗುತ್ತದೆ. ಇದು ಭಾಷೆ ಬೆಳವಣಿಗೆಯಲ್ಲಿ ಬಹಳಷ್ಟು ಸಹಕಾರಿಯಾಗಲಿದೆ ಎಂದು ನಿಸರ್ಗ ಶಾಲೆಯ ಶಿಕ್ಷಕಿ ಶಿವಮ್ಮ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ ಶಾಲೆಯ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಅವರ ಕನ್ನಡ ಜ್ಞಾನವನ್ನು ಒರೆಗೆ ಹಚ್ಚಿ, ಕನ್ನಡ ನಾಡು-ನುಡಿಯ ಬಗ್ಗೆ ಹಲವು ಮಾಹಿತಿ ತಿಳಿಸಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಎಲ್ ಇಗ್ನಾಸಿ ಮುತ್ತು, ಸುನೀತಾ, ಕಲಾವತಿ, ಚೇತನ, ಸೇಸುರಾಜು, ಜ್ಞಾನ ಪ್ರಕಾಶ, ಜ್ಞಾನ ಸೌಂದರ್ಯ, ಜಾನ್ಸಿ ವಿಕ್ಟೋರಿಯ, ಮರಿಯಾ ಸುನೀತಾ, ಶ್ರೀವಿದ್ಯಾ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.‌

About Mallikarjun

Check Also

ಬೆಳಗಾವಿ ಮಹಾತ್ಮ ಗಾಂಧೀಜಿಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದ ಶತಮಾನೋತ್ಸವಸಂದರ್ಭ ನಿಮಿತ್ತ ವಿಶೇಷ ಲೇಖನ

A special article on the occasion of the centenary of Congress convention held under the …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.