
Child protection is not the task of a single department alone; coordination among all departments is necessary: Deputy Commissioner Dr. Suresh Itnal

ಮಕ್ಕಳ ಹಕ್ಕು ವ್ಯವಸ್ಥೆಗಳ ಸಬಲೀಕರಣ, ವಿವಿಧ ಇಲಾಖೆಗಳ ಪ್ರಬಲ ಸಹಭಾಗಿತ್ವ ಮತ್ತು ಸಾರ್ವತ್ರಿಕ ಒಳಗೊಳ್ಳುವಿಕೆ: ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ
ಮಕ್ಕಳ ರಕ್ಷಣೆ ಕೇವಲ ಒಂದು ಇಲಾಖೆಯ ಕೆಲಸವಲ್ಲ, ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ
ಕೊಪ್ಪಳ, ನವೆಂಬರ್ 24 : ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅವರ ಸುರಕ್ಷತೆ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾತ್ರ ಸೀಮಿತವಾದ ಕೆಲಸವಲ್ಲ, ಬದಲಾಗಿ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಮಕ್ಕಳ ಮೇಲಿನ ದೌರ್ಜನ್ಯ, ಹಲ್ಲೆ, ಕಿರುಕುಳ ಮತ್ತು ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ‘ಮಿಷನ್ ವಾತ್ಸಲ್ಯ (ಸಿ.ಆರ್.ಸಿ.ಸಿ)’ ಯೋಜನೆಯಡಿ ಆಯೋಜಿಸಲಾಗಿದ್ದ ಮಕ್ಕಳ ಹಕ್ಕು ವ್ಯವಸ್ಥೆಗಳ ಸಬಲೀಕರಣ, ವಿವಿಧ ಇಲಾಖೆಗಳ ಪ್ರಬಲ ಸಹಭಾಗಿತ್ವ ಮತ್ತು ಸಾರ್ವತ್ರಿಕ ಒಳಗೊಳ್ಳುವಿಕೆ ಕುರಿತ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಆಡಳಿತದಲ್ಲಿ ಸಮಸ್ಯೆಗಳನ್ನು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾಯಿಸುವ ಮನೋಭಾವ ಬದಲಾಗಬೇಕು. ರಸ್ತೆ, ಕಟ್ಟಡ ನಿರ್ಮಾಣದಂತಹ ಭೌತಿಕ ಕೆಲಸಗಳಿಗಿಂತ ಮಕ್ಕಳ ಸುರಕ್ಷತೆ, ಪೌಷ್ಟಿಕಾಂಶ, ಬಾಲ್ಯವಿವಾಹ ತಡೆ, ಲೈಂಗಿಕ ಹಲ್ಲೆ ದೌರ್ಜನ್ಯ, ಕಿರುಕುಳ ಹಾಗೂ ಹದಿಹರೆಯದವರ ಸಮಸ್ಯೆಗಳಂತಹ ಸೂಕ್ಷ್ಮ ವಿಚಾರಗಳಿಗೆ ಹೆಚ್ಚಿನ ಶ್ರಮ ಮತ್ತು ಸಹಭಾಗಿತ್ವ ಅಗತ್ಯವಿದೆ ಎಂದರು.
ಒಡಿಶಾದ ಗಂಜಾಂ ಮತ್ತು ಗಜಪತಿ ಜಿಲ್ಲೆಗಳು ‘ಬಾಲ್ಯವಿವಾಹ ಮುಕ್ತ ಜಿಲ್ಲೆ’ಗಳಾಗಿ ಘೋಷಣೆಯಾಗಿದ್ದು, ಕೊಪ್ಪಳ ಜಿಲ್ಲೆಯಲ್ಲೂ ಬಾಲ್ಯವಿವಾಹ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸಲು ಅಧಿಕಾರಿಗಳು ಶ್ರಮಿಸಬೇಕು. ಸಾರ್ವಜನಿಕ ಸ್ಥಳಗಳು ಹಾಗೂ ಸಾರಿಗೆ ವಾಹನಗಳಲ್ಲಿ, ಮಕ್ಕಳಿಗೆ ಕಿರುಕುಳ ನೀಡುವ ಪುಂಡರ ವಿರುದ್ಧ ಪೊಲೀಸ್ ಇಲಾಖೆಗೆ ಅಥವಾ ‘ಅಕ್ಕ ಪಡೆ’ ತಿಳಿಸಿ, ತನ್ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕೆ ಸಂಸ್ಥೆ, ಆಸ್ಪತ್ರೆಗಳ ಸುತ್ತಮುತ್ತ ಅಕ್ರಮ ಮದ್ಯ ಮಾರಾಟವಾಗದಂತೆ ಅಬಕಾರಿ ಇಲಾಖೆ ನಿಯಂತ್ರಣ ಹೇರಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಹೇಮಂತ ಕುಮಾರ ಅವರು ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಶಿಕ್ಷಕರು ಅದನ್ನು ಮುಚ್ಚಿಹಾಕದೆ ತಕ್ಷಣ ಪೊಲೀಸರಿಗೆ ದೂರು ನೀಡಬೇಕು. ವಿಷಯ ತಿಳಿದೂ ನಿರ್ಲಕ್ಷ್ಯ ವಹಿಸಿದರೆ ಪೋಕ್ಸೋ ಕಾಯ್ದೆಯಡಿ ಶಿಕ್ಷಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಶಾಲೆಗೆ ದಿಢೀರ್ ಗೈರಾಗುವ ಮಕ್ಕಳ ಬಗ್ಗೆ ನಿಗಾ ವಹಿಸಿದರೆ ಬಾಲ್ಯವಿವಾಹ, ಮಕ್ಕಳ ಮೇಲಾಗುವ ವಿವಿಧ ರೀತಿಯ ಅಪರಾಧಗಳನ್ನು ಆರಂಭದಲ್ಲೇ ತಡೆಯಬಹುದು. ಗ್ರಾಮೀಣ ಭಾಗದ ಯಾವುದೇ ಅನಧಿಕೃತ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಲ್ಲಿ ಹಾಗೂ ಪುಂಡ-ಪೋಕರಿಗಳು ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಲ್ಲಿ ಯಾರೇ ವ್ಯಕ್ತಿಗಳು ಅಥವಾ ಸಾರ್ವಜನಿಕರು ಪೊಲೀಸರಿಗೆ ಅಥವಾ 112ಗೆ ಮಾಹಿತಿ ನೀಡಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಅಮರೇಶ ಹಾವಿನ ಮಾತನಾಡಿ, ವಸತಿ ನಿಲಯಗಳಲ್ಲಿ ಮಕ್ಕಳು ಗರ್ಭಿಣಿಯಾಗುವಂತಹ ಪ್ರಕರಣಗಳು ಕಂಡುಬರುತ್ತಿದ್ದು, ತನಿಖೆಯ ಭಯದಿಂದ, ಪ್ರಚಾರ್ಯರು /ವಾರ್ಡನ್ಗಳು ಮಾಹಿತಿ ಮುಚ್ಚಿಟ್ಟರೆ ಅವರ ವಿರುದ್ಧವೂ ಕ್ರಮ ವಹಿಸಲಾಗುತ್ತದೆ. ಪೋಕ್ಸೋ ಪ್ರಕರಣಗಳಿಂದ ಹೆಣ್ಣು ಮಕ್ಕಳ ಶಿಕ್ಷಣ ಮೊಟಕುಗೊಂಡು ಅವರ ಕುಟುಂಬಗಳು ಸಹ ಸಂಕಷ್ಟಕ್ಕೆ ಒಳಗಾಗುತ್ತದೆ. ಇದಲ್ಲದೆ ಆರೋಪಿಗಳಿಗೆ 20 ರಿಂದ 30 ವರ್ಷ ಶಿಕ್ಷೆಯಾಗಿ ಅವರ ಭವಿಷ್ಯ ಹಾಳಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ, ವಿಶೇಷವಾಗಿ ಮಕ್ಕಳಲ್ಲಿ ಯುವಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದರು.
ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಹರೀಶ ಜೋಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದು 2029ಕ್ಕೆ ನೂರು ವರ್ಷ ತುಂಬಲಿದ್ದರೂ, ಬಾಲ್ಯವಿವಾಹಗಳು ಸಂಪೂರ್ಣ ನಿರ್ಮೂಲನೆ ಆಗಿಲ್ಲ. ‘ಮಕ್ಕಳ ಮಾತು’ ಅಭಿಯಾನದಲ್ಲಿ 500 ಮಕ್ಕಳು, ಪೋಷಕರ ಮದ್ಯಪಾನ, ಬಸ್ ಕೊರತೆ ಹಾಗೂ ಪುಂಡರ ಕಿರುಕುಳದ ಬಗ್ಗೆ ಅಳಲು ತೋಡಿಕೊಂಡಿದ್ದು, ಕೋವಿಡ್ ನಿಯಂತ್ರಿಸಿದ ಮಾದರಿಯಲ್ಲೇ ಎಲ್ಲಾ ಇಲಾಖೆಗಳು ಒಗ್ಗೂಡಿ ಕೊಪ್ಪಳವನ್ನು ‘ಮಕ್ಕಳ ಸುರಕ್ಷಿತ ಜಿಲ್ಲೆ’ಯನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿಗಳಾದ ಮಂಜುನಾಥ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕರಾದ ರಾಘವೇಂದ್ರ ಭಟ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಂತರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿವರವಾಗಿ ಮಾಹಿತಿ ನೀಡಿದರು. ಡಿಸಿಪಿಓ ಸೇರಿದಂತೆ ಪೊಲೀಸ್, ಶಿಕ್ಷಣ, ಆರೋಗ್ಯ, ಅಬಕಾರಿ, ಕಾರ್ಮಿಕ, ಸಾರಿಗೆ ಹಾಗೂ ಸಮಾಜ ಕಲ್ಯಾಣ ಸೇರಿದಂತೆ 32 ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


