ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಸಮಾವೇಶ ಯಶಸ್ವಿ; ರಾಜ್ಯ ಮಟ್ಟಕ್ಕೆ ಉತ್ತಮ ಪ್ರಾಜೆಕ್ಟ್‌ಗಳ ಆಯ್ಕೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Koppal District-Level National Children’s Science Congress Concludes Successfully; Top Projects Selected for State Level

ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಸಮಾವೇಶ ಯಶಸ್ವಿ; ರಾಜ್ಯ ಮಟ್ಟಕ್ಕೆ ಉತ್ತಮ ಪ್ರಾಜೆಕ್ಟ್‌ಗಳ ಆಯ್ಕೆ

ಜಾಹೀರಾತು


ಕೊಪ್ಪಳ, ನವೆಂಬರ್ 24: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಸಂಶೋಧನಾ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕೊಪ್ಪಳದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ (ನ.24) ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಸಮಾವೇಶವು ಯಶಸ್ವಿಯಾಗಿ ಜರುಗಿತು.
 ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ (ಎನ್.ಸಿ.ಎಸ್.ಸಿ) ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
 ಕಾರ್ಯಕ್ರಮವನ್ನು ಕೊಪ್ಪಳದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿಗಳಾದ ಜಿ.ಆರ್. ಬೆಣಕಲ್‌ಮಠ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿ, ವಿಜ್ಞಾನವೆಂದರೆ ಕೇವಲ ಪುಸ್ತಕಕ್ಕೆ ಸೀಮಿತವಾದ ವಿಷಯವಲ್ಲ. ನಮ್ಮ ಸುತ್ತಮುತ್ತ ನಡೆಯುವ ಪ್ರತಿಯೊಂದು ಘಟನೆಗೆ ಕಾರಣವನ್ನು ಹುಡುಕುವುದೇ ನಿಜವಾದ ವಿಜ್ಞಾನ. ಮಳೆ ಏಕೆ ಬರುತ್ತದೆ, ನದಿಗಳು ಏಕೆ ಕಲುಷಿತವಾಗುತ್ತವೆ ಮತ್ತು ಹವಾಮಾನ ಬದಲಾವಣೆಗೆ ಕಾರಣವೇನು ಎಂಬಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ವೈಜ್ಞಾನಿಕ ಚಿಂತನೆಯಾಗಿದೆ ಎಂದು ಅಭಿಪ್ರಾಯಪಟ್ಟರು.
 ಕೊಪ್ಪಳ ಜಿಲ್ಲಾ ಪಂಚಾಯಿತಿಯ ಗುರುಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಕೇವಲ ಒಂದು ವಿಜ್ಞಾನ ಪ್ರದರ್ಶನ ಅಥವಾ ಸ್ಪರ್ಧೆಯಲ್ಲ, ಬದಲಾಗಿ ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ, ಸಂಶೋಧನಾ ಆಸಕ್ತಿ ಹಾಗೂ ಹೊಸ ಆವಿಷ್ಕಾರಗಳನ್ನು ಮಾಡುವ ಸಾಮರ್ಥ್ಯವನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದರು.
 ಜಿಲ್ಲಾ ನೋಡಲ್ ಅಧಿಕಾರಿ ಉಮೇಶ್ ಇಟಗಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನೇ ಸಂಶೋಧನೆಯ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ, ತ್ಯಾಜ್ಯ ನಿರ್ವಹಣೆ, ಮಣ್ಣಿನ ಸವಕಳಿ, ಮಳೆನೀರಿನ ಸಂಗ್ರಹಣೆ ಮತ್ತು ಕೃಷಿ ಕ್ಷೇತ್ರದ ಸವಾಲುಗಳ ಕುರಿತು ಮಕ್ಕಳು ಹೆಚ್ಚಿನ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.
 ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಯಮನೂರಪ್ಪ ಕಾಯಣ್ಣನವರ ಮಾತನಾಡಿ, ನಾವು ಇಂದು ಪ್ರಕೃತಿಯನ್ನು ಹೇಗೆ ಸಂರಕ್ಷಿಸುತ್ತೇವೆಯೋ ಅದರ ಮೇಲೆ ಮುಂದಿನ ಪೀಳಿಗೆಯ ಭವಿಷ್ಯ ನಿರ್ಧಾರವಾಗುತ್ತದೆ. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನದಿಂದ ಕೊಂಡೊಯ್ದಾಗ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್‌ನ ವೀಕ್ಷಕರಾದ ಬೀರೇಶ್, ಸಂಪನ್ಮೂಲ ವ್ಯಕ್ತಿಗಳಾದ ಜಯಶ್ರೀ ಮತ್ತು ವಿ.ಎ. ಹಿರೇಮಠ್, ತೀರ್ಪುಗಾರರಾದ ಬಸವರಾಜ ವಸ್ತ್ರದ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳ ನೋಂದಾಯಿತ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಿ ಶಿಕ್ಷಕರು ಪಾಲ್ಗೊಂಡಿದ್ದರು.
*ರಾಜ್ಯ ಮಟ್ಟಕ್ಕೆ ಉತ್ತಮ ಪ್ರಾಜೆಕ್ಟ್‌ಗಳ ಆಯ್ಕೆ:* ಸ್ಪರ್ಧೆಯಲ್ಲಿ ಕಿರಿಯರ ಮತ್ತು ಹಿರಿಯರ ವಿಭಾಗದಿಂದ ಅತ್ಯುತ್ತಮ ವಿಜ್ಞಾನ ಪ್ರಾಜೆಕ್ಟ್ಗಳನ್ನು ಆಯ್ಕೆ ಮಾಡಿ ರಾಜ್ಯ ಮಟ್ಟದ ಸಮಾವೇಶಕ್ಕೆ ಕಳುಹಿಸಲಾಯಿತು.

Total Views: 0
Share This Article
Leave a Comment