
Munirabad RS Post Office 'Feature Wall' Design Competition: Applications invited
ಮುನಿರಾಬಾದ್ ಆರ್.ಎಸ್.ಅಂಚೆ ಕಚೇರಿ ‘ಫೀಚರ್ ವಾಲ್’ ವಿನ್ಯಾಸ ಸ್ಪರ್ಧೆ: ಅರ್ಜಿ ಆಹ್ವಾನ
ಕೊಪ್ಪಳ, ನವೆಂಬರ್ 24 : ಅಂಚೆ ಕಚೇರಿಗಳನ್ನು ಸ್ಥಳೀಯ ಪರಂಪರೆ, ಕಲೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯುವ ಭಾರತೀಯ ಅಂಚೆ ಇಲಾಖೆಯ ರಾಷ್ಟ್ರವ್ಯಾಪಿ ಉಪಕ್ರಮದಡಿ, ನೂತನವಾಗಿ ನಿರ್ಮಿಸಲಾದ ಮುನಿರಾಬಾದ್ ಆರ್.ಎಸ್. (ಹುಲಿಗಿ) ಅಂಚೆ ಕಚೇರಿಯ ‘ಫೀಚರ್ ವಾಲ್’ (ವಿಶೇಷ ಗೋಡೆ) ವಿನ್ಯಾಸಗೊಳಿಸಲು (ಸ್ಪರ್ಧೆಗಾಗಿ) ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
*ಯಾರು ಭಾಗವಹಿಸಬಹುದು:* ಅರ್ಜಿ ಸಲ್ಲಿಸಲು ಸ್ಥಳೀಯ ನಿವಾಸಿಗಳು ಮುನಿರಾಬಾದ್ ಆರ್.ಎಸ್. ಅಂಚೆ ಕಚೇರಿಯ ವಿತರಣಾ ವ್ಯಾಪ್ತಿಯಲ್ಲಿ ವಾಸಿಸುವ 12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಭಾರತೀಯ ನಾಗರಿಕರು ಈ ಸ್ಪಧೆಯಲ್ಲಿ ಭಾಗವಹಿಸಬಹುದು.
*ಗುಂಪು ಭಾಗವಹಿಸುವಿಕೆ ಕಡ್ಡಾಯ:* ಇದು ಸಮುದಾಯ ಆಧಾರಿತ ಚಟುವಟಿಕೆಯಾಗಿರುವುದರಿಂದ ಕನಿಷ್ಠ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರನ್ನು ಒಳಗೊಂಡ ತಂಡಗಳಿಗೆ ಮಾತ್ರ ಅವಕಾಶವಿದೆ (ಗರಿಷ್ಠ ಮಿತಿ ಇಲ್ಲ). ವೈಯಕ್ತಿಕ ಪ್ರವೇಶಗಳನ್ನು ಪರಿಗಣಿಸಲಾಗುವುದಿಲ್ಲ.
*ವಿನ್ಯಾಸ ಮತ್ತು ವಿಷಯದ ಮಾರ್ಗಸೂಚಿಗಳು:* ವಿನ್ಯಾಸವು “ಹಮಾರಿ ಕಹಾನಿ ಡಾಕ್ ಕಿ ಜುಬಾನಿ” (ನಮ್ಮ ಕಥೆ ಅಂಚೆಯ ಮಾತಿನಲ್ಲಿ) ಎಂಬ ಧ್ಯೇಯವಾಕ್ಯವನ್ನು ಪ್ರಮುಖವಾಗಿ ಪ್ರತಿಬಿಂಬಿಸಬೇಕು. ಸ್ಥಳೀಯ ಕಲೆ, ಸಂಸ್ಕೃತಿ, ಸಸ್ಯ ಮತ್ತು ಪ್ರಾಣಿಸಂಕುಲ ಅಥವಾ ಈ ಭಾಗದ ಪ್ರಮುಖ ಐತಿಹಾಸಿಕ ಘಟನೆಗಳನ್ನು ವಿನ್ಯಾಸ ಒಳಗೊಂಡಿರಬೇಕು. ಜೊತೆಗೆ ಗೋಡೆಯ ಮೇಲೆ ಬರೆಯಲು ಸ್ಥಳೀಯ ಪ್ರದೇಶಕ್ಕೆ ಸಂಬಂಧಿಸಿದ ಚಿಕ್ಕದಾದ, ಸ್ವಂತ ಸಾಹಿತ್ಯವನ್ನು (ಬರಹ) ಕಡ್ಡಾಯವಾಗಿ ನೀಡಬೇಕು. ಈ ವಿನ್ಯಾಸವು ಅಂಚೆ ಕಚೇರಿಯ ಒಳಭಾಗದ ಗಾಜಿನ ಫಲಕದ ಮೇಲೆ ಶಾಶ್ವತವಾಗಿ ಅಳವಡಿಸಲು ಸೂಕ್ತವಾಗಿರಬೇಕು.
*ಕಡ್ಡಾಯ ಮುಚ್ಚಳಿಕೆ ಪತ್ರ:* ಈ ಸ್ಪಧೆಯಲ್ಲಿ ಸಲ್ಲಿಸುವ ವಿನ್ಯಾಸ ಮತ್ತು ಸಾಹಿತ್ಯವು ತಮ್ಮದೇ ಸ್ವಂತ ಕೃತಿಯಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಕೃತಿಸ್ವಾಮ್ಯ (ಕಾಪಿರೈಟ್) ಉಲ್ಲಂಘಿಸುವುದಿಲ್ಲ ಎಂದು ದೃಢೀಕರಿಸುವ ಸಹಿ ಮಾಡಿದ ಮುಚ್ಚಳಿಕೆ ಪತ್ರವನ್ನು ಲಗತ್ತಿಸುವುದು ಕಡ್ಡಾಯವಾಗಿದೆ.
*ಆಯ್ಕೆ ಮತ್ತು ಗೌರವ:* ವೃತ್ತ ಮಟ್ಟದ ಸಮಿತಿಯು ಪ್ರವೇಶಗಳನ್ನು ಮೌಲ್ಯಮಾಪನ ಮಾಡಲಿದ್ದು, ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (ಸಿಪಿಎಂಜಿ) ಅವರು ಆಯ್ಕೆ ಮಾಡುವ ಅಂತಿಮ ವಿನ್ಯಾಸವನ್ನು ಮುನಿರಾಬಾದ್ ಆರ್.ಎಸ್. ಅಂಚೆ ಕಚೇರಿಯ ಅಧಿಕೃತ ‘ಫೀಚರ್ ವಾಲ್’ ಆಗಿ ಶಾಶ್ವತವಾಗಿ ಅಳವಡಿಸಲಾಗುವುದು.
ಆಸಕ್ತ ತಂಡಗಳು ತಮ್ಮ ವಿನ್ಯಾಸದ ಮುದ್ರಿತ ಪ್ರತಿ (ಹಾರ್ಡ್ ಕಾಪಿ), ಸಾಫ್ಟ್ ಕಾಪಿ (ಸಿಡಿ/ಪೆನ್ ಡ್ರೈವ್) ಹಾಗೂ ಸಹಿ ಮಾಡಿದ ಮುಚ್ಚಳಿಕೆ ಪತ್ರವನ್ನು ಇದೇ ನವೆಂಬರ್ 30ರ ಸಂಜೆ 5 ಗಂಟೆಯೊಳಗೆ `ಅಂಚೆ ಅಧೀಕ್ಷಕರು, ಕೊಪ್ಪಳ ವಿಭಾಗ, ಕೊಪ್ಪಳ- 583231′ ಇವರಿಗೆ ಸಲ್ಲಿಸಬೇಕು. ಸಾಫ್ಟ್ ಕಾಪಿಯನ್ನು dokoppal.ka@indiapost.gov.in ಇಮೇಲ್ ವಿಳಾಸಕ್ಕೂ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮುನಿರಾಬಾದ್ ಆರ್.ಎಸ್. (ಹುಲಿಗಿ) ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಅಥವಾ ವಿಭಾಗೀಯ ಕಚೇರಿಯ ದೂರವಾಣಿ ಸಂಖ್ಯೆ 08539-220036/ 37 ಅಥವಾ ಮೊಬೈಲ್ ಸಂಖ್ಯೆ 7411965358 ಅನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


