Massive protest by construction workers in front of the Koppal Deputy Commissioner’s office on July 7.

ಜುಲೈ 7 ರಂದು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಕಟ್ಟಡ ಕಾರ್ಮಿಕರ ಬೃಹತ್ ಪ್ರತಿಭಟನೆ
ಕೊಪ್ಪಳ, ಜುಲೈ 5: ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (ಎಐಯುಟಿಯುಸಿ) ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 7, 2026 ರಂದು ಬೆಳಿಗ್ಗೆ 10.30 ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಮುಖಾಂಡರಾದ ಶರಣು ಗಡ್ಡಿ ತಿಳಿಸಿದ್ದಾರೆ.

ರಾಜ್ಯದ ಲಕ್ಷಾಂತರ ಕಟ್ಟಡ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ದುಡಿದು ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದರೂ, ಅವರ ಕಲ್ಯಾಣಕ್ಕಾಗಿ ಮೀಸಲಾಗಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿ ಬಳಸಲಾಗುತ್ತಿದೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಕಡಿತ, ವಿವಿಧ ಹೆಸರಿನ ಕಿಟ್‌ಗಳ ವಿತರಣೆ, ಪಿಂಚಣಿ ಪಡೆಯಲು ಅನಗತ್ಯ ನಿರ್ಬಂಧಗಳು ಹಾಗೂ ಹಲವಾರು ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗಿರುವ ವಿಳಂಬದ ವಿರುದ್ಧ ವಿವಿಧ ಗ್ರಾಮಗಳಲ್ಲಿ ಕಟ್ಟಡ ಕಾರ್ಮಿಕರ ಸಭೆ ಮಾಡಲಾಯಿತು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯು ಕಾರ್ಮಿಕರ ಸ್ವತ್ತಾಗಿದ್ದು, ಅದನ್ನು ಕಾರ್ಮಿಕರ ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ ಹಾಗೂ ನಿವೃತ್ತಿ ಬದುಕಿನ ರಕ್ಷಣೆಗಾಗಿ ಮಾತ್ರ ಬಳಸಬೇಕು. ಸರ್ಕಾರದ ಪ್ರಚಾರ ಅಥವಾ ಇತರೆ ಉದ್ದೇಶಗಳಿಗೆ ಬಳಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಪ್ರಮುಖ ಬೇಡಿಕೆಗಳು
ಮೇಸನ್ ಕಿಟ್, ಸೇಫ್ಟಿ ಕಿಟ್, ಶೈಕ್ಷಣಿಕ ಕಿಟ್ ಸೇರಿದಂತೆ ವಿವಿಧ ಹೆಸರಿನ ಕಿಟ್ ವಿತರಣೆಯನ್ನು ಸ್ಥಗಿತಗೊಳಿಸಿ, ಅದರ ಹಣವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
2021ರ ಆದೇಶದಂತೆ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು.
ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ರಾಜ್ಯಾದ್ಯಂತ ಗುಣಮಟ್ಟದ ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು.
60 ವರ್ಷ ತುಂಬಿದ ನಂತರ 6 ತಿಂಗಳೊಳಗೆ ಪಿಂಚಣಿಗೆ ಅರ್ಜಿ ಸಲ್ಲಿಸಬೇಕೆಂಬ ನಿಯಮವನ್ನು ರದ್ದುಪಡಿಸಿ, ಎಲ್ಲ ಅರ್ಹ ಕಾರ್ಮಿಕರಿಗೆ ಪಿಂಚಣಿ ನೀಡಬೇಕು.
ಕಲ್ಯಾಣ ಮಂಡಳಿಯ ನಿಧಿಯನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು.
ಘೋಷಿತ ಎಲ್ಲಾ ಕಲ್ಯಾಣ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ಕಾರ್ಮಿಕರಿಗೆ ತಲುಪುವಂತೆ ಜಾರಿಗೊಳಿಸಬೇಕು.
ಈಗಿರುವ ಹಣಕಾಸು ನೆರವಿನ ಯೋಜನೆಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು.
ಈಗಾಗಲೇ ಮಂಜೂರಾದ ವಿವಿಧ ಯೋಜನೆಗಳ ಹಣವನ್ನು ತಕ್ಷಣ ಬಿಡುಗಡೆ ಮಾಡಿ, ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು.
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ, ಧರಣಿ, ಪ್ರತಿಭಟನೆ ಹಾಗೂ ಮುತ್ತಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘ ಎಚ್ಚರಿಸಿದೆ.
ಜಿಲ್ಲೆಯ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಜುಲೈ 7 ರಂದು ಬೆಳಿಗ್ಗೆ 10.30 ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (AIUTUC) ಕರೆ ನೀಡಿದೆ.


