
Jatha to the District Collector's Office for site and title deed: Warning from homeless families

ನಿವೇಶನ ಹಾಗೂ ಹಕ್ಕುಪತ್ರಕ್ಕಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ: ನಿರಾಶ್ರಿತ ಕುಟುಂಬಗಳ ಎಚ್ಚರಿಕೆ

ಕೊಪ್ಪಳ: ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಗುನ್ನಳ್ಳಿ ಆಶ್ರಯ ನಿವೇಶನಗಳಿಗೆ ರಸ್ತೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಮತ್ತು ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19ನೇ ವಾರ್ಡಿನ ಅಲೆಮಾರಿ ಸಿಂದೊಳ್ಳು ಸಮುದಾಯದ ಕುಟುಂಬಗಳಿಗೆ ನಿವೇಶನ ಒದಗಿಸುವಂತೆ ಒತ್ತಾಯಿಸಿ ವಸತಿ ನಿರಾಶ್ರಿತ ಹೋರಾಟ ಸಮಿತಿಯ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಕುರಿತು ಸಮಿತಿಯ ಮುಖಂಡರು ಮಾತನಾಡಿ, 2023ರ ನವೆಂಬರ್ 15ರಿಂದ ವಿವಿಧ ಇಲಾಖೆಗಳು ಹಾಗೂ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10.20ಕ್ಕೆ ವಿವಿಧ ದಲಿತ ಪರ, ಪ್ರಗತಿಪರ, ಕನ್ನಡ ಪರ ಹಾಗೂ ಅಲೆಮಾರಿ ಸಂಘಟನೆಗಳ ಮುಖಂಡರು ಹಾಗೂ ನಿರಾಶ್ರಿತ ಕುಟುಂಬಗಳು ಸೇರಿ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದರು.
ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ, ಸಿದ್ದೇಶ್ವರ ನಗರ, ಕಾಳಿದಾಸ ನಗರ, ಕೂಗಮ್ಸ್ ನಗರ ಸೇರಿದಂತೆ ಸುಮಾರು 40 ಕುಟುಂಬಗಳಿಗೆ ನಿವೇಶನ ಮತ್ತು ಹಕ್ಕುಪತ್ರ ನೀಡಬೇಕು. ಕುವೆಂಪುನಗರದ ಸುಮಾರು 20 ಕುಟುಂಬಗಳಿಗೆ ಫಾರ್ಮ್ ಸಂಖ್ಯೆ ಮಂಜೂರು ಮಾಡಬೇಕು. ಅಲ್ಲದೆ ಗುನ್ನಳ್ಳಿ ಆಶ್ರಯ ನಿವೇಶನದ ಕಾಮಗಾರಿ ಪೂರ್ಣಗೊಳಿಸಿ, ಆಯ್ಕೆಯಾದ ಫಲಾನುಭವಿಗಳಿಗೆ ತ್ವರಿತವಾಗಿ ಹಕ್ಕುಪತ್ರ ಹಾಗೂ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಮೂರು ವರ್ಷಗಳಿಂದ ಕಾಯುತ್ತಿರುವ ಬಡ ಮತ್ತು ನಿರಾಶ್ರಿತ ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ತುರ್ತು ಕ್ರಮ ಕೈಗೊಳ್ಳಬೇಕು. ಆಶ್ರಯ ಕಾಲೋನಿಗಳಲ್ಲಿ ಅರ್ಹರು ಹಾಗೂ ಅನರ್ಹರ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಮೊದಲ ಹಂತದಲ್ಲಿ ಕುವೆಂಪುನಗರದಿಂದಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಈ ಬೇಡಿಕೆಗಳ ಈಡೇರಿಕೆಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ್ ಕಾದ್ರೊಳ್ಳಿ, ಕರ್ನಾಟಕ ರಕ್ಷಣಾ ಯುವ ಪಡೆ ವೇದಿಕೆಯ ರಾಜ್ಯಾಧ್ಯಕ್ಷ ನಿಂಗು ಜಿ.ಎಸ್. ಬೇಡಿಕಲ್, ಆರ್. ವಿಜಯಕುಮಾರ್, ಕರುನಾಡು ಯುವ ಪ್ರಜಾ ವೇದಿಕೆಯ ಸಂಸ್ಥಾಪಕಿ ಶ್ರೀಮತಿ ಬಿಬಿಜಾನ್, ರಾಜ್ಯಾಧ್ಯಕ್ಷ ರಾಜು ಹೊಂಬಳ, ಕರ್ನಾಟಕ ರಾಜ್ಯ ಎಸ್‌ಸಿ-ಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭೆಯ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ಮೇಧಾರ್ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಎಚ್. ಶಿವರಾಮಗೌಡ ಸೇರಿದಂತೆ ಜಿಲ್ಲೆಯ ಹಲವು ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೇಡಿಕೆಗಳನ್ನು ಈಡೇರಿಸುವ ಕುರಿತು ಜಿಲ್ಲಾಡಳಿತದಿಂದ ಅಧಿಕೃತ ಆದೇಶ ಹೊರಬರುವವರೆಗೆ ಧರಣಿ ಮತ್ತು ಸತ್ಯಾಗ್ರಹ ಮುಂದುವರಿಯಲಿದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
