ಯೂರಿಯ, ಡಿ.ಎ.ಪಿ. ಪರ್ಯಾಯ ಸಂಯುಕ್ತ ರಸಗೊಬ್ಬರಗಳ ಬಳಕೆಗೆ ಜಿಲ್ಲಾಧಿಕಾರಿಗಳ ಸಲಹೆ

H.Mallikarjun
H.Mallikarjun - Kalyanasiri
4 Min Read
ಜಾಹೀರಾತು

District Collector's advice on the use of alternative compound fertilizers like Urea, DAP

ಯೂರಿಯ, ಡಿ.ಎ.ಪಿ. ಪರ್ಯಾಯ ಸಂಯುಕ್ತ ರಸಗೊಬ್ಬರಗಳ ಬಳಕೆಗೆ ಜಿಲ್ಲಾಧಿಕಾರಿಗಳ ಸಲಹೆ

ಜಾಹೀರಾತು

ಕೊಪ್ಪಳ ಜೂನ್ 04, (ಕರ್ನಾಟಕ ವಾರ್ತೆ): ಯೂರಿಯ ಮತ್ತು ಡಿ.ಎ.ಪಿ. ರಸಗೊಬ್ಬರಕ್ಕೆ ಪರ್ಯಾಯ ಸಂಯುಕ್ತ ರಸಗೊಬ್ಬರಗಳ ಬಳಕೆ ಮಾಡುವಂತೆ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜೂನ್ 04ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರವಾದರೂ, ಮಣ್ಣಿನಿಂದ ಎಲ್ಲಾ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯದಿರುವ ಕಾರಣ ಬಾಹ್ಯವಾಗಿ ಗೊಬ್ಬರ ನೀಡುವುದು ಅನಿವಾರ್ಯವಾಗಿದೆ. ಈ ಪೋಷಕಾಂಶಗಳನ್ನು ಸಾವಯವ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಗೊಬ್ಬರ, ಎರೆಹುಳಗೊಬ್ಬರ, ಜೈವಿಕ ಗೊಬ್ಬರ ಮತ್ತು ರಸಗೊಬ್ಬರಗಳಿಂದ ಒದಗಿಸಬೇಕಾಗಿರುತ್ತದೆ. ರಸಗೊಬ್ಬರಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನೇರವಾಗಿ ದೊರೆಯುವ ರೂಪದಲ್ಲಿದ್ದು ಅವುಗಳ ಬಳಕೆ ಅತ್ಯಗತ್ಯವಾಗಿರುತ್ತದೆ. ಶಿಫಾರಸ್ಸಿನಂತೆ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್ ಅಂಶಗಳನ್ನು 4:2:1 ಅನುಪಾತದಲ್ಲಿ ಬಳಸಬೇಕು. ಆದರೆ ಪ್ರಸ್ತುತ ರೈತರು ಬಳಸುವ ರಸಗೊಬ್ಬರಗಳ ಅನುಪಾತವು 5:3:1 ಇರುತ್ತದೆ. ಇದನ್ನು ಸಮತೋಲನಾತ್ಮಕ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಲು ಪೊಟ್ಯಾಷ್ ಯುಕ್ತ ರಂಜಕ ಅಥವಾ ಇತರೆ ಸಂಯುಕ್ತ ರಸಗೊಬ್ಬರಗಳನ್ನು ಬಳಕೆ ಮಾಡುವುದು ಅವಶ್ಯಕವಾಗಿರುತ್ತದೆ ಎಂದರು.
ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿ.ಯ ಬಳಕೆಗೆ ರೂಢಿತವಾಗಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕ ಅಂಶ ಮಾತ್ರವಿರುತ್ತದೆ. ಆದರೆ, ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿರುತ್ತವೆ. ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಯೂರಿಯಾ ಮತ್ತು ಡಿ.ಎ.ಪಿ. ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳಾದ 20:20:0:13, 10:26:26, 15:15:15, 12:32:16, 22:22:11, 14:35:14, 17:17:17, 14:28:14, 19:19:19, 20:10:10, ಇತ್ಯಾದಿ ರಸಗೊಬ್ಬರಗಳನ್ನು ಬಳಸಬಹುದಾಗಿದೆ. 20:20:0:13 ಗೊಬ್ಬರದ ಜೊತೆ ಬಿತ್ತುವಾಗ ಪೊಟ್ಯಾಷ್ ಗೊಬ್ಬರವನ್ನು ಬಳಕೆ ಮಾಡಬಹುದು ಎಂದು ಹೇಳಿದರು.
ಈ ವರ್ಷ 2026ರ ಜೂನ್ 2 ರವರೆಗೆ ಜಿಲ್ಲೆಯ ವಾಡಿಕೆ ಮಳೆ 87 ಮಿ.ಮೀ. ಇದ್ದು, ವಾಸ್ತವಿಕವಾಗಿ 112.50 ಮಿ.ಮೀ. ಮಳೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಶೇ.29 ಅಧಿಕ ಮಳೆಯಾಗಿದ್ದು, ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ಉತ್ತಮ ಹಸಿ ಮಳೆಯಾಗಿದೆ. ಈ ವರ್ಷ ಜಿಲ್ಲೆಯ ಒಟ್ಟು ಬೆಳೆ ವಿಸ್ತೀರ್ಣ ಗುರಿ 3.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಈಗಾಗಲೇ ಭೂಮಿ ಸಿದ್ಧತಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿನ ಹೆಚ್ಚಿನ ಮಳೆಯ ಹಿನ್ನೆಲೆ ರೈತರು ಸುಮಾರು 1.22 ಲಕ್ಷ ಹೆಕ್ಟೇರ್ ಮೆಕ್ಕೆ ಜೋಳ, 0.32 ಲಕ್ಷ ಹೆಕ್ಟೇರ್ ಸಜ್ಜೆ, 0.44 ಲಕ್ಷ ಹೆಕ್ಟೇರ್ ಹೆಸರು ಬೆಳೆ ಹಾಗೂ 0.40 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಗೆ ರೈತರು ಮುಂದಾಗಿರುತ್ತಾರೆ ಎಂದರು.
ಪ್ರಸ್ತುತ ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ರಸಗೊಬ್ಬರಗಳ ಉತ್ಪಾದನೆಗೆ ಬಳಸಲಾಗುವ ಕಚ್ಚಾವಸ್ತುಗಳು ಮತ್ತು ರಸಗೊಬ್ಬರಗಳ ಆಮದಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇದರಿಂದಾಗಿ, ರಾಜ್ಯದಲ್ಲಿ 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಕೇಂದ್ರ ಸರ್ಕಾರದಿಂದ ಏಪ್ರಿಲ್ ಮತ್ತು ಮೇ-2026ರ ಮಾಹೆಯವರೆಗೆ ರಾಜ್ಯಕ್ಕೆ 2.36 ಲಕ್ಷ ಮೆ.ಟನ್. ಯೂರಿಯಾ ಮತ್ತು 1.61 ಲಕ್ಷ ಮೆ.ಟನ್ ಡಿ.ಎ.ಪಿ ರಸಗೊಬ್ಬರವು ಹಂಚಿಕೆಯಾಗಿರುತ್ತದೆ. ದಿನಾಂಕ: 01.04.2026 ರಿಂದ 20.05.2026 ರವರೆಗೆ ಯೂರಿಯಾ 1.71 ಲಕ್ಷ ಮೆ.ಟನ್ ಮತ್ತು ಡಿ.ಎ.ಪಿ 0.53 ಲಕ್ಷ ಮೆ.ಟನ್ ಸರಬರಾಜಾಗಿದ್ದು, ಯೂರಿಯಾದಲ್ಲಿ 0.65 ಲಕ್ಷ ಮೆ.ಟನ್ ಹಾಗೂ ಡಿ ಎ ಪಿ ಯಲ್ಲಿ 1.08 ಲಕ್ಷ ಮೆ.ಟನ್ ಕೊರತೆಯಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಮುಂಗಾರು ಹಂಗಾಮಿನ ಒಟ್ಟು ರಸಗೊಬ್ಬರ ಬೇಡಿಕೆಯು 1,17,703 ಮೆಟ್ರಿಕ್ ಟನ್ ಆಗಿರುತ್ತದೆ. ಹಂಗಾಮಿನ ಆರಂಭದಲ್ಲಿ 26,440 ಮೆಟ್ರಿಕ್ ಟನ್ ಆರಂಭಿಕ ಶಿಲ್ಕು ಲಭ್ಯವಿದ್ದು, ಇದುವರೆಗೆ 20,112 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ. ಹೀಗಾಗಿ ಒಟ್ಟು ಲಭ್ಯತೆ 46,551 ಮೆಟ್ರಿಕ್ ಟನ್ ಆಗಿದ್ದು, ಇದರಲ್ಲಿ 16,332 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆಗೊಂಡಿರುತ್ತದೆ. ಪ್ರಸ್ತುತ ಜಿಲ್ಲೆಯ ವಿವಿಧ ಮಾರಾಟ ಕೇಂದ್ರಗಳಲ್ಲಿ 30,220 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದರು.
ಏಪ್ರಿಲ್ ಹಾಗೂ ಮೇ ಮಾಹೆಗಳಲ್ಲಿ ಒಟ್ಟು 33,187 ಮೆಟ್ರಿಕ್ ಟನ್ ರಸಗೊಬ್ಬರಗಳ ಬೇಡಿಕೆ ಇದ್ದು, ಇದರ ವಿರುದ್ಧ ಕೇವಲ 20,112 ಮೆಟ್ರಿಕ್ ಟನ್ ರಸಗೊಬ್ಬರ ಮಾತ್ರ ಸರಬರಾಜಾಗಿರುತ್ತದೆ. ಪರಿಣಾಮವಾಗಿ 13,075 ಮೆಟ್ರಿಕ್ ಟನ್ ರಸಗೊಬ್ಬರಗಳ ಸರಬರಾಜಿನಲ್ಲಿ ಕೊರತೆ ಉಂಟಾಗಿರುತ್ತದೆ. ಇದರಲ್ಲಿ ಯೂರಿಯಾ 2,206 ಮೆಟ್ರಿಕ್ ಟನ್, ಡಿ.ಎ.ಪಿ. 4,470 ಮೆಟ್ರಿಕ್ ಟನ್, ಎಂ.ಒ.ಪಿ 1,064 ಮೆಟ್ರಿಕ್ ಟನ್ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರಗಳಲ್ಲಿ 5,352 ಮೆಟ್ರಿಕ್ ಟನ್ ಕೊರತೆ ಕಂಡುಬಂದಿರುತ್ತದೆ ಎಂದು ತಿಳಿಸಿದರು.
ಪ್ರಸಕ್ತ ಮಧ್ಯ ಪ್ರಾಚ್ಯದ ಬಿಕ್ಕಟ್ಟಿನಿಂದ ರಸಗೊಬ್ಬರದ ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯದ ಬಗ್ಗೆ ವಿವರಿಸಿ ರೈತರಿಗೆ ವಿವೇಚನಾತ್ಮಕ ರಸಗೊಬ್ಬರದ ಬಳಕೆಯ ಬಗ್ಗೆ ಆತಂಕಗೊಂಡು ಅಗತ್ಯತೆಗಿಂತ ಹೆಚ್ಚಿನ ರಸಗೊಬ್ಬರಗಳನ್ನು ಖರೀದಿಸದಂತೆ ಹಾಗೂ ಅಗತ್ಯತೆಗಿಂತ ಹೆಚ್ಚಿನ ಯೂರಿಯಾ, ಡಿ.ಎ.ಪಿ ರಸಗೊಬ್ಬರಗಳನ್ನು ಖರೀದಿಸಿ ಶೇಖರಣೆ ಮಾಡುವುದರ ಮುಖಾಂತರ ಕೃತಕ ಅಭಾವ ಸೃಷ್ಟಿಸಿದಲ್ಲಿ Essential Commodity Act (ECA)-1955ರ ಪ್ರಕಾರ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪೋಸ್ಟರ್ ಬಿಡುಗಡೆ: ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆಯಿಂದ ಸಿದ್ದಪಡಿಸಲಾದ “ಯೂರಿಯ ಮತ್ತು ಡಿಎ.ಪಿ. ರಸಗೊಬ್ಬರಕ್ಕೆ ಪರ್ಯಾಯ ಸಂಯುಕ್ತ ರಸಗೊಬ್ಬರಗಳ ಬಳಕೆ” ಮತ್ತು “ಯೂರಿಯಾ ರಸಗೊಬ್ಬರ ಖರೀದಿಗೆ ಎಫ್‌ಐಡಿ (ಫ್ರೂಟ್ಸ್ ಎಫ್‌ಐಡಿ) ಕಡ್ಡಾಯ” ಕುರಿತಾದ ಪೋಸ್ಟರಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಜಿಪಂ ಉಪ ಕಾರ್ಯದರ್ಶಿ ಟಿ ಕೃಷ್ಣಮೂರ್ತಿ, ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ, ಸೇರಿದಂತೆ ವಿವಿಧ ಇಲಾಖೆಗಳ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಹಾಗೂ ಕೃಷಿ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Total Views: 0
Share This Article