ಅಧಿಕಾರಿಗಳಿಗೆ ಜನಜೀವನದ ಕಾಳಜಿ ಇರಲಿ: ಜಿ ಕುಮಾರ ನಾಯಕ
Disha Committee Meeting

ರಾಯಚೂರು ಜೂನ್ 16 (ಕರ್ನಾಟಕ ವಾರ್ತೆ): ಜನ ಜೀವನದ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇರಬೇಕು. ಈ ನಿಟ್ಟಿನಲ್ಲಿ ಬೇರೆ ಜಿಲ್ಲೆಗಳಿಗೆ ಮಾದರಿಯಾಗುವ ಹಾಗೆ ಪ್ರತಿಯೊಂದು ಯೋಜನೆಗಳು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಲು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರು ಆಗಿರುವ ರಾಯಚೂರ ಲೋಕಸಭಾ ಸದಸ್ಯರಾದ ಜಿ ಕುಮಾರ ನಾಯಕ ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜೂನ್ 16ರಂದು ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿಕಿತ್ಸೆ ಸಿಗುತ್ತಿಲ್ಲ ಅನ್ನುವ ಕಾರಣಕ್ಕೆ ಜಿಲ್ಲೆಯ ಯಾವುದೇ ಕಡೆಗಳಲ್ಲಿ ಗರ್ಭಿಣಿಯರು ಸಾವಿಗೀಡಾಗುವ ಪ್ರಕರಣಗಳು ವರದಿಯಾಗಬಾರದು. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮಮಟ್ಟದ ಎಲ್ಲ ಕಡೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಂಸದರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಶಿಶುಮರಣ ಮತ್ತು ತಾಯಿಮರಣ ಪ್ರಮಾಣವು ಶೂನ್ಯಕ್ಕಿಳಿಸಬೇಕು ಎಂದರು.
ಬಾಲ್ಯವಿವಾಹ ಪದ್ದತಿಯು ನಿಷೇಧವಿದ್ದರೂ ಇನ್ನು ಗ್ರಾಮೀಣ ಭಾಗದ ಅಲ್ಲಲ್ಲಿ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗುತ್ತಿವೆ. ಕಾನೂನುಕ್ರಮಗಳನ್ನು ಬಿಗಿಗೊಳಿಸಿ ಈ ಪದ್ದತಿಯನ್ನು ತೊಲಗಿಸಬೇಕು. ಇದಕ್ಕೆ ಪ್ರೋತ್ಸಾಹಿಸುವವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಸಂಸದರು ಸೂಚನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಇತ್ತೀಚೆಗೆ ಸಾರ್ವಜನಿಕರಲ್ಲಿ ಅಧಿಕ ರಕ್ತದೊತ್ತಡ, ಶುಗರ್ ಹೆಚ್ಚುತ್ತಿವೆ. ಈ ಬಗ್ಗೆ ಗ್ರಾಮಮಟ್ಟದ ವೈದ್ಯಾಧಿಕಾರಿಗಳು ಗಮನ ಹರಿಸಬೇಕು. ಗ್ರಾಮೀಣ ಜನರಲ್ಲಿ ಹೆಚ್ಚುತ್ತಿರುವ ಬಿಪಿ, ಶುಗರ್ ತಡೆಗಾಗಿ ಇದುವರೆಗೆ ಆರೋಗ್ಯ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ಸಂಸದರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಎಂಬಿಬಿಎಸ್ ಪದವೀಧರರು ಖಾಲಿ ಇರುವ ಹುದ್ದೆಗಳಿಗೆ ಬಾರದಿರಲು ಇರುವ ತೊಡಕುಗಳನ್ನು ಕೂಡಲೇ ಸರಿಪಡಿಸಲು ಕ್ರಮ ವಹಿಸಬೇಕು. ಜನತೆಗೆ ಸರಿಯಾದ ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಸಮರ್ಪಕ ಪ್ರಮಾಣದಲ್ಲಿ ಔಷಧಿ, ಸಲಕರಣೆಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಸಂಸದರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಣ್ಣು ಪರೀಕ್ಷೆಗೆ ಒತ್ತು ಕೊಡಿ: ಮಾಹಿತಿ ಕೊರತೆಯಿಂದಾಗಿ ರೈತರಿಗೆ ಯಾವ ಮಣ್ಣಿನಲ್ಲಿ ಯಾವ ಬಗೆಯ ಬಿತ್ತನೆ ಬೀಜ ಬಿತ್ತನೆ ಮಾಡಬೇಕು ಎಂಬುದು ತಿಳಿಯುವುದಿಲ್ಲ. ರಾಯಚೂರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರೈತರ ಮಧ್ಯೆ ಸರಿಯಾದ ಸಮನ್ವಯ ಇಲ್ಲದ್ದಕ್ಕೆ ರೈತರು ಖಾಸಗಿ ಕೇಂದ್ರಗಳತ್ತ ಮುಖ ಮಾಡುವಂತಾಗಿದೆ. ಇದು ತಪ್ಪಬೇಕು. ಕೃಷಿ ಅಧಿಕಾರಿಗಳು ರೈತರ ಬಳಿ ಹೋಗಬೇಕು. ಬಿತ್ತನೆ ಬೀಜ, ರಸಗೊಬ್ಬರದ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು. ಮಣ್ಣಿನ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಬೇಕು ಎಂದು ಸಂಸದರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ತಳಿಗಳ ಬಗ್ಗೆ ತಿಳಿವಳಿಕೆ ನೀಡಿ: ತೋಟಗಾರಿಕಾ ಬೆಳೆಗಳ ವಿವಿಧ ತಳಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಿಲ್ಲ. ಇದುವರೆಗೆ ಬಹುತೇಕ ರೈತರಿಗೆ ಇಲಾಖೆಯಿಂದ ಸಹಾಯಧನ ಸಮರ್ಪಕವಾಗಿ ತಲುಪಿಲ್ಲ ಎಂದು ಸಂಸದರು ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಾವಿನ ಹಣ್ಣಿನ ಉತ್ಪಾದನಾ ಪ್ರಮಾಣವು ರಾಯಚೂರ ಜಿಲ್ಲೆಯಲ್ಲೆ ಏಕೆ ಕಡಿಮೆ ಆಗಿದೆ ಎಂದು ಪ್ರಶ್ನಿಸಿದ ಸಂಸದರು, ಜಿಲ್ಲೆಯಲ್ಲಿನ ಮಾವು ಬೆಳೆಗಾರರನ್ನು ಗುರುತಿಸಬೇಕು. ಇಲ್ಲಿ ಬೆಳೆದ ಮಾವನ್ನು ಬೇರೆ ರಾಜ್ಯಗಳಿಗೆ ಸಾಗಿಸಲು ಪೂರಕವಾದ ರಸ್ತೆ ಸೌಕರ್ಯ ಜಿಲ್ಲೆಯಲ್ಲಿದೆ ಎಂದು ತಿಳಿಸಿ ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಬೇಕು ಎಂದು ನಿರ್ದೇಶನ ನೀಡಿದರು.
ರೈತರಿಗೆ ಸ್ಪಂದಿಸಿ: ಈಗ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಮಳೆ ಸುರಿದಿದೆ. ಹೀಗಾಗಿ ರೈತರಿಗೆ ಸಕಾಲಕ್ಕೆ ಬಿತ್ತನೆಗೆ ಅನುಕೂಲವಾಗುವಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿಗುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ರಸಗೊಬ್ಬರ ಕೊರತೆ ಏನಾದರು ಕಂಡು ಬಂದಲ್ಲಿ ಈ ಬಗ್ಗೆ ವರದಿ ಮಾಡಬೇಕು ಎಂದು ಸಚಿವರಾದ ಎನ್.ಎಸ್.ಬೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರ್ಹ ಫಲಾನುಭವಿಗಳಿಗೆ ತಲುಪಿಸಿ: ಕೃಷಿ ಇಲಾಖೆಯ ನಾನಾ ಯೋಜನೆಗಳ ಪ್ರಯೋಜನವು ಅರ್ಹರಿಗೆ ತಲುಪಬೇಕು. ಫಲಾನುಭವಿಗಳ ಆಯ್ಕೆ ವೇಳೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಆಯಾ ಯೋಜನೆಗಳ ಅನುಕೂಲತೆಯು ಅರ್ಹರಾದ ಎಲ್ಲರಿಗೂ ತಲುಪುವಂತಾಗಬೇಕು ಎಂದು ಮಾನವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಳಂಬಕ್ಕೆ ಅವಕಾಶ ನೀಡಬೇಡಿ: ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಕ್ಷೇತ್ರಗಳು ವರ್ಷದಿಂದ ವರ್ಷಕ್ಕೆ ಬಲವರ್ಧನೆಯಾಗಬೇಕು. ಹಾಗಾದಲ್ಲಿ ರೈತರ, ಸಾರ್ವಜನಿಕರ ಬಾಳು ಹಸನಾಗುವುದು. ಈ ದಿಶೆಯಲ್ಲಿ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಯೋಜನೆಗಳ ಅನುಷ್ಠಾನದಲ್ಲಿ ವಿಳಂಬಕ್ಕೆ ಅವಕಾಶ ಮಾಡಿಕೊಡಬಾರದು ಎಂದು ವಿಧಾನ ಪರಿಷತ್ ಶಾಸಕರಾದ ಎ ವಸಂತಕುಮಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ದಿಶಾ ಸಮಿತಿಯ ಸದಸ್ಯರು, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟೋಣಿ ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.