Community awareness program by Hirejantakal Government High School

ಗಂಗಾವತಿ: ಫೆಬ್ರವರಿ-೨೧ ಶುಕ್ರವಾರ ನಗರದ ೩೨ನೇ ವಾರ್ಡಿನ ಹಿರೇಜಂತಕಲ್‌ನ ಚಲವಾದಿ ಓಣಿಯ ಬಸವಣ್ಣ ದೇವಸ್ಥಾನದಲ್ಲಿ ನಡೆದ ಸಮುದಾಯ ಜಾಗೃತಿ ಕಾರ್ಯಕ್ರಮವನ್ನು ಸರಕಾರಿ ಪ್ರೌಢಶಾಲೆ ಹಿರೇಜಂತಕಲ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಸದಸ್ಯೆ ಶ್ರೀಮತಿ ಹುಲಿಗೆಮ್ಮ ಕಿರಿಕಿರಿ ಇವರು, ಮಕ್ಕಳು ಪ್ರತಿದಿನ ಶಾಲೆಗೆ ಹೋಗಬೇಕು, ಶಿಕ್ಷಕರು ಹೇಳಿದ ಪಾಠಗಳನ್ನು ಓದಬೇಕು, ಯಾವುದೇ ಕಾರಣಕ್ಕೂ ಶಾಲೆಯನ್ನು ತಪ್ಪಿಸಬಾರದು ಎಂದು ತಿಳಿಸಿ, ಮುಖ್ಯ ಶಿಕ್ಷಕರಾದ ವಿ.ವಿ.ಗೊಂಡಬಾಳ್ ಹಾಗೂ ಶಿಕ್ಷಕರ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ನಗರಸಭೆ ಸದಸ್ಯ ಹುಸೇನಪ್ಪ ಹಂಚಿನಾಳ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ನಮ್ಮ ಸಮುದಾಯದ ಮಕ್ಕಳು ಮುಂದೆ ಬರಬೇಕೆಂದರೆ ಅದು ಒಳ್ಳೆಯ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಇನ್ನೋರ್ವ ಅತಿಥಿಗಳಾದ ಪರಶುರಾಮ ಕಿರಿಕಿರಿಯವರು ಮಾತನಾಡಿ, ಮಕ್ಕಳು ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಿ.ವಿ.ಗೊಂಡಬಾಳ್ ಇವರು ಪಾಲಕರ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಆಗಮಿಸದೆ ಇರುವ ಕಾರಣ ಇಡಿ ಶಾಲೆಯನ್ನೇ ಸಮುದಾಯದ ಕಡೆಗೆ ತೆಗೆದುಕೊಂಡು ಬಂದು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು. ಸಮುದಾಯದಲ್ಲಿರುವ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿ, ಎಸ್.ಎಸ್.ಎಲ್.ಸಿ ಯಲ್ಲಿ ಮಕ್ಕಳು ಉತ್ತಮ ಅಂಕಗಳನ್ನು ಪಡೆಯುವಂತೆ ಮಾಡುವಲ್ಲಿ ಸಮುದಾಯದ ಪಾತ್ರ ಬಹಳ ಮುಖ್ಯವಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಈ ಹಂತದಲ್ಲಿ ಶಾಲೆ ಬಿಡಿಸಬಾರದು ಎಂದು ಮನವಿ ಮಾಡಿದರು. ಪ್ರತಿ ಶನಿವಾರ ಪೂರ್ಣಾವಧಿಗೆ ಹಾಗೂ ಪ್ರತಿ ರವಿವಾರ ಅರ್ಧ ಅವಧಿಗೆ ವಿಶೇಷ ತರಗತಿಗಳನ್ನು ಜನವರಿ ತಿಂಗಳಲ್ಲಿ ಪ್ರಾರಂಭಿಸಲಾಗಿದೆ. ಆದರೆ ಕೆಲವು ಮಕ್ಕಳು ಗೈರುಹಾಜರಾಗುತ್ತಿದ್ದು, ಅವರನ್ನು ಶಾಲೆಗೆ ಕಳಿಸಲು ಮನವಿ ಮಾಡಿದರು.
ಕಾರ್ಯಕ್ರಮ ಕುರಿತು ಶ್ರೀಮತಿ ನಸೀಮಾ ಬಾನು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಶಿಕ್ಷಕರಾದ ಮಾರಪ್ಪ ಮಕ್ಕಳೊಂದಿಗೆ ಪ್ರಾರ್ಥನೆಗೈದರು. ಶ್ರೀಮತಿ ಸುಧಾ ನಿರೂಪಿಸಿದರು. ಶಾಲೆಯ ಶಿಕ್ಷಕರಾದ ಶ್ರೀಮತಿ ಜಯಶ್ರೀ, ಶ್ರೀಮತಿ ಶಾರದಾ ಜೋಶಿ, ಶ್ರೀಮತಿ ಸುನಂದ, ಸರಿತಾ, ಶಿವಮ್ಮ ಹಾಗೂ ಕುಮಾರಸ್ವಾಮಿ ಹಾಜರಿದ್ದರು.
ಎಸ್.ಡಿ.ಎಂ.ಸಿ ಸದಸ್ಯರಾದ ಹನುಮಂತಪ್ಪ ಕೋರಿ, ಶ್ರೀಮತಿ ಲಲಿತಾ ಹಾಗೂ ಚಲುವಾದಿ ಸಮುದಾಯದ ಮುಖಂಡರಾದ ಹುಲುಗಪ್ಪ ಗೋಟೂರ್, ಹುಸೇನಪ್ಪ ಕಲ್ಮನಿ, ಹುಲುಗಪ್ಪ ಮುಂಡಸ್ತ, ಲಕ್ಷö್ಮಣ, ಮಲ್ಲಿಕಾರ್ಜುನ್ ಗೋಟೂರ್, ವಿರೇಶ, ಹಳೆಯ ವಿದ್ಯಾರ್ಥಿಗಳು, ಪಾಲಕರ ತಾಯಂದಿರು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.