National Conference on the Use of Artificial Intelligence in Agriculture

ಭವಿಷ್ಯದಲ್ಲಿ ಆಹಾರ ಪೌಷ್ಟಿಕಾಂಶದ ಭದ್ರತೆ ಸಾಧಿಸಲು ಸ್ಮಾರ್ಟ್ ಕೃಷಿಗೆ ಬದಲಾಗಬೇಕು: ಡಾ.ಎಸ್.ವಿ.ಸುರೇಶ
ರಾಯಚೂರು ಜ.09 (ಕರ್ನಾಟಕ ವಾರ್ತೆ): ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಭವಿಷ್ಯದಲ್ಲಿ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಸಾಧಿಸಲು ನಾವು ಸ್ಮಾರ್ಟ್ ಕೃಷಿಗೆ ಬದಲಾಗಬೇಕಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಸ್. ವಿ. ಸುರೇಶ ಅವರು ಹೇಳಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ದಕ್ಷಿಣ ವಲಯ ಭಾರತೀಯ ವಿಸ್ತರಣಾ, ಶಿಕ್ಷಣ ಸಂಘ, ಬೆಂಗಳೂರು ಹಾಗೂ ಹೈದರಾಬಾದ ಮತ್ತು ಬೆಂಗಳೂರುಗಳಲ್ಲಿ ಸ್ಥಿತ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ತಾಂತ್ರಿಕ ವರ್ಗಾವಣೆ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಕೃಷಿ ಮತ್ತು ಕೃಷಿ ಅವಲಂಬಿತ ವಿಸ್ತರಣಾ ಚಟುವಟಿಕೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಕುರಿತು ಜನವರಿ 9ರಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶ್ರೀ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಆರಂಭವಾದ ಎರಡು ದಿನಗಳ ರಾಷ್ಟೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆಯು ಸ್ಮಾರ್ಟ್ ಕೃಷಿಗಳಲ್ಲಿ ಒಂದಾಗಿದ್ದು, ಇದು ನೈಜ ಸಮಯದಲ್ಲಿ ಪರಿಹಾರಗಳನ್ನು ರೈತರಿಗೆ ತಲುಪಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಈ ಕೃತಕ ಬುದ್ಧಿಮತ್ತೆಯು ಹೊಂದಾಣಿಕೆಯಾಗುತ್ತದೆಯೇ ಎಂಬ ಪ್ರಶ್ನೆಗಳು ಹುಟ್ಟುತ್ತಿವೆ ಹಾಗೂ ಈ ಸಮಸ್ಯೆಗಳನ್ನು ನಾವೆಲ್ಲರೂ ಸೇರಿ ಸಂಶೋಧನೆ ಕೈಗೊಂಡು ಪರಿಹಾರಿಸಬೇಕಾಗಿದೆ. ಕೃತಕ ಬುದ್ಧಿಮತ್ತೆ ಪರಿಕಲ್ಪನೆಯ ಬಳಕೆಯ ಬಗ್ಗೆ ರೈತರನ್ನು ಸಬಲೀಕರಣಗೊಳಿಸಲು ವಿಸ್ತರಣಾ ವೃತ್ತಿಪರರು ಇದರ ಬಗ್ಗೆ ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿದಾಗ ಮಾತ್ರ ರೈತರನ್ನು ಪ್ರೇರೇಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಾವುಗಳು ಇನ್ನೂ ಮುಂದೆ ಸಾಗಬೇಕಾಗಿದೆ ಎಂದು ತಿಳಿಸಿದರು.
ಬದಲಾವಣೆಯೊಂದಿಗೆ ನಮ್ಮನ್ನು ನಾವು ಬದಲಾಯಿಸಿಕೊಂಡಗ ಮಾತ್ರ ಹೆಚ್ಚಿನ ದಕ್ಷತೆಯನ್ನು ಸಾಧಿಸಬಹುದು ಹಾಗೂ ಸವಾಲುಗಳಿಗೆ ತಕ್ಕ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದ ಅವರು, ಈ ಸಂದರ್ಭದಲ್ಲಿ 1965ರಲ್ಲಿ ಹಸಿರು ಕ್ರಾಂತಿಯ ಪ್ರಾರಂಭ ನಂತರದ ಪರಿಣಾಮದ ಉದಾಹರಣೆಯನ್ನು ಅವರು ಉಲ್ಲೇಖಿಸಿದರು.
ಅಧ್ಯಕ್ಷತೆ ವಹಿಸಿದ್ದ ಗೌರವಾನ್ವಿತ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಮಾತನಾಡಿ, ಕೃಷಿ ವಿಸ್ತರಣೆ ಕೆಲಸವು ಸಂಕೀರಣ ಹಾಗೂ ಕಠಿಣವಾಗಿದ್ದು ಇವುಗಳನ್ನು ಕೋವಿಡ್-19 ರ ಸಮಯದಲ್ಲಿ ನಾವೆಲ್ಲರೂ ಕಲಿತದ್ದಾಗಿದೆ ಎಂದರು. ರೈತರ ಅಗತ್ಯವನ್ನು ಆಧರಿಸಿ ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕೃತಕ ಬುದ್ಧಿಮತ್ತೆ ಸಂಬಂಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಅವುಗಳಲ್ಲಿ ಇ-ಸ್ಯಾಪ್ ತಂತ್ರಜ್ಞಾನವು ಹೆಸರುವಾಸಿಯಾಗಿದ್ದು ಸದ್ಯಕ್ಕೆ ಇದನ್ನು ಕರ್ನಾಟಕ ಮತ್ತು ನೆರೆ-ಹೊರೆಯ ರಾಜ್ಯಗಳು ಅಳವಡಿಸಿವೆ. ಭವಿಷ್ಯದಲ್ಲಿ ಕೃಷಿಯಲ್ಲಿ ದಕ್ಷತೆ ಮತ್ತು ಹೆಚ್ಚಿನ ಉತ್ಪಾದಕತೆಯನ್ನು ಸಾಧಿಸುವಲ್ಲಿ ಕೃತಕ ಬುದ್ಧಿಮತ್ತೆಯ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ವಿಸ್ತರಣಾ ವಿಭಾಗದ ಸಹಾಯಕ ಮಹಾನಿರ್ದೇಶಕರಾದ ಡಾ. ಆರ್. ರಾಯ್, ಬರ‍್ಮನ್ ಅವರು ಮಾತನಾಡಿ, ಕೃಷಿ ವ್ಯವಸ್ಥೆಯಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ, ದತ್ತಾಂಶಗಳನ್ನು ಆಧಾರಿಸಿ ಅಭಿವೃದ್ಧಿಗೊಂಡ ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ತಿಳಿಸಿದರು. ಇದು ಕೃಷಿ ವಲಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ರೈತರಿಗೆ ಇದರ ಬಗ್ಗೆ ಜ್ಞಾನ ಮತ್ತು ಕೌಶಲ್ಯವನ್ನು ನೀಡುವುದು ಅತ್ಯವಶ್ಯವಾಗಿದೆ ಎಂದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರಾದ ತಿಮ್ಮಪ್ಪ ಸೋಮಪ್ಪ ಚವಡಿ ಅವರು ಕೃಷಿ ಉತ್ಪನ್ನಗಳ ಉತ್ತಮ ಬೆಲೆ ನಿಗದಿಯಾಗಬೇಕು ಎಂದು ಇದೆ ವೇಳೆ ಒತ್ತಾಸೆ ಮಾಡಿದರು. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಈ ನಿಟ್ಟಿನಲ್ಲಿಯೂ ಸಹ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಡಿ.ಮಲ್ಲಿಕಾರ್ಜುನ ಅವರು ಕೃಷಿಯಲ್ಲಿ ನಿಖರತೆಯನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ ಖಂಡಿತವಾಗಿ ಸಹಾಯ ಮಾಡುತ್ತದೆ ಮತ್ತು ಎಲ್ಲಾ ವರ್ಗದ ರೈತರು ಈ ಹೊಸ ತಂತ್ರಜ್ಞಾನದ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದರು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಎಸ್. ಬಿ. ಗೌಡಪ್ಪ ಸ್ವಾಗತಿಸಿದರು ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಡಾ. ಸಿ. ನಾರಾಯಣ ಸ್ವಾಮಿ ವಂದಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರು, ಅಧಿಕಾರಿಗಳು, ದೇಶದಾದ್ಯಂತ ಆಗಮಿಸಿದ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳನ್ನೊಳಗೊಂಡAತೆ 300 ಕ್ಕೂ ಹೆಚ್ಚು ಗಣ್ಯರು ಮತ್ತು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.