Breaking News

ಶರಣೆ ಶ್ರೀ ದಾನಮ್ಮದೇವಿ ಯವರ ಸ್ಮರಣೋತ್ಸವ..

Commemoration of Sharane Sri Danammadevi..

ಜಾಹೀರಾತು


ಶರಣೆ ಶ್ರೀ ದಾನಮ್ಮದೇವಿ ಯವರ ಸ್ಮರಣೋತ್ಸವ..

ಮೂಲ ಹೆಸರು : ಲಿಂಗಮ್ಮ
ಪತಿ : ಸಂಗಮನಾಥ ನವರು
ತಂದೆ : ಅನಂತರಾಯ
ತಾಯಿ : ಶಿರಸಮ್ಮ
ಕಾಯಕ : ಜನಸೇವೆ, ಇಷ್ಟಲಿಂಗ ಧಾರಣೆ, ಬಸವ ತತ್ವ ಪ್ರಚಾರ ಮಾಡುವುದು
ಸ್ಥಳ : ಉಮರಾಣಿ, ಮಹಾರಾಷ್ಟ್ರ
ಜಯಂತಿ : ಛಟ್ಟಿ ಅಮಾವಾಸ್ಯೆ ಯಂದು

ಕೃಷಿ ಮತ್ತು ಹೈನುಗಾರಿಕೆಯೇ ಆಧಾರವಾಗಿದ್ದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಲಿಂಗಮ್ಮ ಉತ್ತಮ ಬಾಲ್ಯ ದಿನಗಳನ್ನು ಕಂಡರೂ ತನ್ನ ಸುತ್ತ ಜಾತಿ, ಧರ್ಮ, ಲಿಂಗ, ಸಿರಿವಂತಿಕೆಯೇ ಮೊದಲಾದ ವಿಚಾರಗಳಲ್ಲಿ ಭೇದಗಳಿದ್ದು ಅವುಗಳಿಂದ ಸಾಮಾನ್ಯ ಜನರು ಭಾಧೆಗೊಳಗಾಗಿರುವುದನ್ನು ಕಂಡು ಮರುಗಿದ್ದಳು. ಹುಟ್ಟುವುದಕ್ಕೆ ಮುಂಚೆ ಮತ್ತು ಸತ್ತ ಮೇಲೆ ಎಲ್ಲರ ಮೂಲವೂ ಒಂದೇ ಆಗಿದ್ದು ಹುಟ್ಟಿಗೂ ಸಾವಿಗೂ ಮದ್ಯೆ ಬದುಕುವ ದಿನಗಳಲ್ಲಿ ಕ್ಷುಲ್ಲಕ ವಿಚಾರಗಳಿಗೆ ಮನುಷ್ಯ ಮನುಷ್ಯರೇ ಬಡಿದಾಡಿ ಕೊಳ್ಳುವುದು ಮನುಷ್ಯ ಧರ್ಮವೇ ಅಲ್ಲ ವೆಂದು ಸತ್ಯದ ಅರಿವು ಮಾಡಿಕೊಂಡಿದ್ದಳು. ಸಮಾಜದಲ್ಲಿ ಸಮಾನತೆ ಎನ್ನುವುದು ಇಲ್ಲವಾಗಿ ಅಸಮಾನತೆ ತಾಂಡವ ವಾಡುತ್ತಿದ್ದಾಗ ಲಿಂಗಮ್ಮಳನ್ನು ಬಹಳವಾಗಿ ಸೆಳೆದಿದ್ದು ಬಸವಣ್ಣ ನವರ ಅನುಭವ ಮಂಟಪ. ಸ್ತ್ರೀ ಸಮಾನತೆ, ಲಿಂಗಭೇಧ ನಿಷೇದ, ಅಹಿಂಸೆ ಮುಂತಾದ ವಿಚಾರಗಳಲ್ಲಿ ಆಗಿನ ಸಾಂಪ್ರದಾಯಿಕ ನಿಲುವುಗಳನ್ನು, ಕಟ್ಟಲೆಗಳನ್ನು ಪಕ್ಕಕ್ಕೆ ಸರಿಸಿ ಹೊಸ ಬಗೆಯ ಯೋಚನೆಗಳನ್ನು ಜಾರಿಗೆ ತರುತ್ತಿದ್ದ ಅನುಭವ ಮಂಟಪ ಲಿಂಗಮ್ಮನಂತಹ ಅದೆಷ್ಟೋ ಶರಣರಿಗೆ ತಮ್ಮ ನಿಲುವುಗಳನ್ನು ಸಮಾಜಕ್ಕೆ ತಿಳಿ ಹೇಳಲು ಒಂದು ಸೂಕ್ತ ವೇದಿಕೆಯಾಯಿತು.
ಜನರ ಸೇವೆಗೈಯಲು ನಿಂತ ಲಿಂಗಮ್ಮನವರ ನಿಷ್ಕಳಂಕ ಮನೋಭಾವನೆ, ಫಲಾಪೇಕ್ಷೆ ಬಯಸದೆ ಸೇವೆ ಮಾಡುವ ರೀತಿ ಎಲ್ಲವೂ ಅಲ್ಪ ಕಾಲದಲ್ಲಿಯೇ ಜನರಿಂದ ಮೆಚ್ಚುಗೆಗೆ ಪಾತ್ರವಾಗುತ್ತವೆ.
ಲಿಂಗಮ್ಮನ ಸೇವಾ ಮನೋಭಾವನೆಗೆ ಮಾರು ಹೋದ ಜಗಜ್ಜ್ಯೋತಿ ಶ್ರೀ ಬಸವೇಶ್ವರ ರು ಲಿಂಗಮ್ಮಳನ್ನು ಕಾಣಲು ಸ್ವತಹ ಧಾವಿಸುತ್ತಾರೆ. ಲಿಂಗಮ್ಮಳ ಸೇವೆಯನ್ನು ನೇರವಾಗಿ ನೋಡುವ ಅವಕಾಶ ದೊರಕಿದ್ದೇ ತನ್ನ ಮಹಾ ಭಾಗ್ಯವೆಂದು ಭಾವಿಸುತ್ತಾರೆ. ಸೇವೆಗೆ ಭಾಜನರಾದ ಜನರು ಕಾಣಿಕೆಯಾಗಿ ಏನು ಕೊಟ್ಟರು ಲಿಂಗಮ್ಮ ಅದನ್ನು ತನ್ನಲ್ಲಿ ಇರಿಸಿಕೊಳ್ಳದೆ ದಾನ ಮಾಡುತ್ತಿರುತ್ತಾಳೆ. ಆ ದಾನ ಎಷ್ಟರ ಮಟ್ಟಿಗೆ ಇರುತ್ತಿತ್ತೆಂದರೆ ತುಂಬಿದ ಜೋಳಿಗೆಯಿಂದ ಲಿಂಗಮ್ಮ ತಾನು ಕೊಡುತ್ತಿರುವುದು ಏನು ಎಂದು ನೋಡದೆ ದಾನ ಮಾಡಿಬಿಡುತ್ತಿದ್ದಳು, ಅದು ಹೊನ್ನಾಗಿರಬಹುದು, ಕಲ್ಲಾಗಿರಬಹುದು, ಧವಸ ಧಾನ್ಯಾದಿಯಾಗಿ ಏನೇ ಆದರೂ ತನ್ನ ಕಣ್ಣಾರೆ ಅದೇನೆಂದು ವಿಚಾರ ಮಾಡುತ್ತಿರಲಿಲ್ಲ. ಸಿರಿವಂತರು, ಧನವಂತರು, ರಾಜಾದಿರಾಜರಾದಿಯಾಗಿ ಯಾವ ಚಕ್ರವರ್ತಿಗಳು ಇಂತಹ ದಾನ ಮಾಡಿರುವ ಉಲ್ಲೇಖ ಸಿಗುವುದು ವಿಪರೀತ ಕಡಿಮೆ, ಅಂತಹುದರಲ್ಲಿಯೂ ಒಬ್ಬ ಸಾಮಾನ್ಯ ಹಳ್ಳಿಗಾಡಿನ ರೈತಾಪಿ ಹೆಣ್ಣು ಮಗಳು ಈ ಪರಿಯ ದಾನ ನಿಷ್ಠೆಯಲ್ಲಿ ಮಗ್ನಳಾಗಿರುವುದನ್ನು ಕಂಡ ಬಸವೇಶ್ವರರು ಮೂಕ ವಿಸ್ಕಿಯ ರಾವುತ ಗಯಾ, ಅಷ್ಟೇ ಅಲ್ಲದೆ ಆಕೆಗೆ ‘ದಾನಮ್ಮ’ ಎಂಬ ಬಿರುದು ಕೊಟ್ಟು ಆಕೆಯು ಇನ್ನು ಮುಂದೆ ಅದೇ ಹೆಸರಿನಿಂದ ವಿಶ್ವ ವಿಖ್ಯಾತಳಾಗುವಂತೆ ಆಶೀರ್ವದಿಸುತ್ತಾರೆ. ನಂತರ ಕಲ್ಯಾಣಕ್ಕೆ ಬಂದು, ಅನೇಕ ಶರಣರನ್ನು ಸಂಧಿಸುವ ದಾನಮ್ಮ, ಸಾಮಾಜಿಕ ಕಳಕಳಿಯ ವಿಚಾರವಾಗಿ ತನಗಿದ್ದ ಎಲ್ಲ ಅನುಮಾನಗಳನ್ನು ಅನುಭವ ಮಂಟಪದ ಸಭೆಯಲ್ಲಿ ಚರ್ಚಿಸಿ ಮಹಾ ಶರಣರಿಂದ ಸೂಕ್ತ ಉತ್ತರಗಳನ್ನು ಪಡೆಯುತ್ತಾಳೆ. ನಂತರದಲ್ಲಿ ದಾನಮ್ಮನವರು ಬಸವ ತತ್ವ, ವಚನಗಳು ಮತ್ತು ಶಿವಭಕ್ತಿಯನ್ನು ನಾಡಿನಾದ್ಯಂತ ಪ್ರಸಾರ ಮಾಡುವುದೇ ಇನ್ನು ಮುಂದೆ ತನ್ನ ಕಾಯಕವೆಂದು, ತನಗೆ ತಾನೇ ಕಾಯಕ ವಹಿಸಿಕೊಂಡು ಅನುಭವ ಮಂಟಪದ ಶರಣರುಗಳಿಂದ ಶ್ಲಾಘನೆಗೆ ಪಾತ್ರಳಾಗುತ್ತಾಳೆ.
ಕಲ್ಯಾಣದ ಕ್ರಾಂತಿಯ ನಂತರ, ದಾನಮ್ಮ ದೇವಿಯು ತಾನು ಮನೆ ಮಠ ತೊರೆದು ವಚನ ಸಾಹಿತ್ಯದ ಕಂಪು ಹರಡಲು ಹಾಗು ಶಿವಭಕ್ತಿ ಪ್ರಸಾರ ಕಾರ್ಯದಲ್ಲಿ ತೊಡಗಲು ಟೊಂಕ ಕಟ್ಟಿ ನಿಲ್ಲುತ್ತಾಳೆ., ತನ್ನ ಪತಿಯೊಡನೆ ಗುಡ್ಡಾಪುರಕ್ಕೆ ಬರುತ್ತಾಳೆ..
ಜನರುಗಳಲ್ಲಿ ದಾನಮ್ಮ ಯಾವಾಗಲೂ ಗುರು-ಲಿಂಗ-ಜಂಗಮ ಗಳನ್ನೂ ಅನುಸರಿಸುವಂತೆ ಹಾಗು ಅದೇ ಜೀವನದ ಉತ್ತುಂಗಕ್ಕೆ ಎಲ್ಲರನ್ನು ಒಯ್ಯಬಲ್ಲುದು ಎಂಬ ಮಾತುಗಳನ್ನು ಹೇಳುತ್ತಿರುತ್ತಾಳೆ. ಶಿವ ಭಕ್ತಿಯನ್ನು ಪ್ರಸಾರ ಮಾಡುವ ಸಲುವಾಗಿ ತನ್ನ ಅಸಂಖ್ಯಾತ ಭಕ್ತರಿಗೆ ಲಿಂಗ ದೀಕ್ಷೆಯನ್ನು ಕೊಟ್ಟು ‘ಓಂ ನಮಃ ಶಿವಾಯ’ ಎಂಬ ಶಿವ ಮಂತ್ರವನ್ನು ಜಪಿಸುವಂತೆ ಪ್ರೇರಿಪಿಸುತ್ತಾಳೆ ಹಾಗು ಶಾಂತಿಯುತ ಜೀವನ ಮತ್ತು ಆತ್ಮದ ಸನ್ಮಾರ್ಗಕ್ಕೆ ಇದು ಬಹಳ ಅವಶ್ಯಕವೆಂದು ಅರಿವು ಮಾಡಿಸುತ್ತಾಳೆ. ದಾನದಲ್ಲಿ ಹೆಸರಾದ ದಾನಮ್ಮ ಭಕ್ತರಿಂದ ‘ವರದಾನಿ ದಾನಮ್ಮ’ ಎಂದೇ ಕರೆಸಿಕೊಂಡು ಅಸಂಖ್ಯಾತ ಭಕ್ತರಿಂದ ಆರಾಧಿಸಲ್ಪಡುತ್ತಿದ್ದಾಳೆ.
ಇನ್ನೂ ಮುಂದುವರೆದು ದಾನಮ್ಮ ತನ್ನ ಪತಿಯೊಂದಿಗೆ ರಾಮೇಶ್ವರದ ಕಡೆಗೆ ಸಾಗುತ್ತಾಳೆ. ಬಸವಣ್ಣನವರ ಹಾಗು ಇತರ ಶರಣರ ವಚನಗಳನ್ನು ಜನರಿಗೆ ತಿಳಿಸುತ್ತಾ ತಾನು ಅನುಭವ ಮಂಟಪದಲ್ಲಿ ಕೊಟ್ಟ ಮಾತಿನನಂತೆ ಶಿವ ಭಕ್ತಿ ಪ್ರಸಾರದಲ್ಲಿ ತೊಡಗಿಕೊಳ್ಳುತ್ತಾಳೆ.
ಕಾಂಬೆ ನಗರಕ್ಕೆ ದಾನಮ್ಮ ಬಂದಾಗ ಅದಾಗಲೇ ದಾನಮ್ಮನ ಬಗ್ಗೆ ಕೇಳಿ ತಿಳಿದಿದ್ದ ಚೋಳರ ರಾಜ ಮಾನ್ದಲೀಕನು ದಾನಮ್ಮನನ್ನು ಗೌರವಾದರದಿಂದ ಬರ ಮಾಡಿಕೊಂಡು “ಇಷ್ಟಲಿಂಗ ದೀಕ್ಷೆ” ಪಡೆಯುತ್ತಾನೆ.
ಕಾಂಬೆಯಿಂದ ಗುಡ್ಡಾಪುರಕ್ಕೆ ಬಂದು ಸ್ವಲ್ಪ ಕಾಲದ ನಂತರ ಇಷ್ಟಲಿಂಗೈಕ್ಯ ರಾಗುತ್ತಾರೆ.
ಯಾದವ ವಂಶದ ಮಹಾದೇವರಾಜ ಅರಸು ಸಾಯಿನಾಥ ಮಾಂಡಲೀಕ ದಾನಮ್ಮ ದೇವಿಯ ಸಮಾಧಿ ಮಂದಿರಕ್ಕೆ ದೇವಸ್ಥಾನ ನಿರ್ಮಾಣ ಮಾಡಿಸಿದ ಎನ್ನುತ್ತದೆ ಇತಿಹಾಸ.
ಪ್ರತೀ ವರ್ಷವೂ ಛಟ್ಟೀ ಅಮಾವಾಸ್ಯೆಯ ದಿನ ದಾನಮ್ಮ ದೇವಿಯ ಜಾತ್ರೆ ನಡೆಯುತ್ತದೆ. ದಾಖಲೆಯ ಸಂಖ್ಯೆಯಲ್ಲಿ ಜನ ಸೇರುವ ಈ ಜಾತ್ರೆ ಭಾರತದ ಹೆಚ್ಚು ಜನ ಸೇರುವ ಜಾತ್ರೆಗಳಲ್ಲೊಂದು. ವಿಶೇಷ ಸೇವೆಗಳನ್ನು ನೆರವೇರಿಸುವ ಭಕ್ತರಲ್ಲಿ ಸರ್ವೇ ಸಾಮಾನ್ಯವಾದ ಸೇವೆಯೆಂದರೆ ‘ಹೋಳಿಗೆ’ ಸೇವೆ. ವಿವಿಧ ರೀತಿಯ ಹೋಳಿಗೆಯನ್ನು ಮಾಡಿ ದೇವಿಗೆ ಸಮರ್ಪಿಸಿ ಅನಂತರ ತಾವು ಹಂಚಿ ತಿನ್ನುವುದು ಇಲ್ಲಿನ ವಿಶೇಷತೆ.

ಶರಣೆ ಶ್ರೀ ದಾನಮ್ಮ ದೇವಿ ಯನ್ನು ಆದಿಶಕ್ತಿ ಸ್ವರೂಪಿಣಿ, ಪಾರ್ವತಿಯ ಅವತಾರವೆನ್ನುವರು..
ದಾನಮ್ಮನವರು ಮಾಡಿದರು ಎನ್ನುವ ಎಲ್ಲಾ ಪವಾಡಗಳನ್ನು ಅವರ ಕುರಿತು ಬರೆದ ೧೦೮ ನಾಮಾವಳಿಗಳಲ್ಲಿ ಸ್ತುತಿಸಲಾಗಿದೆ..

About Mallikarjun

Check Also

ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆ

Nirmala Tungabhadra campaign poster release ಗಂಗಾವತಿ: ಇಂದು ಲಯನ್ಸ್ ಕ್ಲಬ್‌ನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಂಘ-ಸಂಸ್ಥೆಗಳೊಂದಿಗೆ ನಡೆದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.