I am in love with Samboli Samboli
–ಸಚ್ಚಿದಾನಂದ ಪ್ರಭು ಚಟ್ನಳ್ಳಿ9886694454
ಪ್ರಚಲಿತದಲ್ಲಿರುವ ಮತ್ತು ಪ್ರಕಟವಾದ ವಚನ:
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣವನು,
ʼಸಂಬೋಳಿ ಸಂಬೋಳಿ ಎನ್ನುತ್ತ ಇಂಬಿನಲ್ಲಿದ್ದೇನೆ
ಕೂಡಲಸಂಗಮದೇವಾ ನಿಮ್ಮ ನಾಮವಿಡಿದ ಅನಾಮಿಕ ನಾನು.
ಮೂಲ ವಚನ:
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಲಿಂಗವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣವನು,
ʼಸಂಬೋಳಿ ಸಂಬೋಳಿʼ ಎನ್ನುತ್ತ ಇಂಬಿನಲ್ಲಿದ್ದೇನೆ
ಕೂಡಲಸಂಗಮದೇವಾ ನಿಮ್ಮ ನಾಮವಿಡಿದ ಅನಾಮಿಕ ನಾನು.
ಇದು ಗುರು ಬಸವಣ್ಣನವರ ಅತ್ಯಂತ ಮಹತ್ವವಾದ ವಚನಗಳಲ್ಲಿ ಒಂದು. ಇದು ಲಿಂಗಾಯತ ಧರ್ಮದ ಉಗಮವನ್ನು ಹೇಳುವ ವಚನ. ಲಿಂಗಾಯತ ಧರ್ಮದ ಮೂಲ ಮತ್ತು ಪ್ರಥಮ ಆಚರಣೆ ಎಂದರೆ ಅದು ಇಷ್ಟಲಿಂಗಾರ್ಚನೆ.
ಗುರು ಬಸವಣ್ಣನವರು ಸಮಾಜದಲ್ಲಿ ಪ್ರಚಲಿತವಿದ್ದ ಮೌಢ್ಯತೆಯಿಂದ ಕೂಡಿದ ಬಹುದೇವೋಪಾಸನೆಯನ್ನು ಬಾಲ್ಯದಲ್ಲಿಯೇ ತಿರಸ್ಕರಿಸಿ, ಶಿವ ಭಕ್ತರಾಗಿ ಏಕದೇವತೋಪಾಸಕರಾದರು. 21 ವರ್ಷ ವಸ್ಸಿಗೆ ಲಿಂಗದೇವನ ಸಾಕ್ಷಾತ್ಕಾರವಾಗಿ ಇಷ್ಟಲಿಂಗವನ್ನು ಕಂಡು ಹಿಡಿದರು. ಆ ಇಷ್ಟಲಿಂಗವನ್ನು ಮೊಟ್ಟಮೊದಲಿಗೆ ತಾವೆ ಧರಿಸಿಕೊಂಡು ವಿಶ್ವದ ಮೊಟ್ಟ ಮೊದಲ ಲಿಂಗವಂತರಾದರು ಮತ್ತು ಶಿವಭಕ್ತಿಯಿಂದ ಲಿಂಗದೇವನ ಭಕ್ತಿಗೆ ಪರಿವರ್ತನೆಯಾಗಿ ಏಕದೇವೋಪಾಸಕರಾದರು.
ಎರಡನೆಯದಾಗಿ ತಮ್ಮ ಅಕ್ಕ, ಅಕ್ಕನಾಗಲಾಂಬಿಕೆಯವರಿಗೆ ಇಷ್ಟಲಿಂಗ ದೀಕ್ಷೆಯನ್ನು ಕರುಣಿಸಿ ವಿಶ್ವದ ಎರಡನೇ ಲಿಂಗವಂತರನ್ನಾಗಿ ಮಾಡಿದರು. ನಂತರ ಒಬ್ಬೊಬ್ಬರೇ ಈ ಈರ್ವರಿಂದ ದೀಕ್ಷೆ ಪಡೆದು ಗುರು ಮುಟ್ಟಿ ಗುರುವಾಗಿ ಮತ್ತೆ ಅವರು ಇನ್ನಿತರರಿಗೆ ಇಷ್ಟಲಿಂಗ ದೀಕ್ಷೆ ನೀಡುತ್ತ ಲಿಂಗವಂತರನ್ನಾಗಿ ಪರಿವರ್ತನೆ ಮಾಡುತ್ತ ಬಂದರು.
ಹೀಗೆ ಲಿಂಗವಂತರಾಗುತ್ತ ಪರಿವರ್ತನೆ(Conversion) ಆಗಿ ಲಿಂಗವಂತರ ಸಂಖ್ಯೆ ಹೆಚ್ಚಾಗುತ್ತ ಹೋದಂತೆ ಎಲ್ಲಾ ಲಿಂಗವಂತರು ಒಂದು ಕಡೆ ಸೇರಿ ಧರ್ಮ ಚಿಂತನೆ ಮಾಡುವ ಅವಶ್ಯಕತೆ ಉಂಟಾಯಿತು. ಆಗ ಗುರು ಬಸವಣ್ಣನವರ ಹೃದಯದಲ್ಲಿ ರೂಪುಗೊಂಡು ಬಸವಕಲ್ಯಾಣದಲ್ಲಿ ಮೈದಳೆದ ಲಿಂಗವಂತ ಧರ್ಮದ ಮೊಟ್ಟಮೊದಲ ಧಾರ್ಮಿಕ ಕೇಂದ್ರವೇ ಅನುಭಾವ ಮಂಟಪ
ಈ ಅನುಭಾವ ಮಂಟಪದಲ್ಲಿ ದಿನನಿತ್ಯ ಇಷ್ಟಲಿಂಗಾರ್ಚನೆ ಅನುಭಾವ ಗೋಷ್ಠಿಗಳು ನಡೆಯುತ್ತಿದ್ದವು. ಗುರು ಬಸವಣ್ಣನವರಿಗೆ ಮನುಕುಲದ ಮೇಲೆ ಅಪಾರವಾದ ಪ್ರೀತಿ. ಅದರಲ್ಲೂ ಶತಶತಮಾನಗಳಿಂದ ತುಳಿಯಲ್ಪಟ್ಟ ಸಮಾಜದ ಮೇಲೆ ಅಪಾರವಾದ ಕಾರುಣ್ಯವನ್ನು ಹೊಂದಿದ್ದರು. ಅವರಿಗಾಗಿಯೇ ಸದಾಕಾಲ ಗುರು ಬಸವಣ್ಣನವರ ಹೃದಯ ತುಡಿಯುತ್ತಿತ್ತು ಮಿಡಿಯುತ್ತಿತ್ತು. ಲಿಂಗವಂತ ಧರ್ಮ ಹುಟ್ಟಿಕೊಂಡ ಆರಂಭದಲ್ಲಿ ಲಿಂಗವಂತರ ಸಂಖ್ಯೆ ತೀರಾ ಕಡಿಮೆಯಿತ್ತು. ಲಿಂಗವಂತರಲ್ಲದವರ ಸಂಖ್ಯೆ ಅಗಾಧವಾಗಿತ್ತು. ಹೀಗಾಗಿ ಮೌಢ್ಯತೆಯಲ್ಲಿರುವವರಿಗೆ, ತುಳಿತಕ್ಕೊಳಗಾಗದರಿಗೆ ಇಷ್ಟಲಿಂಗದೀಕ್ಷೆಯನ್ನು ನೀಡಿ ಅವರನ್ನೂಲಿಂಗವಂತರನ್ನಾಗಿಮಾಡುವತವಕಗುರುಬಸವಣ್ಣನವರಲ್ಲಿ.ಅನುಭಾವ ಮಂಟಪದಲ್ಲಿ ಕುಳಿತು ಇಷ್ಟಲಿಂಗಾರ್ಚನೆ ಮಾಡುವ ಶರಣರು, ಇಷ್ಟಲಿಂಗದ ಮಹತ್ವ ಅರಿತುಕೊಂಡು, ಹೊಸ ಧರ್ಮದ ತತ್ವಗಳಿಗೆ ಮಾರುಹೋಗಿ, ಇಷ್ಟಲಿಂಗ ದೀಕ್ಷೆ ಸ್ವೀಕರಿಸಿ, ಲಿಂಗವಂತರಾಗಿ ಪರಿವರ್ತನೆ (Conversion) ಹೊಂದಿ ಅನುಭಾವ ಮಂಟಪದ ಒಳಗೆ ಇದ್ದಾರೆ. ಆದರೆ ಗುರು ಬಸವಣ್ಣನವರಿಗೆ ಇಷ್ಟಕ್ಕೇ ತೃಪ್ತಿಯಿಲ್ಲ. ಅವರ ಹೃದಯದಲ್ಲಿ ಏನೋ ವೇದನೆ… ಏನೋ ತಳಮಳ…
ಸಮಾಜದಲ್ಲಿ ತುಳಿತಕ್ಕೊಳಗಾದವರ ಸಂಖ್ಯೆ ಕೆಳಜಾತಿಯವರೆಂದು ತಿರಸ್ಕರಿಸಲ್ಪಟ್ಟವರ ಸಂಖ್ಯೆ ಅಪಾರವಾಗಿದೆ. ಆ ಸಂಖ್ಯೆಯನ್ನು ನೋಡಿ ಗುರು ಬಸವಣ್ಣನವ ಹೃದಯ ಅವರಿಗಾಗಿ ಮಿಡಿಯುತ್ತಿದೆ. ಈಗಾಗಲೇ ಲಿಂಗವಂತರಾದವರ ಜೊತೆ ಕುಳಿತು ಲಿಂಗಾರ್ಚನೆ ಮಾಡುವಾಗ ಅವರ ಮನಸ್ಸೆಲ್ಲಾ ಇನ್ನು ಲಿಂಗವಂತರಾಗದವರ ಬಗ್ಗೆಯೇ ಯೋಚಿಸುತ್ತಿದೆ. ಅವರ ಮನಸ್ಸು ಅನುಭಾವ ಮಂಟಪದಲ್ಲಿಲ್ಲ ಬದಲಾಗಿ ಕೆಳಜಾತಿಯವರೆಂದು ತುಳಿಯಲ್ಪಟ್ಟವರನ್ನು ಹುಡುಕಿಕೊಂಡು ಹೊರಗೆ ಹೋಗಿದೆ. ಅದಕ್ಕಾಗಿಯೇ ಗುರು ಬಸವಣ್ಣನವರು “ಆನು ದೇವಾ ಹೊರಗಣವನು” ಎನ್ನುತ್ತಿದ್ದಾರೆ.
“ಸಂಬೋಳಿ ಸಂಬೋಳಿ ಎನ್ನುತ್ತ ಇಂಬಿನಲ್ಲಿದ್ದೇನೆ”:
ಲಿಂಗಾಯತ ಧರ್ಮದ ಉಗಮವಾದ ಆರಂಭದ ದಿನಗಳಲ್ಲಿಮೊದಲಿಗೆ ಲಿಂಗವಂತರಾದವರು ಅಂದಿನ ಕಾಲದ ಕೆಲವು ಮೇಲ್ವರ್ಗದವರು ಮತ್ತು ಈ ಹಿಂದೆಯೇ ಇದ್ದ ಶೈವ ಮಾರ್ಗಾನುಯಾಯಿಗಳು. ಲಿಂಗಾಯತ ಧರ್ಮ ಆಹಾರ ಪದ್ಧತಿಯಲ್ಲಿ ಸಸ್ಯಾಹಾರಿ ಧರ್ಮವಾಗಿರುವುದರಿಂದ ಅಂದಿನ ಸಸ್ಯಾಹಾರಿ ಶೈವರು ಮೊದಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗವಂತರಾದರು. ಮಧ್ಯಮವರ್ಗದ ಜನ ಮತ್ತು ಕೆಳವರ್ಗದ ಜನ ಬಹುಸಂಖ್ಯೆಯಲ್ಲಿ ಲಿಂಗವಂತರಾಗಲು ಮುಂದೆ ಬರುತ್ತಿರಲಿಲ್ಲ. ಅದಕ್ಕೆ ಕಾರಣವೇನೆಂದರೆ ಮೊದಲು ಲಿಂಗವಂತರಾದವರು ನಂತರ ಲಿಂಗವಂತರಾದವರ ಜೊತೆ ಉತ್ತಮ ನಡಾವಳಿಕೆ, ಆತ್ಮೀಯತೆ ತೋರುತ್ತಿರಲಿಲ್ಲ ಮೊದಲು ಲಿಂಗವಂತರಾದವರು ನಾವು ಶ್ರೇಷ್ಠರು ನಂತರ ಲಿಂಗವಂತರಾದವರು ಕನಿಷ್ಠರು ಎನ್ನುವ ಭಾವ ಅವರಲ್ಲಿತ್ತು ಆರಂಭದಲ್ಲಿ ಮೊದಲು ಲಿಂಗವಂತರಾದವರು ನಂತರ ಲಿಂಗವಂತರಾದವರ ಜೊತೆ ಊಡುವ ಉಣ್ಣುವ, ಕೊಳ್ಳುವ ಕೊಳ್ಳುವ ವೈವಾಹಿಕ ಬಾಂಧವ್ಯಗಳನ್ನು ಮಾಡುತ್ತಿರಲಿಲ್ಲ ಹೀಗಾಗಿ ಲಿಂಗವಂತರಾಗಲು ಕೆಳವರ್ಗದವು ಹಿಂದೇಟು ಹಾಕುತ್ತಿದ್ದರು.
ಗುರು ಬಸವಣ್ಣನವರ ಕಾಲದಲ್ಲಿ ಸಾಮಾಜಿಕ ಪರಿಸ್ಥಿತಿ ಮತ್ತು ಜಾತಿಯ ಕಟ್ಟುಪಾಡು ಬಹು ಬಿಗಿಯಾಗಿತ್ತು. ಕೆಳಜಾತಿಯವರೆಂದು ಕರೆಯಲ್ಪಟ್ಟವರು ಮೇಲ್ಜಾತಿಯವರೆಂದು ತಿಳಿಯಲ್ಪಟ್ಟವರ ಸೇವೆಗಾಗಿಯೇ ಹುಟ್ಟಿದ್ದಾರೆ ಎಂದು ತಿಳಿದು ಅದೇ ರೀತಿ ಕಟ್ಟು ಪಾಡುಗಳನ್ನು ಹೇರಿದ್ದ ಕಾಲವದು. ಕೆಳಜಾತಿಯ(ದಲಿತರ) ಕೇರಿಯ ವ್ಯಕ್ತಿ, ಮೇಲ್ವರ್ಗದವರ ಓಣಿಗೆ ಸೇವೆಗಾಗಿ ಬರಬೇಕಾದರೆ, ತಾನು ನಡೆದ ಹೆಜ್ಜೆಗಳನ್ನು ಅಳಿಸಿಹಾಕಲು ಸೊಂಟಕ್ಕೆ ಒಂದು ಕಸಬರಿಕೆ, ಉಗುಳು ಬಂದಾಗ ಉಗುಳಲು ಕೊರಳಿಗೆ ಒಂದು ಸಣ್ಣ ಮಡಿಕೆ ಕಟ್ಟಿಕೊಂಡು ಮೇಲ್ವರ್ಗದವರ ಕೇರಿಗೆ ಬರಬೇಕಾಗಿತ್ತು. ಮತ್ತು ತಾನು ಹಾಗೆ ಬರುವಾಗ ಸಂಬೋಳಿ ಸಂಬೋಳಿ ಎನ್ನುವ ಶಬ್ದವನ್ನು ಕೂಗುತ್ತ ಬರಬೇಕಾಗಿತ್ತು. ಹೀಗೆ ಕೂಗುತ್ತ ಬರಲು ಕಾರಣಗಳು ಎರಡು:
ಸಂಬೋಳಿ ಸಂಬೋಳಿ ಎನ್ನುವ ಶಬ್ದಕೇಳಿ ಮೇಲ್ವರ್ಗದವರು ತಾವು ಹಾಗೆ ಹೇಳುತ್ತ ಬರುವವರ ನೆರಳು ಕೂಡ ತಮ್ಮ ಮೇಲೆ ಬೀಳದಂತೆ ದೂರ ಹೋಗಲು ಅನುಕೂಲವಾಗಲು.
ಸೇವೆ ಮಾಡಲು ಬಂದಿರುವ ವ್ಯಕ್ತಿಗೆ ತನ್ನ ಕಾಯಕದಲ್ಲಿ ಆಯಾಸವಾದಾಗ ಅಥವಾ ಇನ್ನೊಬ್ಬ ವ್ಯಕ್ತಿ ಕಂಡಾಗ ಅವರ ಜೊತೆ ಮಾತನಾಡಬೇಕು ಎನಿಸಿದರೆ, ಮೊದಲು ಈ ವ್ಯಕ್ತಿ ಸಂಬೋಳಿ ಸಂಬೋಳಿ ಎನ್ನಬೇಕು. ಆ ಕಡೆ ಇರುವ ವ್ಯಕ್ತಿ ಕೂಡ ಸಂಬೋಳಿ ಸಂಬೋಳಿ ಎಂದು ಮರು ನುಡಿಯಬೇಕು. ಆಗ ಈ ವ್ಯಕ್ತಿ ಆ ವ್ಯಕ್ತಿ ನನ್ನ ಜಾತಿಯವನೇ ಎಂದು ಅರಿತು ಅವರೊಡನೆ ತನ್ನ ಸುಖ ದುಃಖವನ್ನು ಹಂಚಿಕೊಳ್ಳಬಹುದು. ಅವರು ನನ್ನವರು ಹೌದೋ ಅಲ್ಲೋ ಎಂದು ತಿಳಿದುಕೊಳ್ಳಲು ಕೂಡ ಸಂಬೋಳಿ ಸಂಬೋಳಿ ಎನ್ನಬೇಕಿತ್ತು.
ಗುರು ಬಸವಣ್ಣವರೂ ಸಂಬೋಳಿ ಸಂಬೋಳಿ ಎನ್ನುತ್ತ ಇಂಬಿನಲ್ಲಿದ್ದಾರೆ ಅನುಭಾವ ಮಂಟಪದ ಹೊರಗಿದ್ದಾರೆ. ಇದಕ್ಕೆ ಕಾರಣವೇನು? ತಾವು ಸ್ಥಾಪಿಸಿದ ಲಿಂಗವಂತ ಧರ್ಮಕ್ಕೆ ಆರಂಭದಲ್ಲಿ ಪರಿವರ್ತನೆ ಹೊಂದಿ ಬರುವವರ ಸಂಖ್ಯೆ ತುಂಬಾ ಕಡಿಮೆಯಿತ್ತು. ಮಹಾನುಭಾವರಾದ, ಮೇಲ್ಜಾತಿಯವರಾದ ಶ್ರೇಷ್ಠರಾದ ಗುರು ಬಸವಣ್ಣನವರ ಬಳಿಗೆ ಕೆಳಜಾತಿಯ ಜನರು ತಮ್ಮಲ್ಲಿರುವ ಕೀಳರಿಮೆಯಿಂದ ಬರುತ್ತಿಲ್ಲ. ಅದಕ್ಕಾಗಿ ಗುರು ಬಸವಣ್ಣನವರು “ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ, ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ. ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ, ಎನ್ನನೇತಕರಿಯರಿ ಕೂಡಲಂಗಯ್ಯಾ?”, “ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ, ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯ, ದಾಸಯ್ಯ ಶಿವದಾನವನೆರೆಯ ನೋಡಯ್ಯಾ, ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ, ಉನ್ನತ ಮಹಿಮ ಕೂಡಲ ಸಂಗಯ್ಯ, ಶಿವಧೋ ಶಿವಧೋ!” ಎಂದು ಗುರು ಬಸವಣ್ಣನವರು ಉತ್ತಮಕುಲದವರಾಗದೇ ನಾನು ನಿಮ್ಮವನೇ ಎನ್ನುತ್ತ ”ಸಂಬೋಳಿ ಸಂಬೋಳಿ” ಎನ್ನುತ್ತಿದ್ದಾರೆ. ಆಗ ಕೆಳಜಾತಿಯವರು ತನ್ನ ಬಳಿಗೆ ಬಂದು ತಮ್ಮ ಕಷ್ಟ ಸುಖಗಳನ್ನು ಹಂಚಿಕೊಂಡು, ತಮ್ಮಿಂದ ಜ್ಞಾನ ಪಡೆದು, ತಾವು ನೀಡಿದ ತತ್ವ ತಿಳಿದುಕೊಂಡು ಅವರೂ ಲಿಂಗವಂತರಾಗಲಿ ಎನ್ನುವ ತುಡಿತ ಗುರು ಬಸವಣ್ಣನವರ ಹೃದಯದಲ್ಲಿದೆ. ಎಂತಹ ವಿಶಾಲವಾದ ಮಾತೃ ಹೃದಯವದು!!
“ಲಿಂಗದೇವಾ ನಿಮ್ಮ ನಾಮವಿಡಿದ ಅನಾಮಿಕ ನಾನು ನಾನು” ಬಸವಣ್ಣ, ಈ ರಾಜ್ಯದ ಅರ್ಥ ಮಂತ್ರಿ/ ಪ್ರಧಾನ ಮಂತ್ರಿ ಎನ್ನುವ ನಾಮ ನನ್ನದಾದರೆ, ನನ್ನೆಡೆಗೆ ನೊಂದವರು, ಕೆಳಜಾತಿಯವರು, ಸಮಾಜದಲ್ಲಿ ತುಳಿತಕ್ಕೊಳಗಾದವರು ಬರುವುದಿಲ್ಲ. ಅದಕ್ಕಾಗಿ ನಾನು ಲಿಂಗದೇವನ ನಾಮವಿಡಿದ ಅನಾಮಿಕ ಎನ್ನುತ್ತಿದ್ದಾರೆ ಗುರುಬಸವಣ್ಣನವರು.
ಹೀಗಾಗಿ ಲಿಂಗವಂತರಾಗುವಿಕೆ ಅದೊಂದು ಪ್ರಕ್ರಿಯೆ. ಯಾರೂ ಕೂಡ ಇಷ್ಟಲಿಂಗವನ್ನು ಕಟ್ಟಿಕೊಂಡೇ ತಾಯಿಯ ಗರ್ಭದಿಂದ ಹುಟ್ಟಿರುವುದಿಲ್ಲ. ಆದ್ದರಿಂದ ಯಾರೂ ಹುಟ್ಟು ಲಿಂಗಾಯತರಲ್ಲ. ಜನ್ಮ ಪಡೆದ ಮೇಲೆಯೇ ಅಂಗದ ಮೇಲೆ ಲಿಂಗಧಾರಣೆ ಮಾಡಿಕೊಂಡು ಲಿಂಗವಂತರಾಗುತ್ತಾರೆ.
ಗುರು ಬಸವಣ್ಣನರು ವಿಶ್ವದ ಮೊಟ್ಟಮೊದಲ ಲಿಂಗವಂತರು ಉಳಿದವರೆಲ್ಲರೂ ಪರಿವರ್ತನೆ (Conversion) ಆದ ಲಿಂಗವಂತರೇ!!! ಕೆಲವರು 800 ವರ್ಷಗಳ ಹಿಂದೆ ಲಿಂಗವಂತರಾಗಿರಬಹುದು, ಕೆಲವರು 80 ವರ್ಷಗಳ ಹಿಂದೆ ಲಿಂಗವಂತರಾಗಿರಬಹುದು, ಇನ್ನು ಕೆಲವರು 8 ವರ್ಷಗಳ ಹಿಂದೆ ಲಿಂಗವಂತರಾಗಿರಬಹುದು ಇವರೆಲ್ಲರೂ ನಿಜ ನಿಂಗವಂತರೇ… ಆದ್ದರಿಂದ ಹುಟ್ಟುಲಿಂಗಾಯತ ಪರಿವರ್ತನೆ ಹೊಂದಿದ ಲಿಂಗಾಯತ ಎಂದು ಭೇದ ಭಾವ ತಾಳುವುದು ಅಜ್ಞಾನದ ಪರಮಾವಧಿ. ಪಾಪದ ಕೂಪ!!
ಅಂದು ಗುರು ಬಸವಣ್ಣನವರ ಅನುಭಾವ ಮಂಟಪ ಎಲ್ಲರನ್ನೂ ಒಳಗೆ ಕರೆದುಕೊಂಡು ಲಿಂಗವಂತರನ್ನಾಗಿ ಮಾಡುತಿತ್ತು. ಇದರಿಂದ ಲಿಂಗವಂತರ ಸಂಖ್ಯೆ ಕೆಲವೇ ವರ್ಷಗಳಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ದಾಟಿತ್ತು. ಹೀಗೆ ಇಂದೂ ಕೂಡ ಎಲ್ಲರನ್ನೂ ಎಲ್ಲಾ ಜಾತಿಯವರನ್ನೂ ಒಳಗೆ ಕರೆದುಕೊಂಡು ಅವರಲ್ಲಿ ಆತ್ಮವಿಶ್ವಾಸ ತುಂಬಿ ಲಿಂಗವಂತರನ್ನಾಗಿ ಮಾಡಿ ಇಂಬಿಟ್ಟುಕೊಳ್ಳುವ ಮಂಟಪಗಳ ಅವಶಕ್ಯತೆ ಇದೆ.
ಪೂಜ್ಯ ಶ್ರೀ ಲಿಂ. ಲಿಂಗಾನಂದ ಮಹಾಸ್ವಾಮೀಜಿ ಮತ್ತು ಪೂಜ್ಯ ಶ್ರೀ ಲಿಂ.ಮಾತೆ ಮಹಾದೇವಿಯವರು ಲಿಂಗವಂತ ಧರ್ಮವನ್ನು ಪುನರುತ್ಥಾನ ಮಾಡುತ್ತ ಈ ಧರ್ಮಕ್ಕೆ ಅನುಭಾವ ಮಂಟಪದಂಥ ಸಂಸ್ಥೆಗಳು ಬೇಕು ಎಂದು ಬಸವ ಮಂಟಪ ಗಳನ್ನು ಕಟ್ಟುವ ಪದ್ಧತಿ ಜಾರಿಗೆ ತಂದರು. ಅವರು ಜೀವಂತ ಇರುವ ವರೆಗ ಹಲವು ಬಸವ ಮಂಟಪಗಳು ಗುರು ಬಸವಣ್ಣನವರ ಆಶಯದಂತೆ ಕಾರ್ಯ ಮಾಡಿದವು. ಕೆಲವು (ಬಸವ)ಮಂಟಪಗಳು ಅದೇ ಮೌಢ್ಯತೆ ಜಾತೀಯತೆಯನ್ನು ತುಂಬಿಕೊಂಡಿದ್ದವು.
ಇಂದಿನ (ಬಸವ) ಮಂಟಪಗಳು:
ಪೂಜ್ಯ ಶ್ರೀ ಲಿಂ. ಲಿಂಗಾನಂದ ಮಹಾಸ್ವಾಮೀಜಿ ಮತ್ತು ಪೂಜ್ಯ ಶ್ರೀ ಲಿಂ.ಮಾತೆ ಮಹಾದೇವಿಯವರು ಲಿಂಗೈಕ್ಯರಾದ ಮೇಲೆ ಹಲವಾರು ಬಸವ ಮಂಟಪಗಳು ಅಡ್ಡದಾರಿ ಹಿಡಿದಿವೆ, ಜಾತೀಯತೆ, ಮೌಢ್ಯತೆ, ಒಡೆದ ಮನಸ್ಸುಗಳನ್ನು ತುಂಬಿಕೊಂಡು, ದುರ್ಬಲತೆಗಳನ್ನು ಮೈಗೂಡಿಸಿಕೊಂಡು ಗುರು ಬಸವಣ್ಣನವರ ತತ್ವಗಳಿಂದ ಬಹುದೂರ ಸಾಗಿವೆ. ಇನ್ನು ಕೆಲವೇ ಕೆಲವು ಬಸವ ಮಂಟಪಗಳು ಮಾತ್ರ ಗುರು ಬಸವಣ್ಣನವರ ಆಶಯದಂತೆ ನಡೆಯುತ್ತಿವೆ.
೧೨ – ೨೧ ಆದ ಪರಿ೧೨ನೇ ತಮಾನದಲ್ಲಿ ಪಂಚಮಸಾಲಿ/ಬ್ರಾಹ್ಮಣ/ ಬಣಜಿಗ/ಗಾಣಿಗ/ ದಲಿತ ಕುಂಬಾರ /ಕಂಬಾರ /ಬಡಿಗ ಕುರುಬ /ಕಬ್ಬಲಿಗ/ಮೇದಾರ/ಮಾದಾರ / ನೇಕಾರ ಮುಂತಾದವರು ಅನುಭವ ಮಂಟಪಕ್ಕೆ ಹೋದರೆ, ಅವರು ಲಿಂಗವಂತರಾಗಿ ಹೊರ ಬರುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಲಿಂಗವಂತರು ಕೆಲವೊಂದು ಬಸವ ಮಂಟಪ ಮತ್ತು ಮಠಪೀಠ ಪ್ರತಿಷ್ಠಾನಗಳಿಗೆ ಹೋದರೆ ಹೊರಗೆ ಪಂಚಮಸಾಲಿಯೋ, ಬ್ರಾಹ್ಮಣನೋ, ಬಣಜಿಗನೋ, ಗಾಣಿಗನೋ, ಮೇದಾರ, ಮಾದರ ಮುಂತಾದ ಜಾತಿಯವರಾಗಿ ಹೊರಬರುತ್ತಾರೆ. ಇದು ೧೨ನೇ ಶತಮಾನ ೨೧ನೇ ಶತಮಾನವಾದ ಪರಿ. ೧-೨ ಹಿಂದೆ ಮುಂದೆ ಆದಂತೆ ಅಂದಿನ ಮತ್ತು ಇಂದಿನ ವಿಚಾರಗಳೂ ಹಿಂದೆ ಮುಂದೆ ಆಗಿವೆ.
ಎಂತಹ ವಿಪರ್ಯಾಸವಿದು!!!
ಮೂಲ ಆಶಯಗಳಿಂದ ಹಿಂದೆ ಸರಿಯುತ್ತಿರುವ ಬಸವ ಮಂಟಪಗಳು:
ಕೆಲವು ಬಸವ ಮಂಟಪಗಳನ್ನು ಕಟ್ಟುವಾಗ ದಿನ ನಿತ್ಯ ಪೂಜೆ, ಪ್ರತಿ ವಾರ ಪ್ರಾರ್ಥನೆ, ಅನುಭಾವ ಗೋಷ್ಠಿ, ದಾಸೋಹಗಳನ್ನು ನಡೆಸುತ್ತೇವೆ ಎಂದು ನಂಬಿಸಿ ಜನರಿಂದ ಹಣ ಕಿತ್ತುಕೊಂಡು ಬಸವ ಮಂಟಪಗಳನ್ನು ಕಟ್ಟುತ್ತಾರೆ. ಕಟ್ಟಿದ ಮೇಲೆ ಅವುಗಳನ್ನು ವ್ಯವಹಾರಗಳ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ.
ಬಸವ ಮಂಟಪಗಳು ಇವನಾರವ ಇವನಾರವ ಎನ್ನದೇ ಎಲ್ಲರನ್ನೂ ಇಂಬಿಟ್ಟುಕೊಳ್ಳಬೇಕು. ಆದರೆ ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಲಿಂಗೈಕ್ಯರಾದ ನಂತರ ಕೆಲವು ಬಸವ ಮಂಟಪಗಳು ಮತ್ತು ಕೆಲವು ಮಠ ಪೀಠ ಪ್ರತಿಷ್ಠಾನಗಳು ಸೀಮಿತವಾದ ಜನರಿಗೆ ಮಾತ್ರ ಪ್ರವೇಶ ನೀಡಿ ಇನ್ನುಳಿದವರಿಗಾಗಿ ತಮ್ಮ ಮಂಟಪ, ಮಠ, ಪೀಠ ಪ್ರತಿಷ್ಠಾನಗಳ ದ್ವಾರಗಳನ್ನು ಮುಚ್ಚಿ ಅಲ್ಲಿ ಪೋಲಿಸ್ ಕಾವಲುಗಳನ್ನು ಹಾಕುತ್ತಿರುವುದು ಅತ್ಯಂತ ನಾಚಿಕೆ ಗೇಡಿನ ಸಂಗತಿ. ಇದು ಸಮಾಜದ ಅಧೋಗತಿಯನ್ನು ಬಿಂಬಿಸುತ್ತದೆ. ಇದರಿಂದ ಸಮಾಜ ಮತ್ತೆ ತಲೆ ಎತ್ತಿ ನಿಲ್ಲಲು ಶತಮಾನಗಳೇ ಬೇಕಾದೀತು!!!
ಪ್ರಾರ್ಥನೆಗೆಂದು ಬಸವ ಮಂಟಪಗಳನ್ನು ಕಟ್ಟಿ ಭಾನುವಾರ ಮದುವೆಗಾಗಿ ಬಾಡಿಗೆ ಕೊಡುವ ಅನೇಕ ಬಸವ ಮಂಟಪಗಳು ಕಲ್ಯಾಣ ಮಂಟಪಗಳಾಗಿ ಬದಲಾವಣೆಗಳಾಗಿವೆ. ಇನ್ನು ಕೆಲವು ಬಸವ ಮಂಟಪಗಳು ಇಬ್ಭಾಗವಾಗಿ ಅರ್ಧ ಭಾಗ ಪ್ರಾರ್ಥನೆಗೆ ಅರ್ಧ ಭಾಗ ಮದುವೆ ಸಮಾರಂಭಗಳಿಗೆ ಉಪಯೋಗವಾಗುತ್ತಿವೆ. ಇನ್ನು ಕೆಲವು ಬಸವ ಮಂಟಪಗಳ ಮನಸ್ಸುಗಳೇ ಒಡೆದು ಹೋಗಿ ಕಸ ಹೊಡೆಯುವವರೇ ಗತಿ ಇಲ್ಲದಂತಾಗಿವೆ. ಮತ್ತೆ ಕೆಲವು ಬಸವ ಮಂಟಪಗಳು ಬಡ ಭಕ್ತರ ಆಶ್ರಯ ಕೇಂದ್ರಗಳಾಗದೆ, ವಸತಿಗೃಹಗಳಾಗಿ(Lodge)ಗಳಾಗಿ ಪರಿವರ್ತನೆ ಹೊಂದಿವೆ. ಒಂದೆರಡು ದಿನ ವಸತಿಗಾಗಿ ಬಸವ ಮಂಟಪಗಳಿಗೆ ಹೋದರೆ ಅಲ್ಲಿ ವಸತಿ ಶುಲ್ಕ ಪಡೆಯಲಾಗುತ್ತಿದೆ. ಬಸವ ಮಂಟಪ ಕಟ್ಟಲು ಕಾಣಿಕೆ ನೀಡಿದ ಭಕ್ತರೂ ಶುಲ್ಕದಿಂದ ಹೊರತಾಗಿಲ್ಲ. ಧಾರ್ಮಿಕ ಸಂಸ್ಥೆಗಳು ಭಕ್ತರ ಹಿತಕ್ಕಾಗಿರುವ ಸಂಸ್ಥೆಗಳಾಗದೇ ಕೆಲವೇ ಕೆಲವರ ಆಸ್ತಿಗಳಾಗಿ ಪರಿವರ್ತನೆ ಹೊಂದುತ್ತಿರುವುದಕ್ಕೆ ಮಠಗಳಲ್ಲಿರುವ ಕಾವಿಧಾರಿಗಳ ದುರಂಹಂಕಾರ ಲೋಭ ಕಾರಣವೋ ಅಥವಾ ಭಕ್ತರ ಸಹಿಷ್ಣುತೆ ಕಾರಣವೋ ಎನ್ನುವ ಗೊಂದಲ ಉಂಟಾಗುತ್ತಿದೆ.
ಕೆಲವು ಬಸವ ಮಂಟಪಗಳಲ್ಲಿ, ಮಠಗಳಲ್ಲಿ, ಪೀಠಗಳಲ್ಲಿ, ಪ್ರತಿಷ್ಠಾನಗಳಲ್ಲಿ ಎಂದಿನಂತೆ, ಪೂಜೆ ಪ್ರಾರ್ಥನೆ, ದಾಸೋಹ, ಅನುಭಾವ ಗೋಷ್ಠಿ, ನಡೆಯದೇ ಬಿಕೋ ಎನ್ನುತ್ತಿವೆ. ಭಕ್ತರಿಂದ ಕಂಗೊಳಸಿಬೇಕಾದ ಮಠಗಳು ಪೋಲಿಸರಿಂದ ವಿಕೃತಲಂಕಾರಗೊಳ್ಳುತ್ತಿವೆ. ಧರ್ಮ ಪ್ರಚಾರಕ್ಕಾಗಿ ಅಲೆಯಬೇಕಾದ ಕಾವಿಧಾರಿಗಳು ಪೋಲೀಸ್ ಠಾಣೆ, ಕೋರ್ಟುಗಳಿಗೆ ಅಲೆಯುತ್ತಿರುವುದು ಅವನತಿಯ ಸಂಕೇತವೋ ಪ್ರಗತಿಯ ಸಂಕೇತವೋ?
ಬಸವ ಮಂಟಪಗಳು ಅನುಭಾವ ಮಂಟಪಗಳಾಗಬೇಕು ಇಲ್ಲದಿದ್ದರೆ ಧರ್ಮ ಉಳಿಸಿಕೊಳ್ಳಲು ಮತ್ತೊಮ್ಮೆ ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಮಾತೆ ಮಹಾದೇವಿಯವರೇ ಹುಟ್ಟಿ ಬರಬೇಕಾದೀತು!! ಅದಕ್ಕಾಗಿ ಎಂಟು ಶತಮಾನಗಳವರೆಗೂ ಕಾಯಬೇಕಾದೀತು!!
ಲಿಂಗವಂತ ಧರ್ಮ ಲಿಂಗಾಯತಧರ್ಮವಾಗಿ ಮಾರ್ಪಡುವ ಪ್ರಕ್ರಿಯೆಯಲ್ಲಿಯೇ ಅದು ನಿಧಾನವಾಗಿ ಅಳಿವಿನಂಚಿಗೆ ಸಾಗಿದೆ, ವೈದಿಕತೆಯೆಡೆಗೆ ಮುಖಮಾಡಿದೆ.
ಕ.ಚ. ಪಾಟೀಲ ಎನ್ನುವ ಸಾಹಿತಿಯೊಬ್ಬರು ತಮ್ಮ ಸಾಮಾಜಿಕ ಮುಖ ಪುಟ್ಟದಲ್ಲಿ ಹೀಗೆ ಬರೆದಿದ್ದರು “36 ಕೋಟಿ ದೇವತೆಗಳನ್ನು ಪೂಜಿಸುವವರು ಹಿಂದುಗಳಾದರೆ 36 ಕೋಟಿ+1 (ಇಷ್ಟಲಿಂಗ) = ಮೂವತ್ತಾರುಕೋಟಿದೇವತೆ ಮತ್ತು ಒಂದು ದೇವರನ್ನು ಪೂಜೆ ಮಾಡುವವರು ಲಿಂಗಾಯತರು” ಎಂದು.
ಲಿಂಗವಂತ ಸಮಾಜ ಅಧೋಗತಿಗೆ ತಲುಪುತ್ತಿದ್ದರೆ ಮಂಟಪ, ಮಠ, ಪೀಠ, ಪ್ರತಿಷ್ಠಾನಗಳಿಗೆ ತಮ್ಮ ಪ್ರತಿಷ್ಠೆಯೇ ಮುಖ್ಯವಾಗಿದೆಯೇ ಹೊರತು ತಮ್ಮನ್ನು ಬೆಳೆಸಿದ ಸಮಾಜದ ಹಿತಾಸಕ್ತಿ ಮರೆತಿದ್ದಾರೆ. ಹೀಗಾದರೆ ಸಮಾಜವನ್ನು ಮುನ್ನಡೆಸುವವರಾರು? ಸಮಾಜಕ್ಕೆ ಮಾರ್ಗದರ್ಶನ ನೀಡುವವರಾರು? ಮುಂದಿನ ಜನಾಂಗಕ್ಕೆ ಈ ಧರ್ಮದ ವಂಶವಾಹಿನಿಗಳನ್ನು ನೀಡುವವರಾರು? ಸಮಾಜದ ಬಗ್ಗೆ ಕಳಕಳಿಯುಳ್ಳ ಗೃಹಸ್ಥ ಜಂಗಮರು ಸಮಯ ಸರಿಯಿಲ್ಲವೆಂದು ಮೌನತಾಳಬೇಕೋ? ನನ್ನನ್ನು ನಾನು ಉದ್ಧರಿಸಿಕೊಂಡರೆ ಸಾಕು ಎಂದು ಅಳಿದ ಸಮಾಜದಿಂದ ದೂರ ಸಾಗಬೇಕೋ, ಕೇವಲ ಇಷ್ಟಲಿಂಗಯೋಗ, ಪೂಜೆ, ಚಿಂತನೆಗಳನ್ನು ಮಾಡಿಕೊಂಡು ಆತ್ಮೋದ್ಧಾರ ಮಾಡಿಕೊಳ್ಳಬೇಕೋ ಅಥವಾ ಗಣಾಚಾರಿಯಾಗಿ ಮಡಿವಾಳ ಮಾಚಿತಂದೆಯಿಂದ ಖಡ್ಗವನ್ನು ಅನುಗ್ರಹಿಸು ಎಂದು ಕೇಳಿಕೊಳ್ಳಬೇಕೋ ತಿಳಿಯದಾಗಿದೆ.
ಈ ರೀತಿ ಗುರು ಬಸವಣ್ಣನವರ ವಚನದಲ್ಲಿ “ಲಿಂಗವಂತರಾಗಿ ಒಳಗೈದಾರೆ” ಎನ್ನುವ ಪಾಠವನ್ನು ಹೊಸ ಶಬ್ದವನ್ನು ಡಾ. ಆರ್.ಸಿ. ಹೀರೇಮಠರವರು ಸಂಪಾದಿಸಿ ವಚನಗಳ ಗ್ರಂಥದಲ್ಲಿ ನೋಡಿದಾಗ ಗುರು ಬಸವಣ್ಣನವರ ಮೇಲಿನ ವಚನಕ್ಕೆ ಹೆಚ್ಚು ಮೆರಗು ಬರುತ್ತದೆ ಮತ್ತು ಗುರು ಬಸವಣ್ಣನವರ ಹೃದಶರಧಿಯ ವೈಶಾಲ್ಯ ಮತ್ತಷ್ಟು ಮತ್ತಷ್ಟು ಗೋಚರವಾಗುತ್ತಿದೆ. ಮನಸ್ಸು ಗುರು ಬಸವಣ್ಣನವರ ತುಡಿತ ಕಂಡು ನಿಸ್ಸಾಹಯಕ ಸ್ಥಿತಿಯಲ್ಲಿ ಮಿಡಿಯುತ್ತಿದೆ.
-ಸಚ್ಚಿದಾನಂದ ಪ್ರಭು ಚಟ್ನಳ್ಳಿ
9886694454