Breaking News

ಹೆಣ್ಣಿನ ಆಕ್ರಂದನಕ್ಕೆ ಪುರುಷ ಸಮಾಜದ ಸಾಮಾಜಿಕ‌ ಜವಾಬ್ದಾರಿ ‌ಧ್ವನಿ ಏಕಿಲ್ಲ? ಶೈಲಜಾ ಹಿರೇಮಠ


ಗಂಗಾವತಿ.13:ಹೆಣ್ಣಿನ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಕೌರ್ಯ, ಕೊಲೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನಸಿಕ ದೌರ್ಜನ್ಯ,ಅಪ್ರಾಪ್ತ ಹೆಣ್ಮಕ್ಕಳ ಅತ್ಯಾಚಾರ, ಸಾಮಾಜಿಕ ಅಗೌರವ ಎಗ್ಗಿಲ್ಲದೇ ನೆಡೆದರೂ, ಪುರುಷ ಸಮಾಜ ಮಾತ್ರ ತನ್ನ ಪಾಡಿಗೆ ತಾನಿದೆ. ತನಗೂ ಇದಕ್ಕೂ ಏನು ಸಂಬಂಧವೇ ಇಲ್ಲ ಎನ್ನುವಂತೆ ಇರುವ ಪುರುಷ ಮನಸ್ಥಿತಿಗೆ ದಿಕ್ಕಾರ,. ಮೈಕ್ ಸಿಕ್ಕಾಗ ಪುಂಕಾನು ಪುಂಕ ಹೆಣ್ಮಕ್ಕಳನ್ನು ಹೊಗಳಿ ಮತ ಹಾಕಿಸಿಕೊಳ್ಳುವ ಮಂತ್ರಿಗಳು, ಶಾಸಕರು, ಒಟ್ಟಾರೆ ರಾಜಕಾರಣಿಗಳು ಸಮಾಜದಲ್ಲಿ ಇಂತಹ ಘಟನೆ ನೆಡೆದಾಗ ವ್ಯಕ್ತಿಗತ ಹೇಳಿಕೆ ಕೊಡದಷ್ಟು ಅಧಿಕಾರ ಅಂಧಾಕಾರದಲ್ಲಿ ಬೆಚ್ಚಗೆ ಮಲಗಿದ್ದಾರೆ. ಇವರಿಗೆ ಒಂದು ಸ್ಟೆಟ್ಮೆಂಟ್ ಕೊಡಬೇಕೆಂದರೂ ಮಾಧ್ಯಮದವರು ಅವರ ಮುಂದೆ ಮೈಕ್ ಹಿಡಿದು ಪ್ರಶ್ನೆ ಕೇಳಿದಾಗ ಮಾತ್ರ ಲೋಕಾರೂಢಿಯಾಗಿ ಖಂಡನೆ ವ್ಯಕ್ತಪಡಿಸಿ ಮುಂದೆ ಸಾಗುತ್ತಾರೆ.
ತಮ್ಮ ಫೇಸ್ಬುಕ್ ಖಾತೆಯೋ ಅಥವಾ x ಖಾತೆಯಲ್ಲೋ ಒಂದು ಖಂಡನೆ ವ್ಯಕ್ತಪಡಿಸುವುದಿಲ್ಲ. ಅಷ್ಟಕ್ಕೂ ಈ ಉನ್ನತ ವ್ಯಕ್ತಿಗಳ ಖಾತೆಗಳನ್ನು ನಿರ್ವಹಿಸುವವರೇ ಅವರ ಆಪ್ತ ಸಹಾಯಕರು.‌ಅವರು ಇವರಿಗಿಂತ Busy ಆಗಿರುತ್ತಾರೆ. ‌ಯಾಕೆ ಸದಾ ಇಂತಹ ಘಟನೆಗಳು ನೆಡೆದಾಗ , ಪ್ರತಿಭಟನೆಗಳನ್ನು ಮಹಿಳೆಯರೇ ಮಾಡಬೇಕು‌? ಇದು ಪುರುಷ ಸಮಾಜದ ಕರ್ತವ್ಯ ಅಲ್ಲವೇ ?
ಆತನೂ ಒಬ್ಬ ತಾಯಿಯ ಗರ್ಭದಿಂದ ಜನಿಸಿಲ್ಲವೇ ? ತನ್ನ ಮನೆಯಲ್ಲಿ ತಾಯಿ-ಅಕ್ಕ- ತಂಗಿ ಎಂಬ ಸಂಬಂಧಗಳ ಸಂವೇದನೆಗಳ ನಡುವೆ ಬೆಳೆದಿರುವುದಿಲ್ಲವೇ ?

ಮಹಿಳೆಯರ ಕುರಿತು ಸೂಕ್ಮ ಸಂವೇದನೆ ಅನುಭವ ಆತನಿಗಿಲ್ಲದೇ ಬೆಳೆಯಲು ಸಾಧ್ಯವೇ ? ಅಥವಾ ತನ್ನ ಮನೆಯ ಹೆಣ್ಮಕ್ಕಳ ‌ಮೇಲೆ ಇರುವ ಬದ್ಧತೆ ಬೇರೆ ಹೆಣ್ಮಕ್ಕಳ ಮೇಲೆ ಇರುವುದಿಲ್ಲವೇ?

ತನ್ನ ಮನೆಯ ಹೆಣ್ಮಕ್ಕಳ ಮೇಲೆ ಏನಾದರೂ ಅನ್ಯಾಯವಾದಾಗ ಬೀದಿಗಿಳಿದು ಹೋರಾಡುವ ಪುರುಷ, ತನ್ನ ಸುತ್ತಮುತ್ತ ಇಂತಹ ಪ್ರಕರಣಗಳು ನೆಡೆದಾಗ ಏಕೆ ಸ್ಪಂದಿಸುತ್ತಿಲ್ಲ‌?

ಅದರಲ್ಲೂ ಈ ಸೆಲಬ್ರಿಟಿಗಳು ಬಂದಾಗ ಅವರನ್ನು ಮುಕ್ಕಿಕೊಂಡು ಸೆಲ್ಫಿ ಕಿಕ್ಕಿಸಿಕೊಳ್ಳಲು ಮುಂದಾಗುವ ಈ ಪುರುಷರು , ಅವರಿಗೆ ಏನಾದರೂ ಅನ್ಯಾಯವಾದರೆ ಫ್ಯಾನ್ ಎನ್ನುವ ಹೆಸರ ಮೇಲೆ ಬೀದಿಗಿಳಿದು ಹೋರಾಟ ಮಾಡುತ್ತಾರೆ. ‌ಅದೇ ಸಾಮಾನ್ಯ ‌ಮಹಿಳೆಯರು ಅನ್ಯಾಯಕ್ಕೆ ಒಳಗಾದಾಗ ತಮಾಷೆ ನೋಡುತ್ತಾ ಕುಳಿತುಕೊಳ್ಳುತ್ತಾರೆ. ಅದನ್ನು ರಾತ್ರಿ ಗುಂಡು ಹಾಕುವಾಗ ಮಾತಾಡಿ ಮಜಾ ತೆಗೆದುಕೊಳ್ಳುತ್ತಾರೆ. ಪುರುಷನ ಮನಸ್ಸು ಯಾಕಿಷ್ಟು ಕೌರ್ಯ… ?

ಪುರುಷನ ದರ್ಪ – ದಿಮಾಕಿಗೆ ಆಕೆಯ ಹೆತ್ತ ತಾಯಿಯನ್ನು ಹೊಣೆ ಮಾಡಲು ಸಾಧ್ಯವೆ ? ಅಥವಾ ಪೋಷಣೆಯ ಕೊರತೆಯೇ ?

ಇಂದು ಡಿಜಿಟಲ್ ಯುಗದಲ್ಲಿ ದಿನನಿತ್ಯ ಹೆಣ್ಣು ಒಳ್ಳೆಯ ಉದ್ದೇಶಗಳಿಗಿಂತ ಕೆಟ್ಟ ವಿಚಾರಗಳಿಗೆ ಬಳಕೆಯಾಗುತ್ತಿರುವುದು ಒಂದು ದುರಂತವೇ ಸರಿ. ಕೆಲವಡೆ ಅನೇಕ ಒತ್ತಡಗಳಿಗೆ ಹೆಣ್ಣು ದುರ್ಬಳಕೆಯಾದರೆ, ಕೆಲವಡೆ ಆಧುನಿಕ ಐಷಾರಾಮಿ ಬದುಕಿಗೆ , ಇನ್ನೂ ಕೆಲವಡೆ ಅಧಿಕಾರದ ಮದಕ್ಕೆ, ಆಕೆಯ ನಿಸ್ಸಾಯಕತೆಗೆ ನಿರಂತರ ಶೋಷಣೆಗೆ ಒಳಗಾಗುತ್ತಿರುವುದು ಕೇವಲ ವ್ಯವಸ್ಥೆಯ ಲೋಪವಷ್ಟೆ ಅಲ್ಲ.‌ಇಂತಹ ಘಟನೆ ನೆಡೆದಾಗ ಪ್ರತಿಭಟಿಸದ ಪುರುಷ ಸಮಾಜದ ಧೋರಣೆಯೂ ಒಂದು ಕಾರಣ.‌

ಇತ್ತೀಚೆಗೆ ಪ್ರತಿಭಟನೆ ಎಂದರೆ ಅದೂ ಕೂಡ ಒಂದು ಪ್ರಚಾರದ ಪ್ರಕ್ರಿಯೆಗೆ ಸೀಮಿತವಾಗಿದೆ. ಟಿವಿಯಲ್ಲಿ , ಮಾಧ್ಯಮದಲ್ಲಿ ತಮ್ಮ ಫೋಟೋ ಮತ್ತು ಮಾತಾಡುವುದನ್ನು ತಮಗೆ ತಾವೇ ನೋಡಿಕೊಳ್ಳಲು ಮಾಡುವ ತೆವಲಾಗಿದೆ.
ಪ್ರತಿಭಟಿಸುವುದು ಎಂದರೆ ಸ್ವಯಂಪ್ರೇರಿತ ಧ್ವನಿ ಎತ್ತುವುದು. ಆದರೆ ತಮ್ಮ ಸುತ್ತ – ಮುತ್ತ ಹೆಣ್ಮಕ್ಕಳ ಮೇಲೆ ನೆಡೆದಾಗ ಧ್ವನಿಯೆತ್ತಿ ಖಂಡಿಸುವ ಸಾಮರ್ಥ್ಯ ಕೂಡ ಪುರುಷ ಸಮಾಜ ಕಳೆದುಕೊಂಡುಬಿಟ್ಟಿದೆ.
ಕೇವಲ 5% ಕ್ಕಿಂತ ಕಡಿಮೆ ಪುರುಷರು ಇಂದು ಇಂತಹ ಘಟನೆಗಳು ನಡೆದಾಗ ಮಹಿಳೆಯ ಜೊತೆಗೆ ನಿಲ್ಲುತ್ತಾನೆ.

ಹಾಗಾಗಿ, ಹೆಣ್ಮಕ್ಕಳು ತನ್ನ ವಿದ್ಯಾಭ್ಯಾಸದ ಜೊತೆಗೆ ಇಂತಹ ಪ್ರಕರಣಗಳು ಜರುಗದಂತೆ ತನ್ನ ಸುತ್ತ ತಾನೆ ರಕ್ಷಣೆಯ ಕೋಟೆ ಕಟ್ಟಿಕೊಳ್ಳಬೇಕು, ಯಾವುದೇ ನಾಚಿಕೆಗೆ ಒಳಪಡದೇ ತನಗಾಗುವ ಅನ್ಯಾಯಕ್ಕೆ ತಾನೇ ಹೋರಾಟ ಮಾಡಬೇಕು.‌ಅದು ವ್ಯವಸ್ಥೆಯ ಜೊತೆಯಿರಲಿ, ಉನ್ನತ ಅಧಿಕಾರಸ್ಥರ ವಿರುದ್ಧವೇ ಆಗಿರಲಿ, ಹಿಂಜರಿಯದೆ ತನಗಾದ ಅನ್ಯಾಯಕ್ಕೆ ತಾನೆ ನ್ಯಾಯ ಸಿಗುವವರೆಗೂ ಹೋರಾಡುವೆ ಎಂಬ ಧೈರ್ಯದಿಂದ ಬದುಕಬೇಕು..

ಸಂವಿಧಾನ ನಮಗೆ ಎಲ್ಲಾ ಭದ್ರತೆ ಕೊಟ್ಟಿದೆ. ಆದರೆ ಅದರ ಅನುಷ್ಠಾನ ಪುರುಷನ ಅಹಂನ ಒಳಗೆ ಮಲಿತಗೊಂಡಿದೆ.
ಹಾಗಾಗಿ ನಮ್ಮ ಹಕ್ಕಿಗಾಗಿ ನಾವು ದಿನನಿತ್ಯ ಹೋರಾಟಮಾಡುತ್ತಾ ಬದುಕುವ ಅನಿವಾರ್ಯದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರೆ ಸುಳ್ಳಾಗದು.

ಒಟ್ಟಾರೆ ಈ ಪುರುಷರಿಗೆ ತನ್ನ ಮನೆಯ ಹೆಣ್ಮಕ್ಕಳ ಮೇಲೆ ಇರುವ ಕಾಳಜಿ‌- ಗೌರವ – ತಾಳ್ಮೆಯ ನಡತೆ ಅನ್ಯ‌ ಮಹಿಳೆಯರ ಮೇಲೂ ತೋರಿಸುವ ಮನಸ್ಥಿತಿ ಬರದೇ , ಈ‌ ಸಮಾಜದಲ್ಲಿ ಹೆಣ್ಮಕ್ಕಳ ಹೋರಾಟದ ಹೆಜ್ಜೆಗಳಿಗೆ ಕೊನೆಯಿಲ್ಲ…. ಅಲ್ಲವೇ ?

ಜನ್ಮ ಕೊಡಲು‌ ಸಾಧ್ಯವಾಗುವ ಹೆಣ್ಣಿಗೆ, ಪುರುಷನ ಅಹಂನ ಜನ್ಮ ಜಾಲಾಡುವುದಕ್ಕೂ ಬರುತ್ತದೆ ಎನ್ನುವ ಅರಿವು ಮಹಿಳೆಯರೂ ರೂಢಿಸಿಕೊಳ್ಳಬೇಕು.‌ಮತ್ತು ಪುರುಷ ಸಮಾಜಕ್ಕೆ ಈ ವಾಸ್ತವದ ಭಯವಿರಬೇಕು…‌
ಶೈಲಜಾ ಹಿರೇಮಠ. ‌ಗಂಗಾವತಿ

About Mallikarjun

Check Also

ಕೃಷಿ ಚಟುವಟಿಕೆಗಳಲ್ಲಿ ಡ್ರೋಣ್ ತಾಂತ್ರಿಕತೆ ಬಳಕೆ ಅತ್ಯವಶ್ಯಕ – ಕೃಷಿ ವಿವಿ ಕುಲಪತಿ ಡಾ.ಎಸ್ ವಿ ಸುರೇಶ

ಬೆಂಗಳೂರು; ಭಾರತ ಈಗ ಆಹಾರೋತ್ಪಾನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಇದಕ್ಕೆ ಕೃಷಿ ಚಟುವಟಿಕೆಗಳಲ್ಲಿ ತಾಂತ್ರಿಕತೆ ಬಳಕೆ ಮುಖ್ಯವಾಗಿದೆ ಎಂದು ಬೆಂಗಳೂರು ಕೃಷಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.