Basava Panchami: A Scientific and Rational Thought
~ಡಾ. ಜೆ ಎಸ್ ಪಾಟೀಲ.
ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ. ಹಾಗಾಗಿ ನಾವು ನಮ್ಮ ಸಂಸ್ಕೃತಿಯಲ್ಲಿ ಬರುವ ಎಲ್ಲಾ ಹಬ್ಬಗಳನ್ನು ವೈಜ್ಞಾನಿಕ ಹಾಗು ವೈಚಾರಿಕ ನೆಲೆಗಟ್ಟಿನಲ್ಲಿ ಆಚರಿಸುವ ಮೂಲಕ ಅವುಗಳೊಳಗೆ ತುರುಕಲಾಗಿರುವ ಮೌಢ್ಯಗಳನ್ನು ಕಿತ್ತೆಸೆಯಬೇಕಿದೆ. ಈ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆಯು ಅನೇಕ ಬಗೆಯಲ್ಲಿ ಸಮಾಜದಲ್ಲಿ ಬೇರೂರಿರುವ ಮೌಢ್ಯಗಳ ನಿವಾರಣಾ ಕಾರ್ಯಗಳನ್ನು ಮಾಡುತ್ತಿದೆ. ಅದೇ ರೀತಿ ನಾಗರಪಂಚಮಿಯಂದು ಕಲ್ಲು ನಾಗರಕ್ಕೆ ಹಾಲನ್ನು ಎರೆಯುವ ಮೂಲಕ ಅಮೂಲ್ಯವಾದ ಹಾಲನ್ನು ವ್ಯರ್ಥಮಾಡುವ ಮಾನವನ ಮೂರ್ಖತನವನ್ನು ನಿವಾರಿಸಿ ಪಂಚಮಿ ಹಬ್ಬವನ್ನು ವೈಜ್ಞಾನಿಕ ಹಾಗು ವೈಚಾರಿಕ ಹಿನ್ನೆಲೆಯಲ್ಲಿ ಬಸವ ಪಂಚಮಿ ಎಂದು ಆಚರಿಸುವ ಅಭಿಯಾನ ಪ್ರತಿವರ್ಷ ಮಾಡುತ್ತಿದೆ.
ನಾಗರ ಪಂಚಮಿಯು ಮಳೆಗಾಲದ ಮಧ್ಯದಲ್ಲಿ ಶ್ರಾವಣ ಮಾಸದ ಆರಂಭದಲ್ಲಿ ಬರುವ ಕನ್ನಡಿಗರು ಮಾತ್ರ ಆಚರಿಸುವ ಒಂದು ಮಹತ್ವದ ಹಬ್ಬವಾಗಿದೆ. ಜೂನ್ ತಿಂಗಳಿಂದ ಆರಂಭಗೊಂಡು ಮಳೆಗಾಲದಲ್ಲಿ ಬಿಟ್ಟುಬಿಡದ ಕೃಷಿ ಚಟುವಟಿಕೆಗಳಿಂದ ಹಳ್ಳಿಗಾಡಿನ ರೈತಾಪಿ ಜನರಿಗೆ ಸ್ವಲ್ಪ ಬಿಡುವಿನ ಕಾಲವದು. ಹೊಲಗಳನ್ನು ಉತ್ತು, ಬಿತ್ತು ದಣಿದ ದೇಹಕ್ಕೆ ಒಂದಷ್ಟು ವಿಶ್ರಾಂತಿ ಹಾಗು ಮನರಂಜನೆ ನೀಡುವ ಹಿನ್ನೆಲೆಯಲ್ಲಿ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಮದುವೆಗಳು ವೈಶಾಖ ಮಾಸದಲ್ಲಿ ಮಾತ್ರ ಜರುಗುತ್ತಿದ್ದವು. ಆಗ ಗಂಡನ ಮನೆಗೆ ಹೋದ ಹೆಣ್ಣುಮಗಳನ್ನು ಪಂಚಮಿಗೆ ತವರು ಮನೆಗೆ ಕರೆದುಕೊಂಡು ಬಂದು ಸಂಭ್ರಮಿಸುವ ಸಂದರ್ಭವೆ ಪಂಚಮಿ ಹಬ್ಬದ ವಿಶೇಷತೆ. ಇದು ಸಹೋದರ-ಸಹೋದರಿಯರ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬ. ಇಂತಹ ಹಬ್ಬದ ಮಹತ್ವವನ್ನು ಮರೆತು ಕನ್ನಡಿಗರು ಉತ್ತರ ಭಾರತದಿಂದ ವಲಸೆ ಬಂದ ರಾಖಿ ಬಂಧನ ಆಚರಿಸುತ್ತಿರುವುದು ದುರಂತದ ಸಂಗತಿ. ಆ ಹಿನ್ನೆಲೆಯಲ್ಲಿ ಪಂಚಮಿ ಹಬ್ಬವು ಕನ್ನಡಿಗರು ಮಾತ್ರ ಆಚರಿಸುವ ಹಬ್ಬವಾಗಿ ಗುರುತಿಸಿಕೊಳ್ಳುತ್ತದೆ.
ಪಂಚಮಿ ಹಬ್ಬದ ಮತ್ತೊಂದಷ್ಟು ವಿಶೇಷತೆಗಳೆಂದರೆ ಗ್ರಾಮೀಣ ಜನಪದ ಕ್ರೀಡೆಗಳ ಸ್ಪರ್ಧೆಗಳನ್ನು ಏರ್ಪಡಿಸುವುದು. ಮಳೆಗಾಲವಿಡಿ ಕೃಷಿ ಚಟುವಟಿಕೆಗಳಿಂದ ದಣಿದ ದೇಹ ಹಾಗು ಮನಸ್ಸುಗಳಿಗೆ ಮುದ ನೀಡುವ ನಿಂಬೆ ಹಣ್ಣು ಎಸೆತˌ ಗಿಲ್ಲಿದಾಂಡುˌ ಗಲೋರಿ ಮುಂತಾದ ಆಟಗಳ ಸ್ಪರ್ಧೆ ಏರ್ಪಡಿಸುವ ಮೂಲಕ ಗ್ರಾಮಿಣ ಜನರಿಗೆ ಮರಂಜನೆ ನೀಡುವ ಹಾಗು ಮನಸ್ಸನ್ನು ಮುದಗೊಳಿಸುವ ಉದ್ದೇಶ ಈ ಹಬ್ಬದ್ದು. ಇದರ ಜೊತೆಗೆ ಈ ಹಬ್ಬದ ಇನ್ನೊಂದು ವಿಶೇಷತೆ ಎಂದರೆ ಜೋಕಾಲಿ ಆಡುವುದು. ಗಂಡು-ಹೆಣ್ಣು ಹಾಗು ಅಬಾಲವೃದ್ಧರಾದಿಯಾಗಿ ಎಲ್ಲರೂ ಈ ಹಬ್ಬದಲ್ಲಿ ಜೋಕಾಲಿಯಾಡುತ್ತಾರೆ. ಪ್ರತಿಯೊಬ್ಬರು ಒಂದಷ್ಟಾದರೂ ಜೋಕಾಲಿ ಮೇಲೆ ಕೂಡಬೇಕು ಎನ್ನುವು ಪದ್ದತಿ. ಜೊತೆಯಲ್ಲೆ ಜೋಕಾಲಿ ಮೇಲೆ ಕೂಡದಿದ್ದರೆ ಮುಂದಿನ ಜನ್ಮದಲ್ಲಿ ನಾಯಿಯ ಹೊಟ್ಟೆಯಲ್ಲಿ ಹುಟ್ಟುತ್ತಾರೆನ್ನುವ ಮೌಢ್ಯ ಕೂಡ ಬೆಳದುಬಂದಿದೆ. ಹೀಗೆ ನಮ್ಮ ಹಿರಿಯರು ಅನೇಕ ವೈಚಾರಿಕ ಹಾಗು ವೈಜ್ಞಾನಿಕ ನೆಲೆಗಟ್ಟಿನ ಆಧಾರದಲ್ಲಿ ಹಬ್ಬಗಳ ಆಚರಣೆಯನ್ನು ಮಾಡಿಕೊಂಡು ಬಂದಿದ್ದಾರೆ.
ಹಳ್ಳಿಗಾಡಿನಲ್ಲಿರುವ ಎತ್ತರದ ಮರದ ಕೊಂಬೆಗಳಿಗೆ ಬಲವಾದ ಹಗ್ಗದಿಂದ ಕಟ್ಟಿದ ಜೋಕಾಲಿಯನ್ನು ಜೀಕುವುದೇ ಒಂದು ಸಂಭ್ರಮ. ಹೆಣ್ಣುಮಕ್ಕಳನ್ನು ಜೋಕಾಲಿಯಲ್ಲಿ ಕೂಡಿಸಿ ಜೋರಾಗಿ ತೂಗುವುದುˌ ಇಬ್ಬರು ಗಂಡಸರು ಇದಿರು-ಬಿದಿರು ನಿಂತು ಪರಸ್ಪರ ವಿರೋದ ದಿಕ್ಕಿಗೆ ಅನುಕ್ರಮವಾಗಿ ಜೋಕಾಲಿ ಜೀಕುವುದು ಮತ್ತು ಜೋಕಾಲಿ ತಾರಕ್ಕಕ್ಕೇರಿದಾಗ ಸುತ್ತಲು ನೆರೆದ ಜನರೆಲ್ಲ ಜೋರಾಗಿ ಕೂಗಿ ಹುರಿದುಂಬಿಸುವ ಚಿತ್ರಣ ಹಬ್ಬದ ಸಂಭ್ರಮವನ್ನು ಬಣ್ಣಿಸುತ್ತದೆ. ಜೋಕಾಲಿ ಕೇವಲ ದೇಹಕ್ಕೆ ವ್ಯಾಯಾಮವನ್ನಲ್ಲದೆ ಮನಸ್ಸಿಗೆ ಅತ್ಯಂತ ಮುದ ನೀಡುವ ಕ್ರೀಡೆಯಾಗಿದೆ. ಪಂಚಮಿಯ ಹಿಂದಿನ ದಿನದ ಸಂಜೆಯನ್ನು ಗುಗ್ಗರಿ ಹಬ್ಬ ಎಂದು ಆಚರಿಸಲಾಗುತ್ತದೆ. ಆ ದಿನ ವಿವಿಧ ಕಾಳುಗಳನ್ನು ಕುದಿಸಿˌ ಒಗ್ಗರಣೆ ಹಾಕಿ ಮಾಡುವ ಗುಗ್ಗರಿ ಸವಿಯುವುದೇ ಒಂದು ಆನಂದದ ಘಳಿಗೆ. ಈ ಕಾಳುಗಳು ಪ್ರೋಟೀನ್ ಅಂಶವನ್ನು ಹೊಂದಿದ್ದು ಕೃಷಿ ಚಟುವಟಿಕೆಯಿಂದ ದಣಿದ ರೈತನ ದೇಹಕ್ಕೆ ಅಗತ್ಯ ಪ್ರೋಟೀನ್ ಒದಗಿಸುತ್ತದೆ. ಅದರ ಜೊತೆಗೆ ಜೋಳ ಹುರಿತು ತಯ್ಯಾರಿಸಿದ ಅರಳು ಕೂಡ ತಿನ್ನಲಾಗುತ್ತದೆ.
ಹುರಿದ ಜೋಳದ ಅರಳನ್ನು ಬೆಲ್ಲದ ಆಣಿನಲ್ಲಿ ಹಾಕಿ ಮಾಡಿದ ಲಡ್ಡುಗಳುˌ ಅದೇ ಆಗ ರಾಸಿ ಮಾಡಿ ಹೊಲದಿಂದ ತಂದ ಹೆಸರಿನ ಹಿಟ್ಟಿನಿಂದ ತಯ್ಯಾರಿಸಿದ ಸಿಹಿ ಲಡ್ಡು ˌ ಅಳ್ಳಿಟ್ಟು ˌ ತಂಬಿಟ್ಟು ಹಾಗು ಕೊಬ್ಬರಿ ಬಟ್ಟಲು ಇವುಗಳನ್ನು ತಿನ್ನುವುದು ಪಂಚಮಿ ಹಬ್ಬದ ವಿಶೇಷತೆ. ಇಲ್ಲಿ ಹುರಿದ ಜೋಳದ ಅರಳಿನ ಪದಾರ್ಥಗಳು ಕಾರ್ಬೋಹೈಡ್ರೇಟ್ ಹೊಂದಿದ್ದರೆ ಕೊಬ್ಬರಿ ಲಿಪಿಡ್ ಹೊಂದಿರುತ್ತದೆ ಹಾಗು ಕಾಳಿನ ಗುಗ್ಗರಿಗಳಲ್ಲಿ ಪ್ರೋಟಿನ್ ತುಂಬಿರುತ್ತದೆ. ಇವೆಲ್ಲವನ್ನು ತಿನ್ನುವ ಮೂಲಕ ದಣಿದ ದುಡಿಯುವ ವರ್ಗದ ಜನರ ದೇಹಕ್ಕೆ ಸಮತೋಲನ ಆಹಾರವು (ಬ್ಯಾಲೆನ್ಸಸ್ಡ್ ಡೈಯೆಟ್) ದೊರೆಯುತ್ತದೆ. ಇದು ನಮ್ಮ ಹಿರಿಯರು ಅಷ್ಟು ವೈಜ್ಞಾನಿಕ ಆಧಾರದಲ್ಲಿ ಪಂಚಮಿ ಹಬ್ಬವನ್ನು ಹೇಗೆ ರೂಪಿಸಿದ್ದಾರೆ ಎನ್ನುವುದನ್ನು ನಿರೂಪಿಸುತ್ತದೆ. ಮರುದಿನ ಪಂಚಮಿಯಂದು ಎಲ್ಲರು ಹೂರಣದ ಹೋಳಿಗೆ ಮಾಡಿˌ ಗ್ರಾಮ ದೇವತೆಗಳಿಗೆಲ್ಲ ನೈವಿದ್ಯ ಅರ್ಪಿಸಿ ಸಿಹಿ ಊಟ ಮಾಡಿ ಮತ್ತೊಮ್ಮೆ ಜೋಕಾಲಿ ಆಡುವದು ವಾಡಿಕೆ. ಇದು ಪಂಚಮಿ ಹಬ್ಬದ ವಿವಿಧ ಚಟುವಟಿಗಳ ಪಟ್ಟಿ.
ಆದರೆ ಕಾಲಾನಂತರದಲ್ಲಿ ಪಂಚಮಿ ಹಬ್ಬವನ್ನು ನಾಗರ ಹಾವಿಗೆ ತಳಕು ಹಾಕಿ ಸಾಂಪ್ರದಾಯವಾದಿಗಳು ಈ ಹಬ್ಬವನ್ನು ನಾಗರ ಪಂಚಮಿ ಎಂದು ಕರೆದರು. ಈ ಹಬ್ಬದ ನೈಜ ಆಚರಣೆಗಳ ಮಹತ್ವವನ್ನು ಮರೆಮಾಚಿ ಕೇವಲ ಅಮೂಲ್ಯವಾದ ಹಾಲನ್ನು ಕಲ್ಲಿನ ನಾಗರ ಮೂರ್ತಿಗೆ ಎರೆಯುವ ಪರಮ ಮೌಢ್ಯವನ್ನು ಈ ಹಬ್ಬದಲ್ಲಿ ತುರುಕಲಾಯಿತು. ನಾಗರಕ್ಕೆ ಹಾಲೆರೆಯದಿದ್ದರೆ ಹಾವಿಗೆ ಕೋಪ ಬರುತ್ತದೆˌ ನಾಗದೋಷ ಕಾಡುತ್ತದೆ ಮುಂತಾದ ಮೌಢ್ಯಯುಕ್ತ ಭಯವನ್ನು ಜನರ ಮನಸ್ಸಿನಲ್ಲಿ ತುರುಕಿನ ಪುರೋಹಿತಶಾಹಿಗಳು ಹಬ್ಬದ ಆನಂದವನ್ನು ಸವಿಯಬೇಕಾದ ಜನರು ಭಯದಲ್ಲಿ ಕಲ್ಲಿಗೆ ಹಾಲೆರೆಯಲು ದೇವಸ್ಥಾನಗಳ ಮುಂದೆ ಕಿಕ್ಕಿರಿದು ನೆರೆಯುವಂತ ವಾತಾವರಣವನ್ನು ಸೃಷ್ಟಿಸಿದ್ದಾರೆ. ಈ ಮಢ್ಯ ಹಳ್ಳಿಗಾಡಿನ ಜನರಲ್ಲಿ ಅಷ್ಟು ಕಂಡುಬರುವುದಿಲ್ಲ. ಅಲ್ಲಿನ ಜನ ಜೋಕಾಲಿ ಆಟˌ ಗ್ರಾಮೀಣ ಜನಪದ ಕ್ರೀಡಾ ಸ್ಪರ್ಧೆಗಳು ಮತ್ತು ವಿವಿಧ ಬಗೆಯ ತಿಂಡಿಗಳನ್ನು ಸವಿಯುವುದಕ್ಕೆ ಮಾತ್ರ ಹೆಚ್ಚಿನ ಮನ್ನಣೆ ನೀಡುತ್ತಾರೆ. ಅದರಿಂದ ಹಬ್ಬದ ಮೂಲ ಉದ್ದೇಶಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ.
ಆದರೆ ನಗರ ಪ್ರದೇಶದ ಜನರು ವಿದ್ಯಾವಂತರಾಗಿಯೂ ಹಾಲನ್ನು ಕಲ್ಲಿನ ನಾಗರ ಮೂರ್ತಿಯ ಮೇಲೆ ಚೆಲ್ಲಿ ವ್ಯರ್ಥ ಮಾಡುವಲ್ಲಿ ತೊಡಗಿಸಿಕೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ. ಹಳ್ಳಿಗಾಡಿನ ಜನರಂತೆ ಪಂಚಮಿ ಹಬ್ಬದ ಮೂಲ ಉದ್ದೇಶಕ್ಕೆ ಚ್ಯುತಿ ತರಲಾರದೆ ಅರ್ಥಪೂರ್ಣವಾಗಿ ಆಚರಿಸುವಲ್ಲಿ ನಗರವಾಸಿಗಳು ವಿಫಲರಾಗುತ್ತಿರಲು ಕಾರಣ ಇವರು ಪುರೋಹಿತನಾಹಿಗಳು ಬಿತ್ತುವ ಮೌಢ್ಯಕ್ಕೆ ಬಹುಬೇಗ ಬಲಿಯಾಗುತ್ತಿರುವುದು. ಹಾಲು ಸಸ್ತಿನಿ ಪ್ರಾಣಿಗಳ ರಕ್ತದಿಂದ ಉತ್ಪತ್ತಿಯಾಗುವ ಒಂದು ಪ್ರಾಣಿಜನ್ಯ ಪೌಷ್ಠಿಕ ಜಲ ಆಹಾರ. ಹಾಲು ಮನುಷ್ಯ ಹಾಗು ಆಯಾ ಸಸ್ತಿನಿಗಳ ಶಿಸುಗಳಿಗೆ ಉಪಯೋಗವಾಗುವ ಆಹಾರ. ಆದರೆ ಜೀವಂತ ಹಾವುಗಳು ಹಾಲನ್ನು ಕುಡಿಯುವುದಿಲ್ಲ. ಹಾವು ಒಂದು ಮಾಂಸಾಹಾರಿ ಪರಿಸೃಪ (ಕಾರ್ನಿಯೋರಸ್ ರೆಪ್ಟೈಲ್) ಆಗಿದ್ದು ಹಾಲಿನಲ್ಲಿರುವ ಅಧಿಕ ಕ್ಯಾಲ್ಸಿಯನ್ ಅಂಶ ಜೀರ್ಣಿಸಿಕೊಳ್ಳುವ ಕಿಣ್ವಗಳ ವ್ಯವಸ್ಥೆ ಹಾವಿನ ದೇಹದಲ್ಲಿ ಇಲ್ಲ. ಹಾಗಾಗಿ ಒಂದು ವೇಳೆ ಹಾವು ಹಾಲನ್ನು ಸೇವಿಸಿದರೂ ಅದಕ್ಕೆ ಲಾಭಕ್ಕಿಂತ ಹಾನಿಯೆ ಹೆಚ್ಚು ಎನ್ನುವುದು ಅನೇಕ ತಜ್ಞ ಪಶುವೈದ್ಯರ ಅಭಿಪ್ರಾಯವಾಗಿದೆ.
ಹಾಗಾಗಿ ಜೀವಂತ ಹಾವಿಗಾಗಲಿ ನಿರ್ಜೀವ ಕಲ್ಲಿಗಾಗಲಿ ಅಮೂಲ್ಯ ಪೌಷ್ಟಿಕ ಆಹಾರವಾಗಿರುವ ಹಾಲನ್ನು ಚೆಲ್ಲಿ ವ್ಯರ್ಥ ಮಾಡುವುದು ನಾಗರಿಕರ ಲಕ್ಷಣವಂತೂ ಖಂಡಿತ ಅಲ್ಲ. ಮನುಷ್ಯ ತನ್ನ ಬುದ್ದಿವಂತಿಕೆˌ ವಿವೇಚನಾ ಶಕ್ತಿಯನ್ನು ಉಪಯೋಗಿಸಬೇಕು. ಸಾಂಪ್ರದಾಯವಾದಿಗಳು ಬಿತ್ತಿದ ಮೌಢ್ಯಗಳಿಂದ ಹೊರಬರಬೇಕು. ಇಂದಿಗೂ ದೇಶದ ಅಸಂಖ್ಯಾತ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ದೇಶವು ಜಾಗತಿಕ ಹಸಿವಿನ ಸ್ಯೂಚಾಂಕದಲ್ಲಿ ಬಹಳ ಹೀನಾಯ ಸ್ಥಿತಿಯಲ್ಲಿದೆ. ಇಂತದ್ದರಲ್ಲಿ ದೇಶದ ಪ್ರಜ್ಞಾವಂತ ನಾಗರಿಕರು ಧಾರ್ಮಿಕ ಮೌಢ್ಯಗಳಿಗೆ ಬಲಿಯಾಗಬಾರದು. ಪಂಚಮಿ ಹಬ್ಬದಂದು ಕಲ್ಲಿನ ನಾಗರಕ್ಕೆ ಹಾಲೇರೆದು ವ್ಯರ್ಥ ಮಾಡುವ ಬದಲಿಗೆ ಅದೇ ಹಾಲನ್ನು ಅನಾಥಾಶ್ರಮದ ಅಥವಾ ಬಡ ವಿದ್ಯಾರ್ಥಿಗಳಿರುವ ವಸತಿ ಗೃಹ ಅಥವಾ ಶಾಲೆಗಳ ಮಕ್ಕಳಿಗೆ ವಿತರಿಸುವ ಮೂಲಕ ಪಂಚಮಿ ಹಬ್ಬವನ್ನು ಮಹಾ ಮಾನವತಾವಾದಿˌ ವೈಚಾರಿಕ ಪ್ರಾವಾದಿ ಬಸವಣ್ಣನವರ ಚಿಂತನೆಗಳಿಗೆ ಗೌರವ ಸಮರ್ಪಿಸಿ ಈ ಹಬ್ಬವನ್ನು ಬಸವ ಪಂಚಮಿ ಹಬ್ಬವಾಗಿ ಆಚರಿಸಬೇಕು.
ಈ ದಿಶೆಯಲ್ಲಿ ಪ್ರತಿವರ್ಷ ಮಾನವ ಬಂಧುತ್ವ ವೇದಿಕೆಯು ಪ್ರಶಂಸನಾರ್ಹ ಕಾರ್ಯ ಮಾಡುತ್ತಿದೆ. ರಾಜ್ಯಾದ್ಯಂತ ವೇದಿಕೆಯ ಕಾರ್ಯಕರ್ತರು ಬಸವ ಪಂಚಮಿ ಕುರಿತು ಶಾಲಾ ವಿದ್ಯಾರ್ಥಿಗಳುˌ ಹಾಗು ಸಾಮಾನ್ಯ ನಾಗರಿಕರಲ್ಲಿ ಜಾಗೃತೆ ಮೂಡಿಸುವ ಅನೇಕ ಬಗೆಯ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದರಂತೆ ವಿವಿಧ ಬಸವಪರ ಸಂಘಟನೆಗಳು ಕೂಡ ಕೇವಲ ಬಸವ ಪಂಚಮಿಯನ್ನು ಧರ್ಮಗುರು ಬಸವಣ್ಣನವರ ಲಿಂಗೈಕ್ಯ ಸ್ಮರಣೋತ್ಸವ ದಿನವನ್ನಾಗಿ ಮಾತ್ರ ಆಚರಿಸದೆ ಜನರಲ್ಲಿನ ಮೌಢ್ಯಗಳನ್ನು ನಿವಾರಿಸುವ ಕಾರ್ಯ ಮಾಡುವ ಅಗತ್ಯ ಇಂದು ತುಂಬಾ ಇದೆ. ಹಾಗಾಗಿ ಮಾನವ ಬಂಧುತ್ವ ವೇದಿಕೆ ಹಾಗು ಎಲ್ಲಾ ಬಸವ ಪರ ಸಂಘಟನೆಗಳು ಒಟ್ಟಾಗಿ ಸಮಾಜದಲ್ಲಿ ಬೇರೂರಿರುವ ವೈದಿಕ ಮೌಢ್ಯಗಳನ್ನು ಹುಡಿಗೊಳಿಸಲು ಕಾರ್ಯಯೋಜನೆಯನ್ನು ರೂಪಿಸುವ ಅಗತ್ಯವಿದೆ. ವೈದಿಕ ಶಕ್ತಿಗಳು ವಿದ್ಯುನ್ಮಾನ ಮಾಧ್ಯಮಗಳನ್ನು ಸಹಿತ ಇತ್ತೀಚಿನ ದಿನಗಳಲ್ಲಿ ಮೌಢ್ಯ ಬಿತ್ತಲು ಗರಿಷ್ಟ ಪ್ರಮಾಣದಲ್ಲಿ ಬಳಸುತ್ತಿವೆ. ಅದಕ್ಕೆ ಪ್ರತಿದ್ವಂಧ್ವಿಯಾಗಿ ನಾವು ಸಾಂಘಿಕವಾಗಿ ಕಾರ್ಯಮಾಡುವ ಅಗತ್ಯ ತುಂಬಾ ಇದೆ.
~ಡಾ. ಜೆ ಎಸ್ ಪಾಟೀಲ.