Book launch of detailed analysis of survey commissioned for public education policy.
ಕೊಪ್ಪಳ:ಜನಪರ ಶಿಕ್ಷಣ ನೀತಿಗಾಗಿ ಆಗ್ರಹಿಸಿ ನಡೆಸಿದ್ದ ಸಮೀಕ್ಷೆಯ ವಿಸ್ತೃತ ವಿಶ್ಲೇಷಣೆಯ ಪುಸ್ತಕ ಬಿಡುಗಡೆ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿಗಳಾದ ಪ್ರೊ.ಎ ಮುರಿಗೆಪ್ಪ, ಅವರು ಮಾತನಾಡಿ, ಎನ್ಈಪಿ-2020ರ ವಿರುದ್ಧ ಮೊದಲಿನಿಂದಲೂ ಧ್ವನಿ ಎತ್ತುತ್ತಿರುವ ಎಐಡಿಎಸ್ಓನ ಹೋರಾಟದಲ್ಲಿರುವ ಸ್ಪಷ್ಟನೆ ಶ್ಲಾಘನೀಯವಾದದ್ದು. ಯಾವುದೋ ಒಂದು ಪಕ್ಷದ ಪರ ಅಥವಾ ವಿರುದ್ಧದ ಹೋರಾಟ ಇದಲ್ಲ. ಇದು ಬದುಕಿನ ಪ್ರಮುಖ ಸಮಸ್ಯೆಗಳ ವಿರುದ್ಧದ ಹೋರಾಟವಾಗಿದೆ. ಚರ್ಚೆಗಳನ್ನು ನಡೆಸದೆ ತರಾತುರಿಯಲ್ಲಿ ಕಳೆದ ಬಿಜೆಪಿ ರಾಜ್ಯ ಸರ್ಕಾರವು ಜಾರಿಗೊಳಿಸಿದ ಎನ್ಈಪಿ 2020 ರಲ್ಲಿ ಮೂರು ವರ್ಷದ ಪದವಿಯನ್ನು ನಾಲ್ಕು ವರ್ಷಕ್ಕೆ ಏರಿಸಲಾಗಿದೆ.
ಇದರ ಅವಶ್ಯಕತೆ ಕುರಿತು ಸರ್ಕಾರ ಯಾರನ್ನು ಕೇಳಿದೆ? ವಿದ್ಯಾರ್ಥಿಗಳ ನಡುವೆ ಸಮೀಕ್ಷೆ ನಡೆಸಿದೆಯಾ? ಮುಖ್ಯವಾಗಿ ಶಾಲೆಗಳಲ್ಲಿ ಕಾಲೇಜುಗಳಲ್ಲಿ ತರಗತಿಗಳಿವೆಯೇ? ಪೂರ್ಣಕಾಲಿಕ ಶಿಕ್ಷಕರಿರುವರೆ? ಎಂದು ಪ್ರಶ್ನಿಸಿದರು.
ಶಿಕ್ಷಣವು ಕೇವಲ ಉದ್ಯೋಗ ಗಳಿಕೆಗೆ ಮಾತ್ರವಲ್ಲ. ಬದಲಿಗೆ, ಜೀವನವನ್ನು ಸ್ವತಂತ್ರವಾಗಿ ನಿಭಾಯಿಸಲು ವ್ಯಕ್ತಿಯೊಬ್ಬನಿಗೆ ಧೈರ್ಯ ತುಂಬುವಂತಹ ಶಿಕ್ಷಣವು ಅತ್ಯಾವಶ್ಯಕವಾಗಿದೆ ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ರಾಜಾಸಾಬ್ ಅವರು ಮಾತನಾಡಿ, ಸಾರ್ವಜನಿಕ ಶಿಕ್ಷಣ ಉಳಿಸಲು ಜನಪರ ಶಿಕ್ಷಣ ನೀತಿ ರೂಪಿಸಲು ವಿದ್ಯಾರ್ಥಿಗಳ ಆಗ್ರಹದ ಈ ಸಮೀಕ್ಷೆ ಚಾರಿತ್ರಿಕವಾಗಿ ನಿಲ್ಲುವಂತಹ ಕೆಲಸವಾಗಿದೆ. ತಾರ್ಕಿಕವಾಗಿ, ವೈಜ್ಞಾನಿಕವಾಗಿ ಯೋಚನೆಮಾಡುವ ವಿದ್ಯಾರ್ಥಿ ಸಮುದಾಯದ ಅವಶ್ಯಕತೆ ನಮ್ಮ ಸಮಾಜಕ್ಕೆ ಇದೆ ಎಂದರು.
ಅಂಕಣಕಾರರು ಹಾಗೂ ಪತ್ರಕರ್ತರಾದ ರಘುನಾಥ್ ಚ.ಹ ಅವರು ಮಾತಾನಾಡಿ, ಪ್ರಸ್ತುತ ಶೈಕ್ಷಣಿಕ ಕ್ಷೇತ್ರವು ಎನ್.ಇ.ಪಿ 2020 ಯಿಂದಾಗಿ ಅಪಾರ ಗೊಂದಲದಿಂದ ಕೂಡಿದೆ. ಇದರ ಹೊರತಾಗಿ ರಾಜ್ಯ ಶಿಕ್ಷಣ ನೀತಿರೂಪಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ನಡುವೆ ನಡೆಸಿರುವ ಸಮೀಕ್ಷೆಯು ಒಂದು ಶಿಕ್ಷಣ ನೀತಿ ಹೇಗಿರಬೇಕು ಎಂಬುದಕ್ಕೆ ಕೈಗನ್ನಡಿಯಾಗಿದೆ. ನಿಜವಾಗಿಯೂ ಒಂದು ಶಿಕ್ಷಣ ನೀತಿಯನ್ನು ಜನರ ಅಭಿಪ್ರಾಯ ಮೂಲಕವೇ ರೂಪಿಸಬೇಕು ಎಂಬುದನ್ನು ಈ ಸಮೀಕ್ಷೆಯು ಸಾಬೀತುಪಡಿಸಿದೆ ಎಂದರು.
ಎಲ್ಲಾ ಹಂತದಲ್ಲೂ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಕೈಗೆಟಕುವ ಶುಲ್ಕ ನಿಗದಿಸಬೇಕು.ಪ್ರತಿಯೊಬ್ಬರಿಗೂ ಶಿಕ್ಷಣ ದೊರಕಬೇಕು. ಆದರೆ ಪ್ರಸ್ತುತ ಶಿಕ್ಷಣವು ವ್ಯಾಪಾರದ ಸರಕಾಗಿರುವುದು ಲಜ್ಜೆಗೇಡಿನ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಎಐಡಿಎಸ್ ಓ ರಾಜ್ಯಕಾರ್ಯದರ್ಶಿ ಅಜಯ್ ಕಾಮತ್ ಅವರು ಮಾತನಾಡಿ, ಎನ್.ಇ.ಪಿ- 2020 ವಿರೋಧಿಸಿ ಇಡೀ ರಾಜ್ಯಾದ್ಯಂತ ಜನಪರ ಶಿಕ್ಷಣ ನೀತಿಗಾಗಿ ಆಗ್ರಹಿಸಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ನಡುವೆ ನಡೆಸಲಾಗಿದ್ದ ಸಮೀಕ್ಷೆಯಲ್ಲಿ 21ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಶಿಕ್ಷಣ ನೀತಿಯ ಕುರಿತು ರಾಜ್ಯದಲ್ಲಿ ಬೃಹತ್ ಪ್ರಮಾಣದ ಸಮೀಕ್ಷೆ ನಡೆದಿದ್ದು, ಐತಿಹಾಸಿಕವಾಗಿದೆ ಎಂದರು.
ಎಐಡಿಎಸ್‌ಓ ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ.ಎಸ್ ಅವರು ಎನ್.ಇ.ಪಿ ಮೂಲಕ ಸರ್ಕಾರವು ಶಿಕ್ಷಣವನ್ನು ವಿಶ್ವದ ಮಾರುಕಟ್ಟೆ ಯನ್ನಾಗಿಸಲು ಹೊರಟಿದೆ. ಇದರ ಪರಿಣಾಮ ಶಿಕ್ಷಣವು ವ್ಯಾಪಕವಾಗಿ ವ್ಯಾಪಾರೀಕರಣವಾಗುತ್ತದೆ. ಇದರಿಂದಾಗಿ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇಂತಹ ಪರಿಸ್ಥಿಗಳ ವಿರುದ್ಧ ವಿದ್ಯಾರ್ಥಿಗಳು ಒಂದಾಗಿ ವಿದ್ಯಾರ್ಥಿ ವಿರೋಧಿ ಶಿಕ್ಷಣ ನೀತಿಯ ವಿರುದ್ಧ ಚಳುವಳಿ ಕಟ್ಟುವ ಜವಬ್ದಾರಿಯನ್ನು ನಿಭಾಯಿಸಲು ಮುನ್ನಡೆಯೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತುಮಕೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ರಾಜಾಸಾಬ್, ಅಂಕಣಕಾರರು ಹಾಗೂ ಪತ್ರಕರ್ತರಾದ ರಘುನಾಥ್ ಚ. ಹ, ಎಐಡಿಎಸ್‌ಓ ರಾಜ್ಯ ಉಪಾಧ್ಯಕ್ಷರಾದ ಹಣಮಂತು, ಅಭಯಾ ದಿವಾಕರ್, ರಾಜ್ಯ ಖಜಾಂಚಿಗಳಾದ ಸುಭಾಷ್, ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ,ಹಾಗೆಯೇ ಕೊಪ್ಪಳ ಜಿಲ್ಲೆಯ ಎಐಡಿಎಸ್‌ಓ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.