9 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಟ!

ಮಂಗಳಮುಖಿ ರಮಜಾನ್ ದಾದು ಮುಲ್ಲಾಗೆ ಇನ್ನಾದರೂ ಸಿಗುತ್ತದೆಯೇ ವಾಸದ ಜಾಗ ಮತ್ತು ಮನೆ?
ಗ್ರಾಮ ಪಂಚಾಯಿತಿ ಠರಾವು ಇದ್ದರೂ ಆದೇಶ ಪತ್ರವಿಲ್ಲ; ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ!
9 ವರ್ಷಗಳಿಂದ ವಸತಿ-ಜಾಗಕ್ಕಾಗಿ ಅಲೆದಾಟ; ಮಂಗಳಮುಖಿ ರಮಜಾನ್ ದಾದು ಮುಲ್ಲಾಗೆ ಯಾವಾಗ ಸಿಗಲಿದೆ ನ್ಯಾಯ?
ಗ್ರಾಮ ಪಂಚಾಯಿತಿ ಠರಾವು ಇದ್ದರೂ ಆದೇಶ ಪತ್ರ ನೀಡದ ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ
A nine-year struggle for housing and land; when will transgender Ramzan Dadu Mulla get justice?
ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ಖಾಯಂ ಆಗಿ ವಾಸವಾಗಿರುವ ಮಂಗಳಮುಖಿ (ತೃತೀಯ ಲಿಂಗಿ) ರಮಜಾನ್ ದಾದು ಮುಲ್ಲಾ ಅವರು ವಾಸಿಸಲು ಖುಲ್ಲಾ ಜಾಗ ಹಾಗೂ ಸರಕಾರದ ವಸತಿ ಯೋಜನೆಯಡಿ ಮನೆ ಮಂಜೂರು ಮಾಡುವಂತೆ ಕೋರಿ ಹಲವು ವರ್ಷಗಳಿಂದ ಸರಕಾರಿ ಕಚೇರಿಗಳಿಗೆ ಅಲೆಯುತ್ತಿದ್ದರೂ, ಇಲ್ಲಿಯವರೆಗೆ ಸೂಕ್ತ ನ್ಯಾಯ ದೊರೆತಿಲ್ಲ ಎಂದು ತೀವ್ರ ಅಳಲು ತೋಡಿಕೊಂಡಿದ್ದಾರೆ.
ಮದಭಾವಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಭೆಯಲ್ಲಿ ಈ ಹಿಂದೆ ರಮಜಾನ್ ದಾದು ಮುಲ್ಲಾ ಅವರ ವಾಸದ ಕುರಿತು ಸರ್ವಾನುಮತದಿಂದ ಠರಾವು ಅಂಗೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಠರಾವು ಪಾಸ್ ಆಗಿ ವರ್ಷಗಳೇ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಅಧಿಕೃತ ಆದೇಶ ಪತ್ರ, ಹಕ್ಕುಪತ್ರ ಅಥವಾ ಜಾಗ ಮಂಜೂರಾತಿ ದಾಖಲೆಗಳನ್ನು ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಧಿಕಾರಿಗಳು “ಇಂದು ಕೊಡುತ್ತೇವೆ, ನಾಳೆ ಕೊಡುತ್ತೇವೆ” ಎಂದು ಬಾಯಿಮಾತಿನ ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ರಮಜಾನ್ ದಾದು ಮುಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಚೇರಿಯಿಂದ ಕಚೇರಿಗೆ ಅಲೆದಾಟ
ತಮ್ಮ ವಾಸದ ಜಾಗ ಹಾಗೂ ಮನೆಗಾಗಿ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲೂಕು ಪಂಚಾಯಿತಿ, ತಹಶೀಲ್ದಾರ್ ಕಚೇರಿ, ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದವರೆಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ ಸ್ಥಳೀಯ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ 9 ವರ್ಷಗಳಿಂದಲೂ ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
“ಹೇಳೋರಿಲ್ಲ, ಕೇಳೋರಿಲ್ಲ ಎಂಬ ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುವಂತಾಗಿದೆ. ನನಗೂ ಸಮಾಜದ ಇತರ ನಾಗರಿಕರಂತೆ ಸುರಕ್ಷಿತವಾಗಿ ಬದುಕುವ ಹಕ್ಕಿದೆ. ವಾಸಿಸಲು ಒಂದು ಖುಲ್ಲಾ ಜಾಗ ಮತ್ತು ಒಂದು ಮನೆ ಮಂಜೂರು ಮಾಡಬೇಕು” ಎಂದು ರಮಜಾನ್ ದಾದು ಮುಲ್ಲಾ ಮನವಿ ಮಾಡಿದ್ದಾರೆ.
ಸೌಲಭ್ಯ ಘೋಷಣೆ ಮಾತ್ರವೇ?
ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಘೋಷಿಸುತ್ತಿವೆ. ಆದರೆ ತಳಮಟ್ಟದಲ್ಲಿ ಅವುಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಉಂಟಾದರೆ ನಿಜವಾದ ಫಲಾನುಭವಿಗಳಿಗೆ ನ್ಯಾಯ ದೊರೆಯುವುದು ಹೇಗೆ ಎಂಬ ಪ್ರಶ್ನೆ ಮೂಡಿದೆ.
ಗ್ರಾಮ ಪಂಚಾಯಿತಿ ಠರಾವು ಇದ್ದರೂ ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳದೆ ವರ್ಷಗಳ ಕಾಲ ವಿಳಂಬ ಮಾಡುತ್ತಿರುವುದು ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ರಮಜಾನ್ ದಾದು ಮುಲ್ಲಾ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸ್ಪಂದಿಸುತ್ತಾರೆಯೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು?
ಇನ್ನಾದರೂ ಅಥಣಿ ತಾಲೂಕಾಡಳಿತ, ಬೆಳಗಾವಿ ಜಿಲ್ಲಾಡಳಿತ, ಮದಭಾವಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಲಾಗಿದೆ.
ಅದೇ ರೀತಿ ರಾಜ್ಯ ಸರ್ಕಾರ, ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರು ಮತ್ತು ಪ್ರಧಾನಮಂತ್ರಿಗಳು ಸಹ ತೃತೀಯ ಲಿಂಗಿಗಳ ವಸತಿ ಮತ್ತು ಮೂಲಭೂತ ಹಕ್ಕುಗಳ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿ, ರಮಜಾನ್ ದಾದು ಮುಲ್ಲಾ ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಲಾಗಿದೆ.
“ಕಳೆದ 9 ವರ್ಷಗಳಿಂದ ನಾನು ವಾಸಿಸಲು ಒಂದು ಖುಲ್ಲಾ ಜಾಗ ಮತ್ತು ಮನೆಗಾಗಿ ಅಲೆಯುತ್ತಿದ್ದೇನೆ.
ಗ್ರಾಮ ಪಂಚಾಯಿತಿ ಠರಾವು ಇದ್ದರೂ ನನಗೆ ಇನ್ನೂ ಆದೇಶ ಪತ್ರ ಸಿಕ್ಕಿಲ್ಲ. ಇನ್ನಾದರೂ ಅಧಿಕಾರಿಗಳು ಹಾಗೂ ಸರ್ಕಾರಗಳು ಸ್ಪಂದಿಸಿ ನನಗೆ ವಾಸಿಸಲು ಜಾಗ ಮತ್ತು ಮನೆ ಮಂಜೂರು ಮಾಡುತ್ತಾರೆಯೇ? ಅಥವಾ ನನ್ನ ಅಲೆದಾಟ ಇದೇ ರೀತಿ ಮುಂದುವರಿಯಬೇಕೇ?” ಎಂದು ಮಂಗಳಮುಖಿ ರಮಜಾನ್ ದಾದು ಮುಲ್ಲಾ ಕಣ್ಣೀರಿನ ಮನವಿ ಮಾಡಿದ್ದಾರೆ.
ತಕ್ಷಣ ಸೂಕ್ತ ಜಾಗವನ್ನು ಗುರುತಿಸಿ, ಸರಕಾರದ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿ ಅಧಿಕೃತ ಆದೇಶ ಪತ್ರ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ವರದಿ: ಮಹೇಶ್ ಎಂ. ಶರ್ಮಾ

