ಸುಪ್ರೀಂ ಕೋರ್ಟ್ ಹೆಸರಿನಲ್ಲಿ ಬೀದಿ ವ್ಯಾಪಾರಿಗಳ ತೆರವು ಸರಿಯಲ್ಲ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Evicting street vendors in the name of the Supreme Court is not right: High Court reprimands State Government
ಮಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿದ್ದ ರಾಜ್ಯ ಸರ್ಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ಯಾವುದೇ ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ನೇರ ಆದೇಶ ನೀಡಿಲ್ಲ. ಬೀದಿ ಬದಿ ವ್ಯಾಪಾರಿಗಳ ಬದುಕುವ ಹಕ್ಕು ಮತ್ತು ಹಿತರಕ್ಷಣೆಗೆ ಸಂಬಂಧಿಸಿದ ಕಾನೂನನ್ನು ರಾಜ್ಯ ಸರ್ಕಾರ ಕಡ್ಡಾಯವಾಗಿ ಪಾಲಿಸಬೇಕು. ಕಾನೂನುಬದ್ಧ ಪ್ರಕ್ರಿಯೆ ಮತ್ತು ಪುನರ್ವಸತಿ ವ್ಯವಸ್ಥೆ ಇಲ್ಲದೆ ಯಾವುದೇ ವ್ಯಾಪಾರಿಯನ್ನು ತೆರವುಗೊಳಿಸಬಾರದು” ಎಂದು ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮತ್ತು ಇತರರ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಿಐಟಿಯು-ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಪರವಾಗಿ ಹಿರಿಯ ವಕೀಲ ಎಸ್. ಬಾಲನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮಂಗಳೂರು ಟೌನ್‌ಹಾಲ್ ಸಮೀಪದ ಪಾದಚಾರಿ ಮಾರ್ಗದ ಬಳಿ ಇದ್ದ ಬೀದಿ ವ್ಯಾಪಾರಿಗಳನ್ನು ಸುಪ್ರೀಂ ಕೋರ್ಟ್ ತೀರ್ಪಿನ ನೆಪದಲ್ಲಿ ಮಹಾನಗರ ಪಾಲಿಕೆ ತೆರವುಗೊಳಿಸಲು ಮುಂದಾಗಿತ್ತು. ಈ ವೇಳೆ ಸಂಘದ ಪದಾಧಿಕಾರಿಗಳು ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೆ ತೆರವು ಕಾರ್ಯಾಚರಣೆ ನಡೆಸಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಬಳಿಕ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎಸ್. ಬಾಲನ್, ಸುಪ್ರೀಂ ಕೋರ್ಟ್ ತೀರ್ಪು ಪಾದಚಾರಿಗಳ ಹಕ್ಕು ಮತ್ತು ಸೂಕ್ತ ಪಾದಚಾರಿ ಮೂಲಸೌಕರ್ಯಕ್ಕೆ ಸಂಬಂಧಿಸಿದ್ದೇ ಹೊರತು, ಬೀದಿ ವ್ಯಾಪಾರಿಗಳು ಅಥವಾ ವಾರದ ಮಾರುಕಟ್ಟೆಗಳನ್ನು ತೆರವುಗೊಳಿಸುವಂತೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅಲ್ಲದೆ, Street Vendors (Protection of Livelihood and Regulation of Street Vending) Act, 2014 ಇನ್ನೂ ಜಾರಿಯಲ್ಲಿದ್ದು, ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಅಥವಾ ಸ್ಥಳಾಂತರಿಸುವ ಮೊದಲು ಕಾಯ್ದೆಯಲ್ಲಿ ನಿಗದಿಪಡಿಸಿರುವ ಕಾನೂನುಬದ್ಧ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ವಾದಿಸಲಾಯಿತು.
ವಕೀಲೆ ರಕ್ಷಿತಾ ಸಿಂಗ್ ಅವರ ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, “ಸುಪ್ರೀಂ ಕೋರ್ಟ್ ಆದೇಶವು ರಸ್ತೆಗಳಿಗೆ ಸೂಕ್ತ ಫುಟ್‌ಪಾತ್ ನಿರ್ಮಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಸುಪ್ರೀಂ ಕೋರ್ಟ್ ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣಾ ಕಾಯ್ದೆಯನ್ನು ರದ್ದುಗೊಳಿಸಿಲ್ಲ. ಆದ್ದರಿಂದ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಮೊದಲು ಅವರ ಹಕ್ಕುಗಳು, ಪುನರ್ವಸತಿ ಮತ್ತು ಕಾನೂನುಬದ್ಧ ಪ್ರಕ್ರಿಯೆಯನ್ನು ಪಾಲಿಸಬೇಕು. ಈಗ ನಡೆದಿರುವ ಕ್ರಮ ಸರಿಯಲ್ಲ” ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದರು.
ಈ ಆದೇಶದಿಂದ ಸುಪ್ರೀಂ ಕೋರ್ಟ್ ಹೆಸರಿನಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ತೆರವು ಕ್ರಮದ ಕುರಿತು ಮಹತ್ವದ ಸ್ಪಷ್ಟನೆ ದೊರೆತಿದ್ದು, ಬೀದಿ ವ್ಯಾಪಾರಿಗಳ ಹಕ್ಕು ರಕ್ಷಣೆಗೆ ಹೈಕೋರ್ಟ್ ಮಹತ್ವದ ಸಂದೇಶ ನೀಡಿದೆ.
– ನವೀನ್ ಸೂರಿಂಜೆ


