ಹನೂರಿನಲ್ಲಿ ಪ್ರಗತಿಪರ ಸಂಘಟನೆಗಳ ಶಾಂತಿಯುತ ಪ್ರತಿಭಟನೆ; ಅರಣ್ಯಾಧಿಕಾರಿಗಳ ವಜಾ, ಬಂಧನಕ್ಕೆ ಆಗ್ರಹ

H.Mallikarjun
H.Mallikarjun - Kalyanasiri
2 Min Read
Peaceful protest by progressive organizations in Hanur; demand for dismissal and arrest of forest officials.

ಹನೂರಿನಲ್ಲಿ ಪ್ರಗತಿಪರ ಸಂಘಟನೆಗಳ ಶಾಂತಿಯುತ ಪ್ರತಿಭಟನೆ; ಅರಣ್ಯಾಧಿಕಾರಿಗಳ ವಜಾ, ಬಂಧನಕ್ಕೆ ಆಗ್ರಹ

ಜಾಹೀರಾತು


ವರದಿ: ಬಂಗಾರಪ್ಪ ಸಿ.
ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಆ.15ರಂದು ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅರಣ್ಯಾಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾಗೊಳಿಸಿ ಬಂಧಿಸಬೇಕು ಹಾಗೂ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹನೂರು ಪಟ್ಟಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ರೈತ ಮುಖಂಡ ಗೌಡೇಗೌಡ ಮಾತನಾಡಿ, ಘಟನೆ ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಮ್ಯಾಜಿಸ್ಟ್ರೇಟ್ ಅಧ್ಯಕ್ಷತೆಯಲ್ಲಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರು. ನಂತರ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಆದರೆ ನಮಗೆ ಸಿಐಡಿ ತನಿಖೆ ಬೇಡ. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಅಥವಾ ಉನ್ನತ ಮಟ್ಟದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸತ್ಯಾಂಶ ಹೊರಬರಲು ನಾರ್ಕೊ ಪರೀಕ್ಷೆಗೆ ಆಗ್ರಹ
ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಾದರೆ ಸಂಬಂಧಪಟ್ಟವರ ನಾರ್ಕೊ ಪರೀಕ್ಷೆ ನಡೆಸಬೇಕು. ಘಟನೆ ಉದ್ದೇಶಪೂರ್ವಕವಾಗಿ ನಡೆದಿರುವ ಅನುಮಾನವಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು
ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಅರಣ್ಯಾಧಿಕಾರಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ಮೃತಪಟ್ಟವರ ಕುಟುಂಬಗಳು ಸಂಕಷ್ಟದಲ್ಲಿವೆ. ಸರ್ಕಾರ ಘೋಷಿಸಿರುವ ₹5 ಲಕ್ಷ ಪರಿಹಾರ ಯಾವುದೇ ಕಾರಣಕ್ಕೂ ಸಾಕಾಗುವುದಿಲ್ಲ. ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವುದರ ಜೊತೆಗೆ ಅವರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಗೌಡೇಗೌಡ ಆಗ್ರಹಿಸಿದರು.
ಇಂದಿನ ಪ್ರತಿಭಟನೆ ಸಾಂಕೇತಿಕವಾಗಿದ್ದು, ಸರ್ಕಾರ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಕಾನೂನುಬದ್ಧ ಹಾಗೂ ತೀವ್ರ ಸ್ವರೂಪದ ಹೋರಾಟವನ್ನು ರೂಪಿಸಲಾಗುವುದು. ನೊಂದ ಕುಟುಂಬಗಳಿಗೆ ನ್ಯಾಯ ದೊರಕಿಸುವುದೇ ಹೋರಾಟದ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶೈಲೆಂದ್ರ (ಶ್ರೀಕಂಠಸ್ವಾಮಿ), ಗೌಡೇಗೌಡ, ಅಮ್ಜಾದ್ ಖಾನ್, ಪಳನಿಸ್ವಾಮಿ, ಕರಿಯಪ್ಪ, ಮಾದಪ್ಪ, ಲೋಕೇಶ್ ಹಾಗೂ ರಾಜಕೀಯ ಮುಖಂಡರಾದ ನಿಶಾಂತ್, ಪೊನ್ನಾಚಿ ಮಹಾದೇವಸ್ವಾಮಿ, ಪಾಳ್ಯ ಸಿದ್ದರಾಜು, ಬಾವರಾಜು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Total Views: 0
ಜಾಹೀರಾತು
Share This Article