ಅಂತರ್ಜಲ ನಿರ್ವಹಣೆ: ತಳಕಲ್ ವಿಟಿಯು ಕ್ಯಾಂಪಸ್‌ನಲ್ಲಿ ತರಬೇತಿ ಕಾರ್ಯಾಗಾರ ಯಶಸ್ವಿ

H.Mallikarjun
H.Mallikarjun - Kalyanasiri
2 Min Read

Water Management: Training Workshop at Thalakall Viti Campus Successful

Oplus_16908288

ಅಂತರ್ಜಲ ನಿರ್ವಹಣೆ: ತಳಕಲ್ ವಿಟಿಯು ಕ್ಯಾಂಪಸ್‌ನಲ್ಲಿ ತರಬೇತಿ ಕಾರ್ಯಾಗಾರ ಯಶಸ್ವಿ

ಕೊಪ್ಪಳ ಆಗಸ್ಟ್ 15 (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಜಲಶಕ್ತಿ ಮಂತ್ರಾಲಯದ ಅಡಿಯಲ್ಲಿ ಬರುವ ಕೇಂದ್ರೀಯ ಅಂತರ್ಜಲ ಮಂಡಳಿ (ಸಿಜಿಡಬ್ಲುಬಿ), ನೈಋತ್ಯ ಕ್ಷೇತ್ರ, ಬೆಂಗಳೂರು ವತಿಯಿಂದ ‘ಜಲಧರಗಳ ನಕಾಶೀಕರಣ, ಅಂತರ್ಜಲ ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ’ ಕುರಿತು ಕುಕನೂರು ತಾಲೂಕಿನ ತಳಕಲ್‌ನ ವಿಟಿಯು ಕ್ಯಾಂಪಸ್‌ನಲ್ಲಿ ಆಗಸ್ಟ್ 14ರಂದು ಹಮ್ಮಿಕೊಂಡಿದ್ದ ಒಂದು ದಿನದ ಶ್ರೇಣಿ-III ತರಬೇತಿ ಕಾರ್ಯಾಗಾರವು ಯಶಸ್ವಿಯಾಗಿ ಜರುಗಿತು.
ರಾಷ್ಟ್ರೀಯ ಜಲಧರಗಳ ನಕಾಶೀಕರಣ (ಎನ್ಎಕ್ಯೂಯುಐಎಂ) ಅಧ್ಯಯನಗಳ ವೈಜ್ಞಾನಿಕ ಫಲಿತಾಂಶಗಳನ್ನು ಪ್ರಾಯೋಗಿಕ ಮಾಹಿತಿಯಾಗಿ ಪರಿವರ್ತಿಸುವುದು, ವೈಜ್ಞಾನಿಕ ಸಿದ್ಧಾಂತ ಮತ್ತು ಕ್ಷೇತ್ರಮಟ್ಟದ ಅನುಷ್ಠಾನದ ನಡುವಿನ ಅಂತರವನ್ನು ಕಡಿಮೆ ಮಾಡುವುದು ಹಾಗೂ ಕೃತಕ ಮರುಪೂರಣ ಮತ್ತು ಸಂರಕ್ಷಣೆಯ ಅರಿವು ಮೂಡಿಸುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕರಾದ ಜಿ. ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಚ್ಚುತ್ತಿರುವ ಜನಸಂಖ್ಯೆ, ಗ್ರಾಮೀಣ ಕುಡಿಯುವ ನೀರಿನ ಭದ್ರತೆ ಮತ್ತು ಹವಾಮಾನ ಬದಲಾವಣೆಗಳ ನಡುವೆ ಸೀಮಿತ ಅಂತರ್ಜಲ ಸಂಪನ್ಮೂಲವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುವುದು ಇಂದಿನ ತುರ್ತು ಅಗತ್ಯ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಟಿಯು ಸ್ನಾತಕೋತ್ತರ ಕೇಂದ್ರದ ಉಪ ನಿರ್ದೇಶಕರಾದ ಡಾ. ಬಸವರಾಜಪ್ಪ ವೈ.ಎಚ್., ಗದಗ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಲೋಕೇಶ್ ಹಾಗೂ ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗ ಮುಖ್ಯಸ್ಥರಾದ ಪ್ರೊ. ಬಸವರಾಜ ಹುಣಶ್ಯಾಳ, ಅಂತರ್ಜಲ ನಿರ್ದೇಶನಾಲಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಹಿರಿಯ ಭೂವಿಜ್ಞಾನಿ ವಿ.ಬಸವಂತ್ ಅವರು ಉಪಸ್ಥಿತರಿದ್ದರು. ಇಲಾಖೆಗಳ ನಡುವಿನ ಸಮನ್ವಯ ಹಾಗೂ ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಸುಸ್ಥಿರ ಅಂತರ್ಜಲ ನಿರ್ವಹಣೆ ಸಾಧ್ಯ ಎಂದು ಅತಿಥಿಗಳು ಅಭಿಪ್ರಾಯಪಟ್ಟರು.
*ತಾಂತ್ರಿಕ ಗೋಷ್ಠಿಗಳು* ಉದ್ಘಾಟನೆಯ ನಂತರ ನಡೆದ ವಿವಿಧ ತಾಂತ್ರಿಕ ಗೋಷ್ಠಿಗಳಲ್ಲಿ ತಜ್ಞರು ಉಪನ್ಯಾಸ ನೀಡಿದರು. ಕರ್ನಾಟಕದಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯ ಚಟುವಟಿಕೆಗಳ ಕುರಿತು ಜಿ. ಕೃಷ್ಣಮೂರ್ತಿ ಅವರು ಮಾಹಿತಿ ನೀಡಿದರು. ಕೊಪ್ಪಳ ಜಿಲ್ಲೆಯಲ್ಲಿ ‘ರಾಷ್ಟ್ರೀಯ ಜಲಧರಗಳ ನಕಾಶೀಕರಣ’ ಅಧ್ಯಯನಗಳ ಕುರಿತು ವಿಜ್ಞಾನಿ(ಡಿ) ಡಾ. ಜಿ.ದವಿತುರಾಜ್, ಕೈಗಾರಿಕಾ ತ್ಯಾಜ್ಯದ ನೀರು, ಮಣ್ಣು, ಕೆಸರು ಮತ್ತು ಗಾಳಿಯ ಮಾದರಿ ಸಂಗ್ರಹಣಾ ತಂತ್ರಜ್ಞಾನಗಳು ಹಾಗೂ ಪರಿಸರ ಸಂರಕ್ಷಣೆ ಕುರಿತು ಡಾ. ಕೆ. ಲೋಕೇಶ್ ಅವರು ಪ್ರಾತ್ಯಕ್ಷಿಕೆ ಮಾಹಿತಿ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಅಂತರ್ಜಲ ಅನ್ವೇಷಣೆ ಮಾಡುವ ವಿಧಾನಗಳು ಕುರಿತು ಸಹಾಯಕ ಜಲಭೂವಿಜ್ಞಾನಿ ಡಾ. ದಮೇರ ಆಂಜನೇಯುಲು, ಅಂತರ್ಜಲ ನಕ್ಷೆಗಳ ತಯಾರಿಕೆ ಮತ್ತು ಮೌಲ್ಯಮಾಪನದಲ್ಲಿ ದೂರ ಸಂವೇದಿ ಹಾಗೂ ಜಿಐಎಸ್ ತಂತ್ರಜ್ಞಾನದ ಪಾತ್ರದ ಕುರಿತು ಕಾರ್ಯಕ್ರಮ ಸಂಯೋಜಕ ಸುರೇಶ ಲಮಾಣಿ ಅವರು ವಿವರಣೆ ನೀಡಿದರು.
ಕಾರ್ಯಾಗಾರದ ಕೊನೆಯಲ್ಲಿ ಸ್ಥಳೀಯ ಅಂತರ್ಜಲ ಸಮಸ್ಯೆಗಳು, ಸವಾಲುಗಳು ಹಾಗೂ ಸಂಭಾವ್ಯ ಪರಿಹಾರೋಪಾಯಗಳ ಕುರಿತು ತರಬೇತಿದಾರರು ಮತ್ತು ಭಾಗವಹಿಸಿದವರ ನಡುವೆ ಮುಕ್ತ ಸಂವಾದ ನಡೆಯಿತು.
ವಿಜ್ಞಾನಿ(ಬಿ) ಎನ್. ನರಸಿಂಹ ನಾಯ್ಡು ಅವರು ವಂದನಾರ್ಪಣೆ ಮಾಡಿದರು. ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
Total Views: 0
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Share This Article