ಪ್ರತಿಭಟನೆ ನಿರತ ನೀಟ್ ವಿದ್ಯಾರ್ಥಿಗಳ ಮೇಲೆ ಬ್ರಿಟೀಷರಿಗಿಂತ ಕ್ರೂರತೆ ಮೆರೆದ ಅಮಿತ್ ಶಾ ವಜಾಗೊಳಿಸಿ: – ಡಾ. ಆನಂದ ಕುಮಾರ್
Dismiss Amit Shah, who displayed greater cruelty than the British towards protesting NEET students: – Dr. Anand Kumar

ನೀಟ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಬ್ರಿಟೀಷರಿಗಿಂತ ಹೆಚ್ಚು ಕ್ರೂರತೆ ಮೆರೆದ ಅಮಿತ್ ಶಾ ವಜಾಗೊಳಿಸಿ: – ಡಾ. ಆನಂದ ಕುಮಾರ್
ಶಿಕ್ಷಣ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಉತ್ತರದಾಯಿತ್ವ ನಿಗದಿ ಮಾಡಿ – ಡಾ. ಆನಂದ ಕುಮಾರ್
ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟರೆ ಸಾಲದು ವಿದ್ಯಾರ್ಥಿಗಳನ್ನು ಬ್ರಿಟೀಷರಿಗಿಂತ ಕ್ರೂರವಾಗಿ ಹಿಂಸಿಸಲು ನೇರಕಾರಣರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಉತ್ತರದಾಯಿತ್ವವನ್ನು ಕಡ್ಡಾಯಗೊಳಿಸಬೇಕು ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಒತ್ತಾಯಿಸಿದ್ದಾರೆ.
ದೇಶದ ಆಂತರಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊಂದಿರುವ ಅಮಿತ್ ಶಾ, ಪೊಲೀಸ್ ಬಲವನ್ನು ಮನಸೋ ಇಚ್ಚೆ ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಯುವ ಶಕ್ತಿಗೆ ಅಪಮಾನ ಮಾಡಿದ್ದು, ಕೂಡಲೇ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮೋದಿ ಸಂಪುಟದಿಂದ ವಜಾಗೊಳಿಸಿ ತಮ್ಮ ಎದೆಗಾರಿಕೆಯನ್ನು ಪ್ರದರ್ಶಿಸಬೇಕು. ಹಾಗೆಯೇ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಇದ್ದರೆ, ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆಗೂ ಮರುಮೌಲ್ಯಮಾಪನ ಇರಬೇಕು. ಪ್ರಶ್ನೆಪತ್ರಿಕೆ ಸೋರಿಕೆ, ತಪ್ಪು ಪ್ರಶ್ನೆಗಳನ್ನು ನೀಡಿ, ಮೌಲ್ಯಮಾಪನದಲ್ಲಿ ಎಡವಟ್ಟಾಗಿ, ಫಲಿತಾಂಶ ಪ್ರಕಟಿಸುವಲ್ಲಿ ಗೊಂದಲ ಉಂಟಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಉತ್ತರದಾಯಿತ್ವ ಏಕೆ ಕಾಣಿಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಇದ್ದರೆ, ಆಡಳಿತಕ್ಕೂ ಮರುಮೌಲ್ಯಮಾಪನ ಇರಬೇಕಲ್ಲವೇ? ಸುಧಾರಣೆ ಎಂದರೆ ಹೊಸ ಪಠ್ಯಕ್ರಮ ಅಥವಾ ಡಿಜಿಟಲ್ ವ್ಯವಸ್ಥೆಗಳಷ್ಟೇ ಅಲ್ಲ; ಆಡಳಿತಾತ್ಮಕ ಉತ್ತರದಾಯಿತ್ವವನ್ನು ಕಡ್ಡಾಯಗೊಳಿಸುವುದೇ ನಿಜವಾದ ಸುಧಾರಣೆ ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ವ್ಯವಸ್ಥೆಯ ಮೇಲೆ ವಿದ್ಯಾರ್ಥಿಗಳು, ಪೋಷಕರ ವಿಶ್ವಾಸ ಪುನರ್ ಸ್ಥಾಪನೆಯಾಗಬೇಕು. ಆಡಳಿತಾತ್ಮಕ ವೈಫಲ್ಯದಿಂದ ಮರುಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ಉಂಟಾದರೆ, ಆಡಳಿತ ನಡೆಸುವವರ ಕಾರ್ಯಕ್ಷಮತೆಯ ಕುರಿತು ಜನರಿಗೆ ಮರುಮೌಲ್ಯಮಾಪನದ ಅವಕಾಶ ಇರಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿನ ಅವ್ಯವಸ್ಥೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತಿವೆ. ಪ್ರತಿ ವರ್ಷ ಪರೀಕ್ಷಾ ಫಲಿತಾಂಶಗಳಲ್ಲಿ ತಪ್ಪುಗಳು, ಅಂಕಗಳಲ್ಲಿ ದೊಡ್ಡ ಬದಲಾವಣೆಗಳು, ಪ್ರಶ್ನೆಪತ್ರಿಕೆಗಳಲ್ಲಿನ ದೋಷಗಳು, ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತವೆ. ಉನ್ನತ ಶಿಕ್ಷಣದ ಅವಕಾಶಗಳು ಕೈ ತಪ್ಪಿ, ವೃತ್ತಿಜೀವನದ ಕನಸುಗಳು ಕಮರುತ್ತಿವೆ. ತನ್ನದಲ್ಲದ ತಪ್ಪಿಗಾಗಿ ವಿದ್ಯಾರ್ಥಿಗಳಿಗೆ ಶಿಕ್ಷೆ ಇದ್ದರೆ, ಆಡಳಿತದ ತಪ್ಪಿಗೂ ಸ್ಪಷ್ಟ ಹೊಣೆಗಾರಿಕೆ ಇರಬೇಕು. ಉತ್ತರದಾಯಿತ್ವ ಮೇಲಿನಿಂದ ಕೆಳಗೆ ಅಲ್ಲ, ಕೆಳಗಿನಿಂದ ಮೇಲಕ್ಕೂ ಸಮಾನವಾಗಿರಬೇಕು. ಸಂಬಂಧಿಸಿದ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡುವ ವ್ಯವಸ್ಥೆ ಅಗತ್ಯವಾಗಿದೆ. ಒಂದು ಆಡಳಿತಾತ್ಮಕ ತಪ್ಪಿನಿಂದ ಕಳೆದುಹೋದ ವಿದ್ಯಾರ್ಥಿಯ ಅಮೂಲ್ಯ ಸಮಯ, ಆತ್ಮವಿಶ್ವಾಸ, ಅವನ ಕುಟುಂಬ ಅನುಭವಿಸಿದ ನೋವನ್ನು ಯಾರು ಹಿಂದಿರುಗಿಸುತ್ತಾರೆ? ಪರೀಕ್ಷಾ ವ್ಯವಸ್ಥೆ ಸಮಾಜದ ನ್ಯಾಯಬದ್ಧತೆಯ ಪ್ರತಿಬಿಂಬ ಎಂದು ಹೇಳಿದ್ದಾರೆ.
ಆಡಳಿತಾತ್ಮಕ ನಿರ್ಲಕ್ಷ್ಯದ ಪರಿಣಾಮವನ್ನು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಅನುಭವಿಸುವಂತಾಗಿರುವುದು ವಿಷಾದನೀಯ. ಲೋಪಗಳ ಕುರಿತು ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಸಿ, ಹೊಣೆಗಾರರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಹೊಣೆಗಾರಿಕೆ ಸಮತೋಲನವಾಗಿರಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಆಡಳಿತಾತ್ಮಕ ವೈಫಲ್ಯದ ಹೊಣೆ ವಿದ್ಯಾರ್ಥಿಗಳ ಮೇಲೆ ಬೀಳಬಾರದು ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.
