
The clean water unit is a storeroom for election materials! Public outrage
ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ


ಶುದ್ಧ ನೀರಿನ ಘಟಕವೇ ಚುನಾವಣಾ ಸಾಮಗ್ರಿಗಳ ಸ್ಟೋರ್ ರೂಂ! ಸಾರ್ವಜನಿಕರ ಆಕ್ರೋಶ
ಗಂಗಾವತಿ: ಇಲ್ಲಿನ ತಾಲೂಕು ಆಡಳಿತದ ಕೇಂದ್ರ ಬಿಂದುವಾಗಿರುವ ತಹಶೀಲ್ದಾರ್ ಕಚೇರಿಗೆ ಪ್ರತಿದಿನ ನೂರಾರು ಸಾರ್ವಜನಿಕರು ತಮ್ಮ ವಿವಿಧ ಕಂದಾಯ, ದಾಖಲಾತಿ ಹಾಗೂ ವೈಯಕ್ತಿಕ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುತ್ತಾರೆ. ಕಚೇರಿಯ ಸಿಬ್ಬಂದಿ ಸೇರಿದಂತೆ ದಿನನಿತ್ಯ ಸಾವಿರಾರು ಜನರ ಓಡಾಟವಿರುವ ಇಂತಹ ಪ್ರಮುಖ ಸರ್ಕಾರಿ ಸ್ಥಳದಲ್ಲೇ ಸಾರ್ವಜನಿಕರಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವೂ ಇಲ್ಲದೆ ತೀವ್ರ ಅಭಾವ ಸೃಷ್ಟಿಯಾಗಿದೆ. ಕಚೇರಿಯ ಒಳ ಆವರಣದಲ್ಲೇ ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ, ಅದು ಸಾರ್ವಜನಿಕರ ದಾಹ ನೀಗಿಸುವ ಬದಲು ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಚುನಾವಣಾ ಸಾಮಗ್ರಿಗಳನ್ನು ಇಡುವ ಸ್ಟೋರ್ ರೂಂ ಆಗಿ ಮಾರ್ಪಟ್ಟಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಚೇರಿ ಆವರಣದಲ್ಲಿ ಧೂಳು ಹಿಡಿಯುತ್ತಿರುವ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಬದಲು, ಕಚೇರಿಯ ಚುನಾವಣೆ ಶಿರಸ್ತೆದಾರ್ ಆಗಿರುವ ರವಿ ನಾಯಕ್ವಾಡ್ ಅವರು ತಮ್ಮ ತೀವ್ರ ಬೇಜವಾಬ್ದಾರಿತನದಿಂದ ಘಟಕವನ್ನು ಚುನಾವಣಾ ಬಾಕ್ಸ್‌ಗಳನ್ನು ಇಡುವ ಸ್ಟೋರ್ ರೂಂ ಆಗಿ ಪರಿವರ್ತಿಸಿದ್ದಾರೆ ಎನ್ನುವ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಕಳೆದ 2019-20ರ ಸಾಲಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಿರ್ಮಾಣವಾದ ಈ ಶುದ್ಧ ನೀರಿನ ಘಟಕದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ನೀರಿನ ಶುದ್ಧೀಕರಣ ಯಂತ್ರೋಪಕರಣಗಳೇ ಇಲ್ಲದಂತಾಗಿದೆ. ಅಲ್ಲಿ ಅಳವಡಿಸಲಾಗಿದ್ದ ದುಬಾರಿ ಫಿಲ್ಟರ್ ಯಂತ್ರಗಳು ಎಲ್ಲಿ ಮಾಯವಾದವು ಎಂಬುದು ಸಾರ್ವಜನಿಕರನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆಯಾಗಿದೆ. ಶುದ್ಧ ನೀರಿನ ಘಟಕದ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ಮತ್ತು ಸರ್ಕಾರಿ ಅನುದಾನ ದುರ್ಬಳಕೆಯಾಗಿದೆಯೇ ಅಥವಾ ಒಳಗಿರುವ ಯಂತ್ರೋಪಕರಣಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಈ ರೀತಿ ಸ್ಟೋರ್ ರೂಂ ಮಾಡಿಕೊಳ್ಳಲಾಗಿದೆಯೇ ಎಂದು ಆಕ್ರೋಶಗೊಂಡ ಸಾರ್ವಜನಿಕರು ಸ್ಥಳೀಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಇಡೀ ಅವ್ಯವಸ್ಥೆಯ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಸಾಮಾಜಿಕ ಹೋರಾಟಗಾರ ರವಿ ಗುತ್ತೇದಾರ್ ಅವರು, ಸಾರ್ವಜನಿಕರ ಹಕ್ಕನ್ನು ಕಸಿದುಕೊಂಡು ಕುಡಿಯುವ ನೀರಿನ ಘಟಕವನ್ನು ಗೋದಾಮಿನಂತೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದಿದ್ದಾರೆ. ತಕ್ಷಣವೇ ನೀರಿನ ಘಟಕದಲ್ಲಿ ಅಕ್ರಮವಾಗಿ ಇಡಲಾಗಿರುವ ಚುನಾವಣಾ ಬಾಕ್ಸ್‌ಗಳನ್ನು ತೆರವುಗೊಳಿಸಿ, ನೂತನ ಯಂತ್ರೋಪಕರಣಗಳನ್ನು ಅಳವಡಿಸುವ ಮೂಲಕ ಘಟಕವನ್ನು ಪುನರಾರಂಭಿಸಬೇಕು ಹಾಗೂ ಕರ್ತವ್ಯ ಲೋಪ ಎಸಗಿದ ಚುನಾವಣೆ ಶಿರಸ್ತೆದಾರ್ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪ್ರಸ್ತುತ ಗಂಗಾವತಿ ತಾಲೂಕಿಗೆ ನೂತನ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿರುವ ವಸಂತಕುಮಾರಿ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಕಚೇರಿ ಆವರಣದಲ್ಲೇ ಇರುವ ಈ ದೂಳು ಹಿಡಿದ ಅವ್ಯವಸ್ಥೆಯ ವಿರುದ್ಧ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ಭರವಸೆ ಸಾರ್ವಜನಿಕರಲ್ಲಿದೆ. ಒಂದು ವೇಳೆ ಈ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ನೂತನ ತಹಶೀಲ್ದಾರರು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಲಿಖಿತ ದೂರು ನೀಡುವುದರ ಜೊತೆಗೆ ಕಚೇರಿ ಮುಂಭಾಗದಲ್ಲೇ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಹಾಗೂ ಹೋರಾಟಗಾರರು ಎಚ್ಚರಿಸಿದ್ದಾರೆ.
