
Free-range cattle: No one to tell… No one to hear…

ಬೀಡಾಡಿ ದನಗಳು :
ಹೇಳೋರಿಲ್ಲ… ಕೇಳೋರಿಲ್ಲ…

ವಿಶೇಷ ವರದಿ
ಎಂ.ಪರಶುರಾಮ ಪ್ರಿಯ
ಮುನಿರಾಬಾದ್ : ಸಾಮಾನ್ಯವಾಗಿ ದನಗಳು ಮನೆಗಳ ಕೊಟ್ಟಿಗೆಯಲ್ಲಿ ಇರುತ್ತವೆ, ದನಗಳ ಸಾಕುವವರು ಮೇವು, ಹಸಿ ಹುಲ್ಲು, ಒಣ ಮೇವು, ಜೋಳದ ದಂಟು, ಅಕ್ಕಿ ತೌಡು, ಗೋದಿ ಹೊಟ್ಟು ಸೇರಿದಂತೆ ಇತ್ಯಾದಿಗಳ ಜೊತೆ, ನೀರು, ಬೆಳಕು ಪೂರೈಸಿ ಬೆಳಸುತ್ತಾರೆ.
ಆದರೆ ಮುನಿರಾಬಾದ್ ನಲ್ಲಿ ಇರುವ ನೂರಾರು ಆಕಳು, ಕರು, ಹೋರಿಗಳಿಗೆ ಹೇಳೋರಿಲ್ಲ…. ಕೇಳೋರಿಲ್ಲ….. ಎಂಬ ಸ್ಥಿತಿ.
ಹೌದು !
ಇಲ್ಲಿರುವ ದನಗಳಿಗೆ ಮಾಲೀಕರು ಯಾರೆಂಬುದು ಯಕ್ಷಪ್ರಶ್ನೆಯಾಗಿದೆ. ಹೀಗಾಗಿ ದನಗಳು ಎಲ್ಲಂದರಲ್ಲಿ ರಾಜಾರೋಷವಾಗಿ ತಿರುಗಾಡುತ್ತ ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ತೊಂದರೆ ನೀಡುತ್ತಿವೆ.
ಸುಮಾರು 100ಕ್ಕೂ ಹೆಚ್ಚಿರುವ ದನಗಳು ಊರಿನ ಎಲ್ಲೆಡೆ ಸಂಚರಿಸುತ್ತವೆ. ಪಿಳ್ಳೆ ಹೋಟೆಲ್ ಏರಿಯಾ, ಹಳೇ ಪೊಲೀಸ್ ಸ್ಟೇಶನ್ ಸರ್ಕಲ್, ಕೆಇಬಿ ಕ್ವಾರ್ಟರ್ಸ್, ಟಿಎಂಎಫ್ ಕ್ವಾರ್ಟರ್ಸ್, ಬಸ್ ನಿಲ್ದಾಣ ಸುತ್ತ ಮುತ್ತ, ಪಂಪಾವನ ಬಳಿ, ಹಳೇ ಬಜಾರ್ ಸೇರಿದಂತೆ ಊರಿನ ಮುಖ್ಯ ಸ್ಥಳ ಮತ್ತು ಗಲ್ಲಿ, ಏರಿಯಾಗಳಲ್ಲಿ ತಮಗಿಷ್ಟ ಬಂದ ರೀತಿಯಲ್ಲಿ ದನಗಳು ತಿರುಗಾಡುತ್ತಿದ್ದರೂ ಯಾರೂ ಕ್ಯಾರೇ ಅನ್ನುತ್ತಿಲ್ಲ.
ಬೆಳಗಿನ ಜಾವದಿಂದಲೇ ತಿರುಗಲು ಶುರುವಿಟ್ಟುಕೊಳ್ಳುವ ದನಗಳು ಸಾರ್ವಜನಿಕರು ಎದ್ದೇಳುವ ಮುಂಚೆಯೇ ಮನೆಯ ಮುಂದೆ ನಿಂತಿರುತ್ತವೆ. ಮಹಿಳೆಯರು, ಮಕ್ಕಳು ಗದರಿಸಿದರೂ ಜಾಗ ಬಿಟ್ಟು ಕದಲುವುದಿಲ್ಲ. ಕಟ್ಟಿಗೆಯಿಂದ ಹೊಡೆದರೂ ಮುನಿಸಿಕೊಳ್ಳದೆ ನಿಂತಿರುತ್ತವೆ. ರಾತ್ರಿ ಉಳಿದ ಅನ್ನ, ರೊಟ್ಟಿ, ಚಪಾತಿ ಸೇರಿದಂತೆ ಅಕ್ಕಿ ತೊಳೆದ ನೀರು, ಅನ್ನದ ಗಂಜಿ ನೀಡಿದರೆ ಸೇವಿಸಿ ಹೋಗುತ್ತವೆ. ಇಲ್ಲದಿದ್ದರೆ ಕದಲುವುದಿಲ್ಲ.
ಒಮ್ಮೊಮ್ಮೆ ಮನೆ ಮುಂದೆ ನಾಲ್ಕಾರು ದನಗಳು ಜಗಳವಾಡುತ್ತವೆ. ಕೆಲವೊಮ್ಮೆ ಮನೆ ಅಂಗಳದಲ್ಲಿ ಮಲ, ಮೂತ್ರ ವಿಸರ್ಜಿಸಿ ಮನೆಯವರು ಹೊರ ಬರದಂತೆ ಮಾಡುತ್ತವೆ. ಊರಿನ ಪರಿಸರ ಹಸಿರುಮಯ ಆಗಿದ್ದರೂ, ಎಲ್ಲಂದರಲ್ಲಿ ಹುಲ್ಲು ಬೆಳೆದಿದ್ದರೂ ಮೇಯಲು ಹೋಗದೆ ಗಂಟೆಗೊಮ್ಮೆ ಓಣಿಯಲ್ಲಿ ತಿರುಗುತ್ತವೆ. ಒಂದೊಂದು ಬಾರಿ ಹೋರಿ ಅಟ್ಟಿಸಿಕೊಂಡು ಬಂದಾಗ ದೊಡ್ಡ ದನಗಳು ಕರುಗಳ ಸಮೇತ ಕಾಲೋನಿಗಳಲ್ಲಿ ಓಡುತ್ತವೆ. ಆಗ ಮಹಿಳೆಯರು, ಮಕ್ಕಳು ಹೆದರಿ ಹೊರ ಬರದಂತ ಸ್ಥಿತಿ ನಿರ್ಮಾಣವಾಗುತ್ತದೆ.
ಇನ್ನೂ ಸಂಜೆಯಾದರೆ ಸಾಕು ಎಲ್ಲಲ್ಲೊ ಹೋಗಿದ್ದ ದನಗಳು ವೃತ್ತ, ಮೂರು ದಾರಿಗಳು ಸೇರುವ ಜಾಗ, ಇಲ್ಲವೇ ಮುಖ್ಯ ರಸ್ತೆಗಳಲ್ಲಿ ಗುಂಪಾಗಿ ಸೇರಿ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತವೆ. ರಸ್ತೆಯಲ್ಲೇ ಮಲಗಿ ನಿದ್ರಿಸುತ್ತವೆ. ಇವುಗಳಿಂದ ಸಂಚಾರಕ್ಕೆ ತೊಂದರೆ ಅನುಭವಿಸುವ ಕಾರು, ಬೈಕ್ ಸವಾರರು ಜೋರಾಗಿ ಹಾರ್ನ್ ಮಾಡಿದರೂ ಎದ್ದು ಓಡುವುದಿಲ್ಲ. ವಾಹನ ಸವಾರರು ಸುಧಾರಿಸಿಕೊಂಡು ತೆರಳುತ್ತಾರೆ. ಕೆಲ ಬಾರಿ ರಸ್ತೆಯ ತಿರುವುಗಳಲ್ಲಿ ನಿಂತಿರುವ ದನಗಳು ವೇಗವಾಗಿ ಬರುವ ವಾಹನಗಳ ಸವಾರರು ಸಡನ್ನಾಗಿ ಬ್ರೇಕ್ ಹಾಕಿ ನಿಲ್ಲುವಂತೆ ಮಾಡುತ್ತವೆ. ಒಮ್ಮೊಮ್ಮೆ ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿವೆ.
ರಾತ್ರಿ ವೇಳೆ ಮನೆಗಳ ಬಾಗಿಲುಗಳ ಬಳಿ ಬಂದು ನಿಲ್ಲುವ ದನಗಳು ಆಹಾರಕ್ಕೆ ಕಣ್ಣರಳಿಸಿ ಕಾಯುತ್ತವೆ. ನೀಡದಿದ್ದರೆ ಬಾಗಿಲು ಮುಚ್ಚಿದರೂ ತಳ್ಳುತ್ತವೆ. ಇವುಗಳಿಂದ ನಿವಾಸಿಗಳಿಗೆ ತೊಂದರೆಯಾಗಿದೆ.
ಸ್ವಚ್ಚಂದವಾಗಿ ತಿರುಗಾಡುತ್ತ ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿರುವ ದನಗಳನ್ನು ಹಿಡಿದು ಕಟ್ಟಿ ಹಾಕುವವರಿಲ್ಲ, ಗೋಶಾಲೆಗ(ಆಶ್ರಯ ಸ್ಥಳ) ಗೆ ಸೇರಿಸುವವರಿಲ್ಲ.
ಮುನಿರಾಬಾದ್ ಗ್ರಾಮ ಪಂಚಾಯಿತಿಗೆ ತಿಳಿದಿದ್ದರೂ ಕ್ರಮಕ್ಕೆ ಮುಂದಾಗದಿರುವುದು ತಲೆನೋವು ತರಿಸಿದೆ. ಇನ್ನಾದರೂ ಗ್ರಾಮ ಪಂಚಾಯಿತಿಯವರು ಕಾರ್ಯ ಪ್ರವೃತ್ತರಾಗುವರೇ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೇ ದನಗಳ ಮಾಲೀಕರನ್ನು ಪತ್ತೆ ಮಾಡಿ ಅವರಿಗೆ ದನಗಳನ್ನು ಒಪ್ಪಿಸುವುದಾಗಲಿ ಮತ್ತು ಬೀದಿಗೆ ಬಿಟ್ಟಿದ್ದಕ್ಕೆ ದಂಡ ವಿಧಿಸುವ ಕಾರ್ಯ ನಡೆಯಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

ವಿಶೇಷ ವರದಿ
ಎಂ.ಪರಶುರಾಮ ಪ್ರಿಯ
