
Koppal Mango Fair opens: Turnover exceeds Rs. 3.30 crore


ಕೊಪ್ಪಳ ಮಾವು ಮೇಳಕ್ಕೆ ತೆರೆ: ರೂ. 3.30 ಕೋಟಿಗೂ ಹೆಚ್ಚಿನ ವಹಿವಾಟು

ಕೊಪ್ಪಳ ಮೇ 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 16 ದಿನಗಳ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬುಧವಾರದಂತೆ ತೆರೆ ದೊರೆತಿದ್ದು, ರೂ. 3.30 ಕೋಟಿಗೂ ಹೆಚ್ಚಿನ ವಹಿವಾಟು ಮೂಲಕ ದಾಖಲೆ ಬರೆದಿದೆ.
ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯು ಮಾವು ಬೆಳೆಯುವ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ 10ನೇ ವರ್ಷದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮೇ 12 ರಿಂದ ಮೇ 27ರ ವರೆಗೆ 16 ದಿನಗಳ ಕಾಲ ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 2026ರ 10ನೇ ವರ್ಷದ ಮಾವು ಮೇಳವು ಹಿಂದೆಂದಿಗಿಂತಲೂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ 350 ಟನ್ ಗೂ ಹೆಚ್ಚಿನ ವಿವಿಧ ತಳಿಯ ಮಾವುಗಳನ್ನು ರೈತರು ಮಾರಾಟ ಮಾಡಿದ್ದು, ರೂ. 3.30 ಕೋಟಿಗೂ ಹೆಚ್ಚಿನ ವಹಿವಾಟು ಈ ಮೇಳದಲ್ಲಿ ದಾಖಲಾಗಿದೆ.
ಹೆಚ್ಚಿನ ಬಿಸಿಲಿನ ತಾಪ ಹಾಗೂ ಮಳೆಯ ನಡುವೆಯೆ ಗ್ರಾಹಕರು ಅತ್ಯಂತ ಖುಷಿಯಿಂದ ಮೇಳದಲ್ಲಿ ಭಾಗವಹಿಸಿ ಗುಣಮಟ್ಟದ, ಯೋಗ್ಯ ಬೆಲೆಯ ಮಾವು ಖರೀದಿಸಿ ಎಲ್ಲಾ ಹಣ್ಣುಗಳ ರುಚಿ ಸವಿಯುವುದು ನಮಗೆ ಅತ್ಯಂತ ಖುಷಿ ಹಾಗೂ ನೆಮ್ಮದಿಯನ್ನು ತರುತ್ತದೆ ಹಾಗೂ ಮಾವು ಮೇಳವು ಪ್ರತಿ ವರ್ಷವೂ ಹೀಗೆ ಮುಂದುವರೆಯಬೇಕೆAದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಈ ವರ್ಷ ಯುದ್ಧದ ಕಾರಣದಿಂದ ರಫ್ತು ಸಹ ಕಡಿಮೆಯಾದ ಕಾರಣ ಮಾವು ಮೇಳದಲ್ಲಿ ಸಾಕಷ್ಟು ರೈತರು ಭಾಗವಹಿಸಿ ತಮ್ಮ ಹಣ್ಣನ್ನು ಮಾರಾಟ ಮಾಡಿದರು ಹಾಗೂ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ವಿವಿಧ ರಾಜ್ಯ ಹಾಗೂ ಜಿಲ್ಲೆಗಳ ಮಾರುಕಟ್ಟೆ ಮಾಹಿತಿಯನ್ನು ಒದಗಿಸಿ ಮಾವು ಮಾರಾಟಕ್ಕೆ ಅನುಕೂಲ ಕಲ್ಪಿಸಲಾಯಿತು.
*ಕೊಪ್ಪಳದಲ್ಲಿಯೇ ಬೆಳೆದ ಮಿಯಾಜಾಕಿ ಮಾವಿನ ಹಣ್ಣಿನ ಹವಾ:* ಈ ಭಾರಿಯು ಮೇಳದಲ್ಲಿ ಕೊಪ್ಪಳದಲ್ಲಿಯೇ ಬೆಳೆದ “ಮಿಯಾಜಾಕಿ ಮಾವಿನ ಹಣ್ಣು” ತನ್ನದೇ ಆದ ಹವಾ ಸೃಷ್ಟಿಸಿತ್ತು ಹಾಗೂ ಮೊದಲ ಬಾರಿಗೆ ಕೊಪ್ಪಳದಲ್ಲಿ ಕಲ್ಲತಾವರಗೇರೆ ಗ್ರಾಮದ ರೈತ ನಾಗಪ್ಪ ಬಗನಾಳ ಅವರ ಹೊಲದಲ್ಲಿ ಬೆಳೆದ ಮಿಯಾಜಾಕಿ ಮಾವಿನ ಹಣ್ಣನ್ನು ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಮಾವು ಮೇಳದಲ್ಲಿ ಇಡಲಾಗಿತ್ತು. ಈ ರೈತರು ಬೆಳೆದ 20 ಕೆ.ಜಿ. ಮಿಯಾಜಾಕಿ ಮಾವನ್ನು ರೂ. 3000 ಪ್ರತಿ ಕೆ.ಜಿ.ಯಂತೆ ಮಾರಾಟಕ್ಕೆ ಇಡಲಾಗಿತ್ತು.
ಮಾವು ಮೇಳದ ಮೊದಲ ದಿನವೇ ಗ್ರಾಹಕರು ಮುಗಿಬಿದ್ದು, 20 ಕೆ.ಜಿ. ಮಿಯಾಜಾಕಿ ಮಾವನ್ನು ಖರೀದಿಸಿದರು ಹಾಗೂ ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳ ಸಾಕಷ್ಟು ಗ್ರಾಹಕರು ಮಿಯಾಜಾಕಿ ಮಾವನ್ನು ಖರೀದಿಸಲು ದೂರವಾಣಿ ಮುಖಾಂತರ ಮತ್ತು ಖುದ್ದಾಗಿ ಮಾವು ಮೇಳಕ್ಕೆ ಆಗಮಿಸಿ ತಮಗೂ ಮಿಯಾಜಾಕಿ ಮಾವು ಬೇಕೆಂದು ಒತ್ತಾಯಿಸಿದರು. ಆದರೆ, ಬಹಳ ಜನಗಳಿಗೆ ಈ ಮಿಯಾಜಾಕಿ ಮಾವು ಸಿಗದ ಕಾರಣ ನಿರಾಸೆಗೊಂಡರು. ಸಾಕಷ್ಟು ಗ್ರಾಹಕರು 2 ರಿಂದ 5 ಕೆ.ಜಿ.ವರೆಗೂ ಮಿಯಾಜಾಕಿ ಮಾವನ್ನು ಖರೀದಿಸಲು ಆಸಕ್ತಿ ತೋರಿದರು. ಆದರೆ, ಸಿಗದ ಕಾರಣ ನಿರಾಸೆಗೊಂಡರು.
ಈ ವರ್ಷದ ಮೇಳದಲ್ಲಿ 200 ಕೆ.ಜಿ.ಗೂ ಹೆಚ್ಚಿನ ಮಿಯಾಜಾಕಿ ಮಾವಿನ ಹಣ್ಣಿಗೆ ಬೇಡಿಕೆ ಬಂದಿತ್ತು. ಆದರೆ, ಕೇವಲ 20 ಕೆ.ಜಿ.ಮಾತ್ರ ಮಿಯಾಜಾಕಿ ಮಾವು ಮೇಳದಲ್ಲಿ ಲಭ್ಯವಾಗಿತ್ತು. ಮುಂದಿನ ವರ್ಷದ ಮೇಳದಲ್ಲಿ ಇನ್ನು ಹೆಚ್ಚಿನ ಮಿಯಾಜಾಕಿ ಮಾವು ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ತೋಟಕಾರಿಕೆ ಇಲಾಖೆಯ ಅಧಿಕಾರಿಗಳ ಮೂಲಕ ತಿಳಿಸಲಾಯಿತು. ಮುಂದಿನ ದಿನಗಳಲ್ಲಿ ಮಿಯಾಜಾಕಿ ಮಾವನ್ನು ಬೇರೆ ದೇಶಗಳಿಗೆ ರಫ್ತು ಮಾಡಲು ಅಫೇಡಾ ಸಂಸ್ಥೆಯೊಂದಿಗೆ ಚರ್ಚಿಸಲಾಗಿದೆ.
*ಹಣ್ಣು ಮಾಗಿಸುವ ನೈಸರ್ಗಿಕ ಇಥರೆಲ್ ಪಂಚ್ ಹೋಲ್ ಪಾಕೆಟ್‌ಗಳ ಪರಿಚಯ:* ಈ ಮೇಳದಲ್ಲಿ ರೈತರಿಗಾಗಿ ಮಾವಿನ ಕುರಿತು ವಿವಿಧ ತಾಂತ್ರಿಕ ಮಾಹಿತಿಗಳನ್ನು ನೀಡಲಾಯಿತು. ನೈಸರ್ಗಿಕವಾಗಿ ಮಾವು ಮಾಗಿಸುವ ಕುರಿತು ಎನ್‌ರೈಪ್ (enripe) ಎಂಬ ನೈಸರ್ಗಿಕ ಇಥರೆಲ್ ಪಂಚ್ ಹೋಲ್ ಪಾಕೆಟ್‌ಗಳನ್ನು ಪರಿಚಯಿಸಿ ಹಣ್ಣುಗಳನ್ನು ಮಾಗಿಸುವ ವಿಧಾನವನ್ನು ಸಹ ಇಲಾಖೆಯಿಂದ ರೈತರಿಗೆ ತಿಳಿಸಿಕೊಡಲಾಯಿತು. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಮಾವಿನ ಹಣ್ಣುಗಳನ್ನು ಮಾಗಿಸುವ ಘಟಕವನ್ನು (Fruit Ripening Chamber) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (ಆರ್.ಕೆ.ವಿ.ವೈ) ಸಹಾಯಧನದಲ್ಲಿ ನೀಡುವ ಕುರಿತು ತಿಳಿಸಲಾಯಿತು ಹಾಗೂ ಪ್ರಾತ್ಯಾಕ್ಷಿಕೆಯನ್ನು ಸಹ ರೈತರಿಗೆ ಏರ್ಪಡಿಸಲಾಗಿತ್ತು.
ಈ ಮೇಳವು ಹಿಂದಿನ ಎಲ್ಲಾ ಮೇಳಕ್ಕಿಂತ ಯಶಸ್ವಿಯಾಗಿದ್ದು, ಹೆಚ್ಚಿನ ಹಣ್ಣುಗಳ ಮಾರಾಟವಾಗಿದೆ. ಈ ಮೇಳದಲ್ಲಿ ಭಾಗವಹಿಸಲು 150 ಕ್ಕೂ ಹೆಚ್ಚಿನ ರೈತರು ಪೈಪೋಟಿಯಿಂದ ತಾವು ಬೆಳೆದ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡಲು ತಮ್ಮ ಹೆಸರನ್ನು ನೊಂದಾಯಿಸಿ ಮೇಳದಲ್ಲಿ ಭಾಗವಹಿಸಿ, ಮಾವು ಮಾರಾಟ ಮಾಡಲು ರೈತರು ಹಾಗೂ ರೈತ ಉತ್ಪಾದಕ ಸಂಘಗಳು, ಹಾಪ್‌ಕಾಮ್ಸ್ ಮುಂದೆ ಮಂದಿದ್ದು, ಇಲಾಖಾ ತೋಟಗಾರಿಕೆ ಕ್ಷೇತ್ರಗಳಿಗೆ ತಮ್ಮ ಉತ್ಪನವನ್ನು ಮಾರಾಟ ಮಾಡಲು 30ಕ್ಕೂ ಹೆಚ್ಚಿನ ಮಾರಾಟ ಮಳಿಗೆಳನ್ನು ಉಚಿತವಾಗಿ ತೆರೆಯಲಾಗಿತ್ತು ಹಾಗೂ ಇನ್ನೂ ಹೆಚ್ಚಿನ ರೈತರಿಗೆ ಮೇಳದ ಆವರಣದಲ್ಲಿ ಮಾರಾಟ ಮಾಡಲು ಸಹ ಅನುಕೂಲ ಮಾಡಿಕೊಡಲಾಯಿತು.
ಮಾವು ಮಾರಾಟ ಮೇಳದಲ್ಲಿ ಜಿಲ್ಲೆಯ ಏಳು ತಾಲ್ಲೂಕುಗಳ ಮಾವು ಬೆಳೆಗಾರರು ಭಾಗವಹಿಸಿದ್ದರು. ರೈತರು ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ 15ಕ್ಕೂ ಹೆಚ್ಚಿನ ವಿವಿಧ ಮಾವಿನ ತಳಿಯ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿರುತ್ತಾರೆ. ಮೇಳದಲ್ಲಿ ಕೇಸರ್ ಮತ್ತು ದಶಹರಿ ತಳಿಯ ಮಾವು ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಅದೇ ರೀತಿ ಬೆನೆಶಾನ್, ಕೇಸರ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೋಸು, ಮಲ್ಲಿಕಾ, ತೋತಾಪೂರಿ, ಸಕ್ಕರೆಗುಟ್ಟಿ, ಖಾದರ್, ಪುನಾಸ್ ಮತ್ತು ಉಪ್ಪಿನಕಾಯಿ ತಳಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಸೇರಿ 320 ಟನ್‌ಗೂ ಹೆಚ್ಚು ಮಾವು ಮಾರಾಟವಾಗಿದೆ. ಆಮ್ಲೇಟ್ ಮತ್ತು ಪುನಾಸ್ ಉಪ್ಪಿನಕಾಯಿ ಮಾವಿನ ಕಾಯಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದು ಮಾರಾಟವಾಗಿದೆ.
ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿ ಗ್ರಾಹಕರಿಗೆ ಕೈಗೆಟುವ ದರದಲ್ಲಿ ರೈತರು ನೇರವಾಗಿ ಮಾರಾಟ ಮಾಡಿರುತ್ತಾರೆ. ಇದರಿಂದಾಗಿ ಗ್ರಾಹಕರಿಗೂ ಯೋಗ್ಯ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳು ಲಭಿಸಿದ್ದು, ಅವರೂ ಕೂಡಾ ಈ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇಳದಲ್ಲಿ ಜಿಲ್ಲೆಯ ಮತ್ತು ಹೊರಜಿಲ್ಲೆಯ ಸರಕಾರಿ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆಸಕ್ತಿಯಿಂದ ಭಾಗವಹಿಸಿದ್ದು, ಹೆಚ್ಚಿನ ಹಣ್ಣು ಖರೀದಿಸಿದಲ್ಲದೇ ಈ ಹಿಂದೆ ನಾವು ಉತ್ತಮ ಗುಣಮಟ್ಟದ ಹಣ್ಣುಗಳನ್ನು ಖರೀದಿಸಲು ಹುಬ್ಬಳ್ಳಿ, ಹೊಸಪೇಟೆ ನಗರಗಳಿಗೆ ಹೋಗಬೇಕಾಗಿತ್ತು. ಆದರೆ, ಕೊಪ್ಪಳದಲ್ಲಿಯೇ ಪ್ರತಿ ವರ್ಷವೂ ಮೇಳವನ್ನು ಏರ್ಪಡಿಸಿರುವುದರಿಂದ ವಿವಿಧ ತಳಿಯ ಉತ್ತಮ ಹಣ್ಣುಗಳು ಕೊಪ್ಪಳದಲ್ಲಿಯೇ ಲಭ್ಯವಾಗಿದ್ದು, ಕುಟುಂಬ ಸಮೇತ ಬಂದು ಖರೀದಿಸಲು ಅನುಕೂಲವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಮಾರುಕಟ್ಟೆಯಲ್ಲಿ ಕೃತಕವಾಗಿ ಮಾಗಿಸಿದ ಹಣ್ಣುಗಳಿಗಿಂತ ಇಲ್ಲಿ ದೊರೆಯುವ ಹಣ್ಣುಗಳ ರುಚಿಕರವಾಗಿದೆ ಮತ್ತು ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿವೆ. ತೋಟಗಾರಿಕೆ ಇಲಾಖೆಯು ಗ್ರಾಹಕ ಹಾಗೂ ಮಾವು ಬೆಳೆಗಾರರನ್ನು ನೇರವಾಗಿ ಸಂರ್ಪಕಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ವಿವಿಧಗುಣಮಟ್ಟದ ಉಪ್ಪಿನಕಾಯಿಗಳನ್ನು ಸಹ ಮೇಳದಲ್ಲಿ ಮಾರಾಟಕ್ಕೆಇಡಲಾಗಿತ್ತು ಹಾಗೂ 5 ಟನ್‌ಗೂ ಹೆಚ್ಚಿನ ಉಪ್ಪಿನಕಾಯಿಗಳನ್ನು ಸಹ ಮಾರಾಟ ಮಾಡಲಾಯಿತು.
ಈ ವರ್ಷ ಮಾವಿನ ಹಣ್ಣಿನ ಸೀಕರಣೆಯನ್ನು ಸಹ ಮಾರಾಟಕ್ಕೆ ಇಡಲಾಗಿತ್ತು. 1 ಟನ್‌ಗೂ ಹೆಚ್ಚಿನ ಸೀಕರಣೆಯನ್ನು ಗ್ರಾಹಕರು ಖರೀದಿಸಿ ಮನೆಗೆ ತೆಗೆದುಕೊಂಡು ಹೋದರು.
ಮಾವು ಮೇಳ 2026ರ ಪ್ರದರ್ಶನದಲ್ಲಿ 200ಕ್ಕೂ ಹೆಚ್ಚಿನ ವಿವಿಧ ದೇಶಿ ಮತ್ತು ವಿದೇಶಿ ತಳಿ ಹಣ್ಣುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅವುಗಳಲ್ಲಿ ಕೊಪ್ಪಳದಲ್ಲಿಯೇ ಬೆಳೆದ “ಜಗತ್ತಿನ ದುಬಾರಿ ಮಾವು ಮಿಯಾಜಾಕಿ” ಎಂಬ ಜಪಾನಿನ ಮಾವಿನ ತಳಿಯ ಹಣ್ಣನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಈ ಮಿಯಾಜಾಕಿ ಮಾವು ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಹಾಗೂ ದೇಶದ್ಯಾಂದಂತ ಮಾಧ್ಯಮಗಳ ಮುಖಾಂತರ ಸಾಕಷ್ಟು ಪ್ರಚಾರವನ್ನು ಪಡೆದು ಪ್ರತಿಯೊಬ್ಬರ ಬಾಯಲ್ಲಿ ಮಿಯಾಜಾಕಿ ಮಾವಿನ ತಳಿಯ ಬಗ್ಗೆ ಮಾತನಾಡುವಂತಾಗಿತ್ತು ಹಾಗೂ ಕೊಪ್ಪಳದಲ್ಲಿಯೇ ಬೆಳೆದ ಮಿಯಾಜಾಕಿ ಮಾವನ್ನು ನೋಡಲು ಸಾರ್ವಜನಿಕರು ಹಾಗೂ ರೈತರು ಹಾಗೂ ಹೊರ ಜಿಲ್ಲೆಗಳಿಂದ ಸಾಕಷ್ಟು ಜನರು ತಂಡೋಪತಂಡವಾಗಿ ಬಂದು ಕುತೂಹಲದಿಂದ ವೀಕ್ಷೀಸಿ ಚರ್ಚಿಸುತ್ತಿದ್ದಿದ್ದು ಸಾಮಾನ್ಯವಾಗಿತ್ತು. ಸಾಕಷ್ಟು ರೈತರು ತಮ್ಮ ತೋಟದಲ್ಲಿ ಮಿಯಾಜಾಕಿ ಮಾವಿನ ಹಣ್ಣಿನ ತಳಿ ಗಿಡಗಳ ಬೆಳೆಯುವ ಬಗ್ಗೆ ಇಲಾಖೆಯೊಂದಿಗೆ ಚರ್ಚಿಸಿದರು ಮತ್ತು ಮಿಯಾಜಾಕಿ ಮಾವಿನ ಗಿಡಗಳನ್ನು ತರಿಸಿಕೊಬೇಕೆಂದು ಕೇಳಿದರು. ಈ ಮೇಳದಲ್ಲಿ ಜಗತ್ತಿನ ದುಬಾರಿ ಮಾವು ಮಿಯಾಜಾಕಿ ತಳಿಯು ದೇಶದ್ಯಾಂತ ಸುದ್ದಿ ಮಾಡಿತು.
ಈ ಮೇಳದಲ್ಲಿ ಬೆಂಗಳೂರು, ದಾವಣಗೆರೆ, ಹಾವೇರಿ, ತುಮಕೂರು, ಚಿತ್ರದುರ್ಗಾ, ರಾಯಚೂರು, ಬಳ್ಳಾರಿ, ಗದಗ, ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ವಿಜಯನಗರ ಹಾಗೂ ವಿವಿಧ ಹೊರ ಜಿಲ್ಲೆಯ ಮಾವು ಬೆಳೆಯುವ ರೈತರು ಸಹ ಭಾಗವಹಿಸಿ ಹಣ್ಣು ಮಾರಾಟ ಮಾಡುವ ಬಗ್ಗೆ, ನೈಸರ್ಗಿಕವಾಗಿ ಹಣ್ಣು ಮಾಗಿಸುವ ಬಗ್ಗೆ, ರಫ್ತು ಹಾಗೂ ಮಾರುಕಟ್ಟೆ ಕುರಿತು ಮಾಹಿತಿಯನ್ನು ಪಡೆದಿಕೊಂಡಿರುತ್ತಾರೆ.
*ಕೇಸರ್ ಮಾವಿನ ಬ್ರ್ಯಾಂಡ್ ಬಾಕ್ಸ್ ಹಾಗೂ ಬ್ಯಾಗ್ ಗಳಿಗೆ ಬೇಡಿಕೆ:* ಈ ಮೇಳದಲ್ಲಿ ಕೊಪ್ಪಳ ಕೇಸರ್ ತಳಿಯ ಮಾವಿಗೆ ಹೆಚ್ಚಿನ ಬೇಡಿಕೆ ಬಂದು 2.50 ಕೆ.ಜಿ. ತೂಕದ “ಕೊಪ್ಪಳ ಕೇಸರ್” ಎಂಬ ಬ್ರ್ಯಾಂಡ್ ಬಾಕ್ಸ್ ಹಾಗೂ ಬ್ಯಾಗ್ ಗಳಿಗೆ ಹೆಚ್ಚಿನ ಬೇಡಿಕೆ ಬಂದು 15,000 ಕ್ಕೂ ಹೆಚ್ಚಿನ ಬಾಕ್ಸ್ ಹಾಗೂ ಬ್ಯಾಗ್ ಗಳನ್ನು ಬೆಂಗಳೂರು ಮತ್ತು ದೆಹಲಿ, ಹುಬ್ಬಳ್ಳಿ, ಹೈದರಬಾದ್, ಮಂಗಳೂರು ಹಾಗೂ ವಿವಿಧ ನಗರಗಳಿಗೆ ರೈತರು ಪ್ಯಾಕ್ ಮಾಡಿ 60 ಟನ್‌ಗೂ ಹೆಚ್ಚಿನ ಕೇಸರ್ ಮಾವಿನ ಹಣ್ಣುಗಳನ್ನು ಬಾಕ್ಸ್ ಮತ್ತು ಬ್ಯಾಗ್‌ಗಳ ಮುಖಾಂತರ ಮಾರಾಟ ಮಾಡಿರುತ್ತಾರೆ. ಈ ಬಾಕ್ಸ್ ಹಾಗೂ ಬ್ಯಾಗ್ ಗಳನ್ನು ತೋಟಗಾರಿಕೆ ಇಲಾಖೆಯಿಂದ ಆರ್.ಕೆ.ವಿ.ವೈ ಯೋಜನೆಯಡಿ ರೈತರಿಗೆ ಸಹಾಯಧನ ಮುಖಾಂತರ ಪೂರೈಸಲಾಗಿತ್ತು. ಈ ಮೇಳದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ (ಪಿ.ಕೆ.ವಿ.ವೈ) ನೊಂದಾಯಿಸಿಕೊಂಡ ಮಾವು ಬೆಳೆಗಾರರು ಹಣ್ಣುಗಳನ್ನು ಮಾರಾಟ ಮಾಡಿದರು. “ಕೊಪ್ಪಳ ಕೇಸರ್ ಮಾವಿನ ಹಣ್ಣಿನ ಬಾಕ್ಸ್ಗಳನ್ನು ಬೆಂಗಳೂರಿನಲ್ಲಿರುವ ಚಲನಚಿತ್ರ ನಟರು ಹಾಗೂ ನಿರ್ದೇಶಕರು ಸಹ ಖರೀದಿಸಿ ಕೊಪ್ಪಳ ಕೇಸರ್ ಮಾವಿನ ಹಣ್ಣಿನ ರುಚಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ”.
ಈ ಬಾರಿ ಹೆಚ್ಚಿನ ವಿವಿಧ ತಳಿ ಮಾವಿನ ಹಣ್ಣುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಂದರೆ, ಬೇರೆ ಬೇರೆ ಜಿಲ್ಲೆಗಳಿಗೆ ಸರಕು ವಾಹನಗಳ ಮೂಲಕ, ಬಸ್‌ಗಳ ಮೂಲಕ ದೂರ ದೂರಿನ ಜಿಲ್ಲೆಗಳಿಗೂ ತಲುಪಿಸಿ ಮಾರಾಟ ಆಗಿವೆ. ಕೊಪ್ಪಳ ಕೇಸರ ಎಂದೆ ಪ್ರಸಿದ್ದವಾದ ಈ ತಳಿಗೆ ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲದೇ ರಾಜ್ಯದ ಉದ್ದಗಲಕ್ಕೂ ಬೇಡಿಕೆ ಬಂದಿದ್ದು ನೂರಾರು ಕೆಜಿ ಹಣ್ಣುಗಳನ್ನು ಹೊರ ರಾಜ್ಯದ ಗ್ರಾಹಕರಿಗೂ ತಲುಪಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ 16 ದಿನಗಳ ಕಾಲ ನಡೆದ ಮಾವು ಮೇಳದಲ್ಲಿ ಅಂದಾಜು 60 ಸಾವಿರಕ್ಕೂ ಹೆಚ್ಚು ಜನಪಾಲ್ಗೊಂಡಿದ್ದಾರೆ. ಒಟ್ಟು ರೂ. 3.30 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದ್ದು, ಈ 10ನೇ ವರ್ಷದ ಮೇಳವು ಹಿಂದಿನ ಎಲ್ಲಾ ಮೇಳಕ್ಕಿಂತಲೂ ಅತ್ಯಂತ ಯಶಸ್ವಿಯಾಗಿದೆ. ಈ ಮೇಳದಲ್ಲಿ ಹೆಚ್ಚಿನ ಗ್ರಾಹಕರು ಭಾಗವಹಿಸಿ ಹೆಚ್ಚು ಮಾವುಗಳನ್ನು ಖರೀದಿಸಿ ದಾಖಲೆಯನ್ನು ನಿರ್ಮಿಸಿರುತ್ತಾರೆ.
ಹೆಚ್ಚಿನ ರೈತರು ಮಾವು ಮೇಳದಿಂದ ಉತ್ತೇಜಿತರಾಗಿದ್ದು, ಈ ಮೇಳದಲ್ಲಿ ಮಾವು ಬೆಳೆಯ ಕುರಿತು ತಾಂತ್ರಿಕ ಮಾಹಿತಿ ಹಾಗೂ ರಫ್ತು ಮಾರುಕಟ್ಟೆ, ಸಂಸ್ಕರಣೆ ಕುರಿತು ಮಾಹಿತಿ ಪಡೆದಿದ್ದಾರೆ. ಇದಲ್ಲದೇ ಮಾವು ಬೆಳೆಯಲು ಆಸಕ್ತಿಯನ್ನು ಸಹ ತೋರಿರುತ್ತಾರೆ. ಕೇಸರ ತಳಿಗೆ ಅತೀ ಹೆಚ್ಚಿನ ಬೇಡಿಕೆ ಬಂದಿದ್ದು, ಮುಂಬರುವ ವರ್ಷಗಳಲ್ಲಿ ನೂತನ ತಂತ್ರಜ್ಞಾನಗಳಾದ, ಅಧಿಕ ಸಾಂದ್ರ ಪದ್ಧತಿ, ಹನಿ ನೀರಾವರಿ, ರಸಾವರಿ ಇತ್ಯಾದಿಗಳ ಮೂಲಕ ಎರಡು ಸಾವಿರ ಎಕರೆಗೂ ಹೆಚ್ಚಿನ ಪ್ರದೇಶ ವಿಸ್ತರಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ರೈತರೂ ಕೂಡ ಕೇಸರ ತಳಿ ಮಾವು ಬೆಳೆಯಲು ಅತ್ಯಂತ ಆಸಕ್ತಿ ವಹಿಸಿದ್ದು, ಇಲಾಖೆ ಗುರಿ ಮುಟ್ಟಲು ಸಹಕಾರ ನೀಡಲು ಮುಂದಾಗಿದ್ದಾರೆ. ಒಟ್ಟಾರೆ ಮಾವು ಮೇಳದಿಂದ ರೈತರಿಗೆ ತೋಟಗಾರಿಕೆಯಲ್ಲಿ ಹೊಸ ಭರವಸೆ ಮೂಡಿದೆ. ಗ್ರಾಹಕರಿಗೆ ಕೇಸರ ತುಂಬ ಇಷ್ಟವಾಗಿದೆ. ಜೊತೆಗೆ ರೈತರು ಜಗತ್ತಿನ ದುಬಾರಿ ಮಾವು ಆದ “ಮಿಯಾಜಾಕಿ” ತಳಿಯ ಮಾವಿನ ಸಸಿಗಳನ್ನು ವಿವಿಧ ನರ್ಸರಿಗಳಿಂದ ತಂದು ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಜಗತ್ತಿನ ದುಬಾರಿ ಮಾವು ಮಿಯಾಜಾಕಿ ಮುಂದಿನ ವರ್ಷದ ಕೊಪ್ಪಳ ಮಾವು ಮೇಳದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆ ಇರುತ್ತದೆ ಎಂದು ಕೊಪ್ಪಳ ತೋಟಗಾರಿಕೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
