
Our goal is to provide higher education to the common people: Prof. S.V. Dani

ಜನಸಾಮಾನ್ಯರಿಗೆ ಉನ್ನತ ಶಿಕ್ಷಣ ನೀಡುವುದೇ ನಮ್ಮ ಗುರಿ: ಪ್ರೊ. ಎಸ್.ವಿ.ಡಾಣಿ

ಕೊಪ್ಪಳ ಏಪ್ರಿಲ್ 17 (ಕರ್ನಾಟಕ ವಾರ್ತೆ): ಜನಸಾಮಾನ್ಯರ ಮಕ್ಕಳು ವಿಶ್ವವಿದ್ಯಾಲಯದ ಪ್ರವೇಶ ಪಡೆದು ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಗ್ರ ಅಭಿವೃದ್ಧಿ ಹೊಂದಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ ಡಾಣಿ ಹೇಳಿದರು.
ಯಲಬುರ್ಗಾ ಪಿ.ಜಿ ಸೆಂಟರ್‌ನಲ್ಲಿ ಗುರುವಾರ (ಏ.16) ಹಮ್ಮಿಕೊಳ್ಳಲಾಗಿದ್ದ ಕೊಪ್ಪಳ ವಿಶ್ವವಿದ್ಯಾಲಯದ ಮೂರನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬುದ್ದ ಬಸವ ಅಬೇಡ್ಕರರ ಆಶಯದಂತೆ ಜ್ಞಾನ, ವಿಜ್ಞಾನ, ವಿಕಾಸ ಎಂಬ ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ ಎಲ್ಲ ವಿದ್ಯಾರ್ಥಿಗಳ ಹೃದಯದಲ್ಲಿ ಬೇರೆಯಬೇಕು. ಅಂದಾಗ ಮಾತ್ರ ಈ ನಾಡು ವೈಚಾರಿಕ ಚಿಂತನೆಯ ಬೀಡಾಗಲು ಸಾಧ್ಯ. ವಿದ್ಯಾರ್ಥಿಗಳು ನಮಗೆ ವಿಶ್ವವಿದ್ಯಾಲಯದ ಬೆಳವಣಿಗೆ ಪ್ರತ್ಯಕ್ಷ ಆಶ್ರಯದಾತರು ಹಾಗಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು. ಬದಕು ಕಟ್ಟಿಕೊಡುವ ಸ್ಥಳವನ್ನು ಮರೆಯದೆ ಎಲ್ಲರೂ ಶ್ರಮವಹಿಸಿ ಕಾರ್ಯ ನಿರ್ವಹಿಸುವ ಮೂಲಕ ವಿಶ್ವವಿದ್ಯಾಲಯವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ. ಬೇರೆ ವಿಶ್ವವಿದ್ಯಾಲಯಗಳ ಹೋಲಿಕೆ ಸಲ್ಲದು ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಬೆಂಬಲದಿAದ ವಿಶ್ವವಿದ್ಯಾಲಯದ ಸ್ಥಳ ಈಗಾಗಲೇ ನಿಗದಿಯಾಗುವ ಕಾಲ ಸನ್ನಿತವಾಗುತ್ತಿದೆ ಎಂದು ಹೇಳಲು ಸಂತೋಷವಾಗುತ್ತದೆ ಎಂದರು.
ಇನ್ನೂ ಅನೇಕ ವಿಭಾಗಗಳನ್ನು ಆರಂಭಸಬೇಕೆಂಬ ಚಿಂತನೆ ನಡೆಯುತ್ತಿದೆ. ಮೂಲ ಸೌಕರ್ಯಗಳ ಸಮಸ್ಯೆಗಳು ಪರಿಹಾರವಾಗುತ್ತಿದ್ದು ಯಲಬುರ್ಗಾಪಿ.ಜಿ ಸೆಂಟರ್ ನ್ನು ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕೇಂದ್ರವನ್ನು ಪ್ರಸಕ್ತ ವರ್ಷದಿಂದ ಆರಂಭಿಸಲಾಗುವುದು. ಜನಸಾಮಾನ್ಯರಿಗೆ ಉನ್ನತ ಶಿಕ್ಷಣದ ಮಹತ್ವ ತಿಳಿಸುವ ಮೂಲಕ ಈ ಭಾಗದ ಮಹಿಳೆಯರನ್ನು ಸ್ನಾತಕೋತ್ತರ ಶಿಕ್ಷಣ ಪಡೆದುಕೊಳ್ಳಲು ವಿಶ್ವವಿದ್ಯಾಲಯ ಅರಿವು ಮೂಡಿಸುತ್ತಾ ಬಂದಿದೆ. ಅಧ್ಯಯನ ಪೀಠ ಸೇರಿದಂತೆ ಇನ್ನೂ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ತಂದೆ ತಾಯಿಗಳ ಕನಸನ್ನು ನನಸಾಗಿಸುವ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಆಡಳಿತಾಧಿಕಾರಿ ತಿಮ್ಮಾರಡ್ಡಿ ಪ್ರಾಸ್ತಾವಿಕ ಮಾತನಾಡಿದರು.
ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮಜುಮದಾರ ಅವರು ಮಾತನಾಡಿ, ನಾನು ಸಿಡಿಕೇಟ್ ಸದಸ್ಯೆಯಾಗಿದ್ದಾಗ ಕೊಪ್ಪಳ ಭಾಗದಲ್ಲಿ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಿ.ಜಿ ಸೆಂಟರ್ ಆರಂಭಿಸಲಾಯಿತು ಇದು ಅಷ್ಟು ಸುಲಭವಾಗಿದ್ದಿಲ್ಲ. ಅಂದಿನ ಜಿಲ್ಲಾಧಿಕಾರಿ ಕನಗವಲ್ಲಿ ಅವರ ಪ್ರೋತ್ಸಾಹದ ಫಲವಾಗಿ ದೋರಕಿದೆ. ಇಂದು ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪಿತವಾಗಿ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಸಮಗ್ರ ಅಭಿವೃದ್ಧಿಗೆ ಇಲ್ಲಿನ ರಾಜಕಾರಣಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯಿಂದ ಶಾಶ್ವತ ನೆಲೆ ಕಂಡುಕೊಂಡು ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದ ಅವಶ್ಯಕತೆ ಇದೆ. ಅತಿಥಿ ಉಪನ್ಯಾಸಕರ ಶ್ರಮಕ್ಕೆ ತಕ್ಕ ಪ್ರತಿಫಲ ದೋರೆಬೇಕು ಸುಧೀರ್ಘ ಅವಧಿ ಸೇವೆ ಸಲ್ಲಿಸಿದ ಎಸ್.ವಿ ಡಾಣಿಯವರಿಗೆ ಸಾತ್ವಿಕ ಮನಸ್ಸುಳ್ಳವರು ಅವರ ಅವಧಿಯಲ್ಲಿ ಇನ್ನೂ ಅನೇಕ ಒಳ್ಳೆಯ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.
ಕುಲಸಚಿವ ಪ್ರೊ. ಕೆ.ರಮೇಶ ಅವರು ಮಾತನಾಡಿ, ಕಾಲಕ್ಕೆ ತಕ್ಕಂತೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ತಾಂತ್ರಿಕ ಜ್ಞಾನ ಬಹಳ ಅವಶ್ಯವಾಗಿರುವಿದರಿಂದ ಪ್ರಾಧ್ಯಾಪಕರು ವಿದ್ಯಾರ್ಥಿಗಳಲ್ಲಿ ಎ.ಐ ಯಂತಹ ಅಡ್ವಾನ್ಸ್ ಟೆಕ್ನಾಲಜಿ ಬಗ್ಗೆ ಅರಿವನ್ನು ಮೂಡಿಸುವ ಮೂಲಕ ಪ್ರಸ್ತುತ ಸ್ಪರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿಗಳಿಗಳನ್ನು ಅಣಿಗೊಳಿಸಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.
ಹಣಕಾಸು ಅಧಿಕಾರಿ ಅಮೀನಸಾಬ ಅತ್ತಾರ ಅವರು ಮಾತನಾಡಿ, ಚಾರಿತ್ರಿಕ ಖ್ಯಾತಿಯನ್ನು ಪಡೆದ ಕೊಪ್ಪಳ ಇಂದು ಶೈಕ್ಷಣಿಕವಾಗಿ ಉನ್ನತ ಶಿಕ್ಷಣ ನೀಡುವಲ್ಲಿ ಉತ್ಸುಕವಾಗಿ ಕಾರ್ಯನಿರ್ವಹಿಸುತ್ತಿದೆ ಇದಕ್ಕೆ ಪ್ರಮುಖ ಕಾರಣ ಸರಳತೆ ಮತ್ತು ಸಜ್ಜನಿಕೆಗಳವುಳ್ಳ ಕುಲಪತಿಗಳಾದ ಪ್ರೊ.ಎಸ್.ವಿ ಡಾಣಿ ಮತ್ತು ಅವರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ. ಮುಂದಿನ ದಿನಗಳಲ್ಲಿ ಉತ್ತಮ ಸುಧಾರಣೆಯ ಮೂಲಕ ಇತರ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಿ ಬೆಳೆಸುವ ಸಾಮರ್ಥ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಸಮಯ ಹಾಳು ಮಾಡದೆ ಓದುವ ಮೂಲಕ ಜ್ಞಾನ ಸಂಪಾದಿಸಿಕೊಂಡು ತಮ್ಮ ಕನಸನ್ನು ನನಸಾಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರದರ್ಶನ ಕಲೆ ವಿಭಾಗದಿಂದ ಶ್ರೀಕೃಷ್ಣದೇವರಾಯ ನಾಟಕ ಪ್ರದರ್ಶನವಾಯಿತು. ಪತ್ರಿಕೋದ್ಯಮ ವಿಭಾಗದ ಕಲ್ಯಾಣ ವಾಣಿ ವಿದ್ಯಾರ್ಥಿ ಪತ್ರಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಕೊಪ್ಪಳ ವಿಶ್ವವಿದ್ಯಾಲಯದ ಮತ್ತು ಯಲಬುರ್ಗಾ ಪಿ.ಜಿ ಸೆಂಟರ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
ಕಾರ್ಯಕ್ರಮದಲ್ಲಿ ಯಲಬುರ್ಗಾ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಕೆ.ಹೆಚ್ ಛತ್ರದ, ಗಂಗಾವತಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಶಿವರಾಜ ಗುರಿಕಾರ, ವಿವಿಧ ವಿಭಾಗಗಳ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಗೀತಾ ಪಾಟೀಲ್ ನಿರೂಪಿಸಿದರು. ಕುಮಾರಿ ಸುಷ್ಮಾ ಕುಲಕರ್ಣಿ ಪ್ರಾರ್ಥನೆ ಗೀತೆ ಹಾಡಿದರು. ಕನ್ನಡ ವಿಭಾಗದ ಅಧ್ಯಾಪಕ ನಾಗಪ್ಪ ಹೂವಿನಬಾವಿ ಸ್ವಾಗತಿಸಿದರು, ರಾಜ್ಯಶಾಸ್ತ್ರದ ಉಪನ್ಯಾಸಕ ದೇವಪ್ಪ ವಂದಿಸಿದರು.
