ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್ ಅವರನ್ನು ಬಲವಂತ ಬಂಧನ ಖಂಡಿಸಿ ಮತ್ತು NTA ಹಾಗೂ ನೀಟ್ ರದ್ದು ಮಾಡುವಂತೆ ಮತ್ತು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇದ್ರ ಪ್ರಧಾನ್ ರವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಗಂಗಾವತಿ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್ ಅವರನ್ನು ಬಲವಂತ ಬಂಧನ ಖಂಡಿಸಿ ಮತ್ತು NTA ಹಾಗೂ ನೀಟ್ ರದ್ದು ಮಾಡುವಂತೆ ಮತ್ತು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇದ್ರ ಪ್ರಧಾನ್ ರವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿ ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮೇ.3ರಂದು ನಡೆಸಲಾದ NEET UG 2026 ಪರೀಕ್ಷೆಯಲ್ಲಿ ಸುಮಾರು 22 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ಆದರೆ, ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ರಾಜಸ್ಥಾನದಲ್ಲಿ ಸೋರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ NTA ಈ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಮರುಪರೀಕ್ಷೆ ಮಾಡಲಾಗಿದೆ. ಇದರ ಪರಿಣಾಮವಾಗಿ ದೇಶದಲ್ಲಿ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರಂಭದಿಂದಲೂ ಪರೀಕ್ಷೆಗಳ ದುರುಪಯೋಗಕ್ಕೆ ಕುಖ್ಯಾತವಾಗಿರುವ ಎನ್‌ಟಿಎ, ಪರೀಕ್ಷೆಗಳ ನಿರ್ವಹಣೆಯಲ್ಲಿ ತನ್ನ ಅಸಮರ್ಥತೆಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಈ ಹಿಂದೆ 89 ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಹಾಗೂ 48 ಮರು ಪರೀಕ್ಷೆ ಮಾಡಲಾಗಿದೆ. ಆಗಾಗಿ ಇಂತಹ ಅಸಮರ್ಥ NTA ಸಂಸ್ಥೆಯನ್ನು ರದ್ದುಗೊಳಿಸಬೇಕು.
ತಾಲೂಕ ಅಧ್ಯಕ್ಷ ನಾಗರಾಜ್ ಯು ಮಾತನಾಡಿ ಸೋನಂ ಅವರ ಶಾಂತಿಯುತ ಉಪವಾಸ ಸತ್ಯಾಗ್ರಹದ ಇಪ್ಪತ್ತು ದಿನಗಳ ನಂತರ ನಡೆದಿರುವ ಈ ಅಧಿಕಾರ ದುರುಪಯೋಗದ ಕ್ರಮವು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಹಾಗೂ ಶಾಂತಿಯುತ ಪ್ರತಿಭಟನೆಯ ಸಂವಿಧಾನಬದ್ಧ ಹಕ್ಕಿನ ಮೇಲಿನ ನಾಚಿಕೆಗೇಡಿನ ದಾಳಿಯಾಗಿದೆ.
ಕಳೆದ ಇಪ್ಪತ್ತು ದಿನಗಳಿಂದ ಸೋನಂ ವಾಂಗ್ಚುಕ್ ಅವರು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರ ಬೇಡಿಕೆಗಳಿಗೆ ಬೆಂಬಲ ಸೂಚಿಸಿ ಅನೇಕ ವಿದ್ಯಾರ್ಥಿಗಳೂ ಸಹ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು. ಪ್ರತಿಭಟನಾಕಾರರೊಂದಿಗೆ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಸಂವಾದ ನಡೆಸುವ ಬದಲು, ಕೇಂದ್ರ ಸರ್ಕಾರವು ಪೊಲೀಸ್ ಕ್ರಮದ ಮೂಲಕ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಮಾರ್ಗವನ್ನು ಆರಿಸಿಕೊಂಡಿದೆ.
ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಬಲವಂತವಾಗಿ ವಶಕ್ಕೆ ಪಡೆಯುವುದು ನಮ್ಮ ದೇಶದ ಪ್ರಜಾಸತ್ತಾತ್ಮಕ ಪರಂಪರೆಗೆ ಕಪ್ಪು ಚುಕ್ಕೆಯಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬದ್ಧವಾಗಿರುವ ಸರ್ಕಾರವು ಶಾಂತಿಯುತ ಪ್ರತಿಭಟನೆಗಳಿಗೆ ಸಂವಾದ ಮತ್ತು ಹೊಣೆಗಾರಿಕೆಯ ಮೂಲಕ ಸ್ಪಂದಿಸಬೇಕು; ಬಲಪ್ರಯೋಗ ಮತ್ತು ಬೆದರಿಕೆಯ ಮೂಲಕವಲ್ಲ. ಭಿನ್ನಾಭಿಪ್ರಾಯಗಳನ್ನು ಮಣಿಸಲು ಪೊಲೀಸ್ ಬಲವನ್ನು ಹೆಚ್ಚಾಗಿ ಬಳಸುತ್ತಿರುವುದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ದುರ್ಬಲಗೊಳಿಸುವ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.
ದಿನಾಂಕ 21-07-2026 ರಂದು ವಿದ್ಯಾರ್ಥಿಗಳ ಪಾರ್ಲಿಮೆಂಟ್ ಚಲೋದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್, ಹಾಗೂ ಅಶ್ರವಾಯು ಬಲ ಪ್ರಯೋಗ ಮಾಡುವ ಮೂಲಕ ಶಾಂತಿಯುತವಾಗಿ ನಡೆಯುತ್ತಿದ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಗಂಗಾವತಿ ತಾಲೂಕ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ .
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕ ಅಧ್ಯಕ್ಷ ನಾಗರಾಜ್ ಯು, ಉಪಾಧ್ಯಕ್ಷ ಶರೀಫ್ ಎಂ. ಪಿ, ಜಂಟಿ ಕಾರ್ಯದರ್ಶಿ ದರ್ಶನ ಹೋಸ್ಕೆರ, ವಿದ್ಯಾರ್ಥಿಗಳಾದ ಉಷಾ, ಪಾರ್ವತಿ, ನಂದಿತಾ, ಸಿಂಧೂ, ರಂಜನ್, ಸುಮಂತ, ನಂದೀಶ, ರಾಜಾಭಕ್ಷಿ ವಿನೋದ್ ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

