Vinayak Optical and Eye Examination Center has brought light to the lives of many blind people: Dr. Shamiksha, ophthalmologist, Shankara Eye Hospital
ಕುಷ್ಟಗಿ: ನೇತ್ರದಾನ ಮಹಾದಾನವಾಗಿದ್ದು ಓರ್ವರು ನೇತ್ರವನ್ನು ದಾನವಾಗಿ ನೀಡಿದರೆ ಆ ನೇತ್ರವೂ ನಾಲ್ಕು ಜನರಿಗೆ ಉಪಯೋಗವಾಗಲಿದೆ ಎಂದು ಡಾ. ಶಮೀಕ್ಷಾ ಅವರು ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಯಾನಂದಪುರಿ ಕ್ರೀಡೆ, ಸಾಂಸ್ಕೃತಿಕ ಜಾನಪದ ಕಲಾ ಸಂಘ ವಿನಾಯಕ ಆಫ್ಟಿಕಲ್ಸ್ ಮತ್ತು ಕಣ್ಣಿನ ಪರೀಕ್ಷಾ ಕೇಂದ್ರ ಕುಷ್ಟಗಿ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು
ವಿನಾಯಕ ಆಪ್ಟಿಕಲ್ ಮತ್ತು ಕಣ್ಣಿನ ಪರೀಕ್ಷಾ ಕೇಂದ್ರದ ವತಿಯಿಂದ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಹಲವಾರು ಶಿಬಿರಗಳನ್ನು ಆಯೋಜಿಸಿ ಸಾವಿರಾರು ಜನರ ಕಣ್ಣಿನ ಆಪರೇಷನ್ ಮಾಡಿಸಿದ ಕೀರ್ತಿ ಸಲ್ಲುತ್ತದೆ ಎಂದು ಇವರ ಕಾರ್ಯವನ್ನು ಸ್ಲಾಘೀಸಿದರು.
ಮನುಷ್ಯನ ದೇಹದಲ್ಲಿ ಅತ್ಯಂತ ಸೂಕ್ಷ್ಮ ಅಂಗವಾಗಿರುವ ಕಣ್ಣಿನ ರಕ್ಷಣೆ ಬಹಳ ಮುಖ್ಯ ಯಾವುದೇ ನಿಖರ ಕಾರಣವಿಲ್ಲದೇ ಬರುವ ಕಣ್ಣಿನ ಪೊರೆ ಸಮಸ್ಯೆಗೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಮುಂದಾಗುವ ಅನಾಹುತಗಳನ್ನು ತಡೆಯಬಹುದಾಗಿದೆ ಎಂದರು.
ಆರೋಗ್ಯ ಹಿರಿಯ ಮೇಲ್ವಿಚಾರಕ ರವೀಂದ್ರ ನಂದಿಹಾಳ ಮಾತನಾಡಿ ವ್ಯಕ್ತಿ ಪೌಷ್ಠಿಕ ಆಹಾರ ಸೇವನೆಯಿಂದ ಕಣ್ಣಿನ ಸಮಸ್ಯೆಯನ್ನು ದೂರವಿಡಬಹುದು. ಇದರ ಜೊತೆಗೆ ಸೊಪ್ಪು ತರಕಾರಿ, ಹಣ್ಣು, ಮೊಳಕೆ ಕಾಳುಗಳಂತಹ ಪೌಷ್ಠಿಕಾಂಶಗಳುಳ್ಳ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಕಣ್ಣಿನ ರಕ್ಷಣೆ ಪಡೆಯಬಹುದಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಗಂಭೀರ ಸ್ವರೂಪದ ಕಾಯಿಲೆಯಾಗಿ ಪರಿಣಮಿಸುತ್ತಿದೆ. ಆರಂಭದಲ್ಲಿಯೇ ತಪಾಸಣೆ ಮಾಡಿಸಿ ಸಮಸ್ಯೆ ಕಂಡುಬಂದರೆ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ಆನಂದ, ಮಲ್ಲನಗೌಡ, ಜಯಶ್ರೀ, ಬಸವರಾಜ ಚೋಕಾವಿ,ಶ್ರೀನಿವಾಸ ಕಂಟ್ಲಿ, ದೇವರಾಜ ಪೂಜಾರ, ವೆಂಕಟೇಶ ರೆಡ್ಡಿ, ಪ್ರಭು ಜಹಗೀರದಾರ ನಾಗರಾಜ ಕಾಳಗಿ, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇದ್ದರು. ಈ ಶಿಬಿರದಲ್ಲಿ 150 ಜನರಿಗೆ ತಪಾಸಣೆ ಮಾಡಲಾಯಿತು. 62 ಜನರು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.