There is a country for us; Let there be goodwill for the country: BSP Yoddha Siddappa Muganur.
ಬಸವಕಲ್ಯಾಣ: ನಾವು ಹಗಲಿರುಳೆನ್ನದೆ ಜೀವನದ ಹಂಗು ತೊರೆದು, ದೇಶದ ಗಡಿಯಲ್ಲಿ ನಿಂತು ದೇಶದ ರಕ್ಷಣೆಗೆ ಬದ್ಧರಾಗಿ ದುಡಿಯುತ್ತೇವೆ, ಆ ಶಕ್ತಿ ನಮಗೆ ನಮ್ಮ ತಾಯ್ನಾಡು ತುಂಬುತ್ತದೆ ಆದ್ದರಿಂದ ನಮಗಾಗಿ ದೇಶವೆನ್ನದೆ; ದೇಶಕ್ಕಾಗಿ ನಾವು ಎಂಬ ಭಾವನೆಯಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಜಾಗದಲ್ಲಿ ದೇಶಕ್ಕಾಗಿ ಕರ್ತವ್ಯಪರರಾಗಿ ದುಡಿಯಬೇಕು ಎಂದು ಫಿರೋಜ್ ಪುರದ ಗಡಿಯ ಬಿ ಎಸ್ ಎಪ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಯೋಧ ಸಿದ್ಧಪ್ಪ ಮುಗನೂರು ಮಾತನಾಡಿದರು.
ನಗರದ ಅರಿವು ಆಚಾರ ಅನುಭಾವ ಕೇಂದ್ರದಲ್ಲಿ ಕಲ್ಯಾಣ ಮಹಾಮನೆ ಆಯೋಜಿಸಿದ ಮಾಸಿಕ ಶರಣ ಜ್ಞಾನ ಸಂಗಮದಲ್ಲಿ ದೇಶಾಭಿಮಾನದ ಕುರಿತು ಅನುಭಾವ ಹಂಚಿಕೊಂಡ ಅವರು ದೇಶ ಪ್ರೇಮ ಎನ್ನುವುದು ಸೈನಿಕ ಹುದ್ದೆಗೆ ಸೇರಿ ಗಡಿಯಲ್ಲಿ ನಿಂತು ಕಾಯುವುದಷ್ಟೇ ಅಲ್ಲ; ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ತಮ್ಮ ಕೆಲಸದಲ್ಲಿ ಭ್ರಷ್ಟಾಚಾರವಿಲ್ಲದೆ, ದುಶ್ಚಟಕ್ಕೆ ಒಳಗಾಗದೆ, ತನು ಮನ ಭಾವ ಶುದ್ಧರಾಗಿ ಕರ್ತವ್ಯ ನಿಷ್ಠೆಯಿಂದ ದುಡಿದರೆ ಅದು ನೀವು ಸಲ್ಲಿಸುವ ದೇಶ ಪ್ರೇಮವಾಗಿರುತ್ತದೆ. ನಾನು ಚಿಕ್ಕವನಿದ್ದಾಗಲೇ ದೇಶ ಕಾಯುವ ವೀರ ಯೋಧನಾಗಬೇಕೆಂದು ಗುರಿ ಇಟ್ಟುಕೊಂಡಿದ್ದೆ ಅದಕ್ಕಾಗಿ ದೈಹಿಕ ಸದೃಢತೆಗೆ ಸಿದ್ಧತೆ ನಡೆಸುತ್ತಿದ್ದೆ ಅದರ ಪರಿಣಾಮ ಇಂದು ಸೈನಿಕನಾಗಿ ದೇಶ ಸೇವೆ ಮಾಡುವ ಅವಕಾಶ ಒದಗಿತು. ಇಂದಿನ ಯುವಶಕ್ತಿಯೇ ಭಾರತದ ದಿವ್ಯ ಶಕ್ತಿಯಾಗಿದೆ ಆದ್ದರಿಂದ ಶಿಸ್ತಿನ ಜೀವನ ನಡೆಸುತ್ತಾ, ಸಮಯೋಚಿತ ಜ್ಞಾನ ಸಂಪಾದನೆ ಮಾಡುತ್ತಾ ಅಂದುಕೊಂಡ ಗುರಿಯನ್ನು ತಲುಪಬೇಕು. ಮೊಬೈಲ್ ದಾಸರಾಗಿ ದಿನದ ಸಾಕಷ್ಟು ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು ಸತ್ಸಂಗದಲ್ಲಿ ಒಂದಿಷ್ಟು ಸಮಯ, ಮಾನಸಿಕ, ದೈಹಿಕ ಆರೋಗ್ಯದ ಕಡೆಗೆ ಒಂದಿಷ್ಟು ಸಮಯವನ್ನು ಮೀಸಲಿಟ್ಟರೆ ನೀವು ದೇಶಕ್ಕಾಗಿ ಬಹುದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ ಎಂದರಲ್ಲದೆ, “ನೆರೆ ಕೆನ್ನೆಗೆ ತೆರೆ ಗಲ್ಲಕೆ ಶರೀರ ಗೂಡು ಹೋಗದ ಮುನ್ನ” ಎಂಬ ಬಸವಣ್ಣನವರ ವಚನವನ್ನು ಉಲ್ಲೇಖಿಸಿ ದೇಶಕ್ಕಾಗಿ, ಸಮಾಜಕ್ಕಾಗಿ ಮಾನಸಿಕ, ದೈಹಿಕ ಸ್ವಾಸ್ಥ್ಯದೊಂದಿಗೆ ದೇಶಕ್ಕೆ ದುಡಿಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶರಣ ದತ್ತಾತ್ರೆ ಮೂಲಗೆ ನಿಜಮುಕ್ತೆ ಲಿಂಗಮ್ಮ ಮತ್ತು ನಿಜಸುಖಿ ಹಡಪದ ಅಪ್ಪಣ್ಣನವರ ಕುರಿತು ಮಾತನಾಡುತ್ತಾ ಗುರು ಬಸವಣ್ಣನವರ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು, ಬಸವಣ್ಣನವರ ಜೀವನದ ಅಂತಿಮ ಕ್ಷಣದವರೆಗೆ ಅತ್ಯಂತ ಕರ್ತವ್ಯ ನಿಷ್ಠೆಯಿಂದ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಹಡಪದ ಅಪ್ಪಣ್ಣನವರು ಎಂದರಲ್ಲದೆ, ಅರಿವಿನ ಮನೆಯಲ್ಲಿ ಯಾವುದಾದರು ಒಂದು ಗವಿಯನ್ನು ಹಡಪದ ಅಪ್ಪಣ್ಣನವರಿಗೆ ಮೀಸಲಿರಿಸಿ, ಅಲ್ಲಿ ಅವರ ಸ್ಮಾರಕ ಮಾಡಿದರೆ ಅಪ್ಪಣ್ಣನವರಿಗೆ ಬಹುದೊಡ್ಡ ಗೌರವ ಸಲ್ಲಿಸಿದಂತಾಗುತ್ತದೆ ಈ ನಿಟ್ಟಿನಲ್ಲಿ ಲಿಂಗಾಯತ ಬಂಧುಗಳು ಯೋಚಿಸಬೇಕು ಎಂದು ಹಡಪದ ಸಮಾಜದ ಹಿಂಗಿತವನ್ನು ವ್ಯಕ್ತಪಡಿಸಿದರು.
ನಿವೃತ್ತ ನ್ಯಾಯಾದೀಶರಾದ ಎಸ್ ಎಸ್ ನಾಗರಾಳೆ ಮಾತನಾಡಿ ಅಪ್ಪಣ್ಣನವರು ಕೇವಲ ಬಸವಣ್ಣನವರಿಗೆ ಅಷ್ಟೇ ಆಪ್ತ ಕಾರ್ಯದರ್ಶಿಯಾಗಿರಲಿಲ್ಲ ಇಡೀ ಅನುಭವ ಮಂಟಪಕ್ಕೆ ಕಾರ್ಯದರ್ಶಿಯಾಗಿದ್ದರು. ಅಪ್ಪಣ್ಣನವರನ್ನು ಜಾತಿಗೆ ಸೀಮಿತ ಮಾಡಿ ನೋಡಬಾರದು, ಅವರೊಬ್ಬ ಶ್ರೇಷ್ಠ ಅನುಭಾವಿಕರು ಅವರ 179 ವಚನಗಳಲ್ಲಿ ಮಾನವ ಜೀವನಕ್ಕೆ ಬೇಕಾದ ಮೌಲ್ಯಗಳು ಅಡಕವಾಗಿವೆ ಅವು ಜಾತ್ಯತೀತವಾಗಿ ಸರ್ವರೂ ಅಳವಡಿಸಿಕೊಳ್ಳಲು ಯೋಗ್ಯವಾಗಿವೆ ಎಂದರು.
ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದ ಗುಣತೀರ್ಥ ವಾಡಿ ಕಲ್ಯಾಣ ಮಹಾಮನೆಯ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಲಿಂಗಮ್ಮ ಮತ್ತು ಅಪ್ಪಣ್ಣನವರು ಶ್ರೇಷ್ಠ ಲಿಂಗಾನುಭಾವಿಗಳಾಗಿದ್ದಾರೆ ಲಿಂಗತತ್ವವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿರುವುದಲ್ಲದೆ, ಖಗೋಳಶಾಸ್ತ್ರದ ಬಗ್ಗೆಯೂ ಜ್ಞಾನ ಹೊಂದಿದ್ದರು. ವಿಶ್ವ ಚೈತನ್ಯ ಶಕ್ತಿಯ ಪ್ರಭಾವದಿಂದ ನಮ್ಮ ದೇಹ ಮತ್ತು ಮನಸ್ಸು ಹಾಗೂ ಆತ್ಮನ ಮೇಲೆ ಆಗುವ ಸತ್ಪರಿಣಾಮಗಳ ಕುರಿತು ಲಿಂಗಯೋಗಿಯಾಗಿ ಅನುಭವಿಸಿದವರಲ್ಲಿ ಲಿಂಗಮ್ಮ ಮತ್ತು ಅಪ್ಪಣ್ಣ ಶರಣರು ಒಬ್ಬರಾಗಿದ್ದರು ಅವರ ವಚನಗಳಲ್ಲಿ ಆಯಸ್ಕಾಂತೀಯ ತರಂಗಳಿವೆ ಸಾಧಕರಿಗೆ ದಿವ್ಯ ಮಾರ್ಗದರ್ಶನವಾಗಿವಾಗಿವೆ ಅವುಗಳನ್ನು ಸರಿಯಾಗಿ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿ ನಾಗಶೆಟ್ಟಿ ಗೋರ್ಟಾ ನಿವೃತ್ತ ಕೃಷಿ ಅಧಿಕಾರಿ ಮಾತಾನಾಡಿದರು, ಸಂಗಮೇಶ ತೊಗರಖೇಡೆ ವಚನ ಪಠಣ ಮಾಡಿದರು. ಬಸವಕಲ್ಯಾಣದ ವಿವಿಧ ಸಂಘಟನೆಗಳ ಶರಣೆಯರಿಂದ ವಚನ ಗಾಯನ ನೆರವೇರಿದವು.
ಕಾರ್ಯಕ್ರಮದಲ್ಲಿ ಲಿಂಗಮ್ಮ ಮಹಿಳಾ ಮಹಾಶಕ್ತಿಕೂಟದ ಅಧ್ಯಕ್ಷರಾದ ಸೋನಾಲಿ ಎಸ್ ನೀಲಕಂಠೆಯವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಆಷಾಡದ ಒಂದು ತಿಂಗಳ ಪರ್ಯಂತ ಅಕ್ಕಮಹಾದೇವಿ ಚೌಕಿ ಮಠದಲ್ಲಿ ನೂರಾರು ಮಹಿಳೆಯರನ್ನು ಸೇರಿಸಿ ಲಿಂಗ ಜಪ ಮಾಡಿದ ರಾಜಶ್ರೀ ಖೂಬಾ ಅವರಿಗೆ ಸತ್ಕಾರ ಮಾಡಲಾಯಿತು.
ಗೋರ್ಟಾದ ಶಿವಪುತ್ರ ಕಣಜೆ ವಚನ ಪುಸ್ತಕ ಹಂಚಿದರು.
ಕಾರ್ಯಕ್ರಮದಲ್ಲಿ ಬಸವ ತತ್ವ ಪ್ರಚಾರಕರಾದ ಬಸವರಾಜ ಪಂಡಿತ, ಜಯಪ್ರಕಾಶ ಸದಾನಂದೆ, ಗಣಪತಿ ಖಾಸ್ತೆ, ರಾಮ ಮಜಿಗೆ, ಚಂದ್ರಕಾಂತ ಗುಂಗೆ, ಮಹಾದೇವಪ್ಪ ಹಿಜಾರೆ, ಚೆನ್ನಪ್ಪ ನಿರ್ಣಾ, ಈಶ್ವರ ಶೀಲವಂತ, ಭೀಮಾಶಂಕರ ಮಾಶ್ಯಾಳಕರ್, ಕಲ್ಯಾಣರಾವ್ ಮದರಗಾವಕರ್, ಶ್ರೀಶೈಲ ಹುಡೆದ್, ಲಕ್ಷ್ಮಿಬಾಯಿ ಪಾಟೀಲ್, ಶ್ರೀದೇವಿ ಉಜಳಂಬೆ, ಗಿರಿಜಾ ಸಿದ್ಧಣ್ಣ, ಪದ್ಮಾ ಹಡಪದ, ಅಂಬಿಕಾ ನಾಗರಾಳೆ, ವಿಜಯಲಕ್ಷ್ಮಿ ದಾವಲ್ಜಿ, ಲಿಂಗಮ್ಮನ ಬಳಗ ಹಾಗೂ ಬಸವಕಲ್ಯಾಣ ಬಳಗದ ಶರಣ ಶರಣೆಯರು ಉಪಸ್ಥಿತರಿದ್ದರು.
ಶರಣೆ ಜಯಶ್ರೀ ಪಾಟೀಲ್ ಸ್ವಾಗತಿಸಿದರು, ಸುಮಿತ್ರಾದೇವಿ ದಾವಣಗಾವೆ ನಿರೂಪಿಸಿದರೆ, ರಂಜಿತಾ ಕೃಷ್ಣಾರೆಡ್ಡಿ ವಂದಿಸಿದರು.
ವರದಿ: ಶರಣ ಸಂಗಮೇಶ ತೊಗರಖೇಡೆ ಬಸವಕಲ್ಯಾಣ.