
Navachetana Samaj Seva Trust urges to stop begging and child labor in the city


ಗಂಗಾವತಿ: ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಆದರೆ ನಗರದಲ್ಲಿ ಬಡ ಹೆಣ್ಣುಮಕ್ಕಳು ಸಣ್ಣ ಸಣ್ಣ ಮಕ್ಕಳನ್ನು ಕಂಕುಳಲ್ಲಿ ಕೂಡಿಸಿಕೊಂಡು ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ನಗರದಲ್ಲಿನ ವಿವಿಧ ಗ್ಯಾರೇಜ್‌ಗಳು, ಅಂಗಡಿಗಳು, ಇನ್ನಿತರ ವ್ಯಾಪಾರ ವಹಿವಾಟಿನಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದು ಬಾಲಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ನವಚೇತನಾ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶರಣಬಸವ ಖೇದ ವ್ಯಕ್ತಪಡಿಸಿದರು.
ಅವರು ಇಂದು ನಗರದಲ್ಲಿ ಭಿಕ್ಷಾಟನೆ ಪದ್ಧತಿ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಪದ್ಧತಿಗಳನ್ನು ತಡೆಯಲು ಒತ್ತಾಯಿಸಿ ತಹಶೀಲ್ದಾರರಿಗೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಹಾಗೂ ಕಾರ್ಮಿಕ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ನಗರ ಗಂಗಾವತಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇನ್ನೂ ಬಾಲ್ಯವಿವಾಹಗಳು ನಡೆಯುತ್ತಿರುವುದು ಸರ್ಕಾರ ಹಾಗೂ ಕಾನೂನುಗಳ ನಿರ್ಲಕ್ಷö್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ತಾಲೂಕಾಡಳಿತ, ನಗರಾಡಳಿತ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಎಚ್ಚೆತ್ತುಕೊಂಡು ಭಿಕ್ಷಾಟನೆ ಮಾಡುವವರನ್ನು ಗುರುತಿಸಿ, ಅವರನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಬಾಲಕಾರ್ಮಿಕ ಮಕ್ಕಳು ಕೆಲಸ ಮಾಡುವುದನ್ನು ಪತ್ತೆಹಚ್ಚಿ, ಮಾಲಿಕರನ್ನು ಶಿಕ್ಷೆಗೆ ಗುರಿಪಡಿಸುವ ಮೂಲಕ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿಷೇದಿಸಿ, ಮಕ್ಕಳ ಶಾಲೆಯಿಂದ ಹೊರಗುಳಿಯುವುದನ್ನು ತಡೆಯುವುದು, ಅದೇರೀತಿ ಸರ್ಕಾರದ ನಿಯಮಗಳನ್ವಯ ೨೧ ವರ್ಷ ತುಂಬಿರದ ಗಂಡು, ೧೮ ವರ್ಷದ ತುಂಬಿರದ ಹೆಣ್ಣುಗಳ ಬಾಲ್ಯವಿವಾಹಗಳನ್ನು ನಡೆಯದಂತೆ ಸೂಕ್ತ ಕ್ರಮವಹಿಸಲು ಮನವಿ ಪತ್ರದ ಮೂಲಕ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಪದಾಧಿಕಾರಿಗಳಾದ ರಮೇಶ, ವಿಕ್ರಮ್, ಅಯ್ಯಪ್ಪ, ಮಹಾಂತೇಶ, ಭದ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
