ಗೌರಿ ಹುಣ್ಣಿಮೆ ಹಬ್ಬದಲ್ಲಿ ಮಕ್ಕಳಿಗೆ ಹೂವಿನ ದಂಡೆ ಹಾಕುವ ಸಂಪ್ರದಾಯ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು
The tradition of adorning children with flower garlands during the Gauri Purnima festival.

ಗೌರಿ ಹುಣ್ಣಿಮೆ ಹಬ್ಬದಲ್ಲಿ ಮಕ್ಕಳಿಗೆ ಹೂವಿನ ದಂಡೆ ಹಾಕುವ ಸಂಪ್ರದಾಯ

ಜಾಹೀರಾತು

ಹೂವಿನ ದಂಡೆ, ಸಕ್ಕರೆಯ ಆರತಿ – ಗೌರಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು

ಬರಹ: ಶರಣಬಸಪ್ಪ ದಾನಕೈ
ಯಲಬುರ್ಗಾ: ಹೆಣ್ಣು ಮಕ್ಕಳ ಹಬ್ಬ ಎಂದೇ ಪ್ರಸಿದ್ಧಿ ಪಡೆದಿರುವ ಸೀಗೆ ಹುಣ್ಣಿಮೆ ಹಾಗೂ ಗೌರಿ ಹುಣ್ಣಿಮೆ ಹಬ್ಬಗಳು ಗ್ರಾಮೀಣ ಭಾಗದಲ್ಲಿ ಸಂಪ್ರದಾಯ, ಸಡಗರ ಮತ್ತು ಸಂಭ್ರಮದಿಂದ ಆಚರಿಸಲ್ಪಡುತ್ತವೆ. ಈ ಹಬ್ಬಗಳ ಸಂದರ್ಭದಲ್ಲಿ ಮುದ್ದು ಮಕ್ಕಳಿಗೆ ಹೂವಿನ ದಂಡೆ ಹಾಕುವ ವಿಶೇಷ ಸಂಪ್ರದಾಯ ಇಂದಿಗೂ ಮನೆಮನೆಗಳಲ್ಲಿ ಜೀವಂತವಾಗಿದೆ.
ಗೌರಿ ಹುಣ್ಣಿಮೆ ಹಬ್ಬ ಬಂದರೆ ಸಾಕು, ಮನೆಯ ಹಿರಿಯರು ಮಕ್ಕಳಿಗಾಗಿ ಮಂಡಾಳು (ಚೂರುಮರಿ)ಗಳನ್ನು ಸೂಜಿ ಮತ್ತು ದಾರದಿಂದ ಪ್ರೀತಿಯಿಂದ ಪೋಣಿಸಿ ಸುಂದರವಾದ ದಂಡೆಗಳನ್ನು ತಯಾರಿಸುತ್ತಾರೆ. ಆ ದಂಡೆಗಳನ್ನು ಮುದ್ದು ಮಕ್ಕಳ ತಲೆಯ ಮೇಲೆ ಹಾಕಿ, ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಾರೆ. ಹೂವಿನ ದಂಡೆ ಹಾಗೂ ಮಂಡಾಳುಗಳ ಅಲಂಕಾರದಿಂದ ಮಕ್ಕಳು ಮುದ್ದಾಗಿ ಕಾಣಿಸುತ್ತಾರೆ. ಬಳಿಕ ಮಕ್ಕಳು ನಗುಮುಖದಿಂದ ಸಕ್ಕರೆಯ ಆರತಿ ಬೆಳಗಲು ಖುಷಿ ಖುಷಿಯಿಂದ ತೆರಳುತ್ತಾರೆ.
ಈ ದೃಶ್ಯ ಹಬ್ಬದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಕುಟುಂಬದ ಸದಸ್ಯರಲ್ಲಿ ಸಂತಸ ಮತ್ತು ಆತ್ಮೀಯತೆಯನ್ನು ಮೂಡಿಸುತ್ತದೆ. ಹಿರಿಯರು ಮಕ್ಕಳಿಗೆ ಹೂವಿನ ದಂಡೆ ಹಾಕುವ ಮೂಲಕ ತಮ್ಮ ಪ್ರೀತಿ, ಮಮತೆ ಮತ್ತು ಸಂಪ್ರದಾಯದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಾರೆ.
ಇದರ ಜೊತೆಗೆ, ಹೊಸದಾಗಿ ಮದುವೆಗಾಗಿ ಕನ್ಯೆಯನ್ನು ನೋಡಿ ಬಂದವರು ಗೌರಿ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಸಕ್ಕರೆಯ ಆರತಿ ಹಾಗೂ ಹೂವಿನ ದಂಡೆಗಳನ್ನು ಖರೀದಿಸಿ, ಮಲ್ಲಿಗೆ, ಸೇವಂತಿಗೆ ಸೇರಿದಂತೆ ವಿವಿಧ ಹೂವುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಸಕ್ಕರೆಯ ಗೊಂಬೆಗಳ ಆರತಿಗಳೊಂದಿಗೆ ಸೀರೆ ಸೇರಿದಂತೆ ವಿವಿಧ ಉಡುಗೊರೆಗಳನ್ನು ಸೊಸೆಗೆ ನೀಡುವ ಸಂಪ್ರದಾಯವೂ ಇದೆ.
ಸಕ್ಕರೆಯ ಗೊಂಬೆಗಳ ಆರತಿಗಳು ಒಂದು ಕೆ.ಜಿಗೆ ₹150ರಿಂದ ₹200ರವರೆಗೆ ಬೆಲೆ ಇದ್ದರೂ, ಐದು ಕೆ.ಜಿ., ಹತ್ತು ಕೆ.ಜಿ. ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆರತಿಗಳನ್ನು ಖರೀದಿಸಿ, ಸೀರೆ ಹಾಗೂ ಇತರ ಉಡುಗೊರೆಗಳನ್ನು ಸೊಸೆಗೆ ನೀಡಿ ಗೌರಿ ಹಬ್ಬವನ್ನು ಸಂತಸದಿಂದ ಆಚರಿಸುತ್ತಾರೆ.
ಗ್ರಾಮೀಣ ಬದುಕಿನ ಸಂಸ್ಕೃತಿ, ಕುಟುಂಬದ ಬಾಂಧವ್ಯ ಮತ್ತು ಹೆಣ್ಣು ಮಕ್ಕಳ ಮೇಲಿನ ಪ್ರೀತಿ-ಮಮತೆಯನ್ನು ಪ್ರತಿಬಿಂಬಿಸುವ ಗೌರಿ ಹುಣ್ಣಿಮೆ ಹಬ್ಬವು ಹೂವಿನ ದಂಡೆ, ಸಕ್ಕರೆಯ ಆರತಿ ಹಾಗೂ ಉಡುಗೊರೆಗಳ ಮೂಲಕ ಸಂಪ್ರದಾಯದ ಸೊಗಡನ್ನು ಉಳಿಸಿಕೊಂಡು ಬಂದಿದೆ.
ಇಂತಹ ಆಚರಣೆಗಳು ನಮ್ಮ ನಾಡಿನ ಜನಪದ ಸಂಸ್ಕೃತಿಯ ಸೊಬಗನ್ನು ಸಾರುವುದರ ಜೊತೆಗೆ, ಹಬ್ಬಗಳ ಮೂಲಕ ಕುಟುಂಬಗಳನ್ನು ಒಂದಾಗಿಸುವ ಮಹತ್ವದ ಪಾತ್ರ ವಹಿಸುತ್ತವೆ.

Total Views: 0
Share This Article
Leave a Comment