

Health check-up camp for students' parents at Virupapura School
ವಿರುಪಾಪುರ ಶಾಲೆಯಲ್ಲಿ ವಿದ್ಯಾರ್ಥಿಗಳ ಪಾಲಕರಿಗೆ ಆರೋಗ್ಯ ತಪಾಸಣಾ ಶಿಬಿರ

50ಕ್ಕೂ ಹೆಚ್ಚು ಪಾಲಕರ ಆರೋಗ್ಯ ತಪಾಸಣೆ; 8 ಮಂದಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆಗೆ ಸಲಹೆ
ಗಂಗಾವತಿ, ನ. 26: ತಾಲೂಕಿನ ವಿರುಪಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (HRG ಶಾಲೆ) ಆವರಣದಲ್ಲಿ ಬುಧವಾರ ವಿದ್ಯಾರ್ಥಿಗಳ ಪಾಲಕರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಪಾಲಕರಿಗೆ ನೇತ್ರ ತಪಾಸಣೆ, ಮೊಣಕಾಲು ನೋವು, ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ಕುರಿತು ಆರೋಗ್ಯ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಪಾಲಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ತಪಾಸಣೆಯ ವೇಳೆ 8 ಪಾಲಕರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದರು. ಉಳಿದ ಪಾಲಕರಿಗೆ ಆಯುರ್ವೇದಿಕ್ ಔಷಧಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲೆಯ 62 ವಿದ್ಯಾರ್ಥಿಗಳಿಗೆ ಚವನ್ಪ್ರಾಶ್ ಹಾಗೂ ವಿಟಮಿನ್ಗಳನ್ನು ವಿತರಿಸಲಾಯಿತು.
ಸರ್ಕಾರಿ ಆಸ್ಪತ್ರೆಯ ಆಯುರ್ವೇದಿಕ್ ವೈದ್ಯ ಡಾ. ಗುರುರಾಜ್ ಉಮಚಗಿ ಮಾತನಾಡಿ, ಆಯುರ್ವೇದಿಕ್ ಔಷಧಿಗಳ ಬಳಕೆಯಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಆಯುರ್ವೇದವು ಆರೋಗ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಶಾಲೆಯ ಮುಖ್ಯಗುರು ಶರಣಪ್ಪ ಹಕ್ಕಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳ ಪಾಲಕರ ಬಗ್ಗೆ ವಿಶೇಷ ಕಾಳಜಿ ವಹಿಸಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿರುವುದು ಸಂತೋಷ ತಂದಿದೆ. ಇಂತಹ ಆರೋಗ್ಯ ಶಿಬಿರಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ವೀಣಾ ವೆಂಕಟೇಶ, ಆಸ್ಪತ್ರೆಯ ಸಿಬ್ಬಂದಿ ಖಾಜಾಹುಸೇನ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿ, ಶಾಲೆಯ ಶಿಕ್ಷಕಿಯರಾದ ರೇಣುಕಾ ಜಿ., ಆಶಾರಾಣಿ, ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.


