

Massive protest against 'Kanneeru' Swamiji in Bidar on Dec 3
ಕಣ್ಣೀರಿ ಸ್ವಾಮೀಜಿ ವಿರುದ್ಧ ಡಿ.3ರಂದು ಬೀದರ್ನಲ್ಲಿ ಬೃಹತ್ ಪ್ರತಿಭಟನೆ
ವಚನ ಸಾಹಿತ್ಯದ ತಿರುಚಿದ ವ್ಯಾಖ್ಯಾನ, ಲಿಂಗಾಯತ ಮಠಾಧೀ

ಶರ ಅವಹೇಳನ ಹಾಗೂ ಸಂವಿಧಾನದ ಕುರಿತು ವಿವಾದಾತ್ಮಕ ಹೇಳಿಕೆ ಖಂಡನೆ
ಬೀದರ್, ನ.26: ವಚನ ಸಾಹಿತ್ಯವನ್ನು ತಿರುಚಿ ವ್ಯಾಖ್ಯಾನಿಸುವುದು, ಲಿಂಗಾಯತ ಮಠಾಧೀಶರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದು ಹಾಗೂ ಸಂವಿಧಾನದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿರುವ ಕಾಡಸಿದ್ದೇಶ್ವರ ಕನ್ನೇರಿ ಸ್ವಾಮೀಜಿ ವಿರುದ್ಧ ಡಿಸೆಂಬರ್ 3ರಂದು ಬೀದರ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ನಿರ್ಧರಿಸಿವೆ.
ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಮಂಗಳವಾರ ಜಾತ್ಯತೀತ ನಾಗರಿಕರ ವೇದಿಕೆಯ ಸಹಯೋಗದಲ್ಲಿ ಹಿರಿಯರಾದ ವೈಜನಾಥ್ ಕಮಠಾಣೆ ಅವರ ಅಧ್ಯಕ್ಷತೆಯಲ್ಲಿ ನಡೆದ ಖಂಡನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸಾಮಾಜಿಕ ಚಿಂತಕರು ಹಾಗೂ ಬಸವಪರ ಹೋರಾಟಗಾರರು ಭಾಗವಹಿಸಿ ಸ್ವಾಮೀಜಿಯವರ ಹೇಳಿಕೆಗಳ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ಸಮಾವೇಶವೊಂದರಲ್ಲಿ ಕನ್ನೇರಿ ಸ್ವಾಮೀಜಿ ಅವರು, “ಸಂವಿಧಾನದಲ್ಲಿ ಮನುಸ್ಮೃತಿಯ ಅಂಶಗಳು ಅಡಕವಾಗಿವೆ” ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಈ ಹೇಳಿಕೆಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಭಾರತದ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಸಹೋದರತ್ವದ ತತ್ವಗಳ ಮೇಲೆ ರೂಪುಗೊಂಡಿದ್ದು, ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದೆ. ಇಂತಹ ಸಂವಿಧಾನದ ಕುರಿತು ಆಧಾರರಹಿತ ಅಥವಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದಲ್ಲದೆ, ಸಂವಿಧಾನದ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಬಸವಣ್ಣನವರ ವಚನಗಳು ಮಾನವೀಯತೆ, ಸಮಾನತೆ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಾರುತ್ತವೆ. ವಚನ ಸಾಹಿತ್ಯವನ್ನು ಅದರ ಮೂಲ ಆಶಯಗಳಿಗೆ ವಿರುದ್ಧವಾಗಿ ವ್ಯಾಖ್ಯಾನಿಸುವುದು ಹಾಗೂ ಲಿಂಗಾಯತ ಮಠಾಧೀಶರನ್ನು ಅವಹೇಳನ ಮಾಡುವುದನ್ನು ಸಹಿಸಲಾಗದು ಎಂದು ಸಭೆಯಲ್ಲಿ ಮಾತನಾಡಿದವರು ಎಚ್ಚರಿಸಿದರು.
ಸಮಾಜದಲ್ಲಿ ಜಾತ್ಯತೀತತೆ, ಸೌಹಾರ್ದತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಡಿಸೆಂಬರ್ 3ರಂದು ಬೀದರ್ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು, ಬಸವಪರ ಸಂಘಟನೆಗಳು ಹಾಗೂ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸುವಂತೆ ಸಭೆಯಲ್ಲಿ ಕರೆ ನೀಡಲಾಯಿತು.
ಸಂವಿಧಾನದ ಗೌರವ, ವಚನ ಸಾಹಿತ್ಯದ ಘನತೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಭೆಯ ಮುಖಂಡರು ತಿಳಿಸಿದ್ದಾರೆ.


