

PDO Suresh Chalavadi urges property owners to obtain Form-11A and 11B documents.
ವಡ್ಡರಹಟ್ಟಿ ಗ್ರಾಪಂನಲ್ಲಿ ನ.2ರಿಂದ ಇ-ಸ್ವತ್ತು ಅಭಿಯಾನ

ಆಸ್ತಿ ಮಾಲೀಕರು ನಮೂನೆ–11ಎ, 11ಬಿ ದಾಖಲೆ ಪಡೆದುಕೊಳ್ಳಲು ಪಿಡಿಒ ಸುರೇಶ ಚಲವಾದಿ ಮನವಿ
ಗಂಗಾವತಿ: ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದ ಮೇರೆಗೆ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 2ರಿಂದ ಇ-ಸ್ವತ್ತು ಅಭಿಯಾನ ಆರಂಭವಾಗಲಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ ಚಲವಾದಿ ತಿಳಿಸಿದ್ದಾರೆ.
ಅಭಿಯಾನದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ವಸತಿ ಹಾಗೂ ವಾಣಿಜ್ಯ ಆಸ್ತಿಗಳನ್ನು ಗುರುತಿಸಿ, ಆಸ್ತಿಯ ಮಾಲೀಕತ್ವ, ವಿಸ್ತೀರ್ಣ ಹಾಗೂ ಇತರ ವಿವರಗಳನ್ನು ಪರಿಶೀಲಿಸಲಾಗುವುದು. ನಿಯಮಾನುಸಾರ ನಮೂನೆ–11ಎ ಮತ್ತು 11ಬಿ ಆಸ್ತಿ ದಾಖಲೆಗಳನ್ನು ಸಿದ್ಧಪಡಿಸಿ ವಿತರಿಸುವ ಕಾರ್ಯ ಕೈಗೊಳ್ಳಲಾಗುವುದು.
ಆಸ್ತಿ ದಾಖಲೆಗಳ ಡಿಜಿಟಲೀಕರಣ, ಆಸ್ತಿ ತೆರಿಗೆ ನಿರ್ಧರಣೆ ಹಾಗೂ ದಾಖಲೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವುದರ ಜೊತೆಗೆ ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ಸುಲಭ ಸೇವೆ ಒದಗಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಿ, ಆಸ್ತಿಯ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಮಾಲೀಕತ್ವ, ವಿಸ್ತೀರ್ಣ ಅಥವಾ ಕಟ್ಟಡದ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಲು ಸಹಕರಿಸಬೇಕು ಎಂದು ಸುರೇಶ ಚಲವಾದಿ ಮನವಿ ಮಾಡಿದ್ದಾರೆ.
ಎರಡು ದಿನಕ್ಕೊಂದು ವಾರ್ಡ್
ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಎರಡು ದಿನಕ್ಕೊಂದು ವಾರ್ಡ್ನಂತೆ, ರಜೆ ದಿನಗಳನ್ನು ಹೊರತುಪಡಿಸಿ ಇ-ಸ್ವತ್ತು ಅಭಿಯಾನ ನಡೆಸಲಾಗುವುದು. ಸಾರ್ವಜನಿಕರು ಅಭಿಯಾನದ ಸದುಪಯೋಗ ಪಡೆದುಕೊಂಡು, ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಿ ಗ್ರಾಮ ಪಂಚಾಯಿತಿಯೊಂದಿಗೆ ಸಹಕರಿಸುವಂತೆ ಪಿಡಿಒ ಸುರೇಶ ಚಲವಾದಿ ಕೋರಿದ್ದಾರೆ.



