

A Long Police Service of 39 Years and 3 Months: PSI T.G. Nagaraja Retires

39 ವರ್ಷ 3 ತಿಂಗಳ ಸುದೀರ್ಘ ಪೊಲೀಸ್ ಸೇವೆ: ಪಿಎಸ್ಐ ಟಿ.ಜಿ. ನಾಗರಾಜ ನಿವೃತ್ತಿ
ಗಂಗಾವತಿ: ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ 39 ವರ್ಷ 3 ತಿಂಗಳ ಸುದೀರ್ಘ ಸೇವೆ ಸಲ್ಲಿಸಿದ ನಗರದ ಪೊಲೀಸ್ ಠಾಣೆಯ ಪಿಎಸ್ಐ ಟಿ.ಜಿ. ನಾಗರಾಜ ಅವರು ಶುಕ್ರವಾರ ಕರ್ತವ್ಯದಿಂದ ನಿವೃತ್ತರಾದರು.
ಸುಮಾರು ನಾಲ್ಕು ದಶಕಗಳ ಸೇವಾವಧಿಯಲ್ಲಿ ನಾಗರಾಜ ಅವರು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಇಲಾಖೆಯಲ್ಲಿ ಉತ್ತಮ ಹೆಸರು ಗಳಿಸಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ನಿವೃತ್ತಿ ಸಮಾರಂಭದಲ್ಲಿ ಗಂಗಾವತಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ 39 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸುವುದು ಸಾಮಾನ್ಯ ವಿಚಾರವಲ್ಲ. ಸುದೀರ್ಘ ಅವಧಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ನಿವೃತ್ತರಾಗುತ್ತಿರುವ ಟಿ.ಜಿ. ನಾಗರಾಜ ಅವರಿಗೆ ಇಲಾಖೆಯ ಪರವಾಗಿ ಅಭಿನಂದನೆಗಳು. ನಿವೃತ್ತಿಯ ನಂತರದ ಜೀವನ ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ನಗರ ಪೊಲೀಸ್ ಠಾಣೆಯ ಪಿಐ ಪ್ರಕಾಶ ಯಾತನೂರು ಮಾತನಾಡಿ, ಟಿ.ಜಿ. ನಾಗರಾಜ ಅವರು ಹಿರಿಯ ಪೊಲೀಸ್ ಸಿಬ್ಬಂದಿಯಾಗಿ ತಮ್ಮ ಅಪಾರ ಅನುಭವವನ್ನು ಕರ್ತವ್ಯದಲ್ಲಿ ಸಮರ್ಪಕವಾಗಿ ಬಳಸಿಕೊಂಡಿದ್ದರು. ಶಿಸ್ತು ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಜೊತೆಗೆ ಕಿರಿಯ ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದರು. ಅವರ ಸುದೀರ್ಘ ಸೇವೆ ಇಲಾಖೆಗೆ ಸ್ಮರಣೀಯವಾಗಿದೆ ಎಂದರು.
ದಳಪತಿ ದುರಗಪ್ಪ ಮಾತನಾಡಿ, ನಾಗರಾಜ ಅವರೊಂದಿಗೆ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಸ್ಮರಿಸಿದರು. ಸಹೋದ್ಯೋಗಿಗಳೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಅವರು, ಹಿರಿಯರಿಂದ ಮಾರ್ಗದರ್ಶನ ಪಡೆದು ಕಿರಿಯರಿಗೆ ಪ್ರೋತ್ಸಾಹ ನೀಡುವ ಗುಣ ಹೊಂದಿದ್ದರು. ಅವರ ಸೇವಾ ಮನೋಭಾವ ಹಾಗೂ ಅನುಭವವನ್ನು ಸಹೋದ್ಯೋಗಿಗಳು ಸದಾ ಸ್ಮರಿಸಲಿದ್ದಾರೆ ಎಂದರು.
ನಿವೃತ್ತಿ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಹೋದ್ಯೋಗಿಗಳು ಟಿ.ಜಿ. ನಾಗರಾಜ ಅವರನ್ನು ಸನ್ಮಾನಿಸಿ ಗೌರವಿಸಿದರು. ಅವರ ಮುಂದಿನ ನಿವೃತ್ತಿ ಜೀವನ ಸುಖ, ಸಂತೋಷ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಇಸ್ಮಾಯಿಲ್, ಶಾರದಮ್ಮ, ಎಸ್ಎಸ್ಐ ಶಿವಶರಣ, ಅನಿಲ್, ಅತೀಕ್, ಸುಬ್ರಮಣ್ಯ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.



