ಅರ್ಹ ಎಲ್ಲ ಆಸ್ತಿ ಮಾಲೀಕರಿಗೂ ಇ-ಖಾತಾ ಸೌಲಭ್ಯ: ನ. 5ರಿಂದ 7ರವರೆಗೆ ವಿಶೇಷ ಆಂದೋಲನ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು
E-Khata facility for all eligible property owners: Special drive from Nov 5 to 7

ಅರ್ಹ ಎಲ್ಲ ಆಸ್ತಿ ಮಾಲೀಕರಿಗೂ ಇ-ಖಾತಾ ಸೌಲಭ್ಯ: ನ. 5ರಿಂದ 7ರವರೆಗೆ ವಿಶೇಷ ಆಂದೋಲನ

ಜಾಹೀರಾತು

ಮೈಸೂರು: ಅರ್ಹ ಎಲ್ಲ ಆಸ್ತಿ ಮಾಲೀಕರಿಗೂ ಇ-ಖಾತಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನವೆಂಬರ್ 5, 6 ಮತ್ತು 7ರಂದು ಪ್ರಜಾಸೇವಾ ವಿಶೇಷ ಇ-ಖಾತಾ ವಿತರಣಾ ಆಂದೋಲನ ಮುಂದುವರಿಯಲಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ಆವರಣದಲ್ಲಿ ನಡೆದ ವಿಶೇಷ ಇ-ಖಾತಾ ವಿತರಣಾ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಆಸ್ತಿ ದಾಖಲೆಗಳನ್ನು ಸುಲಭವಾಗಿ ಒದಗಿಸುವುದು ಹಾಗೂ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 2.10 ಲಕ್ಷಕ್ಕೂ ಅಧಿಕ ಆಸ್ತಿಗಳಿದ್ದು, ಈವರೆಗೆ 78,700ಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತಾ ವಿತರಿಸಲಾಗಿದೆ. ಅಕ್ಟೋಬರ್ 28ರಂದು ನಡೆದ ಆಂದೋಲನದಲ್ಲಿ 730 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 590 ಅರ್ಹ ಫಲಾನುಭವಿಗಳಿಗೆ ಇ-ಖಾತಾ ನೀಡಲಾಗಿದೆ ಎಂದು ತಿಳಿಸಿದರು.

ದಾಖಲೆಗಳ ಕೊರತೆಯಿಂದ ಯಾವುದೇ ಅರ್ಹ ಆಸ್ತಿ ಮಾಲೀಕರು ಇ-ಖಾತಾ ಸೌಲಭ್ಯದಿಂದ ವಂಚಿತರಾಗಬಾರದು. ಅಕ್ಟೋಬರ್ 28ರ ಆಂದೋಲನದಲ್ಲಿ ಭಾಗವಹಿಸಲು ಸಾಧ್ಯವಾಗದವರು ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ಕಲ್ಪಿಸುವ ಉದ್ದೇಶದಿಂದ ನವೆಂಬರ್ 5, 6 ಮತ್ತು 7ರಂದು ಆಂದೋಲನ ನಡೆಸಲಾಗುತ್ತಿದೆ ಎಂದರು.

ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಹ ಅರ್ಜಿಗಳನ್ನು ಪರಿಶೀಲಿಸಿ ಯಾವುದೇ ಅನಗತ್ಯ ವಿಳಂಬವಿಲ್ಲದೆ ಇ-ಖಾತಾ ವಿತರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ನಾಗರಿಕ ಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಇ-ಖಾತಾ ಪ್ರತಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ಆಯೂಬ್ ಖಾನ್, ಪುಷ್ಪವಲ್ಲಿ, ಮಾಜಿ ಮೇಯರ್ ಆರೀಫ್ ಹುಸೇನ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article
Leave a Comment