ವಿಷ್ಣುವರ್ಧನ್ ಹೆಸರಿನಲ್ಲಿ ಕನ್ನಡದ ಧ್ವಜ ಹಾರಿಸಿದ ಅಭಿಮಾನಿಗಳು!

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು
Fans hoisted the Kannada flag in the name of Vishnuvardhan!

ವಿಷ್ಣುವರ್ಧನ್ ಹೆಸರಿನಲ್ಲಿ ಕನ್ನಡದ ಧ್ವಜ ಹಾರಿಸಿದ ಅಭಿಮಾನಿಗಳು!

ಗಂಗಾವತಿ: ಕನ್ನಡ ಚಿತ್ರರಂಗದ ಸಾಹಸಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನ ಹಾಗೂ ಕನ್ನಡ ನಾಡು-ನುಡಿಯ ಮೇಲಿನ ಪ್ರೀತಿಯನ್ನು ಮೆರೆದ ಅಭಿಮಾನಿಗಳು ನಗರದ ಡಾ. ವಿಷ್ಣುವರ್ಧನ್ ಸರ್ಕಲ್‌ನಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ಜಾಹೀರಾತು

ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅಭಿಮಾನಿಗಳು, ವಿಷ್ಣು ಸೇನಾ ಸಮಿತಿ ಹಾಗೂ ಡಾ. ವಿಷ್ಣುವರ್ಧನ್ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಮೌಲಸಾಬ ಹಾಗೂ ಬಿಜೆಪಿ ಮುಖಂಡ ವಡ್ರಟ್ಟಿ ವೀರಭದ್ರಪ್ಪ ನಾಯಕ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ನೆಲ, ಜಲದ ಸಂರಕ್ಷಣೆಯ ಮಹತ್ವ, ಭಾಷಾವಾರು ಪ್ರಾಂತ್ಯಗಳ ರಚನೆ ಹಾಗೂ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಐತಿಹಾಸಿಕ ಕ್ಷಣಗಳನ್ನು ಸ್ಮರಿಸಲಾಯಿತು.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಹೊಂದಿದ್ದ ಡಾ. ವಿಷ್ಣುವರ್ಧನ್ ಅವರು ತಮ್ಮ ಸಿನಿಮಾಗಳ ಮೂಲಕ ಕನ್ನಡದ ಅಸ್ಮಿತೆ, ನಾಡಿನ ಸಂಸ್ಕೃತಿ ಹಾಗೂ ಭಾಷಾಭಿಮಾನವನ್ನು ಜನಮಾನಸದಲ್ಲಿ ಬಿತ್ತಿದ ಮಹಾನ್ ಕಲಾವಿದ ಎಂದು ಅಭಿಮಾನಿಗಳು ಸ್ಮರಿಸಿದರು.

ಪುತ್ಥಳಿ ಸ್ಥಾಪನೆಗೆ ಆಗ್ರಹ

ಗಂಗಾವತಿಯ ಡಾ. ವಿಷ್ಣುವರ್ಧನ್ ಸರ್ಕಲ್‌ನಲ್ಲಿ ಅವರ ಪುತ್ಥಳಿ ಸ್ಥಾಪಿಸುವುದಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂದು ಅಭಿಮಾನಿಗಳು ಮನವಿ ಮಾಡಿದರು.

ಕನ್ನಡದ ಹೆಮ್ಮೆಯ ಕಲಾವಿದ ಡಾ. ವಿಷ್ಣುವರ್ಧನ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸರ್ಕಲ್‌ನಲ್ಲಿ ಅವರ ಪುತ್ಥಳಿ ಸ್ಥಾಪನೆಗೆ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಕೆ. ನಿಂಗಜ್ಜ, ವಿಷ್ಣುವರ್ಧನ್ ಅಭಿಮಾನಿಗಳಾದ ನಾಗರಾಜ ಮೇದಾರ, ರಂಗಪ್ಪ ನಾಯಕ, ಮೈಬುಬುಸಾಬ, ಶರೀಫ್, ಶಶಾಂಕ, ಹನುಮಂತಪ್ಪ ಹುಲಿಹೈದರ್, ನರಸಿಂಹ, ಎಸ್.ಎಸ್. ಪಾಷಾ, ವೆಂಕಟೇಶ್ ಜಾದವ್, ಪಾಂಡುರಂಗ ನಾಯ್ಕ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಷ್ಣುವರ್ಧನ್ ಹೆಸರಿನ ಸರ್ಕಲ್‌ನಲ್ಲಿ ಕನ್ನಡದ ಧ್ವಜ ಹಾರಿಸಿ, ಕನ್ನಡದ ಕಲಾವಿದನನ್ನು ಸ್ಮರಿಸಿದ ಅಭಿಮಾನಿಗಳ ಕಾರ್ಯಕ್ರಮ ಕನ್ನಡಾಭಿಮಾನ ಹಾಗೂ ಕಲಾವಿದರ ಮೇಲಿನ ಗೌರವದ ಸಂದೇಶ ಸಾರಿತು.

Total Views: 0
ಜಾಹೀರಾತು
Share This Article
Leave a Comment