
Bevur: 'Neighbourhood Youth Parliament – Drug-Free Youth' programme successful.
ಬೇವೂರು: `ನೆರೆ ಹೊರೆಯ ಯುವ ಸಂಸತ್ತು – ನಶಾ ಮುಕ್ತ ಯುವ’ ಕಾರ್ಯಕ್ರಮ ಯಶಸ್ವಿ
ಕೊಪ್ಪಳ ಅಕ್ಟೋಬರ್ 12 (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ‘ಮೈ ಭಾರತ’ ಕೇಂದ್ರ ಕೊಪ್ಪಳ ಹಾಗೂ ವಿವಿಧ ಯುವ ಸಂಘಗಳ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ‘ನೆರೆ ಹೊರೆಯ ಯುವ ಸಂಸತ್ತು (ನಶಾ ಮುಕ್ತ ಯುವ)’ ಕಾರ್ಯಕ್ರಮವನ್ನು ಯಲಬುರ್ಗಾ ತಾಲ್ಲೂಕಿನ ಬೇವೂರಿನ ಶ್ರೀ ಕೂಡಲಸಂಗಮೇಶ್ವರ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮೈ ಭಾರತ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಕುಮಾರಿ ಮೇಘಾ ಜಿ. ಕೆ. ಅವರು, ಯುವ ಸಮೂಹವು ಮಾದಕ ವಸ್ತುಗಳಿಂದ ದೂರವಿರಬೇಕು ಮತ್ತು ಉತ್ತಮ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಬೇವೂರು ಪೊಲೀಸ್ ಉಪ-ನಿರೀಕ್ಷಕರಾದ ಕಾಳಿಂಗ ಅವರು ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಯುವಜನತೆ ಮುಂದಾಗಬೇಕು ಎಂದು ತಿಳಿಸಿ, ಕಾನೂನಿನ ಜಾಗೃತಿ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.
ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ ಅವರು ಮಾತನಾಡಿ, ವ್ಯಸನಗಳಿಂದ ಆರೋಗ್ಯದ ಮೇಲಾಗುವ ಗಂಭೀರ ಹಾನಿಗಳ ಕುರಿತು ಎಚ್ಚರಿಸುತ್ತಾ, ಯುವಕರು ಮಾನಸಿಕ ಹಾಗೂ ದೈಹಿಕ ಸದೃಢತೆಗಾಗಿ ಧ್ಯಾನ ಮತ್ತು ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಕುಬೇಂದ್ರಾ ಆಚಾರ, ಪೊಲೀಸ್ ಇಲಾಖೆಯ ಸಂಗಮೇಶ, ಗ್ರಾಮದ ಹಿರಿಯರು, ಯುವ ಸಂಘಗಳ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು, ಯುವಜನರು ಭಾಗವಹಿಸಿದ್ದರು.




